Breaking News

ಗೌರಿ ಗಣೇಶ ಹಬ್ಬ: ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ಇಲಾಖೆಯಿಂದ ನಾನಾ ಕ್ರಮ

Gauri Ganesha festival: Various actions by district administration, district police department

ಜಾಹೀರಾತು

ಕೊಪ್ಪಳ ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಗೌರಿ ಗಣೇಶ ಹಬ್ಬವನ್ನು ಪ್ರಸಕ್ತ ವರ್ಷವು ಸಹ ಸಡಗರ ಸಂಭ್ರಮ ಮತ್ತು ಶಾಂತ ರೀತಿಯಿಂದ ಮತ್ತು ಸೌಹಾರ್ದತೆಯಿಂದ ಆಚರಿಸಲು ಜಿಲ್ಲಾಡಳಿತವು ನಾನಾ ಕ್ರಮಗಳನ್ನು ಕೈಗೊಂಡಿದೆ.
ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸಂದರ್ಭ, ವಿವಿಧ ಕಾರ್ಯಕ್ರಮಗಳ ಆಯೋಜನೆ ಸಂದರ್ಭ ಮತ್ತು ಮತ್ತು ಮೂರ್ತಿಗಳನ್ನು ಮೆರವಣಿಗೆಯಲ್ಲಿ ಸಾಗಿಸಿ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಸಹ ಪ್ರಸಕ್ತ ವರ್ಷ ನಾನಾ ಕ್ರಮಗಳನ್ನು ವಹಿಸಿದೆ.
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಾಗ ಸಂಚಾರ ದಟ್ಟನೆಯಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಜಾಗದಲ್ಲಿಯೇ ಪ್ರತಿಷ್ಠಾಪನೆ ಮಾಡಬೇಕು. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ಆದೇಶನದನ್ವಯ ರಸ್ತೆಯಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ, ಅಂಬ್ಯುಲೆನ್ಸ್, ಅಗ್ನಿಶ್ಯಾಮಕ ವಾಹನಗಳ ಓಡಾಟಕ್ಕೆ ತೊಂದರೆ ಮಾಡಲು ಅವಕಾಶವಿರುವುದಿಲ್ಲ ಎಂದು ಸೂಚಿಸಲಾಗಿದೆ.
ತುರ್ತು ಸಹಾಯಕ್ಕೆ ವ್ಯವಸ್ಥೆ: ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕರು ಗಣೇಶ ಮೂರ್ತಿಯ ಭದ್ರತೆಯ ಕುರಿತು ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ 24*7 ಸಮಯ ಸ್ವಯಂ ಸೇವಕರನ್ನು ನೇಮಿಸಿ ಅವರ ವಿವರವನ್ನು ಠಾಣೆಗೆ ನೀಡಬೇಕು. ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ 112 ಸಂಖ್ಯೆಗೆ ಅಥವಾ ದೂರವಾಣಿ ಸಂಖ್ಯೆ 9480803700ಗೆ ಕರೆ ಮಾಡಬೇಕು ಎಂದು ತಿಳಿಸಲಾಗಿದೆ.
*ಧ್ವನಿವರ್ಧಕ ಬಳಕೆ ಮಾರ್ಗಸೂಚಿ*: ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ/ಸರ್ಕಾರ ಹೊರಡಿಸಿರುವ/ ಮಾಲಿನ್ಯ ನಿಯಂತ್ರಣ ಕಾಯಿದೆಯಡಿ ಸೂಚಿಸಿದಂತೆ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಹಬ್ಬದ ಪ್ರಯುಕ್ತ ಬಳಸಲಾಗುವ ಧ್ವನಿವರ್ಧಕಗಳು ಕೈಗಾರಿಕಾ ಪ್ರದೇಶದಲ್ಲಿ ಬೆಳಗಿನ ಸಮಯದಲ್ಲಿ 75 ಹಾಗೂ ರಾತ್ರಿ ಸಮಯದಲ್ಲಿ 70 ಡೆಸಿಬಲ್, ವಾಣಿಜ್ಯ ವಲಯದಲ್ಲಿ ಬೆಳಗಿನ ಸಮಯದಲ್ಲಿ 65 ರಾತ್ರಿ ಸಮಯದಲ್ಲಿ 55 ಡೆಸಿಬಲ್, ವಸತಿ ವಲಯದಲ್ಲಿ ಬೆಳಗಿನ ಸಮಯದಲ್ಲಿ 55 ಹಾಗೂ ರಾತ್ರಿ 45 ಡೆಸಿಬಲ್, ನಿಶ್ಯಬ್ದ ವಲಯದಲ್ಲಿ ಬೆಳಗಿನ ವಲಯದಲ್ಲಿ 50 ರಾತ್ರಿ 40 ಡೆಸಿಬಲ್ ಮಿತಿ ಮೀರುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆವರೆಗೆ ಯಾವುದೇ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ
*ಅಧಿಕಾರಿಗಳಿಗೆ ಸೂಚನೆ:* ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರ, ಪಟ್ಟಣ, ಗ್ರಾಮಗಳಲ್ಲಿ ಸೂಕ್ತ ಹಾಗೂ ಸುರಕ್ಷಿತ ಸ್ಥಳಗಳನ್ನು ಗುರುತಿಸಬೇಕು. ಗುರುತು ಮಾಡಿದ ಸ್ಥಳಗಳಲ್ಲಿ ಸಾರ್ವಜನಿಕರು ಮೂರ್ತಿಗಳನ್ನು ವಿಸರ್ಜನೆ ಮಾಡಲು ಆದೇಶ ಹೊರಡಿಸಿ ಕ್ರಮ ವಹಿಸುವಂತೆ ಕೊಪ್ಪಳ, ಕುಕನೂರ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಹಸೀಲ್ದಾರಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಕೊಪ್ಪಳ ಮತ್ತು ಗಂಗಾವತಿ ನಗರಸಭೆ ಪೌರಾಯುಕ್ತರಿಗೆ, ಕುಷ್ಟಗಿ ಕಾರಟಗಿ ಪುರಸಭೆ ಮುಖ್ಯಾಧಿಕಾರಿಗಳಿಗೆ, ಯಲಬುರ್ಗಾ, ಕುಕನೂರ, ಕನಕಗಿರಿ, ತಾವರಗೇರಾ ಮತ್ತು ಭಾಗ್ಯನಗರ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಅಪರ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಸೂಕ್ತ ಬೆಳಕಿನ ವ್ಯವಸ್ಥೆ: 1, 3, 5, 7 9 ಹಾಗೂ 11ನೇ ದಿನದಂದು ಹೆಚ್ಚಿನ ಪ್ರಮಾಣದಲ್ಲಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಈ ಸಮಯದಲ್ಲಿ ಕೊಪ್ಪಳ ನಗರ, ಗಂಗಾವತಿ ನಗರ, ಮುನಿರಾಬಾದ್, ಕುಷ್ಟಗಿ, ಕಾರಟಗಿ, ಕುಕನೂರ ಮತ್ತು ಯಲಬರ್ಗಾ ಪಟ್ಟಣಗಳ ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿಟಿವಿ ವ್ಯವಸ್ಥೆ ಮಾಡಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚಿಸಲಾಗಿದೆ.
ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚನೆ: ತಹಸೀಲ್ದಾರರು ಮತ್ತು ಸ್ಥಳೀಯ ಆಡಳಿತಾಧಿಕಾರಿಗಳ ನಿರ್ದೇಶನದಂತೆ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಇರುವ ಕ್ರೇನ್ ಮತ್ತು ಅಗ್ನಿಶಾಮಕ ದಳದಿಂದ ನುರಿತ ಈಜುಗಾರರನ್ನು ನಿಯೋಜಿಸಲು ಕ್ರಮ ವಹಿಸಬೇಕು ಎಂದು ಎನ್‌ಇಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮತ್ತು ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳಿಗೆ ಜಿಲ್ಲಾಡಳಿತದಿಂದ ನಿರ್ದೇಶನ ನೀಡಲಾಗಿದೆ.
ನಗರಸಭೆ ಪೌರಾಯುಕ್ತರಿಗೆ ಸೂಚನೆ : ಸೆಪ್ಟೆಂಬರ್ 19ರಿಂದ ಜಿಲ್ಲೆಯಾದ್ಯಂತ ಆಚರಿಸಲಾಗವ ಗೌರಿ ಗಣೇಶ ಹಬ್ಬದ ಅಂಗವಾಗಿ ಕೊಪ್ಪಳ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಹಬ್ಬದ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ವಹಿಸುವಂತೆ ಪೌರಾಯುಕ್ತರಿಗೆ ಸೂಚಿಸಲಾಗಿದೆ.
ಪೊಲೀಸ್ ಇಲಾಖೆ ಕಾರ್ಯಪ್ರವೃತ್ತ: ಹಬ್ಬದ ಸಮಯದಲ್ಲಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವು ದುಷ್ಟ ಶಕ್ತಿಗಳು ಕೋಮು ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ಹಬ್ಬದ ಆಚರಣೆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದ ಹಾಗೆ ಮುನ್ನೆಚ್ಚರಿಕೆ ಕ್ರಮ ವಹಿಸಲು ನಗರದ ಸುಭಾಷಚಂದ್ರ ಸರ್ಕಲ್ ಹತ್ತಿ, ಹುಲಿಕೆರೆ ವಿಸರ್ಜನಾ ಸ್ಥಳ, ಮಿಟ್ಟಿಕೇರಿ ಮಸೀದಿ ಹತ್ತಿರ, ನೂರಾನಿ ಮಸೀದಿ ಹತ್ತಿರ, ಲೇಬರ್ ಕ್ರಾಸ್, ಹಳೇ ಡಿಸಿ ಕಚೇರಿ ಸರ್ಕಲ್, ದೇವರಾಜ ಅರಸು ಕಾಲೊನಿ, ವಡ್ಡರ ಓಣಿ, ಟಾಂಗಾ ಕೂಟ, ಅಶೋಕ್ ಸರ್ಕಲ್, ದಿವಟರ್ ಸರ್ಕಲ್, ದುರ್ಗಮ್ಮ ಗುಡಿ ಹತ್ತಿರ, ಅಜಾದ್ ಸರ್ಕಾಲ್, ಯುಸೂಫಿಯಾ ಮಾಸ್ಕ ಹಿಂದೆ, ಗಡಿಯಾರ ಕಂಬದ ಹತ್ತಿರ, ಮಹೇಶ್ವರ ದೇವಸ್ಥಾನದ ಕ್ರಾಸ್ ಹತ್ತಿರ, ಶಿವಾಜಿ ವೃತ್ತದ ಹತ್ತಿರ, ಶಾರದಾ ಟಾಕೀಸ್ ಕ್ರಾಸ್ ಹತ್ತಿರ, ಹಿರೇಮಸೀದಿ ಹತ್ತಿರ, ಪಲ್ಟಾನ್‌ಗಲ್ಲಿ ಮಾಸ್ಕ ಹತ್ತಿರ, ಅಂಬೇಡ್ಕರ ಸರ್ಕಲ್ ಹತ್ತಿರ, ಕಿತ್ತೂರ ಚೆನ್ನಮ್ಮ ಸರ್ಕಲ್ ಹತ್ತಿರ, ಹಟಗಾರ ಪೇಟೆ ಆಂಜನೇಯ ದೇವಸ್ಥಾನ ಹತ್ತಿರ, ಫಿಶ್ ಮಾರ್ಕೇಟ್ ಹತ್ತಿರ, ಕನಕಗಿರಿ ಓಣಿ ಕ್ರಾಸ್ ಹತ್ತಿರ, ಭಾಗ್ಯನಗರದ ಗಾಂಧಿ ಸರ್ಕಲ್, ಅಂಬೇಡ್ಕರ್ ಸರ್ಕಲ್ ಹತ್ತಿರದ ಸ್ಥಳಗಳಲ್ಲಿ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಇಲಾಖೆಗಳಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಈ ಮೂಲಕ ಆಯಾ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆಯು ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ: ಗಣೇಶ ಪ್ರತಿಷ್ಠಾಪನೆ ವೇಳೆ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಮುಂತಾದ ಪರವಾನಿಗೆಯನ್ನು ಏಕಗವಾಕ್ಷಿಯಲ್ಲಿ ನೀಡುವಂತೆ ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿ ಕ್ರಮ ವಹಿಸಲಾಗಿದೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಶಾಂತಿ ಸಭೆ ನಡೆಸಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಹಿತದೃಷ್ಟಿಯಿಂದಾಗಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು, ಹಬ್ಬವನ್ನು ಶಾಂತರೀತಿಯಿಂದ ಆಚರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಎಸ್ಪಿ ಅವರ ಪ್ರತಿಕ್ರಿಯೆ: ಜಿಲ್ಲೆಯ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ಗೌರಿ ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾನಾ ಕ್ರಮವಹಿಸಿ ಜಿಲ್ಲಾ ಪೊಲೀಸ್ ಇಲಾಖೆಯು ಎಲ್ಲ ರೀತಿಯಿಂದ ಸನ್ನದ್ಧವಾಗಿದೆ. ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, 4 ಕೆಎಸ್‌ಆರ್‌ಪಿ ಮತ್ತು 500 ಗೃಹರಕ್ಷಕ ದಳ ಸಿಬ್ಬಂದಿಯನು ಈಗಾಗಲೇ ನೇಮಿಸಲಾಗಿದೆ. ಹಬ್ಬದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದ ಹಾಗೆ ಹದ್ದಿನ ಕಣ್ಣಿಡಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ತಿಳಿಸಿದ್ದಾರೆ.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.