Notice to submit records for census of weavers, survey of units
ಕೊಪ್ಪಳ ಜುಲೈ 10 (ಕರ್ನಾಟಕ ವಾರ್ತೆ): ವಿದ್ಯುತ್ ಮಗ್ಗ ನೇಕಾರರ ಮತ್ತು ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ಕೆಲಸಗಾರರ ಗಣತಿ ಹಾಗೂ ಘಟಕಗಳ ಸಮೀಕ್ಷೆಗೆ ದಾಖಲಾತಿ ಸಲ್ಲಿಸುವಂತೆ ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ವಿದ್ಯುತ್ ಮಗ್ಗ ನೇಕಾರರ ಹಾಗೂ ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ಕೆಲಸಗಾರರ ಗಣತಿ ಮತ್ತು ಘಟಕಗಳ ಸಮೀಕ್ಷೆ ಈಗಾಗಲೇ ಮಾಡಲಾಗಿದೆ. ಈ ಸಮೀಕ್ಷೆ ಕಾರ್ಯ ಅಂತಿಮ ಹಂತದಲ್ಲಿದ್ದು, ಗಣತಿಯನ್ನು ಮಾಡಿಸದೇ ಇರುವ ಅಥವಾ ಬಿಟ್ಟು ಹೋದ ವಿದ್ಯುತ್ ಮಗ್ಗ ನೇಕಾರರು ಹಾಗೂ ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರು ಈ ಗಣತಿಯಲ್ಲಿ ನೋಂದಣಿ ಮಾಡಿಸಲು ವಿದ್ಯುತ್ ಮಗ್ಗ ಘಟಕದ ಮಾಲೀಕರು ತಮ್ಮ ಘಟಕದ ಆರ್.ಆರ್ ಸಂಖ್ಯೆ, ಉದ್ಯೋಗ ಆಧಾರ, ಇತ್ತೀಚಿನ ವಿದ್ಯುತ್ ಬಿಲ್, ಮೊಬೈಲ್ ಸಂಖ್ಯೆ ವಿವರಗಳುಳ್ಳ ದಾಖಲಾತಿಗಳನ್ನು ಘಟಕದ ಮೊಹರು ಹಾಗೂ ದೃಢೀಕರಣದೊಂದಿಗೆ ಜುಲೈ 25 ರೊಳಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ.ಕಂಪೌಂಡ್ ಅಶೋಕ್ ಸರ್ಕಲ್, ಕೊಪ್ಪಳ ಕಚೇರಿಗೆ ಸಲ್ಲಿಸಬಹುದಾಗಿದೆ.
ಗಣತಿ ಕಾರ್ಯ ಅಂತ್ಯಗೊಂಡ ನಂತರ ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಲು ಅವಕಾಶವಿರುವುದಿಲ್ಲ. ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ ದೂರವಾಣಿ ಸಂಖ್ಯೆ: 08539-295469ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.