Breaking News

ರಾವ್ ಬಹದ್ದೂರ್ “ಶರಣ ಶ್ರೀ ಅರಟಾಳ ರುದ್ರಗೌಡರು”.

Rao Bahadur “Sharana Sri Aratala Rudragowda”.

ಬಸವಣ್ಣನವರನ್ನು ಯುಗದ ಉತ್ಸಾಹವೆಂದು ಪ್ರಭುದೇವರು ಬಣ್ಣಿಸಿದ್ದಾರೆ. 19-20 ನೆಯ ಶತಮಾನಗಳ ಮಧ್ಯಕಾಲೀನ ಸಮಾಜದಲ್ಲಿ ಅಂಥ ಉತ್ಸಾಹವನ್ನು ತಮ್ಮ ವ್ಯಾಪ್ತಿಯಲ್ಲಿ ಮೆರೆದವರು, ಅರಟಾಳ ರುದ್ರಗೌಡರು.

ಸಾಹಿತ್ಯ ಮಾಧ್ಯಮದಿಂದ ಸಮಾಜಸೇವೆ ಮಾಡಿದವರು ಶ್ರೀ ಫ ಗು ಹಳಕಟ್ಟಿ, ಶ್ರೀ ಶಿ ಶಿ ಬಸವನಾಳ ಇವರ ಆದರ್ಶದಲ್ಲಿ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಮೂಲಕ “ವೀರಶೈವ ಪುಣ್ಯ ಪುರುಷರ ಚರಿತ್ರೆ” ಗಳನ್ನು ಪ್ರಕಟಿಸುವ ಯೋಜನೆಯಲ್ಲಿ ಮುಳುಗಿದ್ದ ನನಗೆ, ಈ ವಹಿಗಳನ್ನು ಪ್ರಕಟಿಸುವ ಹಂಬಲ ಅಂದೇ ಮೂಡಿದ್ದಿತು.

ಈ ಮಧ್ಯೆ ಡೆಪ್ಯುಟಿ ಚೆನ್ನಬಸಪ್ಪ, ಸಿರಸಂಗಿ ಲಿಂಗರಾಜ, ಶಿ ಶಿ ಬಸವನಾಳ, ಹರ್ಡೇಕರ ಮಂಜಪ್ಪ, ಹಳಕಟ್ಟಿ ಫಕೀರಪ್ಪ ಮೊದಲಾದವರನ್ನು ಕುರಿತು ಪಿ ಎಚ್ ಡಿ ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಪರೋಕ್ಷವಾಗಿ ಮಾರ್ಗದರ್ಶನ ಮಾಡುವ, ಈ ಪ್ರಬಂಧಗಳನ್ನು ಪ್ರಕಟಿಸುವ ಕೆಲಸದಲ್ಲಿ ಭಾಗಿಯಾಗುವ ಸದಾವಕಾಶ ನನ್ನದಾಯಿತು. ಹೀಗಿದ್ದೂ ಹಾನಗಲ್ಲ ಕುಮಾರಸ್ವಾಮಿ, ವಾರದ ಮಲ್ಲಪ್ಪನವರು, ಅರಟಾಳ ರುದ್ರಗೌಡರು ಮೊದಲಾದವರನ್ನು ಕುರಿತು ಪಿ ಎಚ್ ಡಿ ಅಧ್ಯಯನ ಮಾಡಿಸಬೇಕೆಂಬುದು ಕೈಗೂಡದ ಕನಸಾಗಿ ಉಳಿಯಿತು. ಇಂಥ ಕೆಲಸ-ಕನಸುಗಳಿಂದ ಹದಗೊಂಡ ನನ್ನ ಮನಸ್ಸಿನ ಮೂಲೆಯಲ್ಲಿ, ಈ ವಹಿಗಳ ಪ್ರಕಟಣೆ ದೊಡ್ಡ ನೆನಪಾಗಿ ಕಾಡುತ್ತಲಿದ್ದಿತು.

“The entire credit of eradicating corruption from the Revenue Department, goes to Rao Bahadur R.C. Aratal”
19-20 ಶತಮಾನಗಳ ಮಧ್ಯದ ಅವಧಿಯು ವಿದೇಶೀಯರ “ಆಡಳಿತದ ವಿರುದ್ಧ ಸ್ವದೇಶೀಯರ ಶೋಷಣೆ’ಯ ವಿರುದ್ಧ ನಡೆದ ಎರಡು ಸ್ವಾತಂತ್ರ ಚಳವಳಿಗಳ ಸಂದರ್ಭವೆನಿಸಿದೆ. ಲೋಕಮಾನ್ಯ ತಿಳಕ (ಜನನ 1856), ಮಹಾತ್ಮಾಗಾಂಧಿ (ಜನನ 1869) ಮೊದಲಾದವರು ವಿದೇಶೀಯರ ಆಡಳಿತದ ವಿರುದ್ಧ, ಛತ್ರಪತಿ ಶಾಹೂ ಮಹಾರಾಜ (ಜನನ 1874), ಅಂಬೇಡ್ಕರ್ (ಜನನ 1891) ಮೊದಲಾದವರು ಸ್ವದೇಶೀಯರ ಶೋಷಣೆಯ ವಿರುದ್ಧ ದನಿಯೆತ್ತಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ವಯಸ್ಸಿನಲ್ಲಿ ಇವರೆಲ್ಲರಿಗಿಂತ ಹಿರಿಯರಾದ ಅರಟಾಳ ರುದ್ರಗೌಡರು ಜನನ 1851 ಮಾರ್ಚ್ ೨೨ ರಂದು ಕುಂದಗೋಳ ತಾಲೂಕಿನ ಹಿರೆ ಹರಕುಣಿ ಗ್ರಾಮದಲ್ಲಾಯಿತು..

ಸ್ವದೇಶಿಯರ ಶೋಷಣೆಯ ವಿರುದ್ಧ ಸಿಡಿದು ನಿಂತವರಾಗಿದ್ದಾರೆ. ಅಂಬೇಡ್ಕರ್ ಅವರು ತನ್ನ ಜನರ ಶೋಷಣೆಯನ್ನು ತಪ್ಪಿಸುವುದಕ್ಕಾಗಿ ಹೆಣಗಿದಂತೆ, ಉತ್ತರಕರ್ನಾಟಕ ವ್ಯಾಪ್ತಿಯಲ್ಲಿ ರುದ್ರಗೌಡರು ತನ್ನ ಜನರ ಶೋಷಣೆಯನ್ನು ತಪ್ಪಿಸುವುದಕ್ಕಾಗಿ ಹೋರಾಡಿದರು. ನೇರವಾಗಿ ಹೇಳುವುದಾದರೆ ಮೊದಲಿನಿಂದಲೂ ಧಾರ್ಮಿಕ ಶೋಷಣೆ ಮಾಡುತ್ತ ಬಂದು, ಪೇಶ್ವೆಯರ ಕಾಲದಲ್ಲಿ ನೇರವಾಗಿ ಆಡಳಿತ ಶೋಷಣೆಯನ್ನೂ ರೂಢಿಸಿಕೊಂಡಿದ್ದ ಬ್ರಾಹ್ಮಣರ ವಿರುದ್ಧ ಹೋರಾಟಕ್ಕಿಳಿದರು. ಒಂದರ್ಥದಲ್ಲಿ ವಿದೇಶೀಯರ ವಿರುದ್ಧ ನಡೆದುದು ಕೊನೆಯೆಂಬುದನ್ನುಳ್ಳ ಆಡಳಿತ ಸ್ವಾತಂತ್ರ ಹೋರಾಟವಾದರೆ, ಸ್ವದೇಶೀಯರ ವಿರುದ್ಧ ನಡೆದುದು ಕೊನೆಯೆಂಬುದೇ ಇಲ್ಲದ “ಸಾಮಾಜಿಕ ಸ್ವಾತಂತ್ರ ಹೋರಾಟ” ವಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಸಾಮಾಜಿಕ ಸ್ವಾತಂತ್ರ ಹೋರಾಟಗಾರರಾಗಿ ಮೂಡಿ ಬಂದವರು, ಮೂಡಿ ಬಂದ ಮೊದಲಿಗರು, ರುದ್ರಗೌಡರು. ಮೇಲು ನೋಟಕ್ಕೆ ಘರ್ಷಣೆಗಳೆನಿಸಿದರೂ, ಜಗಳ ಬೇರೆ, ಹೋರಾಟ ಬೇರೆ, ಚಳವಳಿ ಬೇರೆ, ನ್ಯಾಯ-ಅನ್ಯಾಯಗಳ ನಡುವಿನದು ಹೋರಾಟ, ಈ ಹೋರಾಟ ಸಾಮೂಹಿಕ ಸ್ವರೂಪ ಪಡೆದರೆ ಚಳವಳಿಯೆನಿಸಿಕೊಳ್ಳುತ್ತದೆ. ರುದ್ರಗೌಡರದು ಹೋರಾಟ. ಈ ಹೋರಾಟಕ್ಕೆ ಒಂದಿಷ್ಟು ಸಾಮೂಹಿಕ ಸ್ವರೂಪ ಪ್ರಾಪ್ತವಾಗಿದ್ದರೆ, ಇವರು ರಾಷ್ಟ್ರಮಟ್ಟದ, ಕೊನೆಯ ಪಕ್ಷ ರಾಜ್ಯಮಟ್ಟದ ನೇತಾರರಾಗುತ್ತಿದ್ದರು. ಹೀಗಿದ್ದೂ ಮುಂದಿನ ಕಾಲದ ‘ಬ್ರಾಹ್ಮಣೇತರ ಚಳವಳಿ’ ಗೆ ಧೈರ್ಯ ತಂದುಕೊಟ್ಟ ಇವರ ಹೋರಾಟಕ್ಕೆ, ರಾಜ್ಯಮಟ್ಟದಲ್ಲಾದರೂ ಸರಿಯಾದ ಪ್ರಸಿದ್ಧಿ ಸಿಗುವುದು ಅಗತ್ಯವಿದೆ. ಸರಕಾರಿ ಅಧಿಕಾರಿಯಾಗಿ, ಕಚೇರಿಯಲ್ಲಿ ವಿಪರೀತ ಬೆಳೆದು ನಿಂತಿದ್ದ ಲಂಚವನ್ನು ನಿರ್ಮೂಲನ ಮಾಡಿದ್ದು ರುದ್ರಗೌಡ ಜೀವನದ ಪರಮ ಸಾಧನೆ ಎಂದು ಸರಕಾರದ ರೆವಿನ್ಯೂ ಅಡ್ಮಿನಿಸ್ಟ್ರೇಟಿವ್ ರಿಪೋರ್ಟಿನಲ್ಲಿ ದಾಖಲಾದುದನ್ನು ಇಲ್ಲಿ ಗಮನಿಸಬೇಕು.

1851ರಲ್ಲಿ ಅರಟಾಳದಂತಹ ಸಣ್ಣ ಗ್ರಾಮದಲ್ಲಿ ಹುಟ್ಟಿದ, ಹಳ್ಳಿಯ ಗೌಡರ ಮಗನಾದ ರುದ್ರಗೌಡರು ನಿರ್ವಹಿಸಿದ ಸರಕಾರಿ ಹುದ್ದೆಗಳು ಹೀಗಿವೆ :

1973-74: ಅರಟಾಳ ಗ್ರಾಮದ ಗೌಡಕಿ

1875: 15 ರೂ. ವೇತನದ ಕಾರಕೂನ, ಧಾರವಾಡ 1878: ಕಲೆಕ್ಟರ್ ಡೆಪ್ಯುಟಿ ಚಿಟೀಸ್, ಧಾರವಾಡ

1880: ಕಲೆಕ್ಟರ್ ಅವರ ಚಿಟೀಸ್, ಧಾರವಾಡ

1888: ಕಲೆಕ್ಟರ್ ಅವರ ದಫ್ತರ್‌ದಾರ, ಉತ್ತರ ಕನ್ನಡ ಜಿಲ್ಲೆ.

1890: ದಕ್ಷಿಣ ವಿಭಾಗದ ಕಮೀಶನ್ ಅವರ ನೇಟಿವ್ ಅಸಿಸ್ಟೆಂಟ್

1892: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ವಿಜಾಪುರ

1897: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ನಾಸಿಕ 1898-1913: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ಬೆಳಗಾವಿ

ಕೇವಲ ಮೆಟ್ರಿಕ್ (ಈಗಿನ ಎಸೆಸೆಲ್ಸಿ) ವರೆಗೆ ಓದಿ, ಹಳ್ಳಿಯ ಗೌಡಕಿಯಿಂದ ಆರಂಭಿಸಿ, ಡೆಪ್ಯುಟಿ ಕಲೆಕ್ಟರ್ ಹುದ್ದೆ ವರೆಗೆ ಏರಿದ ರುದ್ರಗೌಡರ ಮನೋಧರ್ಮ ವ್ಯಕ್ತಿ ಕೇಂದ್ರಿತವಲ್ಲ, ಸಮಾಜ ಕೇಂದ್ರಿತ. ಹೀಗಾಗಿ ವ್ಯಕ್ತಿ ಕಲ್ಯಾಣಕ್ಕೆ ಸೀಮಿತರಾಗದೆ, ಸಮಾಜ ಕಲ್ಯಾಣಕ್ಕೆ, ಲಿಂಗಾಯತ ಸಮಾಜದ ಬಹುಮುಖಿ ಕಲ್ಯಾಣಕ್ಕೆ ವಿಸ್ತಾರಗೊಂಡರು.

ಬೌದ್ಧಿಕವಾಗಿ ಬೆಳೆಯಲು ಕಾರಣವಾಗಿರುವ ಶಿಕ್ಷಣ, ಭೌತಿಕವಾಗಿ ಬದುಕಲೂ ಸಾಧನವೆಂಬುದನ್ನು ಅರಿತ ಲಿಂಗಾಯತರು, 19ನೆಯ ಶತಮಾನದ ಮಧ್ಯದಲ್ಲಿ ತಮ್ಮ ದೃಷ್ಟಿಯನ್ನು ಶಿಕ್ಷಣದ ಕಡೆಗೆ ಕೇಂದ್ರೀಕರಿಸಿದರು. ಇದರ ಫಲವೆಂಬಂತೆ ವಿದ್ಯಾರ್ಥಿಗಳ ಊಟಕ್ಕಾಗಿ ಬೆಳಗಾವಿಯಲ್ಲಿ (1867) ‘ಲಿಂಗಾಯತ ಬೋರ್ಡಿಂಗ್’ ಸ್ಥಾಪಿಸುವ ಮೂಲಕ ಡೆಪ್ಯುಟಿ ಚೆನ್ನಬಸಪ್ಪನವರು ‘ಅನ್ನದಾಸೋಹ’ ವನ್ನು ತೆರೆದರೆ, ಹಣದ ಸಹಾಯಕ್ಕಾಗಿ ಧಾರವಾಡದಲ್ಲಿ (1883) “ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ” ಯನ್ನು ಸ್ಥಾಪಿಸುವ ಮೂಲಕ ರುದ್ರಗೌಡರು ಅರ್ಥದಾಸೋಹವನ್ನು ಆರಂಭಿಸಿದರು. ಆ ಕಾಲದಲ್ಲಿ ಇದು ಲಿಂಗಾಯತರ ಶಿಕ್ಷಣಾಭಿವೃದ್ಧಿಯ ಅನಧಿಕೃತ ಇಲಾಖೆಯಂತೆ ಕೆಲಸಮಾಡಿತು. ಸುಶಿಕ್ಷಿತ ಲಿಂಗಾಯತ ವಿದ್ಯಾರ್ಥಿಗಳ ಹೆಸರನ್ನು ನೌಕರಿಗಾಗಿ ಶಿಫಾರಸು ಮಾಡುವ ಅಧಿಕಾರವನ್ನು ಅಂದಿನ ಸರಕಾರ ಈ ಸಂಸ್ಥೆಗೆ ನೀಡುವ ಮೂಲಕ, ಇದು ಅರೆ ಸರಕಾರಿ ಸಂಸ್ಥೆಯೆಂಬಂತೆ ಮಾನ್ಯತೆ ಗಳಿಸಿತು. ಬಳಿಕ ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆ, ಗದಗ (1889), ವೀರಶೈವ ವಿಲಾಸ ಪ್ರೆಸ್, ಹುಬ್ಬಳ್ಳಿ (1903), ವೀರಶೈವ ಮಹಾಸಭೆ, ಧಾರವಾಡ (1904), ಸಿರಸಂಗಿ ಲಿಂಗರಾಜ ಫಂಡ್, ಬೆಳಗಾವಿ (1906), ಲಿಂಗಾಯತ ಬೋರ್ಡಿಂಗ್, ಕೊಲ್ಲಾಪುರ (1907), ಲಿಂಗಾಯತ ಎಜುಕೇಶನ್ ಅಸೋಸಿಯೇಶನ್ ಸೊಲ್ಲಾಪುರ (1907), ಸೂಲಗಿತ್ತಿಯರ ತರಬೇತಿ ಕೇಂದ್ರ, ಬೆಳಗಾವಿ (1908), ಕೆ ಎಲ್ ಇ ಸೊಸೈಟಿ, ಬೆಳಗಾವಿ (1916), ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್, ಧಾರವಾಡ (1916), ಕರ್ನಾಟಕ ಕಾಲೇಜು, ಧಾರವಾಡ (1917) ಮೊದಲಾದ ಸಂಸ್ಥೆಗಳನ್ನು ಪ್ರತ್ಯಕ್ಷವಾಗಿ ಸ್ಥಾಪಿಸಿದರು. ಪರೋಕ್ಷವಾಗಿ ಸ್ಥಾಪನೆಗೆ ಪ್ರೇರಣೆ ನೀಡಿದರು. ಇವುಗಳಿಗಾಗಿ, ತಮ್ಮ ಜೀವಮಾನದ 1883-1917 ರ ವರೆಗಿನ ಅವಧಿಯಲ್ಲಿ ಸಾರ್ವಜನಿಕರಿಂದ, ಇಂದಿನ ಕಾಲದಲ್ಲಿ ನೂರಾರು ಕೋಟಿಗೆ ಸಮವೆನಿಸುವ ಸುಮಾರು ರೂ.25 ಲಕ್ಷ ಸಂಗ್ರಹಿಸಿದರು. ಇಂಥ ಪ್ರಯತ್ನಗಳ ಮೂಲಕ, ಲಿಂಗಾಯತರು ಆಧುನಿಕ ಇಂಗ್ಲಿಷ್ ಶಿಕ್ಷಣ, ಆರ್ಷೇಯ ಸಂಸ್ಕೃತ ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಂತೆ ಮಾಡಿದರು. ಸಾಲದುದಕ್ಕೆ ವೀರಶೈವ ವಿಲಾಸ ಪ್ರೆಸ್ ಆರಂಭಿಸಿ, ಲಿಂಗವಂತ ಪತ್ರಿಕೆ-ಪುಸ್ತಕಗಳ ಪ್ರಕಟನೆಗೆ ಚಾಲನೆ ನೀಡಿದರು. ರಾಯಲ್ ಏಸಿಯಾಟಿಕ್ ಸೊಸೈಟಿ (ಮುಂಬೈ) ಸದಸ್ಯರಾಗಿ, ಎಂಥಾಪೊಲಾಜಿಕಲ್ ಸೊಸೈಟಿ ಜರ್ನಲ್‌ದಲ್ಲಿ ಅನೇಕ ಲೇಖನ ಬರೆದು, ತಮ್ಮ ಬರವಣಿಗೆಯ ಒಲವನ್ನು ಮೆರೆದರು. ಇನ್ನೂ ಮುಂದುವರಿದು ಅಂದಿನ ಸಾಮಾಜಿಕ ಪ್ರತಿಷ್ಠೆಯೆನಿಸಿದ್ದ ಅಡ್ಡಪಲ್ಲಕ್ಕಿ ಉತ್ಸವ, ವ್ಯಾಸನತೋಳು ಮೆರವಣಿಗೆ, ದೇವರ ಪೂಜೆಯ ಹಕ್ಕು ಮೊದಲಾದ ಹೋರಾಟಗಳಲ್ಲಿ ಲಿಂಗಾಯತರಿಗೆ ಜಯವನ್ನು ದೊರಕಿಸಿಕೊಟ್ಟರು. ಇವೆಲ್ಲವುಗಳಿಂದಾಗಿ ಲಿಂಗಾಯತರ ಭೌತಿಕ, ಸಾಂಸ್ಕೃತಿಕ ಮಟ್ಟ ವರ್ಧಿಸಿತು. ಅವರಲ್ಲಿ ಆತ್ಮವಿಶ್ವಾಸ, ಆತ್ಮಗೌರವ ಬೆಳೆಯಿತು. ಡೆಪ್ಯುಟಿ ಕಲೆಕ್ಟರ್ ಹುದ್ದೆಯವರೆಗೂ ಏರಿ ನಿವೃತ್ತರಾದ (1913) ರುದ್ರಗೌಡರ ನಿಸೃಹ ಸರಕಾರಿ ಸೇವೆ, ಸಮಾಜ ಸೇವೆಗಳನ್ನು ಗಮನಿಸಿ, ಸರಕಾರ ಇವರಿಗೆ “ರಾವ್‌ ಬಹಾದ್ದೂರ” ಮತ್ತು “ಐ ಎಸ್ ಓ” ಪದವಿ, ಪ್ರಶಸ್ತಿಗಳನ್ನು ನೀಡಿತು. ಲಿಂಗಾಯತ ಸಮಾಜವೂ ವೀರಶೈವ ಮಹಾಸಭೆಯ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿತು.

ಡೆಪ್ಯುಟಿ ಚೆನ್ನಬಸಪ್ಪನವರು ಲಿಂಗೈಕ್ಯ (1881) ರಾಗುವಲ್ಲಿ ಲಿಂಗಾಯತರ ಶಿಕ್ಷಣ ಅಭಿವೃದ್ಧಿ ಅನಾಥವಾಯಿತು. ಈ ಹೊಣೆಯನ್ನು ಗಿಲಗಂಚಿ ಗುರುಸಿದ್ದಪ್ಪ ಮತ್ತು ಅರಟಾಳ ರುದ್ರಗೌಡರು ಹೊತ್ತರು. ಆದರೆ ಗಿಲಗಂಚಿಯವರು 1891ರಲ್ಲಿ ನಿಧನರಾಗುವಲ್ಲಿ ಆ ಭಾರವನ್ನು ಅರಟಾಳರೊಬ್ಬರೇ ಹೊರಬೇಕಾಯಿತು. ಕ್ರಿಯಾಶೀಲ ವ್ಯಕ್ತಿಯಾಗಿದ್ದ ಇವರು, ಲಿಂಗಾಯತರಿಗೆ ಅವಶ್ಯವಾಗಿರುವ ಎಲ್ಲ ಅವಕಾಶಗಳನ್ನು ತೆರೆಯುವ ಮೂಲಕ, ಸಾಮಾಜಿಕ ಸಾರ್ವಭೌಮನಂತೆ ಬೆಳೆದರು. ಹೀಗೆ ಸಾಮಾಜಿಕ ವ್ಯಕ್ತಿಯಾಗಿ ಬೆಳೆಯುತ್ತಿದ್ದಂತೆಯೇ ಸಾಮಾನ್ಯರಲ್ಲಿ ದಂತಕಥೆಯಾಗಿ, ವಿದ್ವಾಂಸರ ರಚನೆಗಳಿಗೆ ವಸ್ತುವಾಗಿ ಪ್ರಚಾರ ಪಡೆದರು.

ಸ್ವತಃ ರುದ್ರಗೌಡರೂ ದಿನಚರಿ ಬರೆಯುವ ರೂಢಿಯಿಟ್ಟುಕೊಂಡಿದ್ದರು. ಈ ಎಲ್ಲ ಲಿಖಿತ ಮತ್ತು ಮೌಖಿಕ ಸಾಮಗ್ರಿಯನ್ನು, ರುದ್ರಗೌಡರ ಸಹವಾಸದಲ್ಲಿದ್ದು, ಕಣ್ಣಾರೆ ಕಂಡ ಘಟನೆಗಳನ್ನು, ರುದ್ರಗೌಡರ ಸಂದರ್ಶನವನ್ನು ಬಳಸಿಕೊಂಡು, ಶ್ರೀ ಬಸವಾರ್ಯರು ಈ ಜೀವನ ಚರಿತ್ರೆಯನ್ನು ಬರೆದರು. ಸ್ವತಃ ರುದ್ರಗೌಡರೇ ಬರೆಯಿಸಿದರು. ತಾನು ಸಮಾಜಕ್ಕೆ ಮಾಡಿದ ಸೇವೆ ದಾಖಲು ಯೋಗ್ಯವೆಂಬ ವಿಶ್ವಾಸ ರುದ್ರಗೌಡರದಾಗಿದ್ದಿತು. ಅದು ನಿಜವೂ ಹೌದು. ಹೀಗಾಗಿ ತಮ್ಮ ದಿನಚರಿ, ಟಿಪ್ಪಣಿಗಳನ್ನು ಒದಗಿಸಿ, ಇದರ ರಚನೆಗೆ ಕಾರಣರಾದರು.

ಇದರ ಮುಖ್ಯ ಲಕ್ಷಣವೆಂದರೆ ವ್ಯಕ್ತಿನಿಷ್ಠ ಜೀವನಚರಿತ್ರೆಗೆ ಸೀಮಿತವಾಗದೆ, ಸಮಾಜನಿಷ್ಠ, ಅದರಲ್ಲಿಯೂ ಲಿಂಗಾಯತ ಸಮಾಜನಿಷ್ಠ ಜೀವನಚರಿತ್ರೆಯಾಗಿ ಇದು ವಿಸ್ತಾರ ಪಡೆದಿದೆ. ಹೀಗಾಗಿ ಇದು ಅರ್ಧಶತಮಾನದ ಉತ್ತರ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯೆಂಬಂತೆ ಆಕಾರ ಪಡೆದಿದೆ. ಸಮಕಾಲೀನ ಆಚಾರ-ವಿಚಾರಗಳು, ಸಾಮಾಜಿಕ ಸ್ನೇಹ-ಸಂಘರ್ಷಗಳು, ಪರಿಸರವನ್ನು ನಿರ್ಮಾಣ ಮಾಡಿದ ಡೆಪ್ಯುಟಿ ಚೆನ್ನಬಸಪ್ಪ, ಶಾಂತವೀರ ರಾಚಿದೇವ ಕಿತ್ತೂರ, ಗಂಗಾಧರ ಮಡಿವಾಳೇಶ್ವರ ತುರಮರಿ, ಸಕ್ಕರಿ ಕರಡಪ್ಪ ಮೊದಲಾದ ಹಿರಿಯ ಸಮಕಾಲೀನರ, ಗಿಲಗಂಚಿ ಗುರುಸಿದ್ದಪ್ಪ, ಸಿರಸಂಗಿ ಲಿಂಗರಾಜ, ವಂಟಮುರಿ ರಾಜಾ ಲಖಮನಗೌಡ, ವಾರದ ಮಲ್ಲಪ್ಪ, ಹಾನಗಲ್ಲ ಕುಮಾರ ಸ್ವಾಮೀಜಿ, ಬೆಂಗಳೂರಿನ ಪುಟ್ಟಣ್ಣ ಶೆಟ್ಟರು, ಚಿತ್ರದುರ್ಗ-ಗದಗ-ಹುಬ್ಬಳ್ಳಿ ಜಗದ್ಗುರುಗಳು, ಶಿವಮೂರ್ತಯ್ಯ ಕಣಬರಗಿಮಠ, ಚೆನ್ನಮಲ್ಲಪ್ಪ ಟೆಂಗಿನಕಾಯಿ, ಶಾಂತವೀರಪ್ಪ ಮೆಣಸಿನಕಾಯಿ, ಮುತ್ತೂರ ಬಸಪ್ಪ ಶೆಟ್ಟರು, ಕುರಲಿ ಸಿಂತ್ರೆ ಮಲ್ಲಪ್ಪಣ್ಣ, ಕುರುಬಗೊಂಡ ಬಸಪ್ಪಶೆಟ್ಟರು ಮೊದಲಾದ ನೂರಾರು ಜನ ಸಮಕಾಲೀನ ಗಣ್ಯರ ವಿವರಗಳು, ತಲೆಯೆತ್ತಿದ ಸಂಘ-ಸಂಸ್ಥೆಗಳು, ಜಾತಿ- ವಿಜಾತಿಗಳ ಸ್ವರೂಪ-ಸ್ವಭಾವಗಳು, ಸಾಮಾಜಿಕ- ಧಾರ್ಮಿಕ- ಶೈಕ್ಷಣಿಕ-ರಾಜಕೀಯ ಚಲನವಲನಗಳು, ಇತ್ಯಾದಿ ಇಲ್ಲಿ ಏಕೀಭವಿಸಿದ ಕಾರಣ ಅರಟಾಳ ರುದ್ರಗೌಡರೆಂಬ ಒಬ್ಬ ವ್ಯಕ್ತಿಯ ಚರಿತ್ರೆಯನ್ನಲ್ಲ, ಒಂದು ಕಾಲಘಟ್ಟದ ಸಾಮಾಜಿಕ ಚರಿತ್ರೆಯನ್ನೋದಿದ ಅನುಭವವಾಗುತ್ತದೆ.

ಇಂತಹ ಮಹಾನ್ ಚೇತನಕ್ಕೆ ಅನಂತ ಶರಣು ಶರಣಾರ್ಥಿಗಳು..

ಡಾ// ಎಂ ಎಂ ಕಲ್ಬುರ್ಗಿ

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.