Naga Panchami is a special festival of North Karnataka.
ವಿಷೇಶ ವರದಿ : ಪಂಚಯ್ಯ ಹಿರೇಮಠ,,
ಕುಕನೂರ : ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಶ್ರಾವಣ ಮಾಸ ಬಂತೆಂದರೇ ಹಬ್ಬಗಳು ಜಾತ್ರೆಗಳು ಒಂದಾದ ಮೇಲೊದರಂತೆ ಸಾಲುಗಟ್ಟಿ ಆಗಮಿಸುತ್ತವೆ.
ಈ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬ ಮನೆಯ ಮಂದಿಗೆಲ್ಲಾ ಸಡಗರದ ಹಬ್ಬವಾದರೇ, ಮಹಿಳಾ ಮಣಿಗಳಿಗೆ ಸಂಭ್ರಮವೋ ಸಂಭ್ರಮ.
ನೂತನವಾಗಿ ಮದುವೆಯಾದ ದಂಪತಿಗಳು ಮಾವನ ಮನೆಯಲ್ಲಿ ಹಬ್ಬದ ಸಂಭ್ರಮವನ್ನು ಆಚರಣೆ ಮಾಡಿ ಖುಷಿ ಪಡುತ್ತಾರೆ.
ಆದರೆ ಹಬ್ಬಗಳ ಸರಮಾಲೆ ಪ್ರಾರಂಭದಿಂದ ಮನೆಯ ಗಂಡಸರ ಜೇಬು ಖಾಲಿಯಾಗಿ, ಸಪ್ಪೆ ಮೋರೆ ಮಾಡಿ ಓಡಾಡುವುದು ಅನಿವಾರ್ಯ.
ಹಬ್ಬ ಪ್ರಾರಂಭವಾಗುತ್ತಿದ್ದಂತೆ ಮನೆಯ ಸ್ವಚ್ಚಗೊಳಿಸುವುದು, ಸುಣ್ಣ ಬಣ್ಣ ಮಾಡುವುದು, ಹಾಸಿಗೆಗಳನ್ನು ತೊಳೆಯುವುದು ಇದು ಗಂಡಸರ ಪಾಲಿನ ಸಂಭ್ರಮವಾಗಿದೆ. ಮನೆ ಮಂದಿಗೆಲ್ಲಾ ಸಿಡುಕು ಮಾಡುತ್ತಾ, ಹಣ ಖರ್ಚು ಮಾಡಿದ ಸಂಕಟ ಒಂದೇಡೆಯಾದರೇ, ಮನೆಯ ಸ್ವಚ್ಚತೆ ಉಸ್ತುವಾರಿ ಬಿಳುವದರಿಂದ ಸಿಡುಕು ಮೊಗದಿಂದ ಓಡಾಡುವುದು ಸಹಜ.
ಅದು ಇರಲಿ ಹಬ್ಬದ ಮಾತಿಗೆ ಬರೋಣ : ಈ ನಾಗ ಪಂಚಮಿಯ ಪ್ರಾರಂಭದಲ್ಲಿ ನಮ್ಮ ಭಾಗದಲ್ಲಿ ರೊಟ್ಟಿ ಹಬ್ಬದ ಸಂಪ್ರದಾಯವಿದೆ, ಶ್ರಾವಣ ಪ್ರಾರಂಭದ ಮೂರನೇ ದಿನವೇ ಈ ರೊಟ್ಟಿ ಹಬ್ಬದ ಆಚರಣೆ ಇದ್ದು, ಸಂಪ್ರದಾಯದಂತೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ರಾಗಿ ರೊಟ್ಟಿ, ಎಳ್ಳಿನ ರೊಟ್ಟಿ, ಕಡ್ಲಿ ಪುಡಿ, ಗುರೆಳ್ಳ ಪುಡಿ, ಅಗಸಿ ಪುಡಿ, ಹಾಗೂ ಈ ಭಾಗದ ವಿಷೇಶ ಪಲ್ಲೆ ಖಾಧ್ಯಗಳಲ್ಲೊಂದಾದ ಪುಂಡಿ ಪಲ್ಯೆ ಇನ್ನೀತರ ತರಹೆವಾರು ಪಲ್ಯೆ, ತಪ್ಪಲು ದಿನಸಿ ತಯಾರಿಸುತ್ತಾರೆ.
ಅದಕ್ಕಾಗಿ ಮಾರುಕಟ್ಟೆಗೆ ತೆರಳಿ ವಿವಿಧ ಬಗೆಯ ತಪ್ಪಲು, ಮೂಲಂಗಿ, ಸೌತೆಕಾಯಿ ಇನ್ನೀತರ ಕಾಯಿಪಲ್ಯಗಳ ಖರೀದಿಗೆ ಮುಗಿ ಬಿದ್ದ ಜನತೆ, ಗಗನಕ್ಕೇರಿದ ಬೆಲೆಗಳು.
ಈ ದಿನ ಮಹಿಳೆಯರು ಬಗೆ ಬಗೆಯ ಧಿರಿಸುಗಳನ್ನುಟ್ಟು, ಶೃಂಗಾರಗೊಂಡು ತಮ್ಮ ಬಳಗದವರಿಗೆ ಹಾಗೂ ಸ್ನೇಹಿತರ ಮನೆಗಳಿಗೆ ತೆರಳಿ ರೊಟ್ಟಿ ವಿತರಣೆ ಮಾಡಲು ಹೋರಡುವ ಸಂಭ್ರಮವೇ ಬೇರೆ.
ನಂತರ ಐದನೇ ದಿನಕ್ಕೆಂದೇ ನಾಗರ ದೇವಸ್ಥಾನ ಇಲ್ಲವೇ ನಾಗರ ಕಟ್ಟೆಗೆ ತೆರಳಿ ಪೂಜೆ ಸಲ್ಲಿಸುವುದು ರಾಜ್ಯಾದ್ಯಂತವಾದರೇ, ಈ ಭಾಗದಲ್ಲಿ ಪೂಜೆಯ ನೈವೇದ್ಯಕ್ಕೆಂದು ಗೋದಿ ಹಿಟ್ಟಿನಿಂದ ಮಾಡಿದ ಸಿಹಿ ಖಾಧ್ಯ, ಜೋಳದ ಅಳ್ಳು ತಯಾರಿಸಿ, ನಾಗದೇವನಿಗೆ ಹಾಲೇರೆದು, ಸಿಹಿ ಖಾದ್ಯವನ್ನು ಎಡೆ ಮಾಡುವುದು ಸಂಪ್ರದಾಯ.
ಇದರ ಜೊತೆರಲ್ಲಿ ಶೇಂಗಾ ಉಂಡಿ (ಲಾಡು) ಪುಟಾಣಿ, ಎಳ್ಳು, ರವಾ, ಮಂಡಾಳ, ಬೆಸನ್ ನಿಂದ ತಯಾರಿಸಿದ ಉಂಡಿ, ಕಡುಬು, ಚಕ್ಕಲಿ, ಸಂಡಿಗೆ, ಹಪ್ಪಳಗಳನ್ನು ತಯಾರಿಸಿದ ಎಲ್ಲಾ ಪದಾರ್ಥಗಳೊಂದಿಗೆ ಮನೆ ಮಂದಿಯಲ್ಲದೇ, ಸ್ನೇಹಿತರೊಂದಿಗೆ ಒಡಗೂಡಿ, ಟ್ರ್ಯಾಕ್ಟರ್, ಬಂಡಿ, ದ್ವಿಚಕ್ರವಾಹನಗಳೊಂದಿಗೆ ಜಮೀನುಗಳಿಗೆ ತೆರಳಿ ನಾಗ ದೇವನಿಗೆ ಪೂಜೆ ಸಲ್ಲಿಸಿ ಹಬ್ಬದ ಭೋರಿ ಭೋಜನದ ಸವಿಯನ್ನು ಸವಿಯುತ್ತಾರೆ.
ಇನ್ನೂ ಈ ಹಬ್ಬದ ಸರಮಾಲೆಯಿಂದ ಶಾಲಾ ಮಕ್ಕಳು ಫುಲ್ ಖುಷ್ : ಶಾಲೆಗೆ ಹೋಗುವ ಮಕ್ಕಳಿಗೆ ಹಬ್ಬಗಳು ಬಂದರಂತು ಖುಷಿಯೋ ಖುಷಿ, ಶಾಲೆಗೆ ಚಕ್ಕರ ಹಾಕಲು ಇಂದೊಂದೆ ನೆಪ ಸಾಕಾಗುತ್ತದೆ
ನಾಗ ಪಂಚಮಿಗೆ ಜೋಕಾಲಿ : ಹಬ್ಬದ ಅಂಗವಾಗಿ ಮನೆ ಹತ್ತಿರವಿರುವ ಮರಗಳಲ್ಲಿ ಜೋಕಾಲಿ (ಉಯ್ಯಾಲೇ) ಯನ್ನು ಭಾವಿ ಹಗ್ಗದಿಂದ ಕಟ್ಟಿ ಮಕ್ಕಳು, ಮಹಿಳೆಯರು ಸೇರಿದಂತೆ ಹಿರಿಯರು ಕೂಡಾ ಜೋಕಾಲಿ ಆಡುವದೇ ಸೋಗಸಾಗಿತ್ತು ಒಂದು ಕಾಲ.
ಆದರೆ ಮನೆ, ಹಾಗೂ ವಾಣಿಜ್ಯೊಧ್ಯಮದಿಂದ ಮರಗಳ ಮಾರಣ ಹೋಮ : ಆದರೆ ಈ ಮುಂದೊರೆದ ಯುಗದಲ್ಲಿ ಹಲವಾರು ಕಾರಣಗಳಿಂದ ದಿನ ನಿತ್ಯ ಸಾವಿರಾರು ಮರಗಳ ಮಾರಣ ಹೋಮ ನಡೆಯುತ್ತಿದ್ದು, ಪರಿಸರ ವಿನಾಶದ ಜೊತೆಗೆ ಈ ಹಳ್ಳಿಗಾಡಿನ ಹಬ್ಬಗಳು ಮಾಯವಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.