
ಜಿಲ್ಲೆಯ ಜನಪ್ರತಿನಿಧಿಗಳು ಕರೆ ಸ್ವೀಕರಿಸುತ್ತಿಲ್ಲ! ಅಧಿವೇಶನದಲ್ಲಿ ಧ್ವನಿ ಎತ್ತುತ್ತಿಲ್ಲ: ಬೆಟ್ಟದೂರು
ತಜ್ಞರ ಸಮಿತಿಗಳು ಬಾಧಿತ ಹಳ್ಳಿಗಳ ಮುಖ ನೋಡಿಲ್ಲ: ಡಿ.ಎಂ.ಬಡಿಗೇರ್

The district representatives are not accepting the call! They are not raising their voices in the session: Bettadoor
The expert committees have not seen the faces of the affected villages: D.M. Badigare
ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಸುತ್ತಿರುವ 43ನೇ ದಿನದಂದು ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ಮುಂತಾದ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಗ್ರಾಮದ 44.35 ಎಕರೆ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ, ತುಂಗಭದ್ರಾ ನೀರು ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿ ನಡೆದ ಹೋರಾಟವನ್ನು ದೂಳು ಬಾಧಿತ ಬಿ. ಹೊಸಳ್ಳಿ ಗ್ರಾಮದ ಯುವಕರು ಬೆಂಬಲಿಸಿದರು.
ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ “ಕೊಪ್ಪಳ ಭಾಗ್ಯನಗರದ ಲಕ್ಷಗಟ್ಟಲೆ ಜನರ ಸಮಸ್ಯೆಇಲ್ಲಿನ ಪ್ರತಿನಿಧಿಗಳಿಗೆ ಗಂಭೀರವಾಗಿ ಕಾಣಿಸುತ್ತಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಧ್ವನಿಯೆತ್ತಿದ್ದು ಕೊಪ್ಪಳ ಜನರು ಗಮನಿಸುತ್ತಿದ್ದಾರೆ. ಈ ಕುರಿತು ಮಾತನಾಡಲು ಫೋನ್ ಕರೆಯನ್ನು ಮಾಡಿ ಜಿಲ್ಲಾ ಮಂತ್ರಿಗಳು, ಶಾಸಕರುಗಳಿಗೆ ಮಾತನಾಡಲು ಪ್ರಯತ್ನಿಸಿದರೂ ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ನಮಗೆ ಆತಂಕ ಹೆಚ್ಚಾಗಿದೆ. ಒಂದು ಕಡೆ ಕೈಗಾರಿಕಾ ಮಂತ್ರಿಗಳು ತಜ್ಞರ ಸಮಿತಿ ವರದಿ ಮಾಡಿಸುತ್ತೇವೆ ಎಂದು, ದಿಲ್ಲಿ ಕಡೆ ಕೈ ಮಾಡಿ ತೋರಿಸುತ್ತಾ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಬೇಕಾದರೆ ತಮ್ಮ ಕ್ಷೇತ್ರದಲ್ಲಿ ಎಲ್ಲಾದರೂ ಬಂಜರು ಭೂಮಿ ಇದ್ದರೆ ಇಂಥ ಕಾರ್ಖಾನೆಗಳನ್ನು ತೆಗೆದುಕೊಂಡು ಅಲ್ಲಿ ಹಾಕಲಿ. ಅದು ಬಿಟ್ಟು ನಮ್ಮ ಆಹ್ಲಾದಕರ ವಾತಾವರಣದ ತುಂಗಭದ್ರವೇ ಯಾಕೆ ಬೇಕು? ಇದರಿಂದ ಅವರ ಒಂದು ಉದ್ದೇಶ ಏನೆಂದು ತೋರಿಸುತ್ತದೆ. ಇವರ ನಿಲುವು ಒಂದುವರೆ ಲಕ್ಷ ಜನರ ಆತಂಕ ಹೆಚ್ಚು ಮಾಡಿರುವಾಗಲೇ, ಇಲ್ಲಿರುವ 28 ಸ್ಪಾಂಜ್ ಐರನ್ ಕಾರ್ಖಾನೆಗಳು 25 ಹಳ್ಳಿಗಳನ್ನು, ಅಲ್ಲಿನ ಕೃಷಿ ಬದುಕನ್ನು, ಅಂತರ್ಜಲವನ್ನು ಮಾಲಿನ್ಯಗೊಳಿಸಿವೆ ಎನ್ನುವುದು ಗೊತ್ತಾಗಲಿಲ್ಲವೇ? ಇದುವರೆಗಿನ ಬಂಡವಾಳ 4000 ಕೋಟಿಯ 28 ಕಾರ್ಖಾನೆಗಳು ಇಷ್ಟು ಮಾಲಿನ್ಯ ಮಾಡಿರುವಾಗ ಇನ್ನು 54,000 ಕೋಟಿ ಹೂಡಿಕೆಯಲ್ಲಿ ಎಷ್ಟು ಮಾಲಿನ್ಯವಾಗುತ್ತದೆ ಎಂದು ಅಂದಾಜು ಇಲ್ಲವೇ? ಈ ಮಂತ್ರಿಗಳಿಗೆ ಬಲ್ಡೋಟಾ ಒಳಗೊಂಡು ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ವಿಸ್ತರಣೆ ಕೈಬಿಡಬೇಕು ಋನ್ನುವ ಧ್ವನಿ ಎತ್ತಲಾರದ ಇವರ ಧೋರಣೆ ಖಂಡಿಸಿ ಬೆಳಗಾವಿ ಅಧಿವೇಶನದತ್ತ ಕೊಪ್ಪಳ ನಗರ ಮತ್ತು ಹಳ್ಳಿಯ ಜನರು 16.12.2025 ಮಂಗಳವಾರ ನಡೆಯಿರಿ” ಎಂದು ಕರೆ ಕೊಟ್ಟರು.
ಮತ್ತೊಬ್ಬ ಪ್ರಕಾಶಕರು ಮಾತನಾಡುತ್ತಾ “ತಜ್ಞರ ಸಮಿತಿ ಯಾವತ್ತೂ ಕೊಪ್ಪಳದ ಕಾರ್ಖಾನೆ ದೂಳು ಬಾಧಿತರ ಹಳ್ಳಿಗಳ ಮುಖ ನೋಡಿಲ್ಲ. ಈಗಾಗಲೇ ಪತ್ರಿಕೆಗಳಲ್ಲಿ ದೇಶದಲ್ಲಿ ಕೊಪ್ಪಳ ಶುದ್ಧ ಗಾಳಿಯಲ್ಲಿ ಹತ್ತರಲ್ಲಿ ಮೂರನೇ ಸ್ಥಾನ, ನಾಲ್ಕನೇ ಸ್ಥಾನ ಎಂದು ನಕಲಿ ಏಜನ್ಸಿಗಳಿಂದ ವರದಿ ಮಾಡಿಸಿ ಪ್ರಚಾರ ಮಾಡಿಸುತ್ತಿರುವುದು ನೋಡಿದರೆ ನಮಗೆ ಆತಂಕವಲ್ಲ ಜೀವಾತಂಕ ಹೆಚ್ಚಾಗಿದೆ. ಇದನ್ನು ಸರ್ಕಾರ ಪರಿಗಣಿಸದೆ ಕೈಬಿಡಬೇಕು. ನಿಮ್ಮ ಉನ್ನತ ತಾಂತ್ರಿಕ ಸಮಿತಿಯಲ್ಲಿ ಬಾಧಿತ ಹಳ್ಳಿಗಳ ಪ್ರತಿನಿಧಿಗಳು, ಹೋರಾಟ ಮುಖಂಡರು ಇರಬೇಕು. ಅಂದಾಗ ಮಾತ್ರ ನಿಮ್ಮ ತಂತ್ರಜ್ಞರ ಸಮಿತಿಯ ವರದಿಗೆ ಮಾನ್ಯತೆ ಇರುತ್ತದೆ. ಇದು ಏಕಮುಖವಾಗಿ ನೀವು ಮಾಡುವ ವರದಿ ಜನರ ಜೀವನವನ್ನು, ಆರೋಗ್ಯವನ್ನು ಉಳಿಸಲು ಸಾಧ್ಯವಿಲ್ಲ” ಎಂದರು. ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯರು ಎಸ್.ಬಿ.ರಾಜೂರು, ಸಿ.ವಿ.ಜಡಿಯವರ್, ಜಂಟಿ ಕ್ರಿಯಾ ವೇದಿಕೆಯ ಸಂಚಾಲಕರು ಮಲ್ಲಿಕಾರ್ಜುನ ಬಿ. ಗೋನಾಳ, ಮಂಂಜುನಾಥ ಜಿ. ಗೊಂಡಬಾಳ, ಶಂಭುಲಿಗಪ್ಪ ಹರಗೇರಿ, ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಬಸವರಾಜ್ ಜಟ್ಟೆಪ್ಪನವ, ಕುಷ್ಟಗಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಬೆಟ್ಟಪ್ಪ ಯತ್ನಟ್ಟಿ, ಹೊಸಳ್ಳಿ ಗ್ರಾಮದ ನಾಗರಾಜ ಪಿ. ಹನುಮಂತಪ್ಪ ಡಿ. ಸುಭಾನ ಸಾಬ, ಮೂಕಪ್ಪ ಮೇಸ್ತ್ರಿ, ಗಾಳೆಪ್ಪ ಮುಂಗೋಲಿ, ಮಖ್ಬೂಲ್ ರಾಯಚೂರು, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಶಾಂತಯ್ಯ ಅಂಗಡಿ, ಗವಿಸಿದ್ದಪ್ಪ ಹಲಿಗಿ ಪಾಲ್ಗೊಂಡರು.




