

ಕುಡಿವ ನೀರು, ಮೇವಿನ ಕೊರತೆಯಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್
District Disaster Management Authority and Revenue Department progress review meeting on various matters

ಕೊಪ್ಪಳ ನವೆಂಬರ್ 06 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಳೆಯ ಕೊರತೆ ಮುಂದುವರೆದಿದೆ. ಆದ್ದರಿಂದ ಮುಂಬರುವ ಜೂನ್‌ವರೆಗೂ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು, ದನ ಕರುಗಳಿಗೆ ಮೇವು ಸೇರಿದಂತೆ ಯಾವುದೇ ಕೊರತೆ ಆಗದಂತೆ ಎಚ್ಚರಿಕೆಯ ಕ್ರಮ ವಹಿಸಿ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ನವೆಂಬರ್ 06 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕಂದಾಯ ಇಲಾಖೆಯ ವಿವಿಧ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ವಿಪತ್ತು ನಿರ್ವಹಣೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಎಲ್ಲ ತಹಶೀಲ್ದಾರರ ಖಾತೆಗೆ ರೂ.50 ಲಕ್ಷಗಳನ್ನು ಮುಂಜಾಗ್ರತಾ ಕ್ರಮವಾಗಿ ನೀಡಲಾಗಿದೆ. ಬರ ನಿರ್ವಹಣೆಗಾಗಿ ವಿಧಾನಸಭಾ ಕ್ಷೇತ್ರವಾರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.50 ಲಕ್ಷದಂತೆ ಜಿಲ್ಲಾ ಪಂಚಾಯತಿಯಿಂದ ಟಾಸ್ಕ್ಫೋರ್ಸ್ ಅಡಿ ರೂ.2.50 ಕೋಟಿ ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಾಗ್ಯೂ ಜಿಲ್ಲೆಯ ಎಲ್ಲ ತಹಶೀಲ್ದಾರರು ನಿಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲಗಳಲ್ಲಿ ಮುಂದಿನ ಜೂನ್‌ವರೆಗೂ ಬಳಕೆಗೆ ಸಾಧ್ಯವಾಗುವಷ್ಟು ನೀರಿನ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಯಾವುದೇ ನೀರಿನ ಮೂಲವಿಲ್ಲದೇ ಇದ್ದಲ್ಲಿ ಅಂತಹ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಹಾಗೂ ಖಾಸಗಿ ಬೋರವೆಲ್‌ಗಳಿಂದ ಬಾಡಿಗೆ ಆಧಾರದಲ್ಲಿ ನೀರು ಪಡೆಯಲು ನಿಯಮಾನುಸಾರ ಕ್ರಮ ವಹಿಸಬೇಕು. ಮಳೆಯ ಕೊರತೆಯಿಂದ ಮೇವಿನ ಕೊರತೆಯಾಗಬಹುದು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ರೈತರಿಗೆ ಮೇವಿನ ಕಿಟ್‌ಗಳನ್ನು ಬೇಡಿಕೆ ಆಧಾರದಲ್ಲಿ ಒದಗಿಸಬೇಕು ಎಂದು ತಹಶೀಲ್ದಾರರು ಹಾಗೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಆಗಿರುವ ಬಿತ್ತನೆ ಪ್ರಮಾಣ, ಮಳೆಯ ಕೊರತೆಯಿಂದಾದ ಬೆಳೆ ಹಾನಿ, ರೈತ ಆತ್ಮಹತ್ಯೆ ಪ್ರಕರಣಗಳು, ಬೆಳೆ ವಿಮೆ, ರಸಗೊಬ್ಬರ ಬೇಡಿಕೆ, ಮುಂತಾದವುಗಳ ಕುರಿತು ಗ್ರಾಮವಾರು ಪಟ್ಟಿ ದತ್ತಾಂಶ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಿ. ಬೆಳೆ ವಿಮೆಗಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಫ್ರೂಟ್ ಐಡಿ ಮೂಲಕ ವಿಮೆಗೆ ನೋಂದಾಯಿಸಲು ಸೂಕ್ತ ಜಾಗೃತಿ ಮೂಡಿಸಿ ಮತ್ತು ರೈತರಿಗೆ ವಿಮೆ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ನರೇಗಾ ಅಡಿ ಮಾನವ ದಿನಗಳ ಸೃಜನೆ, ಇದುವರೆಗೂ ಒದಗಿಸಲಾದ ಒಟ್ಟು ಮಾನವ ದಿನಗಳು, ನೀಡಿದ ಕೂಲಿ ಮತ್ತು ಕೈಗೊಂಡ ಕಾಮಗಾರಿಗಳ ಕುರಿತು ಮಾಹಿತಿಯನ್ನು ಒದಗಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಳೆಯ ಪ್ರಮಾಣ: ಜೂನ್ 1, 2023ರಿಂದ ನವೆಂಬರ್ 5ರವೆರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 495.5 ಇದ್ದು ವಾಸ್ತವವಾಗಿ 262.6 ಮಿಮಿ ಸುರಿದು ಶೇ.47ರಷ್ಟು ಮಳೆಕೊರತೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 532.3 ಮಿಮಿ ಇದ್ದು ವಾಸ್ತವವಾಗಿ 320.9 ಮಿಮಿ ಸುರಿದು ಶೇ.40ರಷ್ಟು ಮಳೆಕೊರತೆಯಾಗಿದೆ. ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 478.0 ಮಿಮಿ ಇದ್ದು ವಾಸ್ತವವಾಗಿ 230.3 ಮಿಮಿ ಸುರಿದು ಶೇ.52ರಷ್ಟು ಮಳೆಕೊರತೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 484.4 ಮಿಮಿ ಇದ್ದು ವಾಸ್ತವವಾಗಿ 289.4 ಮಿಮಿ ಸುರಿದು ಶೇ.40ರಷ್ಟು ಮಳೆಕೊರತೆಯಾಗಿದೆ. ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 536.9 ಮಿಮಿ ಇದ್ದು ವಾಸ್ತವವಾಗಿ 229.2 ಮಿಮಿ ಸುರಿದು ಶೇ.57ರಷ್ಟು ಮಳೆಕೊರತೆಯಾಗಿದೆ. ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 537.0 ಮಿಮಿ ಇದ್ದು ವಾಸ್ತವವಾಗಿ 310.5 ಮಿಮಿ ಸುರಿದು ಶೇ.42ರಷ್ಟು ಮಳೆಕೊರತೆಯಾಗಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 428.1 ಮಿಮಿ ಇದ್ದು ವಾಸ್ತವವಾಗಿ 247.8 ಮಿಮಿ ಸುರಿದು ಶೇ.42ರಷ್ಟು ಮಳೆಕೊರತೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 498 ಮಿಮಿ ವಾಡಿಕೆ ಮಳೆ ಇದ್ದು ವಾಸ್ತವವಾಗಿ 276 ಮಿಮಿ ಸುರಿದು ಶೇ.45ರಷ್ಟು ಮಳೆಕೊರೆತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್.ಅವರು ಸಭೆಗೆ ವಿವರಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ 4,67,828 ತಾಕುಗಳಿದ್ದು, 2,95,775 ತಾಕುಗಳಿಗೆ ಅಂಗೀಕರಿಸಲಾಗಿದೆ. ಮತ್ತು 1,56,850 ತಾಕುಗಳು ತಂತ್ರಾಂಶದಲ್ಲಿ ಅಂಗೀಕರಿಸಲು ಬಾಕಿ ಇದೆ ಎಂದು ಇದೆ ವೇಳೆ ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ರೈತರಲ್ಲಿ ಜಿಲ್ಲಾಧಿಕಾರಿಗಳ ಮನವಿ: ಬರ ಬೆಳೆಹಾನಿ ಪರಿಹಾರ ಪಡೆಯಲು, ಬೆಳೆ ವಿಮೆ ಪರಿಹಾರ ಪಡೆಯಲು, ಕೃಷಿ ಸಾಲ, ಬೆಂಬಲ ಬೆಲೆ ಸೇರಿದಂತೆ ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ಯಾವುದೇ ಸೌಕರ್ಯ ಪಡೆಯಲು ರೈತರಿಗೆ ಎಫ್‌ಐಡಿ ನಂಬರ್‌ನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆಗಳಿಗೆ ತೆರಳಿ ಈ ಎಫ್‌ಐಡಿ ಸಂಖ್ಯೆಯನ್ನು ಮಾಡಿಸಿಕೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಕೊಪ್ಪಳ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತಿ ಉಪಕಾಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ನಗರಸಭೆ ಆಯುಕ್ತರು, ಪ.ಪಂಚಾಯತಿ ಮುಖ್ಯಾಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.