District Commissioners, GPAM CEO order to hold consultative meeting for development of adolescent children
ಕೊಪ್ಪಳ ಸೆಪ್ಟೆಂಬರ್ 30 (ಕರ್ನಾಟಕ ವಾರ್ತೆ): ಹದಿಹರೆಯದ ಮಕ್ಕಳ ಅಭಿವೃದ್ಧಿ ಕುರಿತು ಅಕ್ಟೋಬರ್ 02ರಂದು ಸಮಾಲೋಚನಾ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ಕೊಪ್ಪಳ ಜಿಲ್ಲೆಯ ಎಲ್ಲಾ ನಗರಸಭೆ ಪೌರಾಯುಕ್ತರು, ಪುರಸಭೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಕ್ಟೋಬರ್ 2ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಇತರೆ ಭಾಗಿದಾರರ ಸಮಾಲೋಚನಾ ಸಭೆ ನಡೆಸಿ ಸೂಚಿಸಲಾದ ವಿಷಯಗಳು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ತಮ್ಮ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಈ ಸಭೆಯ ಬಗ್ಗೆ ಜಿಲ್ಲೆಯಲ್ಲಿ ಹದಿಹರೆಯದ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂಯೋಜನೆ ಮಾಡಲು ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.
ಹದಿಹರೆಯದ ಮಕ್ಕಳ ಅಭಿವೃದ್ಧಿಯು ಸುಸ್ಥಿರ ಅಭಿವೃದ್ದಿ ಸೂಚ್ಯಾಂಕ (ಎಸ್.ಡಿ.ಜಿ)ದಲ್ಲಿ ಪ್ರಮುಖ ಸೂಚ್ಯಾಂಕವಾಗಿದ್ದು, ಅವರ ಸರ್ವಾಂಗಿಣ ಪ್ರಗತಿಯಾಗಬೇಕಾದರೆ ಅವರುಗಳು ಎದುರುಸುತ್ತಿರುವ ಸವಾಲುಗಳನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಬಗೆಹರಿಸಬೇಕಾಗಿರುವುದು ಎಲ್ಲಾ ಭಾಗೀದಾರರ ಕರ್ತವ್ಯವಾಗಿದೆ. ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸವಾಲುಗಳಲ್ಲಿ ಮುಖ್ಯವಾಗಿ ಅಪೌಷ್ಟಿಕತೆ ಮತ್ತು ರಕ್ತಹೀನತೆ, ಬಾಲ್ಯವಿವಾಹ, ಬಾಲಕಾರ್ಮಿಕತೆ ಮತ್ತು ಕಿಶೋರಾವಸ್ಥೆ ಕಾರ್ಮಿಕತೆ, ಲೈಂಗಿಕ ದೌರ್ಜನ್ಯ, ಶಾಲೆ ಅಥವಾ ಕಾಲೇಜು ದಾಖಲಾತಿ, ಗೈರು ಹಾಜರಿ, ತೊರೆಯುವಿಕೆ, ಸೈಬರ್ ಅಪರಾಧಗಳು ಮತ್ತು ಮೊಬೈಲ್ ಬಳಕೆ, ಆರೋಗ್ಯ ಸಂಬಂದಿತ ಸಮಸ್ಯೆಗಳು, ಜೀವನಕೌಶಲ್ಯ ಮತ್ತು ವೃತ್ತಿಕೌಶಲ್ಯ ಅಂಶಗಳನ್ನು ಸ್ಥಳೀಯ ಮಟ್ಟದಲ್ಲಿ ಗುರುತಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆಗಳ ಚುನಾಯಿತ ಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ. ಅಕ್ಟೋಬರ್ 02ರಂದು ಗಾಂಧಿಜಯಂತಿಯನ್ನು ಆಚರಿಸುವುದರೊಂದಿಗೆ ಹದಿಹರೆಯದ ಮಕ್ಕಳ ಅಭಿವೃದ್ಧಿ ಕುರಿತು ಚಿಂತನೆ ಮಾಡುವುದು ಸೂಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 11 ರಿಂದ 19 ವರ್ಷದ ಒಳಗಿನ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಅಕ್ಟೋಬರ್ 02ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಮತ್ತು ನಗರಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಮತ್ತು ಇತರೇ ಭಾಗೀದಾರರು ಸಮಾಲೋಚನಾ ಸಭೆ ನಡೆಸಿ, ಸೂಚಿಸಲಾದ ವಿಷಯಗಳು ಮತ್ತು ತೆಗೆದುಕೊಳ್ಳಲಾಗುವ ಕ್ರಮಗಳ ಬಗ್ಗೆ ಮೂರು ದಿನಗಳ ಒಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ನಿಗದಿತ ನಮೂನೆಯಲ್ಲಿ ಅಥವಾ ಗೂಗಲ್ ಫಾರ್ಮನಲ್ಲಿ ವರದಿ ಸಲ್ಲಿಸಬೇಕು.
ಈ ಕ್ರಮಗಳ ಅನುಷ್ಠಾನದ ಮೇಲುಸ್ತುವಾರಿಯನ್ನು ಆಯಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆಗಳ ಮುಖ್ಯಸ್ಥರು, ಇಲಾಖಾ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ವಿಷಯದ ಕುರಿತು ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಅನುಷ್ಠಾನ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಜಂಟಿಯಾಗಿ ಪತ್ರಿಕಾ ಪ್ರಕಟಣೆ ಮೂಲಕ ಆದೇಶ ಹೊರಡಿಸಿದ್ದಾರೆ.