Breaking News

ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆ: ಸಮರ್ಪಕ ಅನುಷ್ಠಾನಕ್ಕೆ ಸಲಹೆ

World Bank Aided Reward Scheme: Recommendations for Adequate Implementation

ಜಾಹೀರಾತು

ಕೊಪ್ಪಳ ಸೆಪ್ಟೆಂಬರ್ 01 (ಕ.ವಾ.): ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇತರೆ ಇಲಾಖೆಗಳು, ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆಯಡಿ ಸಮನ್ವಯ ಸಾಧಿಸಿಕೊಂಡು ಕಾರ್ಯಕ್ರಮ ಅನುಷ್ಟಾನ ಮಾಡಲು ಕ್ರಮ ಕೈಗೊಳ್ಳಬೇಕು ಎಂದು
ಜಲಾನಯನ ಕೋಶ ಮತ್ತು ದತ್ತಾಂಶ ಕೇಂದ್ರ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 31ರಂದು ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತ ಉತ್ಪಾದಕ ಬಲವರ್ಧನೆ, ರೈತ ಉತ್ಪನ್ನಗಳ ಮೌಲ್ಯವರ್ಧನೆ, ಏಕರೂಪದ ಬ್ರಾಂಡಿಂಗ್-ಗಳಿಗೆ ಒತ್ತು ಕೊಡಲು ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಬೇಕು. ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಜಿಲ್ಲಾ ಹಾಪ್ ಕಾಮ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲು ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕು.
ಭತ್ತ ಬೆಳೆಯುವ ಪ್ರದೇಶಗಳಲ್ಲಿ ಮೀನುಗಾರಿಕೆ, ಕೋಳಿ ಹಾಗೂ ಬಾತುಕೋಳಿ ಸಾಕಾಣಿಕೆಗೆ ಪ್ರಾಶಸ್ತ್ಯ ನೀಡಬೇಕು. ಈ ಹಿನ್ನೆಲೆಯಲ್ಲಿ ಬಹಿರಂಗ ಪ್ರದರ್ಶನ ಕೈಗೊಂಡು ಜನಪ್ರಿಯಗೊಳಿಸಬೇಕು.
ಈ ಯೋಜನೆಯ ಅರಣ್ಯ ಘಟಕದಡಿ ಟ್ರಿ ಪಾರ್ಕ್ ಕಾನ್ಸೆಪ್ಟ್ ಅಳವಡಿಸಬೇಕು. ರೈತರು ಬೆಳೆದ ಪ್ರತಿಯೊಂದು ಬೆಳೆಗಳಿಗೆ ಪ್ರಮಾಣದ ಗುರಿ ನಿಗದಿಪಡಿಸಿ, ಮಾರುಕಟ್ಟೆಯ ಸಂಪರ್ಕ ಕಲ್ಪಿಸಿಕೊಡಲು ಯೋಜನೆ ರೂಪಿಸಲು ತಿಳಿಸಿದರು.
ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಡಿ ಕೈಗೊಳ್ಳುವ ಕಂದಕ ಬದು ನಿರ್ಮಾಣದಡಿ ತೋಟಗಾರಿಕೆ ಮತ್ತು ಅರಣ್ಯ ಸಸಿಗಳನ್ನು ನೆಟ್ಟು ಬದುಗಳನ್ನು ಬಲಪಡಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಪಶುಸಂಗೊಪನಾ ಮತ್ತು ಪಶುವೈದ್ಯಕೀಯ, ಮೀನುಗಾರಿಕೆ, ಸಾಮಾಜಿಕ ಅರಣ್ಯ ವಿಭಾಗ, ಸಹಕಾರ, ಕೃಷಿ ಮಾರುಕಟ್ಟೆ, ಕೃಷಿ ವಿಸ್ತರಣಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಂಸ್ಥೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ (ಡಿ.ಎಲ್.ಟಿ.ಸಿ) ಸದಸ್ಯರುಗಳನ್ನಾಗಿ ಸೇರಿಸಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಲಾನಯನ ಕೋಶ ಮತ್ತು ದತ್ತಾಂಶ ಕೇಂದ್ರ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಆದ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆಯ ರೂಪರೇಷೆಗಳನ್ನು ವಿವರಿಸಿದರು. ಈ ಯೋಜನೆಯನ್ನು ರಾಜ್ಯದ 20 ಜಿಲ್ಲೆಗಳ 20 ಉಪ ಜಲಾನಯನ ಕ್ಷೇತ್ರಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ ಅಳವಂಡಿ, ಕವಲೂರು, ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುರ್ಲಾಪೂರ ಉಪ ಜಲಾನಯನದ 14 ಕಿರು ಜಲಾನಯನಗಳಲ್ಲಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಕೇಂದ್ರ ಕಚೇರಿಯಿಂದ ಅನುಮೋದನೆ ದೊರಕಿದೆ. ಈ ಯೋಜನೆಯಲ್ಲಿ ಪ್ರಮುಖವಾಗಿ ತಾಂತ್ರಿಕ ಪಾಲುದಾರರಾದ ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಇವರು ಉಪ ಜಲಾನಯನ ಭೂ ಸಂಪನ್ಮೂಲ ಸಮೀಕ್ಷೆ (ಎಲ್.ಆರ್.ಐ) ಮಾಡಿ, ಮಣ್ಣು ಮತ್ತು ನೀರು ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿಗಳು ಹಾಗೂ ಅಟ್ಲಾಸ್ ನಕ್ಷೆಗಳನ್ನು ಸಿದ್ಧಪಡಿಸಿ ನೀಡಿರುತ್ತಾರೆ. ಇವುಗಳ ಆಧಾರದ ಮೇಲೆ ಜಲಾನಯನ ಪ್ರದೇಶದ ಪ್ರತಿ ಸರ್ವೇ ನಂಬರಗಳ ಮಣ್ಣಿನ ವಿಧ, ಮಣ್ಣಿನ ಆಳ, ಇಳಿಜಾರು, ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ, ಕೊರತೆ, ಮಣ್ಣಿಗೆ ನೀರು ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಇತರೆ ಗುಣಧರ್ಮಗಳ ಬಗ್ಗೆ ಹಾಗೂ ಜಲಾನಯನ ಪ್ರದೇಶದ ಸರಾಸರಿ ಮಳೆಯ ಪ್ರಮಾಣ ಈ ಎಲ್ಲಾ ಅಂಶಗಳ ಆಧಾರದ ಮೇಲೆ ಜಲಾನಯನ ಪ್ರದೇಶದ ಪ್ರತಿ ಸರ್ವೇ ನಂಬರವಾರು ವೈಜ್ಞಾನಿಕವಾಗಿ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು, ಸೂಕ್ತ ಬೆಳೆಗಳನ್ನು (ಕೃಷಿ, ತೋಟಗಾರಿಕೆ ಮತ್ತು ಕೃಷಿ ಅರಣ್ಯ) ಶಿಫಾರಸ್ಸು ಮಾಡಿರುತ್ತಾರೆ ಎಂದರು.
ಎಲ್ಲಾ ವೈಜ್ಞಾನಿಕ ಅಂಶಗಳ ಆಧಾರದ ಮೇಲೆ ಕಿರು ಜಲಾನಯನ ವಾರು ಮತ್ತು ಸರ್ವೇ ನಂ. ವಾರು ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳ ಕುರಿತು ಯೋಜನಾ ಪ್ರದೇಶದ ರೈತರುಗಳೊಂದಿಗೆ ಸಮುದಾಯ ಸಮಾಲೋಚನೆ, ಕ್ಷೇತ್ರ ಭೇಟಿ ಮತ್ತು ಪಿ.ಆರ್.ಎ ಮೂಲಕ ಚರ್ಚಿಸಿ ಕರಡು ಯೋಜನೆಯನ್ನು ಸಿದ್ದಪಡಿಸಿ, ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಲಾಗಿರುತ್ತದೆ ಎಂದರು. ಯೋಜನಾ ಪ್ರದೇಶದ ವಿಸ್ತಿರ್ಣ, ಕಿರು ಜಲಾನಯನಗಳು, ಗ್ರಾಮ ಪಂಚಾಯತಿಗಳು ಹಾಗೂ ಗ್ರಾಮಗಳ ವಿವರ ಹಾಗೂ ಜಲಾನಯನ ಕಾರ್ಯಕಾರಿ ಸಮಿತಿಗಳ ವಿವಿರಗಳನ್ನು ಹಾಗೂ ಈ ಕರಡು ಯೋಜನೆಯ ಮೂಲಕ ತಯಾರಿಸಲಾದ ವಿಸ್ತೃತ ಕ್ರಿಯಾ ಯೋಜನೆಯ ವಿವರಗಳನ್ನು ಜಿಲ್ಲಾ ಮಟ್ಟದ ಅನುಮೋದನಾ ಸಮಿತಿಯ ಮುಂದೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡೆಯ,
ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಸೇರಿದಂತೆ ಅರಣ್ಯ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಅರಣ್ಯ ಇಲಾಖೆ, ಮೀನುಗಾರಿಕೆ, ರೇಷ್ಮೆ ಹಾಗೂ ಪಶು ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.