Breaking News

ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಕಂಡು ಉಪ ಲೋಕಾಯುಕ್ತರು ಅಸಮಧಾನ

The Deputy Lokayukta is unhappy with the chaos in the hostels

ಕೊಪ್ಪಳ ಅಕ್ಟೋಬರ್‌ 08 (ಕ.ವಾ.): ಕೊಪ್ಪಳ ಜಿಲ್ಲೆಯ ಪ್ರವಾಸದಲ್ಲಿರುವ ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್.ಫಣೀಂದ್ರ ಅವರು ಪೂರ್ವ ನಿಗದಿಯಂತೆ ಅಕ್ಟೋಬರ್ 08ರಂದು ಸಂಜೆ ವೇಳೆ ನಗರದ ವಿವಿಧ ಇಲಾಖೆಗಳ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಮೊದಲಿಗೆ ಡಾಲರ್ಸ ಕಾಲೋನಿ ಹತ್ತಿರದಲ್ಲಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದರು. ಅಲ್ಲಿನ ಅಡುಗೆ ಕೋಣೆ, ಆಹಾರ ದಾಸ್ತಾನು ಕೋಣೆ, ವಿದ್ಯಾರ್ಥಿಗಳ ವಸತಿ ಗೃಹಗಳಿಗೆ ಭೇಟಿ ನೀಡಿ ವಸತಿ ನಿಲಯದ ಅಧಿಕಾರಿಗಳು, ವಾರ್ಡನಗಳು, ಅಡುಗೆದಾರರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಸತಿ ನಿಲಯದಲ್ಲಿ ನಮಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ, ವಸತಿ ನಿಲಯ ಇಕ್ಕಟ್ಟಾಗಿರುವುದರಿಂದ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿ, ಒಂದೇ ಕೋಣೆಯಲ್ಲಿ ಬಹಳಷ್ಟು ವಿದ್ಯಾರ್ಥಿನಿಯರನ್ನು ಹಾಕಿದ್ದರಿಂದಾಗಿ ನಮಗೆ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಓದಲು ವಸತಿ ನಿಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳು ಇಲ್ಲ ಎಂದು ವಿದ್ಯಾರ್ಥಿನಿಯರು ಉಪ ಲೋಕಾಯುಕ್ತರ ಎದುರು ತಮ್ಮ ಅಳಲನ್ನು ತೋಡಿಕೊಂಡರು.
ತೀವ್ರ ಅಸಮಾಧಾನ: ನಿಲಯದಲ್ಲಿರುವ ಕೆಲವು ಅಡುಗೆದಾರರು ಸರಿಯಾಗಿ ಸ್ಪಂದಿಸುವುದಿಲ್ಲ. ಬಟ್ಟೆ ತೊಳೆಯುವ ಸ್ಥಳದಲ್ಲಿ ಗಲೀಜು ತುಂಬಿದೆ. ಕೆಲವು ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.
ವಸತಿ ನಿಲಯದ ಹೊರಾಂಗಣದಲ್ಲಿ ಸುತ್ತಲು ಅನೈರ್ಮಲ್ಯ ಕಂಡು ಉಪ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತರಿಗೆ ಸೂಚನೆ:
ನಗರಸಭೆಯಿಂದ ಈ ಬಿಸಿಎಂ
ವಸತಿ ನಿಲಯಕ್ಕೆ ಮತ್ತೊಂದು ಪೈಪಲೈನ್ ಹಾಕಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಉಪ ಲೋಕಾಯುಕ್ತರು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಯಾರು ಸಹ ಭೇಟಿ ನೀಡಿಲ್ಲ: ಕಿನ್ನಾಳ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಸಹ ಉಪ ಲೋಕಾಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಮಗೆ ಮಲಗಲು ಬೆಡ್ ವ್ಯವಸ್ಥೆ ಇಲ್ಲ. ಸ್ನಾನಕ್ಕೆ ಬಿಸಿ ನೀರು ಇಲ್ಲ. ಪುಸ್ತಕ ಇಲ್ಲ. ಸಾರು ನೀರಿನಂತಿರುತ್ತದೆ. ಎರಡು ವರ್ಷ ಆಯ್ತು ಯಾರು ಸಹ ವಸತಿ ನಿಲಯಕ್ಕೆ ಭೇಟಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಉಪ ಲೋಕಾಯುಕ್ತರ ಮುಂದೆ ಸಮಸ್ಯೆಗಳ ಪಟ್ಟಿಯನ್ನು ತೆರೆದಿಟ್ಟರು. ಕಿಟಕಿ, ಬಾಗಿಲು, ಆಹಾರ ದಾಸ್ತಾನು ಗಮನಿಸಿ ಅಸಮಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು,
ಮಕ್ಕಳು ತಾವೇ ಕಸ ಹೊಡೆದು,
ಧೂಳು ಸರಿಸಿ ಕೂಡುವ ವ್ಯವಸ್ಥೆ ಬದಲಾಗಬೇಕು. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.
*ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಜತೆಗೆ ಚರ್ಚೆ: ವಸತಿ ನಿಲಯಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಉಪಲೋಕಾಯುಕ್ತರು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ ಸಿಇಓ ರಾಹುಲ್‌ ರತ್ನಂ ಪಾಂಡೆಯ ಅವರೊಂದಿಗೆ ಚರ್ಚಿಸಿದರು.
ಇದನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು. ಕೂಡಲೇ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ವಹಿಸಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದರು.
ನಿಯಮಿತ ಭೇಟಿ ಕೊಡಿ: ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕುಮಟ್ಟದ ಅಧಿಕಾರಿಗಳು ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದು ಉಪ ಲೋಕಾಯುಕ್ತರು ಅಧಿಕಾರಿಗಳಿಗೆ ಇದೆ ವೇಳೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳಿಗೆ ಸಲಹೆ: ಸರಿಯಾಗಿ ಅಧ್ಯಯನ ಮಾಡಿ ನೌಕರಿ ಪಡೆದುಕೊಳ್ಳಬೇಕು. ಸಮಾಜಕ್ಕೆ ಏನಾದರು ಕೊಡುಗೆ ಕೊಡಬೇಕು. ಪ್ರಾಮಾಣಿಕವಾದ ಜೀವನ ನಡೆಸಬೇಕು. ಯಾರಿಗು ಲಂಚಕೊಡಬಾರದು. ಲಂಚ ತೆಗೆದುಕೊಳ್ಳಬಾರದು ಎಂದು ಉಪ ಲೋಕಾಯುಕ್ತರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಪುಸ್ತಕ ಪೂರೈಸುವ ವ್ಯವಸ್ಥೆ: ವಸತಿ ನಿಲಯದ ವಿದ್ಯಾರ್ಥಿಗಳ ಕೋರಿಕೆಯನ್ನು ಪರಿಗಣಿಸಿ, ಯೋಜನೆಯಲ್ಲಿ ಅವಕಾಶ ಕಲ್ಪಿಸಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪೂರೈಸುವುದಾಗಿ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ ಅವರು ಉಪ ಲೋಕಾಯುಕ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ, ಕರ್ನಾಟಕ ಲೋಕಾಯುಕ್ತ ಬೆಂಗಳೂರಿನ ವಿಚಾರಣೆಯ ಉಪ ನಿಬಂಧಕರಾದ ಎಂ.ವಿ.ಚನ್ನಕೇಶವ ರೆಡ್ಡಿ, ಹೆಚ್ಚುವರಿ ನಿಬಂಧಕರಾದ ಸುದೇಶ ರಾಜಾರಾಂ ಪರದೇಶಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳಾದ ಕಿರಣ್ ಪ್ರಹ್ಲಾದ್‌ರಾವ್ ಮುತಾಲಿಕ್ ಪಾಟೀಲ, ಕರ್ನಾಟಕ ಲೋಕಾಯುಕ್ತ ರಾಯಚೂರಿನ ಪೊಲೀಸ್ ಅಧೀಕ್ಷಕರಾದ ಡಾ.ರಾಮ್ ಲಕ್ಷ್ಮಣ ಅರಸಿದ್ದಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ,
ಕೊಪ್ಪಳ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಸಲಿಂ ಪಾಶಾ, ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಭೇದಾರ, ತಹಸೀಲ್ದಾರ ವಿಠ್ಠಲ ಚೌಗಲಾ, ತಾಪಂ ಇಓ ದುಂಡಪ್ಪ ತುರಾದಿ,
ಲೋಕಾಯಕ್ತ ಇಲಾಖೆಯ ಪೊಲೀಸ್ ಇನ್ಸಪೆಕ್ಟರಗಳು, ಲೋಕಾಯುಕ್ತ ಇಲಾಖೆಯ ಸಿಬ್ಬಂದಿ ರಾಮಣ್ಣ ಬನ್ನಿಗೋಳ ಹಾಗೂ ಇತರರು ಇದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.