Minister Bhairati Suresh Nishkalaji for allotment of places for 13 deputy directors promoted in Urban Development Department.
ಬೆಂಗಳೂರು, ಅ, 2; ನಗರಾಭಿವೃದ್ಧಿ ಇಲಾಖೆಯಡಿ ಬರುವ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಡಿ 13 ಜನ ಸಹಾಯಕ ನಿರ್ದೇಶಕರಿಗೆ ಉಪ ನಿರ್ದೇಶಕ ಹುದ್ದೆಗಳಿಗೆ ಮುಂಬಡ್ತಿ ನೀಡಿದ್ದು ಮೂರು ತಿಂಗಳು ಕಳೆದಿದ್ದರೂ ಇನ್ನೂ ಸ್ಥಳ ನಿಯುಕ್ತಿಗೊಳಿಸಿಲ್ಲ. ಸಚಿವ ಭೈರತಿ ಸುರೇಶ್ ಮತ್ತು ಇಲಾಖೆಯ ಉನ್ನತಾಧಿಕಾರಿಗಳ ನಿಷ್ಕಾಳಜಿಯಿಂದ 13 ಮಂದಿ ಅಧಿಕಾರಿಗಳು ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ.
ಜೂನ್ 20 ರಂದು ನಡೆದ ಪರಿಶೀಲನಾ ಸಭೆಯಲ್ಲಿ ಮುಂಬಡ್ತಿ ನೀಡಿದ್ದು, ಇನ್ನೂ ಸೂಕ್ತ ಜವಾಬ್ದಾರಿ ವಹಿಸಿಲ್ಲ. ಸಚಿವರು ಮತ್ತು ಉನ್ನತ ಅಧಿಕಾರಿಗಳು ಸ್ಥಳ ನಿಯೋಜಿಸುವ ಜವಾಬ್ದಾರಿಯನ್ನೇ ಮರೆತಂತೆ ವರ್ತಿಸುತ್ತಿದ್ದಾರೆ.
ಮುಡಾ ಪ್ರಕರಣ ಧಗಧಗಿಸುತ್ತಿರುವ ಸಂದರ್ಭದಲ್ಲೇ ಸಚಿವರು ಮತ್ತು ಅಧಿಕಾರಿಗಳು ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬಡ್ತಿ ಪರಿಶೀಲನಾ ಸಭೆ ನಡೆಯುವುದು ಸಹ ವಿಳಂಬವಾಗಿತ್ತು. ಇಲಾಖೆಯಡಿ ಕೆಲವೇ ಕೆಲವು ಉಪ ನಿರ್ದೇಶಕರ ಹುದ್ದೆಗಳಿದ್ದು, ಇವುಗಳಿಗೆ ಸ್ಥಳ ನಿಯೋಜನೆ ಮಾಡದಷ್ಟು ನಿರಾಸಕ್ತಿ ಕಂಡು ಬಂದಿದೆ. ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗಳು ಆಯಾಕಟ್ಟಿನ ಜಾಗಗಳಾಗಿದ್ದು, ವ್ಯವಹಾರ ಕುದುರದ ಕಾರಣ ಜವಾಬ್ದಾರಿ ವಹಿಸುವುದು ವಿಳಂಬವಾಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಕೂಡಲೇ ಸ್ಥಳ ನಿಯೋಜಿಸಿ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.