Dairy farming has improved the lives of women: Shivappa Vadi
ಕುಕನೂರು : ಗ್ರಾಮೀಣ ರೈತ ಮಹಿಳೆಯರಿಗೆ ಬದುಕು ಹಸನು ಮಾಡುವಲ್ಲಿ ಹೈನುಗಾರಿಕೆ ಸಹಕಾರಿಯಾಗಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಹೇಳಿದರು.
ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಗುರವಾರ ಹಮ್ಮಿಕೊಳ್ಳಲಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪಶು ಸಂಗೋಪನೆ ರೈತರ ಅವಿಭಾಜ್ಯ ಅಂಗ. ಹಾಲಿನ ಉತ್ಪಾದನೆ ಜೊತೆ ರೈತರು ಹಾಲು ಸೇವಿಸಬೇಕು ಕುಟುಂಬದ ಮಕ್ಕಳಿಗೂ ಹಾಲು ಕುಡಿಸಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು, ಪಶುಗಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಗುಣಮಟ್ಟದ ಹಾಲು ಉತ್ಪಾದನಗೆ ಒತ್ತು ನೀಡಬೇಕು, ಆಗ ಮಾತ್ರ ರೈತರ ಆದಾಯ ಹೆಚ್ಚಳಗೊಂಡು ಬದುಕು ಹಸನಾಗುತ್ತದೆ ಎಂದರು.
ಗ್ರಾಮದಲ್ಲಿನ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಬಹಳಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತಮವಾಗಿ ಕೆಲಸ ಮಾಡಿ ಸಂಘವನ್ನು ಅಭಿವೃದ್ದಿ ಪಡಿಸುವ ಇಚ್ಚಾಶಕ್ತಿ ಹೊಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ಆರಂಭದಲ್ಲಿ ಬೆರಳಣಿಕೆಯಷ್ಟು ಸದಸ್ಯರನ್ನು ಹೊಂದಿ ಸಂಘ ರಚಿಸಲಾಗಿತ್ತು ಇದೀಗ ಹೆಚ್ಚು ಸದಸ್ಯರನ್ನು ಹೊಂದು ಉತ್ತಮ ಲಾಭದತ್ತ ಸಾಗಿದೆ. ತಾಲೂಕಿನಲ್ಲಿ ವೈದ್ಯರ ಸಮಸ್ಯೆ ಇದ್ದು ಶೀಘ್ರದಲ್ಲಿಯೇ ವೈದ್ಯರನ್ನ ನಿಯೋಜಿಸಲಾಗುತ್ತದೆ, ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 5 ಲಕ್ಷ ರೂ ಸಹಾಯಧನ ಕೊಡಿಸಲಾಗುವುದು ಎಂಬ ಭರವಸೆ ನೀಡಿದರು.
ರಾಬಕೊವಿ ಒಕ್ಕೂಟದ ನಿರ್ದೇಶಕಿ ಕವಿತಾ ಗುಳಗಣ್ಣನವರ ಮಾತನಾಡಿ ಚಿಕೇನಕೊಪ್ಪ ಸಂಘಕ್ಕೆ ಒಕ್ಕೂಟದಿಂದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು, ಜಿಲ್ಲೆಯಲ್ಲಿಯೇ ಉತ್ತಮ ಮಾದರಿ ಸಂಘವಾಗಿ ಹೊರಹೊಮ್ಮಲಿ, ಸಂಘದ ಕಾರ್ಯಕ ಚಟುವಟಿಕೆ ಸದಾ ಬೆಂಬಲವಾಗಿರುತ್ತೇನೆ ಎಂದರು.
ಗ್ರಾಪಂ ಉಪಾದ್ಯಕ್ಷ ಮಹೇಂದ್ರಕುಮಾರ ಗದಗ ಮಾತನಾಡಿ ಗ್ರಾಮದಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿಯವರು ಅನುಧಾನ ನೀಡಿದ್ದು ಶೀಘ್ರದಲ್ಲಿಯೇ ಕಟ್ಟಡ ಕಾಮಗಾರಿ ಆರಂಭಿಸಲಾಗುತ್ತದೆ, ಮುಂದಿನ ವರ್ಷದ ಸಾಮಾನ್ಯ ಸಭೆಯನ್ನು ಹೊಸ ಕಟ್ಟಡದಲ್ಲಿ ನಡೆಸಬೇಕು ಎನ್ನುವ ಮಹದಾಸೆಯಿದೆ. ಈ ಕ್ಷೇತ್ರದಲ್ಲಿ ಸಹಕಾರ ಮನೋಭಾವ ಅಗತ್ಯ, ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಲು ಉತ್ಪಾದನೆ ಮಾಡಿ ಆರ್ಥಿಕವಾಗಿ ಮುಂದೆ ಬರಲಿ ಎಂದರು.
ಸಾನಿಧ್ಯ ವಹಿಸಿ ಶಂಭುಲಿಂಗಾರೂಢ ಆಶ್ರಮದ ಪೀಠಾಧಿಪತಿ ಅನ್ನದಾನಭಾರತಿ ಸ್ವಾಮೀಜಿ, ವೇದಮೂರ್ತಿ ಶಿವಕುಮಾರಯ್ಯ ಹಿರೇಮಠ ಮಾತನಾಡಿ ಗ್ರಾಮದಲ್ಲಿ ಹಾಲು ಉತ್ಪಾದನೆಯಿಂದ ಹಲವಾರು ಜನ ಬದುಕು ಕಟ್ಟಿಕೊಂಡಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಡೆಸುವ ಸಾಮಾನ್ಯ ಸಭೆಯಲ್ಲಿ ಪ್ರತಿ ಸದಸ್ಯರು ಭಾಗವಹಿಸಿ ಜವಬ್ದಾರಿಯುತವಾಗಿ ನಡೆದುಕೊಂಡು ಸಂಘದ ಅಭಿವೃದ್ದಿಗೆ ಸಲಹೆ ಸೂಚನೆ ನೀಡಬೇಕು, ಮಹಿಳೆ ಅಬಲೆಯಲ್ಲಿ ಸಬಲೆ ಎಂಬುದನ್ನು ನಿರೂಪಿಸಬೇಕು, ಹೈನುಗಾರಿಕೆಯಿಂದ ಆರ್ಥಿಕತೆ ವೃದ್ದಿಸಿಕೊಳ್ಳಬೇಕು, ಸಂಘದ ಬಲವರ್ದನೆಯಲ್ಲಿ ಅಧ್ಯಕ್ಷೆ, ಕಾರ್ಯದರ್ಶಿಯ ಕಾರ್ಯ ಬಹಳಷ್ಟಿದೆ, ಸಂಘದ ಶ್ರೇಯೋಭಿವೃದ್ದಿಗಾಗಿ ಸದಾ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷೆ ರೇಣುಕಾ ಕಾಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ವೀರಪ್ಪ ಬಿಸನಳ್ಳಿ, ಬಸವಲಿಂಗಪ್ಪ ವಕ್ಕಳದ, ಬಸಪ್ಪ ವಕ್ಕಳದ, ಶಿವಪ್ಪ ರಾಜೂರು, ಮಂಡಲ ಪಂಚಾಯಿತಿ ಮಾಜಿ ಪ್ರಧಾನರಾದ ಮಲ್ಲಪ್ಪಜ್ಜ, ಗ್ರಾಪಂ ಸದಸ್ಯರಾದ ಚಿದಾನಂದ ಮ್ಯಾಗಳಮನಿ, ಲಲಿತಾ ಅಡಗಿಮನಿ, ವಿಜಯಲಕ್ಷ್ಮೀ ಮಂಗಳೂರು, ಉಪವ್ಯವಸ್ಥಾಪಕ ಡಾ.ಗಂಗಾಧರ ದಿವಟರ, ವಿಸ್ತೀರ್ಣಾಧಿಕಾರಿ ರತ್ನಾ ಹಕ್ಕಂಡಿ, ಸಮಾಲೋಚಕಿ ಅನಿತಾ ಹಿರೇಮಠ, ಕಾರ್ಯದರ್ಶಿ ನಂದಿನಿ ಬಿಸನಳ್ಳಿ,ಅಶೋಕ ಅಣಗೌಡ್ರ, ಪ್ರಭು ತೆಕ್ಕಲಕೋಟಿ, ಯುವ ಪತ್ರಕರ್ತ ಮಲ್ಲು ಮಾಟರಂಗಿ, ಸಹಕಾರ ಸಂಘದ ಸರ್ವಸದಸ್ಯರು, ಗುರು-ಹಿರಿಯರು, ಯುವಕರು, ಮಹಿಳೆಯರು ಇತರರು ಇದ್ದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಡೈರಿಗೆ ಹಾಲು ಹಾಕಲು ಸ್ಟೀಲ್ ಕ್ಯಾನುಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.