Basava Panchami celebration in Gajendragad
ಗಜೇಂದ್ರಗಡ: ಆಗಸ್ಟ್ ೦೮ಹಸಿದ ಹೊಟ್ಟೆಗಳಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳಿಂದು ‘ಬಸವ ಪಂಚಮಿ’ ಆಚರಿಸಿದವು.
ಊರ ಹೊರವಲಯದ
ವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರು ಸೇರಿದಂತೆ ಅಲ್ಲಿನ ಜನತೆಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕಳಕಯ್ಯ ಸಾಲಿಮಠ, ಸಾಂಪ್ರದಾಯಿಕ ನಾಗರಪಂಚಮಿ ಆಚರಣೆ ಬದಲಾಗಿ ಬಸವ ಪಂಚಮಿ ಆಚರಿಸುತ್ತಿದ್ದೇವೆ. ಸಮಾಜವನ್ನು ವೈಚಾರಿಕ ಪ್ರಜ್ಞೆಯೊಂದಿಗೆ, ಮಾದರಿ ಸಮಾಜ ರೂಪಿಸಲು ಬಸವಾದಿ ಶರಣರು ಪ್ರಯತ್ನ ನಡೆಸಿದ್ದರು. ಮೌಢ್ಯ ಕಂದಾಚಾರ ಬಿಡುವ ಅವರ ಸದಾಶಯದಂತೆ ನಾವಿಂದು ಸಾಗಬೇಕಿದೆ. ಪೌಷ್ಟಿಕ ಆಹಾರವಾಗಿರುವ ಹಾಲನ್ನು ಕಲ್ಲು ಮಣ್ಣಿನ ಮೇಲೆ ಸುರಿಯುವುದು ಸಲ್ಲದು. ಅದರ ಅವಶ್ಯಕತೆ ಇರುವವರಿಗೆ ಅವನ್ನು ನೀಡಬೇಕು. ಅಂಥ ಮಾನವೀಯ ಕಾರ್ಯಗಳಲ್ಲಿ ಬಸವಪರ ಸಂಘಟನೆಗಳು ಸದಾ ಮುಂದಾಗುತ್ತವೆ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರಗಳ ಮುಖಂಡರಾದ ಗುರುಲಿಂಗಯ್ಯ ಓದಸುಮಠ, ಬಸವರಾಜ ಕೊಟಗಿ, ಬಸವರಾಜ ಹೂಗಾರ, ಸಾಗರ ವಾಲಿ, ಮಂಜು ಹರಿಹರ, ಶರಣಪ್ಪ ಹಡಪದ, ವೀರೇಶ ವಾಲಿ, ಮಹಾಂತೇಶ ಕಡಗದ, ಬಸಯ್ಯ ಹಿರೇಮಠ, ಎಂ.ಎಸ್. ಅಂಗಡಿ, ಬಸವರಾಜ ಹೊಸಮನಿ, ಸಮರ್ಥ, ದೀಪಕ, ಗೌತಮ ಮತ್ತೀತರರು ಈ ಸಂದರ್ಭದಲ್ಲಿದ್ದರು.