Fugitive man and priest who dug a 20-feet deep hole in the house for treasure and fed the policeman with jackfruit
ವರದಿ : ಬಂಗಾರಪ್ಪ ಸಿ ಹನೂರು .
ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ವಿ.ಎಸ್ ದೊಡ್ಡಿ ಗ್ರಾಮದ ಮನೆಯೊಂದರಲ್ಲಿ ನಿಧಿ ಆಸೆಗೋಸ್ಕರ ಗುಂಡಿ ತೆಗೆಯುತ್ತಿದ್ದ ಪ್ರಕರಣ ಭಾನುವಾರ ರಾತ್ರಿ ಪೊಲೀಸರಿಂದ ಬೆಳಕಿಗೆ ಬಂದಿದ್ದು, ಅಸಾಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ವಿವರ: ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎಂಬವರು ಕಳೆದ ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಮನೆಯನ್ನು ತೊರೆದಿದ್ದು, ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು ಈ ವೇಳೆ ಸಹೋದರಿಯ ಸಂಬಂಧಿಕ ಪರಶಿವ ಎಂಬವರು ಭಾಗ್ಯ ಅವರನ್ನು ಸ್ಥಳೀಯ ಜೋತಿಷ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ಮನೆಯ ಬಗ್ಗೆ ಶಾಸ್ತ್ರ ಕೇಳಿಸಿದ್ದರು. ಈ ವೇಳೆ ಹಣದ ಆಸೆಗೋಸ್ಕರ ಮನೆಯಲ್ಲಿ ನಿಧಿ ಇರುವುದಾಗಿ ಜೋತಿಷಿ ತಿಳಿಸಿದಾಗ ಇದನ್ನು ಅರಿಯದ ಭಾಗ್ಯ ಅವರು ನಿಧಿ ಶೋಧನೆಗಾಗಿ ಅನುಮತಿ ನೀಡಿದ್ದರು ಎನ್ನಲಾಗಿದೆ.
ಜೋತಿಷಿ ತನ್ನ ಜತೆಗಾರನೊಂದಿಗೆ ಕಳೆದ ವಾರದ ಹಿಂದೆ ವಿ.ಎಸ್ ದೊಡ್ಡಿಗೆ ಆಗಮಿಸಿ ಭಾಗ್ಯ ಅವರ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆಯನ್ನು ನೆರವೇರಿಸಿ ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯುವ ಕಾರ್ಯವನ್ನು ಆರಂಭಿಸಿದ್ದರು. 3 ಅಡಿ ಅಗಲ ಹಾಗೂ 20 ಅಡಿ ಆಳವನ್ನು ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ಬಗ್ಗೆ ಸ್ಥಳೀಯರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ತಿಳಿದ ಅಸಾಮಿಗಳು ಮನೆಯಿಂದ ಪರಾರಿಯಾಗಿದ್ದಾರೆ. ಜೋತಿಷಿ ಹಾಗೂ ಜತೆಗಿದ್ದವನ ಹೆಸರು ತಿಳಿದು ಬಂದಿಲ್ಲ. ಸ್ಥಳಕ್ಕಾಗಮಿಸಿದ ಒಡೆಯರಪಾಳ್ಯ ಉಪ ಠಾಣೆಯ ಪೊಲೀಸರು ರಾತ್ರಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮನೆಯಲ್ಲಿದ್ದ ಭಾಗ್ಯ ಅವರಿಗೆ ಇಂತಹ ಕಾರ್ಯ ನಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಇನ್ಸ್‍ಪೆಕ್ಟರ್ ಶಶಿಕುಮಾರ್ ಮಾತನಾಡಿ, ನಿಧಿ ಇದೆ ಎಂದು ತಿಳಿದು ಅವರ ಮನೆಯಲ್ಲೇ ಗುಂಡಿ ತೆಗೆಸಿರುವುದು ನಿಜಕ್ಕೂ ವಿಪರ್ಯಾಸ. ಈ ಸಂಬಂಧ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿದ್ದು, ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.