Breaking News

ಕೊಪ್ಪಳನೂತನನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ: ಕೊಪ್ಪಳ ಇತಿಹಾಸದಲ್ಲಿ ಹೊಸ ಮೈಲುಗಲ್ಲು

Bhumi Puja for Koppal New Court Complex: A new milestone in the history of Koppal

ನ್ಯಾಯಮೂರ್ತಿಗಳು, ನ್ಯಾಯಾಧೀಶರು, ಸಚಿವರು, ಶಾಸಕರು, ವಕೀಲರು, ಗಣ್ಯರು ಭಾಗಿ

ಕೊಪ್ಪಳ ನವೆಂಬರ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಇತಿಹಾಸದಲ್ಲಿ ನವೆಂಬರ್ 04 ಐತಿಹಾಸಿಕ ದಿನವಾಗಿ ದಾಖಲಾಯಿತು.
ನಗರದ ಕುಷ್ಟಗಿ ರಸ್ತೆಯ ಜಮೀನೊಂದರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾ.ಪ್ರಸನ್ನ ಬಿ ವರಾಳೆ ಅವರು ಭೂಮಿಪೂಜೆ ನೆರವೇರಿಸುತ್ತಿದ್ದಂತೆ ಕೊಪ್ಪಳ ಜಿಲ್ಲೆಯ ವಕೀಲರ ಬಹುದಿನಗಳ ಕನಸು ನನಸಾಯಿತು. ಈ ಹಿಂದೆ ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದರು. ಅದಾದ ಬಳಿಕ ಸರಿಸುಮಾರು 17 ವರ್ಷಗಳ ಬಳಿಕ ಜಿಲ್ಲೆಗೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಆಗಮಿಸಿದ್ದು ಸಹ ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ.ವಿ.ಶ್ರೀಶಾನಂದ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾ.ಹಂಚಾಟೆ ಸಂಜೀವಕುಮಾರ, ಸಚಿವರಾದ ಹೆಚ್.ಕೆ.ಪಾಟೀಲ, ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಹೇಮಲತಾ ನಾಯಕ, ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್
ಜನರಲ್ ಕೆ.ಎಸ್. ಭರತಕುಮಾರ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಚಂದ್ರಶೇಖರ ಸಿ., ವಕೀಲರ ಪರಿಷತ್ ಸದಸ್ಯರಾದ ಅಸಿಪ್ ಅಲಿ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ,
ಕೊಪ್ಪಳ ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಎ.ವಿ.ಕಣವಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಸಜ್ಜನ್ ಸೇರಿದಂತೆ ಜಿಲ್ಲೆಯ ಸಮಸ್ತ ವಕೀಲ ಸಮೂಹ, ಅನೇಕ ಗಣ್ಯರು ಸಾಕ್ಷಿಯಾದರು. ಈ ನೂತನ ನ್ಯಾಯಾಲಯದ ಅಡಿಗಲ್ಲು ಕಾರ್ಯಾನುಷ್ಠಾನದಲ್ಲಿ ಶ್ರಮಿಸಿದ ಹಿಂದಿನ ಕೊಪ್ಪಳ ಜಿಲ್ಲಾ ನ್ಯಾಯಾಧೀಶರಾದ ವಿಜಯಲಕ್ಷ್ಮಿದೇವಿ ಹಾಗೂ ಬನ್ನಿಕಟ್ಟಿ ಹನುಮಂತಪ್ಪ ಅವರಿಗು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಕುಕನೂರಿ‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊಪ್ಪಳ ನಗರಕ್ಕೆ ಆಗಮಿಸುತ್ತಿದ್ದಂತೆ ನ್ಯಾಯಮೂರ್ತಿಗಳಿಗೆ
ಪೂರ್ಣಕುಂಭದೊಂದಿಗೆ ದೇಶಿ ಶೈಲಿಯಲ್ಲಿ ಸ್ವಾಗತ ಕೋರಲಾಯಿತು. ಬಳಿಕ
20 ನಿಮಿಷಕ್ಕೂ ಹೆಚ್ಚು ಕಾಲ
ವಿಧಿವಿಧಾನಗಳಂತೆ ನಡೆದ ಭೂಮಿಪೂಜಾ ಕಾರ್ಯಕ್ರಮ ನೆರವೇರಿದ ಬಳಿಕ ವೇದಿಕೆಯ ಕಾರ್ಯಕ್ರಮ ಆರಂಭಗೊಂಡಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಗೌರವಾನ್ವಿತ ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರು ಮಾತನಾಡಿ, ನ್ಯಾಯಾಲಯದಲ್ಲಿನ ವ್ಯಾಜ್ಯಗಳು ತೀವ್ರಗತಿಯಲ್ಲಿ ಬಗೆಹರಿದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಬಲಗೊಳಿಸಲು ಹೈಕೋರ್ಟ್ ಬದ್ಧವಾಗಿದೆ. ಈ ದಿಶೆಯಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
ನ್ಯಾಯನಿರ್ಣಯದಲ್ಲಿ ಆಗುವ ವಿಳಂಬ ತಪ್ಪಬೇಕು ಎನ್ನುವ ಸಚಿವರ, ಸಂಸದರ ಸಲಹೆಗಳನ್ನು ತಾವು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದ ನ್ಯಾಯಮೂರ್ತಿಗಳು, ಯಾವುದೇ ನ್ಯಾಯಾಲಯಗಳಲ್ಲಿ ಅನಗತ್ಯ ವ್ಯಾಜ್ಯಗಳು ಬಾಕಿ ಉಳಿಯಬಾರದು. ಅವು ತ್ವರಿತಗತಿಯಲ್ಲಿ ವಿಲೇಯಾಗಲು ಅವಶ್ಯವಿರುವ ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ನಮ್ಮ ಕಾರ್ಯಸಾಧನೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೌರವಾನ್ವಿತ ನ್ಯಾ.ಶ್ರೀಶಾನಂದ ಅವರು ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮುಖವಾಗಿತ್ತು. ಅಂತಹ ಹೋರಾಟ ಪರಂಪರೆಯು ವಕೀಲರ ಸಮೂಹದ್ದಾಗಿದೆ. ಕೊಪ್ಪಳ ಜಿಲ್ಲಾ ರಚನಾ ಹೋರಾಟ ಸೇರಿದಂತೆ ಅನೇಕ ಕಾರ್ಯಸಾಧನೆಯಲ್ಲಿ
ಕೊಪ್ಪಳ ಜಿಲ್ಲೆಯ ವಕೀಲರ ಪಾತ್ರ ಹಿರಿದಾಗಿದೆ.
ಕೊಪ್ಪಳ ಅಂದ್ರೆ ಹೋರಾಟ; ಹೋರಾಟ ಅಂದ್ರೆ ಕೊಪ್ಪಳ ಅನ್ನುವುದು ಈ ಜಿಲ್ಲೆಯ ವಿಶೇಷತೆಯಾಗಿದೆ. ಕೊಪ್ಪಳ
ಜಿಲ್ಲೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನಡೆಸಿರುವುದು ಮೊದಲನೇಯ ದಿಟ್ಟ ಹೆಜ್ಜೆಯಾಗಿದೆ. ನ್ಯಾಯಾಲಯದ ನೀಲನಕ್ಷೆ ಈಗಾಗಲೇ ಸಿದ್ಧವಾಗಿದೆ. ಮೊದಲನೆ ಹಂತದ ಅನುದಾನ ಬಿಡುಗಡೆಗೆ ಕೋರಿದ ಕಡತ ಸಿದ್ಧವಾಗಿದೆ. ಕಾಲಮಿತಿಯೊಳಗೆ ಈ ಕಟ್ಟಡ ನಿರ್ಮಾಣವಾಗಿ
ಕೊಪ್ಪಳ ಜಿಲ್ಲೆ ಇತರರಿಗೆ ಮಾದರಿಯಾಗಲಿ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ.ಪಾಟೀಲ ಅವರು ಮಾತನಾಡಿ, ಕೊಪ್ಪಳವು ಪ್ರಗತಿಪಥದಲ್ಲಿರುವ ಜಿಲ್ಲೆಯಾಗಿದೆ. ಸಂಸದರಾದ ಕರಡಿ ಸಂಗಣ್ಣ ಅವರ ಸತತ ಪ್ರಯತ್ನದಿಂದಾಗಿ ಬಹುವರ್ಷಗಳ ನಂತರ ಕೊಪ್ಪಳ ಜಿಲ್ಲೆಯ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿರುವುದು ದಾಖಲಾರ್ಹ ಬೆಳವಣಿಗೆಯಾಗಿದೆ ಎಂದರು.
ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬವು ಆರೋಗ್ಯಯುತ ಸಮಾಜಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ಬೇಗನೇ ನ್ಯಾಯಧಾನ ಸಿಗಬೇಕು ಎನ್ನುವುದಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಬೇರೆ ಬೇರೆ ಹಂತದ ನ್ಯಾಯಾಲಯಗಳಿಂದ ಸರ್ಕಾರಕ್ಕೆ ಬಂದಿರುವ ಎಲ್ಲ ಪ್ರಸ್ತಾವಣೆಗಳಿಗೆ ಸ್ಪಂದಿಸಿ ರಾಜ್ಯ ಸರ್ಕಾರವು ಹೊಸ ಮೈಲುಗಲ್ಲು ಸಾಧಿಸುತ್ತಿದೆ. ಕಟ್ಟಡ, ತಂತ್ರಜ್ಞಾನ ಸೌಕರ್ಯಗಳೆಲ್ಲವೂ
ತಾಲೂಕು ಕೋರ್ಟವರೆಗೆ ಬಂದು ತಲುಪಿದಾಗ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು. ವಿವಿಧ ಹಂತಗಳಲ್ಲಿನ ನ್ಯಾಯಾಲಯಗಳಲ್ಲಿ ಬಹುವರ್ಷಗಳಿಂದ ಇರುವ ಬಾಕಿ ವ್ಯಾಜ್ಯಗಳನ್ನು ವಿಲೇ ಮಾಡಲು ಹೈಕೋರ್ಟ್ ಏನು ಬಯಸುತ್ತದವೋ ಆ ಬಲ ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನಡೆದಿರುವುದು ಸಂಭ್ರಮದ ದಿನ. ಈ ಯೋಜನೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಬಹಳ ದಿನಗಳಾದರು ಇದೀಗ ಹೊಸ ಕಟ್ಟಡಕ್ಕೆ ಅಡಿಗಲ್ಲು ನೆರವೇರಿರುವುದು ನಮ್ಮ ಸೌಭಾಗ್ಯ ಎಂದರು. ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಪ್ರಯತ್ನಿಸಿದ ಹಲವು ಪ್ರಸಂಗಗಳನ್ನು ಇದೆ ವೇಳೆ ಸಂಸದರು ಸ್ಮರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಕೊಪ್ಪಳ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಚಂದ್ರಶೇಖರ ಸಿ ಅವರು ಅತಿಥಿಗಳಿಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ತಾವು ಸೆಪ್ಟೆಂಬರ್ 04ರಂದು ಕೊಪ್ಪಳ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಧೀಶರಾಗಿ ಅಧಿಕಾರ ಸ್ವೀಕರಿಸಿದ್ದು, ಗೌರವಾನ್ವಿತ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ.ವಿ.ಶ್ರೀಶಾನಂದ ಅವರು
ತಿಳಿಸಿದಂತೆ ಮತ್ತು ಅವರ ಮಾರ್ಗದರ್ಶನದಲ್ಲಿ
ಕೊಪ್ಪಳ ನಗರದಲ್ಲಿ ನೂತನ ನ್ಯಾಯಾಲಯಗಳ ಸಂಕೀರ್ಣಕ್ಕೆ ಭೂಮಿಪೂಜೆ ಹಾಗೂ ಕುಕನೂರಿನಲ್ಲಿ ಇಟರ್ನರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಉದ್ಛಾಟನೆ ನೆರವೇರಿಸುವಂತೆ ಕಾರ್ಯಸಾಧನೆ ಮಾಡಿದ ತೃಪ್ತಿ ತಮಗಿದೆ ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನೆರವೇರುವಲ್ಲಿ ನ್ಯಾ.ಸಂಜೀವಕುಮಾರ ಹಂಚಾಟೆ ಮತ್ತು ಹಿಂದಿನ ಕೊಪ್ಪಳ ಜಿಲ್ಲಾ ನ್ಯಾಯಾಧೀಶರ ಶ್ರಮ ಮತ್ತು ಈ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸೂಕ್ತ ಜಮೀನು ದೊರಕಿಸಿ ಕೊಡುವಲ್ಲಿ ಸಂಸದರಾದ ಕರಡಿ ಸಂಗಣ್ಣ ಅವರ ಶ್ರಮ ಕೂಡ ಸ್ಮರಣೀಯವಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ
ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಎ.ವಿ.ಕಣವಿ ವಂದಿಸಿದರು.
ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಕೆ.ಎಸ್.ಭರತಕುಮಾರ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಭವಾನಿ ಎಲ್ ಜೆ., ಸರಸ್ವತಿದೇವಿ, ವಿಜಯಕುಮಾರ ಕನ್ನೂರ, ರಮೇಶ ಗಾಣಿಗೇರ, ಕೊಪ್ಪಳದ ಕಿರಿಯ ಸಿವಿಲ್ ನ್ಯಾಯಾಧೀಶರಾದ ಹರೀಶಕುಮಾರ ಎಂ., ಕುಷ್ಟಗಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್ ಸತೀಶ, ಗಂಗಾವತಿಯ
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ ನಾಯಕ, ಗಂಗಾವತಿಯ ಕಿರಿಯ ಸಿವಿಲ್ ನ್ಯಾಯಾಧೀಶರಾದ ಡಾ.ಶ್ರೀದೇವಿ ದರಬಾರೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಗೌರಮ್ಮ ಪಾಟೀಲ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಹೇಮಂತರಾಜ್, ವಕೀಲರಾದ ಈಶ್ವರ ಇಂಗಳಳ್ಳಿ, ವಿ.ಎಂ ಭೂಸನೂರಮಠ, ಎನ್.ಆರ್.ಸೂಡಿ, ಎಸ್.ಆರ್. ಹಿರೇಮಠ, ದಿವಾಕರ ಬಾಗಲಕೋಟೆ, ಎ.ಎ. ಚೌತಾಇ, ಕಟ್ಟೆ ಬಸಪ್ಪ, ಫೀರಹುಸೇನ್ ಹೊಸಳ್ಳಿ, ಆರ್.ಬಿ.ಪಾನಗಂಟಿ, ಐ.ವಿ. ಪತ್ತಾರ, ಬಿ.ಕೆ.ದಾಸರ, ಶ್ರೀನಿವಾಸ ಕುಲಕರ್ಣಿ, ಸಂಧ್ಯಾ ಮಾದಿನೂರ, ಗೌರಮ್ಮ ದೇಸಾಯಿ, ಸವಿತಾ ಕಣವಿ, ಉದಯಕುಮಾರ ಹೊಟ್ಟಿ ಸೇರಿದಂತೆ ಅನೇಕ ವಕೀಲರು ಮತ್ತು ವಿವಿಧ ತಾಲೂಕುಗಳ
ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಸದಸ್ಯರು ಮತ್ತು ಇತರರು ಇದ್ದರು.
ವಕೀಲರಾದ ಹನುಮಂತರಾವ್ ಎಂ ಎ ನಿರೂಪಿಸಿದರು.
ಶಕುಂತಲಾ ಬಿನ್ನಾಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

About Mallikarjun

Check Also

ಮೋದಿಜಿ ಆಡಳಿತದಲ್ಲಿ ಮಾತ್ರ ಭಾರತ ಸುರಕ್ಷಿತ: ಸುಗ್ರೀವಾ

ಗಂಗಾವತಿ.ಏ.27: ಭಾರತದ ಸರ್ವಾಂಗೀಣ ಅಭಿವೃದ್ಧಿಯೇ ಮೋದಿ ಗ್ಯಾರಂಟಿ. ಬಿಜೆಪಿಗೆ ನೀಡುವ ಒಂದೊಂದು ಮತವು ಭಾರತ ವಿಕಾಸಕ್ಕೆ ಶಕ್ತಿ ತುಂಬುತ್ತವೆ ಎಂದು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.