CSF Inscription found in premises
ಸಿಂಧನೂರು : ಸಿ.ಎಸ್.ಎಫ್. ಆವರಣದಲ್ಲಿ ಶಾಸನ
ಪತ್ತೆಯಾದ ಶಾಸನವನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ ಯವರು ಸಂಶೋದಿಸಿದ್ದಾರೆ. ಈ ಶಾಸನವು ಬೆಣಚುಕಲ್ಲಿನ ಶಿಲೆಯದಾಗಿದ್ದು, ಕ್ರಿ.ಶ. 13ನೇ ಶತಮಾನಕ್ಕೆ ಸೇರುತ್ತದೆ. ಇದು ಕನ್ನಡ ಭಾಷೆ ಕನ್ನಡ ಲಿಪಿಯಲ್ಲಿದ್ದು, ಒಂಬತ್ತು ಸಾಲುಗಳಿಂದ ರಚಿತವಾಗಿದೆ. ಇದರಲ್ಲಿ ಹಿರಿಯ ಗೊಬ್ಬರ (ಪ್ರಸ್ತುತ ದೇವದುರ್ಗ ತಾಲ್ಲೂಕಿನ ಗಟ್ಟೂರು ಗ್ರಾಮ) ಜನ್ನಯ್ಯಭಟ್ಟ, ರಾರಾವಿಯ (ಬಳ್ಳಾರಿ ಜಿಲ್ಲೆಯ ಗ್ರಾಮ) ಜನ್ನಯ್ಯಭಟ್ಟರ ವೃತ್ತಿಗೆ ಹಾಗೂ ಕೌಶಿಕ ಗೋತ್ರದ ಸಾಕಮದ ವಂಕಣ ಭಟ್ಟರ ಮಕ್ಕಳಾದ ದಾಮೋದರ ಭಟ್ಟರಿಗೆ ಹಿರಿಯ ಬೆಳ್ಳಹಾರದ (ಪ್ರಸ್ತುತ ಒಳಬಳ್ಳಾರಿ ಗ್ರಾಮ) ಅಶೇಷ ಮಹಾಜನರು ಆದಿತ್ಯದೇವರ ಗಡಿಂಬದಲಿ ಅಳೆದು ಎರಡು ಮತ್ತರು ಭೂಮಿಯನ್ನು ಮದುವೆಯ ಕಾಲದಲ್ಲಿ ಪ್ರೀತಿಯ ದಾನವಾಗಿ ನೀಡಿದ ಬಗ್ಗೆ ದಾಖಲಿಸುತ್ತದೆ.
ಶಾಸನದ ಮೇಲ್ಬಾಗದಲ್ಲಿ ಕಳಚೂರಿ ಅರಸರ ಲಾಂಛನವಾದ ನಂದಿ, ಕತ್ತಿಯ ಜೊತೆಗೆ ವಾಮನನ ವಿಗ್ರಹವಿದೆ, ಇದರಿಂದ ತಿಳಿದು ಬರುವದೇನೆಂದರೆ ಇದು ಸ್ಮಾರ್ತ ಬ್ರಾಹ್ಮಣರ ಪರಂಪರೆಗೆ ಸೇರಿದ್ದಾಗಿದೆ. ವಾಮನನು ತನ್ನ ಎಡಗೈಯಲ್ಲಿ ಕೊಡೆಯನ್ನು, ಬಲಗೈಯಲ್ಲಿ ತೀರ್ಥದ ಕುಂಡಲವನ್ನು ಹಿಡಿದಿದ್ದಾನೆ. ಈತನು ತನ್ನ ಹಣೆಗೆ ಗಂಧದ ಲೇಪನ, ಕಚ್ಚೆ ದೋತರ ಧರಿಸಿದ್ದು ಕಾಣಬರುತ್ತದೆ. ಇದರ ಮೇಲ್ಬಾಗದಲ್ಲಿ ಚಂದ್ರ, ಸೂರ್ಯನ ಶಿಲ್ಪಗಳಿವೆ. ಈ ಶಾಸನದ ಕ್ಷೇತ್ರಕಾರ್ಯದಲ್ಲಿ ಸಿಎಸ್.ಎಫ್ ನ ನಿರ್ದೇಶಕರಾದ ವಿನಯಕುಮಾರ, ಮ್ಯಾನೇಜರ್‌ರಾದ ಅರುಣಕುಮಾರ, ಇಂಜನೀಯರ್‌ರಾದ ಚೇತನ್ ಕುಮಾರ ಹಾಗೂ ನೌಕರರಾದ ಅಯ್ಯಪ್ಪ, ವೆಂಕೋಬ, ಶಿವಪ್ಪ ಮತ್ತು ನನ್ನ ವಿದ್ಯಾರ್ಥಿಗಳಾದ ಹುಸೇನಪೀರ್ ಮಲ್ಲಿಗಿಮಡುವು, ಸುರೇಶ ತುರಕಟ್ಟಿಕ್ಯಾಂಪ್ ಮೊದಲಾದವರು ನೆರವಾಗಿದ್ದರೆಂದು ಸಂಶೋಧಕರು ಪತ್ರಿಕೆಗೆ ತಿಳಿಸಿದ್ದಾರೆ.