Friendly conference, pamphlet release.
ಚಿಟಗುಪ್ಪ: ನಾಡಿನಾದ್ಯಂತ ಸೌಹಾರ್ದತೆ, ಸಹೋದರತೆಯು ಸರ್ವರ ಹೃದಯ ಮಂದಿರದಲ್ಲಿ ಬಿತ್ತುವ ನಿಟ್ಟಿನಲ್ಲಿ ಶರಣ ಸೂಫಿ ಸಂತರ, ಸೌಹಾರ್ದ ಸಮಾವೇಶ ಅಗಸ್ಟ್ 07,2023 ರಂದು ನಾಂದೆಢಿ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತಿ, ಪತ್ರಕರ್ತರು, ಸಮಾವೇಶದ ಸಂಯೋಜಕರಾದ
ಸಂಗಮೇಶ ಎನ್ ಜವಾದಿ ಯವರು ತಿಳಿಸಿದರು.
ನಗರದಲ್ಲಿ ಸಮಾವೇಶದ ಕುರಿತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು ರಾಜಕೀಯ ವಿರೋಧ ಅಥವಾ ತಾತ್ವಿಕ ವಿರೋಧಗಳ ನಡುವೆಯೇ ಕರ್ನಾಟಕ ಒಂದು ಸೌಹಾರ್ದಯುತ ಸಮಾಜವಾಗಿ ದೇಶದಲ್ಲಿ ಒಂದು ಮಾದರಿಯಾಗಿ ನಡೆದುಬಂದಿದೆ. ಸ್ವತಂತ್ರ ಭಾರತ ಕಂಡ ಪ್ರಬಲ ಸೈದ್ಧಾಂತಿಕ ಸಂಘರ್ಷಗಳು, ಹೋರಾಟಗಳು , ಪ್ರತಿರೋಧದ ಧ್ವನಿಗಳು ಈ ನೆಲದಲ್ಲಿ ದಾಖಲಾಗಿವೆ. ರೈತರು ತಮ್ಮ ಬದುಕಿಗಾಗಿ, ದಲಿತರು ತಮ್ಮ ಘನತೆಗಾಗಿ, ಆದಿವಾಸಿಗಳು ತಮ್ಮ ಅಸ್ತಿತ್ವಕ್ಕಾಗಿ, ಮಹಿಳೆಯರು ತಮ್ಮ ಗೌರವಕ್ಕಾಗಿ ಹೋರಾಡುತ್ತಲೇ ಕರ್ನಾಟಕವನ್ನು ಮನುಜಪಥದಲ್ಲಿ ಸಾಗಿಸುವ ಒಂದು ರಾಜ್ಯವಾಗಿ ರೂಪಿಸಲು ಶ್ರಮಿಸಿದ್ದಾರೆ. ಇಂದಿಗೂ ಈ ಜೀವನೋಪಾಯ ಮತ್ತು ಮಾನವ ಘನತೆಯ ಹೋರಾಟಗಳು ಉಸಿರಾಡುತ್ತಲೇ ಇವೆ. ಕರುನಾಡು ತನ್ನ ಶಾಂತಿಯ ತೋಟವನ್ನು ಕಾಪಾಡಿಕೊಂಡು ಬಂದಿದೆ. ಆದರೆ ಕಳೆದ ವರ್ಷಗಳಲ್ಲಿ ಈ ತೋಟದ ಹೂಗಳು ಮುರುಟಿಹೋಗುತ್ತಿವೆ. ಹಸಿರು ಬಳ್ಳಿಗಳು ಸುರುಟಿಹೋಗುತ್ತಿವೆ. ವಿಶಾಲ ವೃಕ್ಷಗಳು ಆಶ್ರಯಿಸುವವರಿಗೆ ನೆರಳು ನೀಡುವ ಬದಲು, ವಿಷಗಾಳಿಯನ್ನು ಹೊರಸೂಸುತ್ತಿವೆ. ಏಕೆ ಹೀಗಾಗುತ್ತಿದೆ ಎಂದು ಯೋಚಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸರ್ವಜನಾಂಗದ ಶಾಂತಿಯ ತೋಟ ಕೇವಲ ಕವಿವಾಣಿ ಮಾತ್ರವಲ್ಲ, ಅದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದ ರಾಜ್ಯ ಕರ್ನಾಟಕ. ಆಂತರಿಕ ಕ್ಷೋಭೆ ಎಷ್ಟೇ ಇದ್ದರೂ ಜನಸಮುದಾಯಗಳ ನಡುವೆ ಸಮನ್ವಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಕರ್ನಾಟಕದ ಜನತೆ ಸದಾ ಮುಂಚೂಣಿಯಲ್ಲೇ ಇದ್ದಾರೆ.
ಅದಕ್ಕಾಗಿಯೇ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಗಮೇಶ ಎನ್ ಜವಾದಿ ಯವರು ನುಡಿದರು.
ಸಮಾವೇಶದ ಸಂಚಾಲಕಿ ಅಂಬಾಬಾಯಿ ಮಾಳಿಗೆ ಮಾತನಾಡಿ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾಗರಿಕರ ನಡುವೆಯೇ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾವೈಕ್ಯತೆಯ ಸಮಾವೇಶ ಆಯೋಜಿಸಲಾಗಿದೆ. ನಮ್ಮ ಸಮಾಜ ಸಹಬಾಳ್ವೆ, ಸಮಾನತೆ ಕಡೆ ಸಾಗಬೇಕಾಗಿದೆ.
ಈ ಮೂಲಕ ಸುಂದರ ಸಮೃದ್ಧಿ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಎಂ ಎಂ ಮಾಸುಲ್ದಾರ್, ಮೀಸ್ ಮೇರಿ ಮಾರ್ಗರೇಟ್, ರೇಷ್ಮಾ ಹಂಸರಾಜ್ ಸೇರಿದಂತೆ ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.