Breaking News

ನ್ಯಾಯಾಂಗ ವ್ಯವಸ್ಥೆ ಜನತೆಗೆ ಹತ್ತಿರವಾಗಲಿ: ನ್ಯಾ.ಕೆ.ಎನ್.ಫಣೀಂದ್ರ

Let the judicial system be closer to the people: Ny.K.N.Phanindra

ಕೊಪ್ಪಳ ಅಕ್ಟೋಬರ್ 08 (ಕರ್ನಾಟಕ ವಾರ್ತೆ): ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ವಿಷಯದ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ ಇವರ ಆಶ್ರಯದಲ್ಲಿ ಅಕ್ಟೋಬರ್ 8ರಂದು ಕೊಪ್ಪಳ ಜಿಲ್ಲೆಯ ನ್ಯಾಯಾಧೀಶರಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯತ್ ಕಚೇರಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಗೌರವಾನ್ವಿತ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಮಾತನಾಡಿ, ನ್ಯಾಯಾಧೀಶರಾಗಿ ನಮ್ಮ ಪಾತ್ರ ಏನು? ನ್ಯಾಯಾಧೀಶರಾಗಿ ನಮ್ಮ ಕರ್ತವ್ಯ ಏನು? ಎಂಬುದರ ಬಗ್ಗೆ ನ್ಯಾಯಾಧೀಶರು ಅರಿಯಬೇಕು. ಈಗ ಹೋಬಳಿಯಲ್ಲಿ ಸಹ ನ್ಯಾಯಾಲಯಗಳು ಸ್ಥಾಪನೆಯಾಗಿವೆ. ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿದೆ. ನ್ಯಾಯಾಂಗ ವ್ಯವಸ್ಥೆ ಜನರಿಗೆ ಹತ್ತಿರವಾಗಬೇಕು. ನಮ್ಮ ಸಮಸ್ಯೆಯನ್ನು ನ್ಯಾಯಾಲಯ ಕೇಳುತ್ತದೆ ಎನ್ನುವ ನಂಬಿಕೆ ಜನರಲ್ಲಿ ಬರುವ ಹಾಗೆ ಕೆಲಸ ಮಾಡಬೇಕು. ತಪ್ಪಿತಸ್ಥರನ್ನು ವಾಚ್ ಮಾಡುವ ಸಂಸ್ಥೆಯಿದೆ ಎನ್ನುವ ಭಾವ ಜನರಲ್ಲಿ ಬರುವ ಹಾಗೆ ನ್ಯಾಯಾಂಗ ಇಲಾಖೆಯು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಕಾನೂನುಗಳನ್ನು ಸಾಕಷ್ಟು ಅಧ್ಯಯನ ಮಾಡಿ ನ್ಯಾಯ ನಿರ್ಣಯ ಮಾಡುವ ಕೆಲಸವನ್ನು ನ್ಯಾಯಾಧೀಶರು ಅರಿಯಬೇಕು. ಎಷ್ಟೋ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಬರಲು ಅರ್ಹತೆಯೇ ಇರುವುದಿಲ್ಲ ಎನ್ನುವ ಸೂಕ್ಷ್ಮತೆಯನ್ನು ನ್ಯಾಯಾಧೀಶರು ತಿಳಿಯಬೇಕು ಎಂದರು.
ಉಚ್ಚ ನ್ಯಾಯಾಲಯವು ಸಹ ಲೋಕಾಯುಕ್ತ ಸಂಸ್ಥೆ ಜೊತೆಗೆ ಇದೆ ಎಂಬುದು ಹೆಮ್ಮೆಯ ಸಂಗತಿ ಎಂದ ಅವರು, ಲೋಕಾಯುಕ್ತ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಈ ಎರಡೂ ಸಂಸ್ಥೆಗಳ ವಿಚಾರಗಳು ಸಮ್ಮಿಳಿತವಾಗಿವೆ. ಹೀಗಾಗಿ ಎರಡೂ ಸಂಸ್ಥೆಗಳು ಸೇರಿ ಕೆಲಸ ಮಾಡಿದಲ್ಲಿ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಸಾಧ್ಯವಾಗಲಿದೆ ಎಂದರು.
ಎಲ್ಲರಿಗೂ ಸಮಾನವಾದ ಅವಕಾಶಗಲು ಸಿಗಬೇಕು. ಎಲ್ಲರೂ ಗೌರವಯುತವಾಗಿ ಬದುಕಬೇಕು ಎಂಬುದನ್ನು ಸಂವಿಧಾನವು ಹೇಳುತ್ತದೆ. ರಾಷ್ಟçದಲ್ಲಿರುವ ವ್ಯಕ್ತಿಗಳ ಉತ್ತಮ ಜೀವನ ಮಾಡಬೇಕು ಎಂದು ಸರ್ಕಾರಗಳು ಹಲವಾರು ಯೋಜನೆಗಳನ್ನ ಜಾರಿ ಮಾಡುತ್ತವೆ. ಸಂವಿಧಾನದ ಆಶೋತ್ತರಗಳನುಸಾರ ರೂಪಿಸಿರುವ ಕಾನೂನುಗಳ ಅನುಸಾರ ನ್ಯಾಯಾಧೀಶರು ಕಾರ್ಯತತ್ಪರರಾಗಿ ಜನರಿಗೆ ಸಹಾಯ ಮಾಡಬೇಕು ಎಂದು ಸಲಹೆ ಮಾಡಿದರು.
ಹಳ್ಳಿಹಳ್ಳಿಗಳಲ್ಲಿರುವ ಜನರಿಗೆ ಲೋಕಾಯುಕ್ತ ಕಾಯ್ದೆಯ ಬಗ್ಗೆ ತಿಳಿಸಬೇಕು. ಈ ಬಗ್ಗೆ ಆಯಾ ತಾಲೂಕುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಲೋಕಾಯುಕ್ತ ಕಾಯ್ದೆಯಡಿ ಏನು ಸಹಾಯ ಪಡೆಬಹುದು ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಲಂಚ ನಿಷೇಧ ಕಾಯಿದೆ ಮತ್ತು ಲೋಕಾಯುಕ್ತ ಕಾಯಿದೆ ಬಗ್ಗೆ ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಕಾಲೇಜುಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಉಪ ಲೋಕಾಯುಕ್ತರು ಆಯಾ ತಾಲೂಕುಗಳ ನ್ಯಾಯಾಧೀಶರಿಗೆ ಸಲಹೆ ಮಾಡಿದರು.
ಸಮಾಜವು ನಮಗೆ ಎಲ್ಲವನ್ನು ಕೊಟ್ಟಿದೆ. ಉತ್ತಮ ಸ್ಥಾನದಲ್ಲಿ ನಾವಿದ್ದೇವೆ. ಸಮಾಜದ ಋಣ ತೀರಿಸಿದರೆ ನಾವು ಎಲ್ಲರ ಋಣ ತೀರಿಸಿದ ಹಾಗೆ ಎಂದು ಭಾವಿಸಬೇಕು. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ನಾವು ಮಾಡೋಣ. ಸಮಾಜ ಸೇವಾ ಕೈಂಕರ್ಯದಲ್ಲಿ ನ್ಯಾಯಾಧೀಶರು ಸೇರಿದಂತೆ ಎಲ್ಲರೂ ಸಹಭಾಗಿಯಾಗೋಣ. ಎಲ್ಲರ ಸಹಭಾಗೀತ್ವ ಇದ್ದಾಗ ಮಾತ್ರ ಒಂದು ಪರಿಣಾಮಕಾರಿ ಕಾರ್ಯಸಾಧನೆಯನ್ನು ನಿರೀಕ್ಷಿಸಲು ಸಾಧ್ಯವಿದೆ ಎಂದು ಉಪ ಲೋಕಾಯುಕ್ತರು ನ್ಯಾಯಾಧೀಶರಲ್ಲಿ ಮನವರಿಕೆ ಮಾಡಿದರು.
ಗೌರವಾನ್ವಿತ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಅಧಿಕಾರಿಗಳು ಮತ್ತು ಸಿಬ್ಬಂದಿಯು ಈ ಸಮಾಜವನ್ನು ಕಣ್ತೆರದು ನೋಡಬೇಕು. ಸದಾಕಾಲ ಎಚ್ಚರದ ಸ್ಥಿತಿಯಲ್ಲಿದ್ದು ಸಾರ್ವಜನಿಕ ಕಷ್ಟಗಳೇನು ಎಂಬುದನ್ನು ಅರಿಯಬೇಕು. ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಆಶಿಸಿ ಉಪ ಲೋಕಾಯುಕ್ತರು ಕೊಪ್ಪಳ ಜಿಲ್ಲೆಯಲ್ಲಿ ಲೋಕಾಯುಕ್ತ ಸಂಸ್ಥೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಿಂದಾಗಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ.ವಿ.ಶ್ರೀಶಾನಂದ, ಕರ್ನಾಟಕ ಲೋಕಾಯುಕ್ತ ಬೆಂಗಳೂರಿನ ವಿಚಾರಣೆಯ ಉಪ ನಿಬಂಧಕರಾದ ಎಂ.ವಿ.ಚನ್ನಕೇಶವ ರೆಡ್ಡಿ, ಹೆಚ್ಚುವರಿ ನಿಬಂಧಕರಾದ ಸುದೇಶ ರಾಜಾರಾಂ ಪರದೇಶಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳಾದ ಕಿರಣ್ ಪ್ರಹ್ಲಾದ್‌ರಾವ್ ಮುತಾಲಿಕ್ ಪಾಟೀಲ, ಕರ್ನಾಟಕ ಲೋಕಾಯುಕ್ತ ರಾಯಚೂರಿನ ಪೊಲೀಸ್ ಅಧೀಕ್ಷಕರಾದ ಡಾ.ರಾಮ್ ಲಕ್ಷ್ಮಣ ಅರಸಿದ್ದಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ, ಕೊಪ್ಪಳ ಲೋಕಾಯುಕ್ತ ಕಚೇರಿಯ ಉಪಾಧೀಕ್ಷಕರಾದ ಸಲಿಂ ಪಾಶಾ, ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಬೇಧಾರ ಹಾಗೂ ಇನ್ನೀತರರು ಇದ್ದರು.
ನ್ಯಾಯಾಧೀಶರಾದ ಸದಾನಂದ ನಾಯಕ ಅವರು ಗೌರವಾನ್ವಿತ ಉಪ ಲೋಕಾಯುಕ್ತರ ಪರಿಚಯ ಮಾಡಿದರು. ಗಂಗಾವತಿಯ ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ದಂಡಾಧಿಕಾರಿಗಳಾದ ನ್ಯಾ.ಶ್ರೀದೇವಿ ದರಬಾರೆ ಅವರು ನಿರೂಪಿಸಿದರು. ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಯಲಬುರ್ಗಾದ ವಿಜಯಕುಮಾರ ಕುನ್ನೂರ ಅವರು ವಂದಿಸಿದರು.
ಸಮಾರಂಭದಲ್ಲಿ ಕುಷ್ಟಗಿ, ಗಂಗಾವತಿ ಸೇರಿದಂತೆ ವಿವಿಧ ತಾಲೂಕುಗಳು ನ್ಯಾಯಾಧೀಶರು, ರಾಯಚೂರು ಮತ್ತು ಕೊಪ್ಪಳ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಇದ್ದರು. ಕಲಾವಿದ ಶಂಕ್ರಯ್ಯ ಅವರು ಪ್ರಾರ್ಥಿಸಿದರು. ಸಂತೋಷ ಚಿತ್ರಗಾರ ಅವರು ಕಿನ್ನಾಳ ಕಲೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.