Breaking News

ಹವಾಮಾನಬದಲಾವಣೆಯನ್ನುಎದುರಿಸುವತ್ತಾರೈತರುಕಾರ್ಯಪ್ರವೃತ್ತರಾಗಬೇಕಿದೆ : ಸಹಜ ಕೃಷಿವಿಜ್ಞಾನಿಡಾ.ಮಂಜುನಾಥ.

Farmers need to get active to deal with climate change: Sahaja Agricultural Scientist Dr Manjunath.

ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಗುಂಡ್ಲುಪೇಟೆ ತಾಲೂಕಿನ ಕರಕಲ ಮಾದಹಳ್ಳಿಯ ಸಂಪತ್ತಣ್ಣ ಅವರ ತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆಯಲ್ಲಿ ತೋಟಗಳ ನಿರ್ವಹಣೆ – ಕ್ಷೇತ್ರ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮಗಳು ಹೆಚ್ಚಾಗಿದೆ. ವಿಪರೀತ ಮಳೆ ಅಥವಾ ಮಳೆಯಿಲ್ಲದ ಕಾರಣದಿಂದ ಒಣಭೂಮಿಯ ಬೆಳೆಗಳು ಫಲ ಬಿಡುತ್ತಿಲ್ಲ. ಪರಾಗಸ್ಪರ್ಶಕ್ಕೂ ತೊಂದರೆಯಾಗುತ್ತಿದೆ ಮತ್ತು ಬಿಸಿಲಿನ ತೀವ್ರತೆಯೂ, ಕೊರತೆಯೂ ಕಾರಣವಾಗುತ್ತದೆ. ತೆಂಗು, ಹಲಸು, ಮಾವು ಈ ವರ್ಷ ತೋಟಗಳಲ್ಲಿ ಕೈಕೊಟ್ಟಿವೆ. ತೆಂಗಿನ ಇಳುವರಿ ಬಹಳ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದ ಕಾರಣ ರೈತರು ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಕೃಷಿಯಲ್ಲಿ ಬಳಸುತ್ತಿದ್ದಾರೆ. ಇದರಿಂದ ಗ್ರಾಹಕನ ಹೊಟ್ಟೆಗೆ ರಾಸಾಯನಿಕಗಳು ಸೇರುತ್ತಿವೆ. ಹವಾಮಾನ ಬದಲಾವಣೆ ಎದುರಿಸುವತ್ತಾ ಯೋಚಿಸಿ, ಕಾರ್ಯಪ್ರವೃತ್ತರಾಗಬೇಕಿದ್ದ ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರಿ ಇಲಾಖೆಗಳು ಅಷ್ಟಾಗಿ ಕೆಲಸ ಮಾಡುತ್ತಿಲ್ಲ. ಅದ್ದರಿಂದ ರೈತರು ಅವರಿವರನ್ನು ಕಾಯುತ್ತಾ ಕೂರುವ ಬದಲು, ಸ್ವತಃ ತಾವೇ ಹವಾಮಾನ ಬದಲಾವಣೆ ಎದುರಿಸಲು ಕಾರ್ಯಪ್ರವೃತ್ತವಾಗಬೇಕಿದೆ ಎಂದು ಕರೆಕೊಟ್ಟರು.

ಕಾರ್ಯಾಗಾರ :

ತೋಟಗಳಲ್ಲಿ ಕೃಷಿ ಬೆಳೆಗಳ ವಿನ್ಯಾಸ – ತೆಂಗು, ಮಾವು ಮತ್ತಿತರ ತೋಟಗಾರಿಕೆ ಬೆಳೆಗಳ ಬಗ್ಗೆ, ಅವುಗಳ ವಿನ್ಯಾಸದ ಬಗ್ಗೆ, ಬೆಳೆಗಳ ಸಂಯೋಜನೆ ಬಗ್ಗೆ ಮಾಹಿತಿ ವಿನಿಮಯ. ತೋಟಗಳು ಇಂದು ಬೇಸಿಗೆಯ ಬಿಸಿಲಿನಿಂದ ಬಳಲಿದ್ದು, ಸೂಕ್ಷ್ಮ ಪೋಷಕಾಂಶಗಳು ಕೊರತೆ ಹೆಚ್ಚಾಗಿದ್ದು, ಈ ಕೊರತೆಯಿಂದ ತೋಟಗಾರಿಕೆ ಬೆಳೆಗಳ ಇಳುವರಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ಈ ವಾಯುಗುಣ ವೈಪರೀತ್ಯದಿಂದ ಕೃಷಿಯ ಬಿಕ್ಕಟ್ಟು, ರೈತನ ಸಮಸ್ಯೆಗಳು ಬಿಗಡಾಯಿಸುತ್ತಾ ಇದೆ. ಈ ಕಾರಣದಿಂದ ಸ್ಥಳೀಯ ಕೃಷಿಕರು ಸಮಷ್ಟಿಯ ದೃಷ್ಟಿಕೋನವನ್ನು ಅರಿತು, ಪರಿಸರಕ್ಕೆ ಪೂರಕವಾಗಿ ಬೆಳೆಗಳನ್ನು ಬೆಳೆಯುವ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಸಿದರು.

ನೀರಿನ ಮಿತ ಬಳಕೆ, ಮಣ್ಣಿನ ಸೂಕ್ಷ್ಮ ಪೋಷಕಾಂಶಗಳ ಸಂರಕ್ಷಣೆ ಮತ್ತು ನಿರ್ವಹಣೆ, ಜೀವಾಣುಗಳು ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಹಜ ಬೇಸಾಯ ಪದ್ಧತಿಯು ಇಂದು ರೈತರಿಗೆ ಹೇಗೆ ಆಶಾಕಿರಣವಾಗಿದೆ ಎಂದು ತಿಳಿಸಲಾಯಿತು.

ಅಧ್ಯಯನ – ಸಂಪತ್ತಣ್ಣನವರದು ಎರಡು ಎಕ್ರೆ ತೆಂಗಿನ ತೋಟ. ಜಮೀನಿನಲ್ಲಿ ನೀರು ಕೇವಲ ಒಂದಿಂಚು ಮಾತ್ರವಿದ್ದು, ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಸಾವಯವ ಇಂಗಾಲವು ಗಣನೀಯವಾಗಿ ಕುಸಿದು, ಮಣ್ಣಿನ ಮತ್ತು ತೋಟದ ಸೂಕ್ಷ್ಮವಲಯದ ತಾಪಮಾನ ಹೆಚ್ಚಿದ್ದು, ಅಲ್ಲಿ ಹಾಲಿ ಇದ್ದ ತೆಂಗು, ಮಾವುಗಳ ಹೂವು ಕಾಯಿ ಸಂಪೂರ್ಣವಾಗಿ ಉದುರಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ. ತೋಟವನ್ನು ಸಂಪೂರ್ಣ ಅಧ್ಯಯನ ಮಾಡಿ, ಈ ಕೆಳಗಿನ ಮಾರ್ಪಾಡು ಮಾಡಿಕೊಳ್ಳಲು ಅವರಿಗೆ ತಿಳಿಸಲಾಯಿತು.

ಅವುಗಳೆಂದರೆ –

೧. ತೋಟದ ಅಂಚಿನ ಬದುಗಳ ಮೇಲೆ ಕಹಿಬೇವು, ಸೀಬೆ, ಕರಿಬೇವು, ಬೆಣ್ಣೆಹಣ್ಣು, ಮೂಸಂಬಿ, ನೇರಳೆ, ಲಿಚಿ, ರಾಂಬುಟಾನ್ ಇತ್ಯಾದಿ ಹಣ್ಣಿನ ಗಿಡಗಳನ್ನು ಬೆಳೆಸಲು ಸಲಹೆ ನೀಡಲಾಯಿತು.

೨. ನಾಲ್ಕು ತೆಂಗಿನ ಮರಗಳ ಮಧ್ಯದಲ್ಲಿ ಉತ್ತಮ ತಳಿಯ ಜಾಯಿಕಾಯಿ ಗಿಡ, ತೆಂಗಿನ ಮರಗಳ ನಡುವೆ ನುಗ್ಗೆ, ಅಗಸೆ / ಚೊಗಚೆ, ಅರಿಶಿನ, ಶುಂಠಿ, ಈರುಳ್ಳಿ, ಬೆಳುಳ್ಳಿ, ಸಿಹಿಗೆಣಸು, ಸಾಸಿವೆ, ಹಸಿಮೆಣಸಿನಕಾಯಿ, ಚೆಂಡು ಹೂ, ಕೋಕೋ, ಮರಗೆಣಸು, ಸುಗಂಧ ರಾಜ, ಸುವರ್ಣ ಗೆಡ್ಡೆ ಇತ್ಯಾದಿ ಹೂ-ಹಣ್ಣು-ಗೆಡ್ಡೆ-ಗೆಣಸುಗಳ ಬೆಳೆಗಳನ್ನು ಸಂಯೋಜಿಸಲು ತಿಳಿಸಲಾಯಿತು.

೩. ತಿಪ್ಪೇ ಗೊಬ್ಬರವನ್ನು ಕಾಂಪೋಸ್ಟ್ ಆಗಿ ಪರಿವರ್ತಿಸುವ ಬಗೆಯನ್ನು ತಿಳಿಸಲಾಯಿತು – ತೋಟದ ಒಂದು ಭಾಗದ ಎತ್ತರದ ಪ್ರದೇಶದಲ್ಲಿ ಒಂದು ಐದು ಅಡಿ ಅಗಲ, ಮೂರು ಅಡಿ ಆಳ, ನಮಗೆ ಅನುಕೂಲವಾಗುವಷ್ಟು ಉದ್ದ ಇಟ್ಟುಕೊಂಡು, ಅದರಲ್ಲಿ ಮೊದಲು ಒಣ ಕೃಷಿ ತ್ಯಾಜ್ಯ (ಕಡ್ಡಿ, ಎಲೆ, ರೆಂಬೆ-ಕೊಂಬೆಗಳು) ಒಂದು ಅಡಿಗಳಷ್ಟು ಹಾಕಿ, ನಂತರ ಅದರ ಮೇಲೆ ಇಪ್ಪತ್ತು ಕೆಜಿ ಕಲ್ಲು ಸುಣ್ಣದ ಪುಡಿಯನ್ನು ಹಾಕಿ, ಅದರ ಮೇಲೆ ಒಂದೂವರೆ ಅಡಿಯಷ್ಟು ಜಾನುವಾರುಗಳ ಸಗಣಿ ಹಾಕಿ, ನಂತರ ಕೆವಿಕೆಯಲ್ಲಿ ದೊರೆಯುವ ಪ್ಲೊರೊಟಸ್ ಎಂಬ ಸೂಕ್ಷ್ಮ ಜೀವಿಯ ಪುಡಿಯನ್ನು ತಂದು ಸಿಂಪಡಣೆ ಮಾಡಿ, ಅದರ ಮೇಲೆ ಒಂದು ಅಡಿಯಷ್ಟು ಹಸಿರೆಲೆಗಳು (ಗೊಬ್ಬರದ ಗಿಡ, ನುಗ್ಗೆ, ಅಗಸೆ, ಬಾಳೆಎಲೆ, ಹೊಂಗೆ, ಬೇವು, ಇತ್ಯಾದಿ) ಹಾಕಿ, ನಂತರದಲ್ಲಿ ಇವುಗಳ ಮೇಲೆ ಅರ್ಧ ಅಡಿಯಷ್ಟು ಮಣ್ಣನ್ನು ಹಾಕಿ, ತೆಂಗಿನ ಗರಿಗಳಿಂದ ಮುಚ್ಚಿ, ಡ್ರಿಪ್ ಮೂಲಕ ನೀರು ನೀಡುತ್ತಾ, ತೇವಾಂಶವನ್ನು ಕಾಪಾಡಿಕೊಳ್ಳವುದು. ಆರರಿಂದ ಎಂಟು ತಿಂಗಳ ನಂತರ ಕಾಂಪೋಸ್ಟ್ ಗೊಬ್ಬರ ಬಳಸುವುದಕ್ಕೆ ಸಿದ್ದವಾಗಿರುತ್ತದೆ.

೪. ಎಲ್ಲಾ ದ್ರವ ರೂಪದ ಸೂಕ್ಷಜೀವಾಣುಗಳ ಗೊಬ್ಬರಗಳ ಬಗ್ಗೆ ತಿಳಿಸಿ, ಅವುಗಳನ್ನು ಸಮೀಪದ ಕೆವಿಕೆ / ಕೃಷಿ, ತೋಟಗಾರಿಕೆ ಇಲಾಖೆಗಳಿಂದ ತಂದು, ಉಪಯೋಗಿಸುವ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸದ್ದ ಎಲ್ಲರಿಗೂ ಸಂಪತ್ತಣ್ಣನವರ ಕುಟುಂಬದವರು ಆದರಿಸಿ, ಸತ್ಕರಿಸುವ ಜೊತೆಗೆ ಅನ್ನದಾಸೋಹವನ್ನು ಮಾಡಿ, ಜ್ಞಾನದ ಜೊತೆಗೆ ಹೊಟ್ಟೆಯ ಹಸಿವನ್ನು ತಣಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಹೊನ್ನೂರು ಪ್ರಕಾಶ, ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ, ಪ್ರೇಮ, ಶ್ರೀಕಾಂತ, ಪೂರ್ಣಿಮಾ, ಶಿವಬಸಪ್ಪ, ಕಮಲಮ್ಮ, ನಾಗರಾಜು, ಭಾನು, ನಂಜನಗೂಡಿನಿಂದ ಗಿರೀಶ, ಗುಂಡ್ಲುಪೇಟೆಯಿಂದ ಗುರುಸ್ವಾಮಿ, ಚಾಮರಾಜನಗರದಿಂದ ಗಿರಿ, ಬೆಂಗಳೂರಿನಿಂದ ಸುಬ್ರಹ್ಮಣ್ಯ, ಮರುಡೇಶ, ಕೊಳ್ಳೇಗಾಲದಿಂದ ಚಂದ್ರಶೇಖರಯ್ಯ, ದೀಪ, ನಂಜನಗೂಡಿನಿಂದ ದೇವರಾಜು, ಮತ್ತಿತರರು, ಸ್ಥಳೀಯ ರೈತರು ಮತ್ತು ಗ್ರಾಮಸ್ಥರಿದ್ದರು.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.