Urge to stop accidents caused by private school drivers: Channabasava Jakin
ಗಂಗಾವತಿ: ಮಾನ್ವಿ ಪಟ್ಟಣದ ಲೋಯೋಲಾ ಶಾಲೆಯ ವಾಹನ ಹಾಗೂ ಸರ್ಕಾರಿ ಬಸ್‌ಗಳ ಅಪಘಾತದಿಂದ ಪುಟ್ಟ ಪುಟ್ಟ ಕಂದಮ್ಮಗಳು ಬಲಿಯಾಗಿದ್ದು, ಕೆಲವು ಮಕ್ಕಳು ಕಾಲು ಕಳೆದುಕೊಂಡಿರುತ್ತಾರೆ. ಮುಂದಿನ ಭವಿಷ್ಯದ ಯುವಪೀಳಿಗೆಯಾಗಲಿರುವ ನೂರಾರು ಕನಸು ಹೊಂದಿದ್ದ ಮಕ್ಕಳು ಈ ರೀತಿಯ ಅವಘಡದಿಂದ ತಮ್ಮ ಭವಿಷ್ಯವನ್ನೇ ಕಳೆದುಕೊಂಡಿದ್ದಾರೆ ಮತ್ತು ಮಕ್ಕಳ ಕುಟುಂಬಗಳು ಮಕ್ಕಳನ್ನು ಕಳೆದುಕೊಂಡು ಕಂಗಲಾಗಿದ್ದಾರೆ ಎಂದು ಕನ್ನಡಸೇನೆ ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್ ಪ್ರಕಟಣೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ಖಾಸಗಿ ಶಾಲಾ ವಾಹನ ಚಾಲಕರಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಾಗೂ ಅವರ ಮುಖಾಂತರ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಅನುದಾನಿತ ಹಾಗೂ ಖಾಸಗಿ ಶಾಲೆಗಳು ತಮ್ಮ ಶಾಲಾ ವಾಹನಕ್ಕಾಗಿ, ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿದ ನುರಿತ, ಪರಿಣಿತ ಚಾಲಕರನ್ನು ನೇಮಿಸಿಕೊಳ್ಳದೇ, ಕಡಿಮೆ ಸಂಬಳಕ್ಕಾಗಿ ದುಡಿಯುವ, ಅಪರಿಣಿತ, ಸಾರಿಗೆ ನಿಯಮಗಳನ್ನು ತಿಳಿದಿರದ ಹಾಗೂ ಮಧ್ಯವೆಸನಿ ಚಾಲಕರನ್ನು ನೇಮಿಸಿಕೊಂಡು, ಶಾಲಾ ಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಅಲ್ಲದೇ ಶಾಲಾ ವಾಹನದ ಕಿಟಕಿಗಳಿಗೆ ಸೇಫ್ ಗಾರ್ಡ್ಗಳನ್ನು ಅಳವಡಿಸಿರುವುದಿಲ್ಲ. ಇದರಿಂದ ಚಿಕ್ಕ ಚಿಕ್ಕ ಮಕ್ಕಳು ಕಿಟಕಿಯಲ್ಲಿ ಕೈ ಹಾಕಿ ದುರಂತಕ್ಕೀಡಾಗುವ ಸಂಭವ ಇರುತ್ತದೆ. ಇತ್ತೀಚೆಗೆ ಗಂಗಾವತಿಯ ಜೈನ್ ಪಬ್ಲಿಕ್ ಶಾಲಾ ವಾಹನವು ಕನಕಗಿರಿ ರಸ್ತೆಯ ಗಾಳೆಮ್ಮಗುಡಿ ಹತ್ತಿರ, ನಿಂತ ಟ್ರಾö್ಯಕ್ಟರ್‌ಗೆ ಢಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲಿಯೇ ಭಾರಿ ಅನಾಹುತ ತಪ್ಪಿದೆ. ಕೆಲವು ಮಕ್ಕಳು ಗಾಯಗೊಂಡ ಘಟನೆ ನಡೆದಿದೆ.
ಆದರೆ ಇದರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ. ಇಂತಹ ದುರಂತ ಘಟನೆಗಳು ಮರುಕಳಿಸದಿರಲು ಅನುದಾನಿತ ಹಾಗೂ ಖಾಸಗಿ ಶಾಲೆಗಳು, ತಮ್ಮ ಶಾಲಾ ವಾಹನವನ್ನು ಮಕ್ಕಳ ಸುರಕ್ಷತೆಗಾಗಿ ಮಾರ್ಪಾಡಗೊಳಿಸಿ, ವಾಹನಕ್ಕೆ ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿದ, ನುರಿತ, ಅನುಭವವುಳ್ಳ ಯೋಗ್ಯ ಚಾಲಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅನುದಾನಿತ, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಶಿಸ್ತು ಆದೇಶ ಹೊರಡಿಸುವ ಮೂಲಕ ಅನುದಾನಿತ ಹಾಗೂ ಖಾಸಗಿ ಶಾಲಾ ವಾಹನ ಚಾಲಕರಿಂದ ಆಗುತ್ತಿರುವ ಅಪಘಾತಗಳನ್ನು ತಡೆಯಬೇಕೆಂದು ನಮ್ಮ ಕನ್ನಡಸೇನೆ ಸಂಘಟನೆ ಒತ್ತಾಯಿಸಿದೆ ಎಂದು ತಿಳಿಸಿದರು. ಮುಂದುವರೆದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸಿದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅನುದಾನಿತ, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳೇ ನೇರ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಆದಿಲ್‌ಪಾಷಾ ಮುಸ್ಟೂರು, ಜಿಲ್ಲಾ ಎಸ್.ಸಿ/ಎಸ್.ಟಿ ಘಟಕದ ಅಧ್ಯಕ್ಷರಾದ ಶಿವಪ್ಪ ವಿನೋಬನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆನಂದ ಎಸ್., ಗಂಗಾವತಿ ತಾಲೂಕ ಅಧ್ಯಕ್ಷರಾದ ಮಂಜುನಾಥ ಪತ್ತಾರ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಶಿವರಾಜ ಶ್ರೀರಾಮನಗರ, ಪದಾಧಿಕಾರಿಗಳಾದ ಅನೀಲಕುಮಾರ, ದೇವರಾಜ, ಶರಣಪ್ಪ, ಪರಶುರಾಮ, ಶುಭಾನ್, ಮದರ್, ಮಲ್ಲೇಶ ನಾಯ್ಕ, ಮೆಹೆಬೂಬ, ರಾಜು ಶ್ರೀರಾಮನಗರ, ಲಿಂಗರಾಜ ಜರ‍್ಹಾಳ, ಯಮನೂರಪ್ಪ, ಯಂಕೋಟ, ಅಭಿಷೇಕ, ಮುತ್ತಪ್ಪ, ರಮೇಶ ಹಾಗೂ ಕನ್ನಡಪರ ಒಕ್ಕೂಟದ ಪೀರ್ ಮಹಮ್ಮದ್, ರಮೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.