Breaking News

“ಲಿಂ.ಪೂಜ್ಯಶ್ರೀಪಂಚಾಕ್ಷರಿ ಗವಾಯಿಗಳು”


“Lim. Pujyashripanchakshari Gawais”

ಪರಮ ಪೂಜ್ಯ ಪಂಡಿತ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ ಹಾಗೂ ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ದ ಸಂಸ್ಥಾಪಕರೂ ಆಗಿದ್ದಾರೆ.

ಶ್ರೀ ಪಂಚಾಕ್ಷರ ಗವಾಯಿಗಳು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, 1892 ಫೆಬ್ರವರಿ 2 ರಂದು ಜನಿಸಿದರು.

ಗದುಗಿನ ಪಂಚಾಕ್ಷರಿ ಗವಾಯಿಗಳ ಜೀವನವೇ ಸಂಗೀತ ಕಲಿಯುವುದಕ್ಕಾಗಿ ಮತ್ತು ಕಲಿಸುವುದಕ್ಕಾಗಿ ಮೀಸಲಾಗಿತ್ತು. ಒಂದು ಜನ್ಮದಲ್ಲಿ ಯಾರೂ ಪೂರ್ತಿಯಾಗಿ ಸಂಗೀತ ಕಲಿಯುವುದು ಸಾಧ್ಯವಿಲ್ಲವೆಂದು ಅವರು ದೃಢವಾಗಿ ನಂಬಿದ್ದರು. ಈ ಜನ್ಮದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನೂ ಪೂರ್ತಿ ಕಲಿತು ಬಿಡಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿತ್ತು. ಗಾಯನ ಇಲ್ಲವೇ ವಾದನ ಇವುಗಳಲ್ಲಿ ಯಾವುದಾದರೊಂದು ವಿಭಾಗದಲ್ಲಿ ನಿರಂತರ ಸಾಧನೆಯನ್ನು ಮಾಡುವುದು, ಅದರಲ್ಲಿಯೇ ಅಪ್ರತಿಮ ಎನಿಸುವಂಥ ಪ್ರಬುದ್ಧತೆಯನ್ನು ಹೊಂದುವುದು ಬಹುತೇಕ ಕಲಾವಿದರು ತಲುಪುವ ಹಂತ. ಪಂಚಾಕ್ಷರಿ ಗವಾಯಿಗಳು ಕರ್ನಾಟಕಿ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಅಸೀಮ ಗಾಯಕರೆನಿಸಿದರು. ಇದಿಷ್ಟೇ ಸಾಲದೆಂಬಂತೆ ವಾದನ ಕ್ಷೇತ್ರದಲ್ಲೂ ಶ್ರೇಷ್ಠ ಸಾಧನೆಯನ್ನು ಮಾಡಿದರು. ತಬಲಾ, ಪಿಟೀಲು, ಹಾರ್ಮೋನಿಯಂ, ಪಖಾವಜ್, ಸಾರಂಗಿ, ದಿಲ್‌ರುಬಾ, ಕೊಳಲು, ಶಹನಾಯಿ ವಾದನಗಳನ್ನು ನುಡಿಸುವಲ್ಲಿಯೂ ಪಂಚಾಕ್ಷರಿ ಗವಾಯಿಗಳು ನಿಷ್ಣಾತರೆನಿಸಿದರು.

ಪಂಚಾಕ್ಷರಿ ಗವಾಯಿಗಳ ತಾಯಿ ನೀಲಮ್ಮ ಹಾಗೂ ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟು ಹೆಸರು.

ಗದಿಗೆಯ್ಯ ಹಾಗೂ ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟುಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು.

ಅಣ್ಣತಮ್ಮಂದಿರಿಬ್ಬರಿಗೂ ಅನೇಕ ಗುರುಗಳಿಂದ ಸಂಗೀತ ಶಿಕ್ಷಣ ದೊರೆಯಿತು. ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದ.

ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತದ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯನವರು, ಆ ಬಳಿಕ ಬಾಗಿಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ ‘ಪಂಚಾಕ್ಷರಿ ಗವಾಯಿ’ ಎಂದು ಉದ್ಘೋಷಿತರಾದರು. ಆ ಬಳಿಕ ಮತ್ತೆ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು.

ಸಂಗೀತದ ಮೂಲಕವೇ ಸಮಾಜಸೇವೆ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಅಧ್ಯಾತ್ಮಮಾರ್ಗದಲ್ಲೂ ಮುನ್ನಡೆದರು.

ಪಂಚಾಕ್ಷರಿ ಗವಾಯಿಗಳು ನಾಡಿನಲ್ಲೆಲ್ಲ ಸಂಚರಿಸುತ್ತ 1914 ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ ಶಿವಯೋಗ ಮಂದಿರದ ಶಾಖೆಯಾಗಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಿದರು. ಈ ಸಂಗೀತಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಗಳನ್ನು ಸಹ ಹೇಳಿಕೊಡಲಾಗುತ್ತಿತ್ತು. ಇವರ ಶಿಷ್ಯರಲ್ಲಿ ಇವರ ಉತ್ತರಾಧಿಕಾರಿಯಾಗಿ ದೊರೆತ, ಪ್ರಸಿದ್ಧ ಗವಾಯಿ ಪುಟ್ಟರಾಜರೂ ಸಹ ಕುರುಡರೇ.!.ಸಂಗೀತ ಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಈ ನಡುವೆ 1930 ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ದಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ಎಂದೇ ಹೆಸರಿಟ್ಟರು.

ಎಚ್ ಎಂ ವಿ ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಮುಂಬಯಿಗೆ ಕರೆಸಿದ್ದರು. ಕನ್ನಡದಲ್ಲಿಯೇ ಗಾಯನ ಮಾಡುವದಾಗಿ ಹಠ ಮಾಡಿದ ಪಂಚಾಕ್ಷರಿ ಗವಾಯಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಾಗ, ಕಂಪನಿಯವರು ಗವಾಯಿಗಳ ಆಗ್ರಹಕ್ಕೆ ಮಣಿಯಲೇ ಬೇಕಾಯಿತು.

ಪಂಚಾಕ್ಷರಿ ಗವಾಯಿಗಳು ಖಾದಿಯನ್ನೇ ತೊಡುತ್ತಿದ್ದರು. ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದದ ಹೊರತಾಗಿ, ಇಂಗ್ಲಿಷ್ ವೈದ್ಯಕೀಯಕ್ಕೆ ಗವಾಯಿಗಳು ಒಪ್ಪಿಕೊಳ್ಳಲಿಲ್ಲ.

ಪಂಚಾಕ್ಷರಿ ಗವಾಯಿಗಳು ತಬಲಾ ವಾದನ ಕಲಿತಿದ್ದರ ಬಗ್ಗೆ ಒಂದು ಅಪೂರ್ವತೆಯಿದೆ. ಗವಾಯಿಗಳು ದಿನನಿತ್ಯದ ಸಂಗೀತ ಪಾಠ ನಡೆಯುವಾಗ ಅವರ ಶಿಷ್ಯರಲ್ಲಿ ಒಬ್ಬರಾದ ಶಿವಯ್ಯನವರು ತಬಲಾ ಸಾಥಿ ನೀಡುತ್ತಿದ್ದರು. ಗವಾಯಿಗಳು ಅವರನ್ನೇ ಬೆಳಗಾವಿಗೆ ಕಳುಹಿಸಿ ಮಲ್ಲೇಶಪ್ಪನವರಲ್ಲಿ ತಬಲಾ ಕಲಿಯುವ ವ್ಯವಸ್ಥೆ ಮಾಡಿದರು. ಜೇಕಿನಕಟ್ಟೆಯ ಶಿವಯ್ಯನವರು ವ್ಯವಸ್ಥಿತವಾಗಿ ತಬಲಾ ಕಲಿತು ಗದುಗಿಗೆ ಮರಳಿದರು. ಶಿವಯ್ಯನವರ ಸಾಧನೆಯನ್ನು ಕಂಡು ಗವಾಯಿಗಳು ಹಿಗ್ಗಿದರು ಹಾಗೂ ಅವರನ್ನೇ ತಮ್ಮ ಗುರುವೆಂದು ಭಾವಿಸಿ ತಬಲಾವಾದನ ಕಲಿಕೆ ಪ್ರಾರಂಭಿಸಿದರು ಶಿಷ್ಯನನ್ನೇ ಗುರುವೆಂದು ಭಾವಿಸಿದ ಅಪರೂಪದ ಹೃದಯವಂತಿಕೆ, ವಿದ್ಯೆ ಯಾವ ಮೂಲದಿಂದ ಬಂದರೂ ಅದು ಗ್ರಾಹ್ಯ ಎನ್ನುವ ತಿಳಿವಳಿಕೆ ಅವರದು.

1994 ಜೂನ್ 11 ರಂದು ಪಂಚಾಕ್ಷರಿ ಗವಾಯಿಗಳು ವಿಶ್ವಸಂಗೀತದಲ್ಲಿ ಲೀನರಾದರು.

ಈ ಮಹಾನ್ ಚೇತನಕ್ಕೆ ನಮ್ಮ ಅನಂತ ಶರಣು ಶರಣಾರ್ಥಿಗಳು…👏

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.