Breaking News

ಪತ್ರಕರ್ತರ ಕಿವಿಗೆ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಇಟ್ಟಂತ ಹೂವನ್ನು ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ಮರು ಮುಡಿಸುವರೇ !

Will social activist Siddaramaiah rekindle the flower that former Chief Minister Bommayi put in the ears of journalists!

ಬೆಂಗಳೂರು: 2024ರ ಫೆಬ್ರವರಿ 3ಮತ್ತು 4ರಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ಎರಡು ದಿನಗಳ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳು ಚರ್ಚೆಗೆ ಕಾರಣವಾಗಿದೆ. ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಮೌಢ್ಯಬಿತ್ತುವ ಪಟ್ಟಭದ್ರರ ವಿರುದ್ಧ ನಿಷ್ಠುರವಾಗಿರಬೇಕು. ಪ್ರಜಾಪ್ರಭುತ್ವ ಕಾಯುವ, ಸಂವಿಧಾನ ಆಶಯಗಳನ್ನು ರಕ್ಷಿಸುವ ಜವಾಬ್ದಾರಿ ಪತ್ರಕರ್ತರದ್ದಾಗಿರಬೇಕು. ಪತ್ರಿಕೋದ್ಯಮ ಶ್ರೀಮಂತರ ಕೈಗೆ ಸಿಲುಕಿರುವುದರಿಂದ ಬಡವರ ಹಿತ ಕಾಯುವ ಹೊಣೆ ಕಾಯುವುದು ಮುಖ್ಯ,ಹಾಗು ಸರ್ಕಾರದ ಜನಪರ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಕರೆಯಬಾರದು ಎಂಬುದು ಮುಖ್ಯಮಂತ್ರಿಗಳ ಆಶಯ. ಇದು ಕೇವಲ ಸಿಎಂ ಸಿದ್ದರಾಮಯ್ಯನವರ ಆಶಯ ಮಾತ್ರವಲ್ಲ. ಎಲ್ಲ ಸರ್ಕಾರಗಳ ಆಶಯವೂ ಇದೇ ರೀತಿ ಇರುತ್ತದೆ. ಪತ್ರಕರ್ತರಿಂದ ಈ ರೀತಿ ಬಹಳಷ್ಟು ನಿರೀಕ್ಷಿಸುವ ಸರ್ಕಾರಗಳು ಪತ್ರಕರ್ತರಿಗೆ ಸೌಲಭ್ಯ ಒದಗಿಸುವಲ್ಲಿಯೂ ತನ್ನ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕಲ್ಲವೇ?.

ಮುಖ್ಯಮಂತ್ರಿಗಳ ಆಶಯ ಗೌರವಿಸಬೇಕಿರುವುದು ಪತ್ರಕರ್ತರ ಕರ್ತವ್ಯ. ಅದೇರೀತಿ ಪತ್ರಕರ್ತರಿಗೆ ಸೌಲಭ್ಯ ಒದಗಿಸಬೇಕಿರುವುದು ಸರ್ಕಾರದ ಜವಾಬ್ದಾರಿ. ಮುಖ್ಯಮಂತ್ರಿಗಳ ಸಲಹೆ ಸರಿಯಾದರೂ, ಪತ್ರಕರ್ತರಿಂದ ಸೇವಾ ಮನೋಭಾವನೆ ನಿರೀಕ್ಷಿಸುವಂತೆಯೇ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕಿರುವುದು ಸರ್ಕಾರ ಗಳ ಜವಾಬ್ದಾರಿ. ಬಹಳಷ್ಟು ಜನರಿಗೆ ಪತ್ರಕರ್ತರ ಸ್ಥಿತಿಗತಿಗಳ ಪರಿಚಯವಿರುವುದಿಲ್ಲ. ಈ ಬೆಳವಣಿಗೆ ಇಂದಿಗೂ ನಿಜವಾದ ದುರಂತವೇ ಸರಿ.

ಬಹಳಷ್ಟು ಗ್ರಾಮೀಣ ಪತ್ರಕರ್ತರು ವೇತನವಿಲ್ಲದೆ, ಕೇವಲ ಗೌರವಧನದ ಅಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರನ್ನು ಹವ್ಯಾಸಿ ಪತ್ರಕರ್ತರು ಎಂದು ಕರೆಯಲಾಗುತ್ತದೆ. ಹೆಸರಿಗಷ್ಟೇ ಹವ್ಯಾಸ. ದಿನಕ್ಕೆ ಎರಡು-ಮೂರು ಕಾರ್ಯಕ್ರಮದ ವರದಿಗೆ ತೆರಳಿದರೆ ಇಡೀ ದಿನವೇ ಕಳೆದು ಪೂರ್ಣಾವಧಿಯೇ ಆಗಿರುತ್ತದೆ. ಆದರೆ ಈ ಬಗ್ಗೆ ಇಂದಿಗೂ ಸುದ್ದಿಮನೆಗಳಲ್ಲಿಯೇ ಚರ್ಚೆಸಾಗಿದೆಯೇ ಹೊರೆತು ಪ್ರಯೋಜನೆವಿಲ್ಲದಂತಾಗಿದೆ. ಏನೇ ಆಗಲಿ ವೇತನವೂ ಇಲ್ಲದೆ, ಅಷ್ಟೇನೂ ಸೌಲಭ್ಯಗಳೂ ಇಲ್ಲದ ಇಂಥ ಪತ್ರಕರ್ತರ ನೆರವಿಗೆ ಇದ್ದ ಏಕೈಕ ಸೌಲಭ್ಯ ಉಚಿತ ಬಸ್ ಪಾಸ್ ಚೀಟಿಗಳ ವಿತರಣೆ. ಕೆಲವು ವರ್ಷಗಳಿಂದ ಈ ಸೌಲಭ್ಯವೂ ಇಲ್ಲದಾಗಿದೆ. ಇದಕ್ಕಾಗಿ ಅನೇಕ ಪತ್ರಕರ್ತರ ಸಂಘಗಳು ಮನವಿಮಾಡಿದ್ದರೂ ಕೇವಲ ಭರವಸೆಯಾಗಿಯೇ ಉಳಿದಿದೆ. 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿಯೂ ಈ ವಿಚಾರವನ್ನು ತುಟಿಗೆ ತುಪ್ಪ ಸವರುವ ರೀತಿ ಕೇವಲ ಭರವಸೆಯಾಗಿಯೇ ಉಳಿಸಿದ್ದಾರೆ ಮುಖ್ಯಮಂತ್ರಿಗಳು.

ಈ ಬೆಳವಣಿಗೆಯನ್ನು ಗಮನಿಸಿದಾಗ 2023ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರವನ್ನು ಕಡೆಗಣಿಸುತ್ತಿರುವುದು ಸ್ಪಷ್ಟವಾಗಿದೆ. ಏಕೆಂದರೆ ರಾಜ್ಯದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಿರುವ ಸರ್ಕಾರ ಕೆಲವೇ ಸಂಖ್ಯೆಯ ಪತ್ರಕರ್ತರಿಗೆ ಉಚಿತ ಬಸ್ ವ್ಯವಸ್ಥೆ ಒದಗಿಸುವಲ್ಲಿ ಮೌನವಹಿಸಿದೆ.

2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅಧಿಕಾರ ಪಡೆದ ನಂತರ ಆ 5 ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಮಹಿಳೆಯರ ಬಸ್ ಪ್ರಯಾಣ ಉಚಿತದ ಶಕ್ತಿ ಯೋಜನೆಯನ್ನು 2023ರ ಜೂನ್ 11ರಂದು ವಿಧಾನಸೌಧದಲ್ಲಿ ಘೋಷಿಸಿತು. ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಿ, ರಾಜದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಯೋಜನೆಯಿಂದ ನಿತ್ಯ ಸಂಚರಿಸುತ್ತಿದ್ದವರ ಸಂಖ್ಯೆ 84.5 ಲಕ್ಷದಿಂದ 1.10ಕೋಟಿ ಆಯಿತು. ಈ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಪ್ರತಿ ತಿಂಗಳು 294.74ಕೋಟಿ ವೆಚ್ಚಮಾಡುತ್ತಿದೆ. ಆದರೆ ಪತ್ರಕರ್ತರಿಗೆ ಉಚಿತ ಬಸ್ ವ್ಯವಸ್ಥೆ ಒದಗಿಸುವಲ್ಲಿ ಮಾತ್ರ ರಾಜ್ಯ ಸರ್ಕಾರ ಮೌನವಹಿಸುವ ಮೂಲಕ ನಿರ್ಲಕ್ಷಿವಹಿಸಿದೆ.

ರಾಜ್ಯದ ಪತ್ರಕರ್ತರ ಕೆಲವೇ ಕೆಲವು ಬೇಡಿಕೆಗಳಲ್ಲಿ ಉಚಿತ ಬಸ್ ಪಾಸ್ ಬೇಡಿಕೆಯೂ ಸಹ ಒಂದು. ರಾಜ್ಯದ ಸುಮಾರು 10 ಸಾವಿರದಷ್ಟು ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣ ಒದಗಿಸಲು ಪತ್ರಿಕಾ ಸಂಘಟನೆಗಳು ಕೋರಿವೆ. ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಅವಕಾಶ ಒದಗಿಸಲು ಕೋರಲಾಗಿದೆ. ಆದರೆ ಈ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನವಹಿಸಿದೆ. ಈ ನಡೆ ಮಾಧ್ಯಮ ಕ್ಷೇತ್ರವನ್ನು ಕಡೆಗಣಿಸುತ್ತಿರುವುದಕ್ಕೆ ಒಂದು ನಿದರ್ಶನ. ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣಕ್ಕಾಗಿ ನೂರಾರು ಕೋಟಿ ವ್ಯಯಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಪತ್ರಕರ್ತರ ಸಂಕಷ್ಟ ಅರಿವಾಗದಿರುವುದು ವಿಷಾದನೀಯ.
ಉಚಿತ ಬಸ್-ಪಾಸ್,ಜೀವವಿಮೆ,ಮಾಸಾಶನಕ್ಕೆ ಕಠಿಣ ವಾಗಿರುವ ಮಾನದಂಡಗಳನ್ನು ಸಡಿಲಿಸುವಿಕೆ ಹಾಗೂ ಪತ್ರಕರ್ತರಿಗೆ ರಕ್ಷಣಾ ಕಾಯ್ದೆ ಜಾರಿ ಗೊಳಿಸುವಂತೆ, ಕಾನಿಪ ಧ್ವನಿ ಸಂಘಟನೆ ವತಿಯಿಂದ ಎರೆಡು ಬಾರಿ ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗ,ಒಂದು ಭಾರಿ ಬೆಂಗಳೂರಿನ ಫ್ರೀಢಂ ಪಾರ್ಕ್ ಮುಂಭಾಗ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ರಕ್ತದಿಂದ ಸಹಿ ಮಾಡಿದಂತ ಮನವಿಗಳನ್ನು ಹೋರಾಟಗಳ ಮೂಲಕ ನಾಡಿನ ಉದ್ದಗಲಕ್ಕೂ ನಮ್ಮ ಕಾನಿಪ ಧ್ವನಿ ವತಿಯಿಂದ ನಡೆಸಿದ್ದರೂ ಸಾಮಾಜಿಕ ಹರಿಕಾರನಿಗೆ ಕೇಳಿಸದಿರುವುದು ದುರ್ಧೈವವೇ ಸರಿ.

ಕೇವಲ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಸೌಲಭ್ಯ ನೀಡುವಲ್ಲಿಯೇ ಇಷ್ಟೊಂದು ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದಿಂದ ಜೀವವಿಮೆ ಹಾಗೂ ಪತ್ರಕರ್ತರ ರಕ್ಷಣಾ ಕಾಯ್ದೆಗಳನ್ನು ಪತ್ರಕರ್ತರು ನಿರೀಕ್ಷಿಸಲು ಸಾಧ್ಯವೇ. ಸಾಮಾನ್ಯವಾಗಿ ಶಕ್ತಿಯೋಜನೆಯ ಸೌಲಭ್ಯವನ್ನೇ ಪತ್ರಕರ್ತರಿಗೆ ವಿಸ್ತರಿಸಲು ಇಷ್ಟೊಂದು ವಿಳಂಬನೀತಿ ಅನುಸರಿಸುತ್ತಿರುವ ಈ ಸರ್ಕಾರದಿಂದ ವಿಶೇಷ ಸೌಲಭ್ಯಗಳನ್ನು ನಿರೀಕ್ಷಿಸುವುದು ಹೇಗೆ ಎಂಬುದು ಇದೀಗ ಪತ್ರಿಕಾವಲಯದ ಮುಂದಿರುವ ಪ್ರಶ್ನೆ. ಪತ್ರಕರ್ತರಿಗೆ ಉಪದೇಶನೀಡುವ ಮೊದಲು ತಮ್ಮ ಜವಾಬ್ದಾರಿ ತಿಳಿದುಕೊಳ್ಳಬೇಕಿರುವುದು ಸರ್ಕಾರಗಳು, ಜನಪ್ರತಿನಿಧಿಗಳು ಹಾಗು ಜನರಿಗೂ ಅನ್ವಹಿಸುವಂಥದ್ದು, ಇದಕ್ಕೆ ಮುಖ್ಯಮಂತ್ರಿಗಳೂ ಹೊರತಲ್ಲ. ಮುಖ್ಯಮಂತ್ರಿಗಳು ಪತ್ರಕರ್ತರಿಗೆ ಉಪದೇಶಮಾಡಿರುವಂತೆಯೇ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕಿರುವುದು ಮುಖ್ಯ.
ಸಾಮಾನ್ಯವಾಗಿ ಸರ್ಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ, ಜನರಾಗಲಿ; ಪತ್ರಕರ್ತರು ಸೇವಕರಾಗಿರಬೇಕು, ಶುದ್ಧವಾಗಿರಬೇಕು, ಜನಪರವಾಗಿರಬೇಕು, ಹೀಗೆ ಹತ್ತಾರು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಪತ್ರಕರ್ತರೂ ಸಹ ಸಾಮಾಜಿಕ ಕಳಕಳಿ ಹೊಂದಿರುತ್ತಾರೆ. ಆದರೆ ಎಲ್ಲರೂ ತಿಳಿಯಬೇಕಾದ ಸಂಗತಿ ಎಂದರೆ ಸಾಮಾಜಿಕ ಕಳಕಳಿ ಜೊತೆಗೆ ಪತ್ರಕರ್ತರ ಬದುಕು ಮತ್ತು ಜೀವನ ನಿರ್ವಹಣೆಗಾಗಿ ಸೌಲಭ್ಯಗಳು ಸಹ ಅಷ್ಟೇ ಮುಖ್ಯ. ಆದ್ದರಿಂದ ಪತ್ರಕರ್ತರ ವಿಚಾರದಲ್ಲಿ ನಿರೀಕ್ಷೆ ಜೊತೆಗೆ ಅವರಿಗೆ ಸೌಲಭ್ಯ ಒದಗಿಸುವುದು ಸರ್ಕಾರಗಳ ಜವಾಬ್ದಾರಿ ಆಗಬೇಕು. ಬಿಟ್ಟಿ ಭಾಗ್ಯಗಳಂತೆ ಪುಕ್ಕಟೆ ಉಪದೇಶಗಳಿಂದ ಬದಲಾವಣೆ ಅಸಾಧ್ಯ. ಪತ್ರಕರ್ತರ ಸಂಘಟನೆಯಿಂದ ಈ ಹಿಂದೆ ಕಲ್ಬುರ್ಗಿ ಹಾಗೂ ವಿಜಯಪುರದಲ್ಲಿ ನಡೆದ 36, 37ನೇ ಪತ್ರಕರ್ತರ ರಾಜ್ಯ ಸಮಾವೇಶದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಎಂಬ ಮಹಾಶಯ ಅಶ್ವಾಸನೆಗಳ ಸುರಿಮಳೆಯೊಂದಿಗೆ ಇಡೀ ಪತ್ರಕರ್ತರ ಸಮುದಾಯಕ್ಕೆ ಬಡ್ಜಟ್ ನಲ್ಲಿ ಬೊಂಬಾಯಿ ತೋರಿಸುವುದರೊಂದಿಗೆ ದೊಡ್ಡ ಚೆಂಬನ್ನು ನೀಡಿರುವ ರೀತಿಯಲ್ಲೇ ಇಂದಿನ ಮುಖ್ಯಮಂತ್ರಿ ಹೆಸರಿಗೆ ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ನವರು ಕೂಡ 2024 ಫೆಬ್ರವರಿ ಯಲ್ಲಿ ಮಂಡನೆಯಾಗುವ ಬಡ್ಜೆಟ್ ನಲ್ಲಿ ಬೊಮ್ಮಾಯಿ ಮುಡಿಸಿದಂತ ಹೂವನ್ನು ಪುನಃ ನಾಡಿನ ಪತ್ರಕರ್ತರ ಕಿವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಿಸುವರೋ ಅಥವಾ ಬೇಡಿಕೆ ಈಡೇರಿಸುರೋ ಎಂಬ ನಿರ್ಣಯದ ಮೇಲೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ಹೈಕೋರ್ಟ್ನಲ್ಲಿ ಸರ್ಕಾರದ ವಿರುದ್ದ ಈ ಕುರಿತಂತೆ ಕಾನೂನು ಸಮರಕ್ಕೆ ಖಂಡಿತ ಮುಂದಾಗಲಿದೆ.
ಪದೇ ಪದೇ ಪತ್ರಕರ್ತರು ಕುರಿಗಳ ಹಿಂಡಿನಂತೆ ರಾಜಕಾರಣಿಗಳ ಬಾಷಣಕ್ಕೆ ಮರುಳಾಗಿ ಚಪ್ಪಾಳೆಗಳ ಸುರಿಮಳೆ ಸುರಿಸುತ್ತಾ ಗೋಣು ಅಲ್ಲಾಡಿಸುತ್ತಾ ಸಾಗಿದ್ದೇ ಆದರೆ ಪ್ರತಿ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಇದೇ ರೀತಿಯಾಗಿ ಪೊಳ್ಳು ಅಶ್ವಾಸನೆ ನೀಡುತ್ತಾ ನಾಡಿನ ಬುದ್ದಿವಂತರೆಂದು ಕರೆಸಿಕೊಳ್ಳುವ ನಮ್ಮನ್ನು ಬಕ್ರ ಮಾಡುತ್ತಾ ಸಾಗುತ್ತಲೇ ಇರುತ್ತಾರೆ ರಾಜಕಾರಣಿಗಳು.


ಬಂಗ್ಲೆ ಮಲ್ಲಿಕಾರ್ಜುನ,

ಹವ್ಯಾಸಿ ಪತ್ರಕರ್ತರ ಹಾಗೂ ಕಾನಿಪ ಧ್ವನಿ ರಾಜ್ಯಾಧ್ಯಕ್ಷರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.