Breaking News

ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ

PC & PNDT District Level Advisory Committee Meeting

ನಿಗದಿತ ಅವಧಿಯಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ಪರವಾನಗಿ ನವೀಕರಣ ಕಡ್ಡಾಯ: ಡಾ ಲಿಂಗರಾಜು

ಕೊಪ್ಪಳ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳು ಕಡ್ಡಾಯವಾಗಿ ನಿಗದಿತ ಅವಧಿಯಲ್ಲಿ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಕ್ಟೋಬರ್ 03ರಂದು ಆಯೋಜಿಸಿದ್ದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಮತ್ತು ಎಂ.ಟಿ.ಪಿ ಕಾಯ್ದೆಯ ಅಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯಡಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು ಹಾಗೂ ನೋಂದಣಿ ಅವಧಿ ಪೂರ್ಣಗೊಳ್ಳುವುದಕ್ಕಿಂತ ಮೂರು ತಿಂಗಳ ಮುಂಚೆ ಅರ್ಜಿ ಸಲ್ಲಿಸಿ ನವೀಕರಣ ಮಾಡಿಕೊಳ್ಳಬೇಕು. ಸ್ಕ್ಯಾನಿಂಗ್ ಕುರಿತಾದ ಮಾರ್ಗಸೂಚಿಗಳನ್ನು ಪಾಲಿಸಿ ನಿಗದಿತ ನಮೂನೆಗಳನ್ನು ನಿರ್ವಹಿಸಬೇಕು. ನೋಂದಣಿ/ ಪರವಾನಗಿ ನವೀಕರಣವಿಲ್ಲದ ಆರೋಗ್ಯ ಸಂಸ್ಥೆಗಳ ಮೇಲೆ, ನಿಗದಿತ ನಿಯಮ ಪಾಲನೆ ಹಾಗೂ ದಾಖಲಾತಿಗಳನ್ನು ನಿರ್ವಹಿಸದ ಆರೋಗ್ಯ ಸಂಸ್ಥೆಗಳನ್ನು ಮುಚ್ಚಿಸಲು ಅಥವಾ ಸ್ಥಗಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಎಚ್ ಅವರು ಮಾತನಾಡಿ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದೆ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಕಾರಾಗೃಹ ಶಿಕ್ಷೆ ಸಹಿತ ದಂಡವನ್ನು ವಿಧಿಸಲಾಗುವುದು. ಮೊದಲ ಅಪರಾಧಕ್ಕೆ 5 ವರ್ಷ ವೈದ್ಯಕೀಯ ಪರವಾನಿಗೆಯನ್ನು ರದ್ದುಪಡಿಸುವುದು. ನಂತರದ ಅಪರಾದಕ್ಕೆ ಸಂಬಂಧಿಸಿದ ವೈದ್ಯರ ವೈದ್ಯಕೀಯ ಪರವಾನಿಗೆಯನ್ನು ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ತೆಗೆದು ಹಾಕಿ, ವೈದ್ಯಕೀಯ ವೃತ್ತಿ ನಡೆಸಲು ಆಜೀವ ನಿಷೇಧ ಹೇರಲಾಗುವುದು. ಒಂದು ವೇಳೆ ಸ್ವತಃ ಮಹಿಳೆ, ಆಕೆಯ ಪತಿ ಅಥವಾ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಯತ್ನಿಸಿ, ವೈದ್ಯರಿಗೆ ಒತ್ತಡ ಹೇರಿದಲ್ಲಿ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರದಿಂದ 1 ಲಕ್ಷದವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ ಎಂದು ಸಭೆಗೆ ತಿಳಿಸಿದರು.
ಸಲಹಾ ಸಮಿತಿಗೆ ಅಧ್ಯಕ್ಷರ ಆಯ್ಕೆ: ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿಗೆ ಅಧ್ಯಕ್ಷರನ್ನಾಗಿ ಡಾ ಈಶ್ವರ ಸವಡಿ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಿಗದಿತ ಅವಧಿಯಲ್ಲಿ ನವೀಕರಣವಾಗದ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಮುಚ್ಚಿಸಲು/ ಸ್ಥಗಿತಗೊಳಿಸಲು ಕ್ರಮ: ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯಡಿ ನೋದಾಯಿತ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳು ಐದು ವರ್ಷಕ್ಕೊಮ್ಮೆ ನವೀಕರಣ ಮಾಡಿಸಬೇಕಾಗಿದ್ದು, ನವೀಕರಣಕ್ಕಾಗಿ ಅವಧಿ ಮುಗಿಯುವ ಮೂರು ತಿಂಗಳ ಪೂರ್ವದಲ್ಲಿ ಅರ್ಜಿ ಸಲ್ಲಿಸಬೇಕು. ತಪ್ಪಿದಲ್ಲಿ ಅಂತಹ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಮುಚ್ಚಿಸಲು/ ಸ್ಥಗಿತಗೊಳಿಸಲು ಕ್ರಮ ವಹಿಸಲಾಗುವುದು. ಗರ್ಭಪಾತ ಮಾಡಲು ಆಸ್ಪತ್ರೆಗಳು ಸಮಗ್ರ ಗರ್ಭಪಾತ ಸೇವೆಗಳ ಕಾರ್ಯಕ್ರಮದಡಿ (ಎಂಟಿಪಿ) ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳ ನೋಂದಣಿ, ನವೀಕರಣ ಹಾಗೂ ಹೊಸ ಅರ್ಜಿಗಳಿಗೆ ಅನುಮತಿ ಕುರಿತಂತೆ ಚರ್ಚಿಸಲಾಯಿತು.
ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ವಕೀಲರಾದ ಶಂಕರ, ವೈದ್ಯರಾದ ಡಾ ಗಿರೀಶ್ ಹಾಗೂ ಡಾ ಶ್ರೀನಿವಾಸ ಹ್ಯಾಟಿ, ಯುನಿಸೆಫ್‌ನ ವ್ಯವಸ್ಥಾಪಕರಾದ ಹರೀಶ ಜೋಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.