Breaking News

ಗೌರಿ ಗಣೇಶ ಹಬ್ಬ, ಈದ್ ಮಿಲಾದ್: ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ಇಲಾಖೆಯಿಂದ ಶಾಂತಿ ಸಭೆ

Gauri Ganesha Festival, Eid Milad: Peace meeting by District Administration, District Police Department

ಜಾಹೀರಾತು

ಕೊಪ್ಪಳ ಸೆಪ್ಟೆಂಬರ್ 16 (ಕರ್ನಾಟಕ ವಾರ್ತೆ): ಸೌಹಾರ್ದತೆ ಸಂದೇಶದ ಗೌರಿ ಗಣೇಶ ಹಬ್ಬ ಮತ್ತು ಭಾವೈಕ್ಯತೆ ಸಂದೇಶದ ಈದ್ ಮಿಲಾದ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 16ರಂದು ಶಾಂತಿ ಸಭೆ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಾನಾ ಕಾರಣಗಳಿಂದ ದಿನೇದಿನೆ ಪರಿಸರವು ಮಾಲಿನ್ಯವಾಗುತ್ತಲೇ ಹೊರಟಿದೆ. ಇದರಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ನಾವು ಸೇವಿಸುವ ಗಾಳಿ, ನೀರು ವಿಷವಾಗುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಈ ನಿಟ್ಟಿನಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು. ನಮ್ಮ ದೇಶವು ಶಾಂತಿಗೆ ಹೆಸರಾಗಿದೆ. ಇಲ್ಲಿ ಪ್ರತಿಯೊಂದು ಜಾತಿ ಧರ್ಮದ ಜನರು ಸಹೋದರರಂತೆ ಬಾಳುತ್ತಿದ್ದೇವೆ. ಹೀಗಾಗಿ ಈದ್ ಮಿಲಾದ್ ಮತ್ತು ಗಣೇಶ ಹಬ್ಬ ಎರಡನ್ನು ಎಲ್ಲರೂ ಸೇರಿ ಶಾಂತಿ ಸೌಹಾರ್ದತೆಯಿಂದ ಆಚರಿಸಲು ಕೊಪ್ಪಳ ಜಿಲ್ಲೆಯ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.


ಸಮಾಜದಲ್ಲಿ ಪ್ರತಿಯೊಬ್ಬರು ಸಹ ಶಾಂತಿ, ಸಹನೆಯಿಂದ ಬಾಳಬೇಕು. ಪ್ರತಿಯೊಂದು ಹಬ್ಬಗಳ ಉದ್ದೇಶವು ಕೂಡ ಇದೆ ಆಗಿದೆ. ಗಣೇಶ ಹಬ್ಬದಲ್ಲಿ ಜನದಟ್ಟಣೆ ಸಹಜವಾಗಿರುವುದರಿಂದ ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ಹಬ್ಬ ಆಚರಿಸಬೇಕು. ಎರಡೂ ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿಂದ ಎಲ್ಲರೂ ಪರಸ್ಪರ ಸ್ನೇಹ ಭಾವನೆಯಿಂದ ಕೂಡಿ ಹಬ್ಬ ಆಚರಿಸಬೇಕು. ಯಾವುದೇ ಕಡೆಗಳಲ್ಲಿ ಕೋಮು ಘಟನೆಗಳು ನಡೆಯದ ಹಾಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಎರಡೂ ಹಬ್ಬಗಳನ್ನು ದೇಶದೆಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಡೆಗಳಲ್ಲಿ ಈ ಹಬ್ಬಗಳು ಶಾಂತರೀತಿಯಿಂದ ಆಚರಣೆ ಆಗಬೇಕು ಎಂದು ಸರ್ಕಾರವು ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆ ಆಗಬೇಕು. ಸಮಾಜದಲ್ಲಿ ಶಾಂತಿ ಪಾಲನೆ ಮಾಡಬೇಕಾದ ಜವಾಬ್ದಾರಿಯು ಪ್ರತಿಯೊಬ್ಬರಿಗು ಇದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಇದುವರೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಾರೆ. ಮುಂದೆಯು ಸಹ ಸಹಕಾರ ನೀಡಿ ಎರಡೂ ಹಬ್ಬಗಳು ಶಾಂತಿಯಿಂದ ನೆರವೇರಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಮಾತನಾಡಿ, ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ಕೂಡಿಸುವ ಸಂಖ್ಯೆ ಹೆಚ್ಚುತ್ತ ಹೋಗುತ್ತಿದೆ. ಹೀಗಾಗಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಕೂಡಿಸುವಾಗ ಕಡ್ಡಾಯ ಅನುಮತಿ ಪಡೆಯಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನ ಸಂಚರಿಸಲು ಅನುಕೂಲವಾಗುವ ಹಾಗೆ ಶ್ಯಾಮಿಯಾನು ಹಾಕಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಪೆಂಡಾಲನಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಸಬೇಕು. ಮೇನ್ ಲೈನ್‌ಗೆ ಸಂಪರ್ಕ ಹೊಂದದ ಹಾಗೆ ಪೆಂಡಾಲನ್ನು ಸುರಕ್ಷಿತ ಸ್ಥಳದಲ್ಲಿ ಹಾಕಬೇಕು. ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಪೆಂಡಾಲನಲ್ಲಿ ಎರಡು ಕಡೆ ಪ್ರವೇಶ ದ್ವಾರ ಮಾಡಬೇಕು. ಜವಾಬ್ದಾರಿ ಇರುವಂತವರಿಗೆ ಸ್ವಯಂ ಸೇವಕರೆಂದು ನೇಮಿಸಬೇಕು. ಆ ಎಲ್ಲ ಸ್ವಯಂ ಸೇವಕರ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು. ಧ್ವನಿ ವರ್ಧಕ ಬಳಕೆಯನ್ನು ಸರ್ಕಾರ ಹೊರಡಿಸಿದ ಮಾರ್ಗಸೂಚಿಯನುಸಾರ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಾಗ ಆಯಾ ಠಾಣಾ ವ್ಯಾಪ್ತಿಯಲ್ಲಿ ಅನುಮತಿ ಪಡೆಯಬೇಕು. ಗಣಪತಿ ಮೆರವಣಿಗೆ ಮಾರ್ಗ ಬದಲಾವಣೆ ಮಾಡದೇ ಮಂಡಳಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ: ಸಮಾಜದಲ್ಲಿ ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಇರಬೇಕು. ಗೌರಿ ಗಣೇಶ ಹಬ್ಬ ಎಂದರೆ ಅದು ಹಬ್ಬದ ರೀತಿಯಲ್ಲೇ ಇರಬೇಕು. ಮೆರವಣಿಗೆಯು ಶಾಂತಿಯುತವಾಗಿ ಸೌಹಾರ್ದಯುತವಾಗಿ ನಡೆಯಬೇಕು. ಅವಘಡಗಳು ಉಂಟಾಗಿ ಕಠಿಣ ಕ್ರಮ ಜರುಗಿಸುವ ಅನಿವಾರ್ಯತೆಯನ್ನು ಯಾರು ಸಹ ಸೃಷ್ಟಿ ಮಾಡಬಾರದು. ಕೊಪ್ಪಳ ಜಿಲ್ಲೆಯು ಶಾಂತಿಗೆ ಹೆಸರಾಗಿದೆ. ಇಲ್ಲಿನ ಜನರು ಶಾಂತಿಪ್ರಿಯರಾಗಿದ್ದಾರೆ. ಹೀಗಾಗಿ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಎರಡೂ ಹಬ್ಬಗಳು ಶಾಂತಿಯಿಂದ ನಡೆಯುವಂತೆ ಎಲ್ಲ ಸಮುದಾಯವರು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಯ ಮೂಲಕ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಜನರು ಪ್ರತಿಯೊಂದು ಹಬ್ಬವನ್ನು ಶಾಂತಿಯಿಂದ ಆಚರಿಸುವುದನ್ನು ನಾವು ನೋಡಿದ್ದೇವೆ. ಇದೆ ರೀತಿಯ ಶಾಂತಿ ಸೌಹಾರ್ದತೆಯನ್ನು ಜಿಲ್ಲಾಡಳಿತವು ಸದಾಕಾಲ ಬಯಸುತ್ತದೆ. ಪಿಓಪಿ ಗಣಪತಿ ಮೂರ್ತಿಗಳನ್ನು ಬಳಸಬಾರದು ಎಂದು ಪರಿಸರ ಸಚಿವರು ತಿಳಿಸಿದ್ದು ಈ ನಿಯಮ ಪಾಲನೆ ಮಾಡಿ ಪರಿಸರ ಸಂರಕ್ಷೆಣೆಗೆ ಸಾರ್ವಜನಿಕರು ಸಹಕರಿಸಬೇಕು. ನಾವು ನೆಮ್ಮದಿಯಿಂದ ಬದುಕಲು ಒಳ್ಳೆಯ ಗಾಳಿ, ನೀರು, ಮಣ್ಣು ಬೇಕು. ಇದನ್ನು ಅರಿತು ಪಿಓಪಿ ಗಣಪತಿ ಮೂರ್ತಿಗಳನ್ನು ತಯಾರಿಸುವುದನ್ನು ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ಕೈಬಿಡಬೇಕು ಎಂದು ಗಣೇಶ ಮಂಡಳಿಯ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಭಾಗಿಯಾಗಿದ್ದ ಕೊಪ್ಪಳ ಸೇರಿದಂತೆ ಗಂಗಾವತಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ, ಕುಕನೂರ, ಕಾರಟಗಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮಾತನಾಡಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಕ್ಕಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಶಾಂತಿ, ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಎಲ್ಲ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ನಾಸೀರ ಹುಸೇನಿ ಅವರು ಮಾತನಾಡಿ, ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುವುದು ಎಲ್ಲಾ ನಾಗರಿಕರ ಕರ್ತವ್ಯವಾಗಿದೆ. ಈದ್ ಮಿಲಾದ್ ಹಬ್ಬ ಮತ್ತು ಗಣೇಶ್ ಹಬ್ಬ ಎರಡನ್ನೂ ಶಾಂತಿಯುತವಾಗಿ ಆಚರಿಸುತ್ತೇವೆ ಎಂದರು.
ಮುಖಂಡರಾದ ಮರಿಯಪ್ಪ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಇಲ್ಲಿ ಎಲ್ಲರೂ ಶಾಂತಿ, ಸೌಹಾರ್ದಯಿಂದ ಬಾಳುತ್ತಿದ್ದೇವೆ. ಹಬ್ಬಗಳು ನಾವೆಲ್ಲ ಒಂದೇ ಎಂಬ ಒಳ್ಳೆಯ ಸದಾವಕಾಶ ಕಲ್ಪಿಸುತ್ತವೆ. ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದರು.
ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತತೆಯಿಂದ ಆಚರಿಸಲಾಗುವುದು. ಪ್ರತಿಯೊಬ್ಬರಿಗೂ ಪೊಲೀಸ್ ಇಲಾಖೆಯವರು ಅಗತ್ಯ ಸಹಕಾರ ನೀಡಬೇಕು ಎಂದು ಪರಶುರಾಮ ಬಂಡಿ, ಸಂಜೀವ್, ಖಲೀಲ್ ಅಹ್ಮದ್, ವೀರೇಶ, ಅಯ್ಯಣ್ಣ ಸೇರಿದಂತೆ ಹಲವು ಮುಖಂಡರು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಉಪಾಧಿಕ್ಷಕರಾದ ಶರಣಬಸಪ್ಪ ಸುಬೇಧಾರ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾವಿ, ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ., ನಗರಸಭೆ ಪೌರಾಯುಕ್ತರು, ಕೊಪ್ಪಳ ತಾಪಂ ಇಓ ದುಂಡಪ್ಪ ತುರಾದಿ, ನಗರ ಠಾಣೆ ವೃತ್ತ ನಿರೀಕ್ಷಕರಾದ ಸಂತೋಷ ಹಳ್ಳೂರ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ, ಗಣೇಶ ಮಂಡಳಿಯ ಮುಖ್ಯಸ್ಥರು ಮತ್ತು ಇನ್ನೀತರ ಪದಾಧಿಕಾರಿಗಳು ಇದ್ದರು.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.