Breaking News

ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ – ಲಿಂಗಾಯತ ಧರ್ಮದ ಪುನರ್ಜನ್ಮ.

Birth of Venerable Lingananda Swamiji – Rebirth of Lingayatism.

ಜಾಹೀರಾತು

ವಚನ:
ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ
ಆಡೂ ಆ ದಾರಿಯಲ್ಲಿ ಹೋಯಿತ್ತೆನಬಹುದೆ ?
ಸಂಗನ ಶರಣರಿಗೆ ಆನು ಸರಿಯೆಂದು ಗಳಹಲುಬಹುದೆ ?
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೇ ಹೇಳಾ ಲಿಂಗದೇವಾ
-ಗುರುಬಸವಣ್ಣನವರು.

ಆನೆ ಬೃಹದಾಕಾರದ ಪ್ರಾಣಿ. ಅದು ನಡೆದ ಜಾಗದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲ್ಲು, ಚಿಕ್ಕಪುಟ್ಟ ಗಿಡಗಳು ಇರುವ ಕಡೆ ಆನೆ ಹೋದರೆ ಅದು ತನ್ನ ಸೊಂಡಿಲಿನಿಂದ ತನಗೆ ಅಡ್ಡ ಬಂದ ಗಿಡ-ಮರ ಟೊಂಗೆಗಳನ್ನು ಕಿತ್ತಿ ಎಸೆಯುತ್ತದೆ. ಹೀಗೆ ಒಂದು ಸಲ ಆನೆಯು ಹೋಗುವ ದಾರಿಯು ಎಷ್ಟೇ ಇಕ್ಕಟ್ಟಾಗಿದ್ದರೂ ಅಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಆ ದಾರಿಯಲ್ಲಿ ಇತರ ಆಡಿನಂತಹ ಸಣ್ಣ ಪುಟ್ಟ ಪ್ರಾಣಿಗಳು ಯಾವುದೇ ತೊಂದರೆ ಇಲ್ಲದೆ ಸಾಗಬಹುದು.

ಅದೇ ರೀತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಜಿಡ್ಡುಗಟ್ಟಿದ ಸಂಪ್ರದಾಯದಲ್ಲಿ ಆನೆಯಂತೆ ಮುನ್ನುಗ್ಗಿ ಅನೇಕ ಮೂಢನಂಬಿಕೆಗಳು, ತಪ್ಪು ಆಚರಣೆಗಳೆಂಬ ಗಿಡ ಮರಗಳನ್ನು ಕಿತ್ತೆಸೆದು ನವ ಪಥವನ್ನು ನಿರ್ಮಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದಿನ ದಿನಗಳನ್ನು ನೋಡಿದರೆ ಅಂದು ಬಸವಣ್ಣನವರು ಎಂದರೆ ಯಾರು? ವಚನಗಳೆಂದರೇನು? ಬಸವ ತತ್ತ್ವ, ಲಿಂಗಾಯತ ಧರ್ಮ, ಬಸವ ಧರ್ಮ ಎನ್ನುವ ಶಬ್ದಗಳು ಸಂಪೂರ್ಣವಾಗಿ ಮರೆಮಾಚಿ ಹೋದಾಗ ಮತ್ತೊಮ್ಮೆ 12ನೆಯ ಶತಮಾನದ ಭವ್ಯತೆ ದಿವ್ಯತೆಯನ್ನು ಭಾರತ ದೇಶದಲ್ಲಿ ಪ್ರತಿಷ್ಠಾಪಿಸಿದ ಮೊಟ್ಟಮೊದಲ ವ್ಯಕ್ತಿ ಪರಮಪೂಜ್ಯ ಲಿಂಗಾನಂದ ಸ್ವಾಮಿಜೀಯವರು. ಗುರುಬಸವಣ್ಣನವರು ನೀಡಿದ ಲಿಂಗಾಯತ ಧರ್ಮದ ಬಗ್ಗೆ ಪುಂಖಾನುಪುಂಖವಾಗಿ ನಾಡಿನಾದ್ಯಂತ ಪ್ರವಚನ ಮಾಡಿ ಬಸವ ಧರ್ಮವನ್ನು ಪ್ರತಿಷ್ಠಾಪಿಸಿದ ಮಹಾ ಗುರು ಲಿಂಗಾನಂದ ಸ್ವಾಮೀಜಿಯವರು.

ಒಂದು ಹೊಸ ಮನೆ ಕಟ್ಟಲಿಕ್ಕೆ ಎಷ್ಟು ಶ್ರಮಪಡಬೇಕಾಗುತ್ತದೆಯೋ ಸಂಪೂರ್ಣವಾಗಿ ಹಾಳಾದ ಮನೆಯನ್ನು ದುರಸ್ತಿ ಮಾಡಲಿಕ್ಕೂ ಅಷ್ಟೇ ಶ್ರಮ ಬೇಕು. ಅದೇ ರೀತಿ ಗುರುಬಸವಣ್ಣನವರು ಲಿಂಗಾಯತ ಧರ್ಮವೆಂಬ ಹೊಸ ಮನೆಯನ್ನು 12ನೇ ಶತಮಾನದಲ್ಲಿ ಕಟ್ಟಿದರು.

800 ವರ್ಷಗಳ ಅವಧಿಯಲ್ಲಿ
ಆ ಮನೆ ಹಾಳಾಗಿ, ನಶಿಸಿ ಹೋಗುತ್ತಾ ಅಳಿವಿನ ಅಂಚಿನಲ್ಲಿರುವಾಗ ಗುರುಬಸವಣ್ಣನವರ ಕಾರಣ ಶರೀರ (ಸಂಕಲ್ಪ) ಧಾರಿಯಾಗಿ ಅವತರಿಸಿ ಲಿಂಗಾಯತ ಧರ್ಮವೆಂಬ ಮಹಾಮನೆಯನ್ನು ಸಂಪೂರ್ಣವಾಗಿ ದುರಸ್ತಿಗೈದು ಮತ್ತೊಮ್ಮೆ 12ನೇ ಶತಮಾನದ ದಿವ್ಯತೆಯನ್ನು ತಂದುಕೊಟ್ಟವರು ಪರಮ ಪೂಜ್ಯ ಲಿಂಗಾನಂದ ಸ್ವಾಮೀಜಿಯವರು.

ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಒಂದು ಕಾರ್ಯವನ್ನು ಮಾಡ ಹೊರಟ ಮೊದಲ ವ್ಯಕ್ತಿಗಳು ಅನುಭವಿಸಿದ ನೋವು ಯಾತನೆ ಹೇಳತೀರದು. ಭಾರತಕ್ಕೆ ಜಲ ಮಾರ್ಗವನ್ನು ಕಂಡು ಹಿಡಿಯಲು ಹೊರಟ ಕೋಲಂಬಸ್ ಮತ್ತು ನಂತರದ ವಾಸ್ಕೋಡಿಗಾಮರ ಸಾಹಸ ರೋಮಾಂಚನವಾದುದು, ಅನುಭವಿಸಿದ ನೋವು ಅತ್ಯಂತ ಹೃದಯಸ್ಪರ್ಶಿಯಾಗಿದೆ. ಅವರ ಪ್ರಯಾಣದ ಮಧ್ಯದಲ್ಲಿ ಆಹಾರ ಸಾಮಗ್ರಿ ಮುಗಿದು ಹೋಗಿತ್ತು ಅನೇಕ ದಿನಗಳವರೆಗೆ ಉಪವಾಸದ್ದು ಪ್ರಯಾಣಮಾಡಿ ಕೋಲಂಬಸ್ ವೆಸ್ಟ್ ಇಂಡೀಸನ್ನು ಕಂಡು ಹಿಡಿದ. ಕೋಲಂಬಸ್ ಸೂಚಿಸಿದ ಮಾರ್ಗವಿಡಿದು ವಾಸ್ಕೋಡಿಗಾಮ 1498ರಲ್ಲಿ, ಅನೇಕ ಕಷ್ಟಗಳನ್ನು ಅನುಭವಿಸಿ ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದ. ನಂತರ ಭಾರತಕ್ಕೆ ಬರುವವರಿಗೆ ಸುಲಭ ಸಾಧ್ಯವಾಯಿತು.

ಅದೇ ರೀತಿ ಲಿಂಗಾನಂದ ಅಪ್ಪಾಜಿಯವರು ಲಿಂಗಾಯತ ಧರ್ಮದಲ್ಲಿ ಈ ಹೊಸ ಪಥವನ್ನು ಕಂಡು ಹಿಡಿಯಲಿಕ್ಕೆ ಬಸವ ಬಸವ ಸಾಮ್ರಾಜ್ಯವನ್ನು ಪುನಃ ಪ್ರತಿಷ್ಠಾಪಿಸಲಿಕ್ಕೆ ಅನುಭವಿಸಿದ ನೋವು ಕಿರುಕುಳಗಳು ಕಲ್ಪನೆಯ ಅಳೆತೆಗೂ ಮೀರಿದಂಥವು. ಧರ್ಮ ಪ್ರಚಾರಗೈಯುವಾಗ ಅವರಿಗೆ ಸರಿಯಾಗಿ ಪ್ರಸಾದ ಸಿಗುತ್ತಿರಲಿಲ್ಲ. ಅವರ ಪ್ರಗತಿಪರ ವಿಚಾರಧಾರೆಯನ್ನು ಕಂಡು ಕೆಲವರು ಮೆಚ್ಚಿದರೆ ಇನ್ನು ಕೆಲವರು ತೊಂದರೆಯ ಕೊಟ್ಟರು.

ಒಮ್ಮೆ ಪ್ರವಚನ ಮಾಡುವಾಗ, ಕುಹಕಿಯೊಬ್ಬನು ಅವರ ತಲೆಗೆ ಕಲ್ಲಿನಿಂದ ಹೊಡೆದ. ಪೆಟ್ಟಾದ ಭಾಗದಿಂದ ರಕ್ತ ಸೋರುತ್ತಿತ್ತು. ಒಂದು ಗಂಟೆಯ ಕಾಲ ಆ ಭಾಗಕ್ಕೆ ಹಾಗೆಯೇ ಕೈ ಹಿಡಿದುಕೊಂಡು ಪ್ರವಚನ ಮಾಡಿದರು. “ನಾನು ಬಸವ ತತ್ತ್ವಕ್ಕಾಗಿ ಪ್ರಾಣವನ್ನು ಮುಡುಪಾಗಿಟ್ಟವನು. ಆ ಕಾರ್ಯಕ್ಕಾಗಿಯೇ ನನ್ನ ಪ್ರಾಣ ಹೋಗುವುದಾದರೆ ಇದಕ್ಕಿಂತ ಹೆಚ್ಚಿನ ಸಂತೋಷ ಮತ್ತಾವುದು. ಮುಂದೆ ನನ್ನ ಒಂದೊಂದು ಹನಿ ಹನಿ ರಕ್ತದಿಂದ ಒಬ್ಬೊಬ್ಬ ಲಿಂಗಾನಂದ ಹುಟ್ಟಿ ಧರ್ಮ ಪ್ರಚಾರ ಮಾಡುತ್ತಾರೆ”ಎಂದು ಅತ್ಯಂತ ಆತ್ಮಬಲದಿಂದ ಹೇಳಿದ್ದಾರೆ. ಅಂಥ ಹನಿ ಲಿಂಗಾನಂದ, ರಾಷ್ಟ್ರೀಯ ಬಸವದಳದ ಶರಣರು ಆಗಬೇಕು.

ಎಲ್ಲಾ ರೀತಿಯ ನೋವನ್ನು ತಾವು ಅನುಭವಿಸಿ ಸುಲಭವಾದ ರಾಜ ಮಾರ್ಗವನ್ನು ಕೊಟ್ಟರು. ಅವರ ಜನ್ಮದಿಂದಾಗಿ ಬಸವ ತತ್ತ್ವ ಮತ್ತೊಮ್ಮೆ ನಿಲ್ಲುವಂತಾಗಿದೆ.

ತಮ್ಮ ಜೀವಿತಾವಧಿಯಲ್ಲಿಯೇ ಅವರು ತಮ್ಮ ಹುಟ್ಟು ಹಬ್ಬವನ್ನು ರಾ.ಬ.ದಳದ ಹುಟ್ಟುಹಬ್ಬವಾಗಿ ಆಚರಿಸಲಿಕ್ಕೆ ಹೇಳಿದರು. ಪ್ರತಿ ವರ್ಷ ಗಣೇಶ ಚತುರ್ಥಿಯಂದು ಪೂಜ್ಯರ ಹುಟ್ಟು ಹಬ್ಬ. ಪರಮಪೂಜ್ಯರ ಹುಟ್ಟು ಹಬ್ಬದ ಸಂದರ್ಭದಲ್ಲಿ ಪೂಜ್ಯರ ದಿವ್ಯ ಚೈತನ್ಯಕ್ಕೆ ಅನಂತ ಅನಂತ ಭಕ್ತಿಪೂರ್ವಕವಾದ ಶರಣು ಶರಣಾರ್ಥಿಗಳು.


ಸಚ್ಚಿದಾನಂದ ಪ್ರಭು ಚಟ್ನಳ್ಳಿ

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.