Get a law degree and provide justice to the aggrieved: Asif Ali
ಕೊಪ್ಪಳ: ಸಾರ್ವಜನಿಕ ಜೀವನದಲ್ಲಿ ಕಾನೂನು ತಿಳುವಳಿಕೆ ಅತ್ಯಂತ ಪ್ರಮುಖವಾಗಿದ್ದು ನ್ಯಾಯ, ನೀತಿ, ಧರ್ಮದಿಂದ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹಿರಿಯ ನ್ಯಾಯವಾದಿ ಆಸೀಫ್ ಅಲಿ ಹೇಳಿದರು.
ಪಟ್ಟಣದ ಗದಗ ರಸ್ತೆಯಲ್ಲಿರುವ ಗುಳಗಣ್ಣವರ್ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭವಾದ ಶಿವಪ್ರಿಯ ಕಾನೂನು ವಿದ್ಯಾಲಯ ಪ್ರಾರಂಭೋತ್ಸವ ಹಾಗೂ ಸರಸ್ವತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಕೀಲರ ಹತ್ತಿರ ಬರುವವರು ನೊಂದವರು ಹಾಗೂ ಅನ್ಯಾಯಕ್ಕೊಳಗಾದವರು ಅಂತವರ ಕಣ್ಣಿರು ಒರೆಸುವ ಕೆಲಸವು ಯುವ ವಕೀಲರಿಂದಾಗಬೇಕು.
ನೂತನವಾಗಿ ಪ್ರಾರಂಭವಾಗಿರುವ ಈ ಕಾಲೇಜು ಅನೇಕ ವಕೀಲರನ್ನು ಹುಟ್ಟು ಹಾಕುವ ಕೇಂದ್ರವಾಗಿ ಈ ಭಾಗದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.
ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎ. ವ್ಹಿ ಕಣವಿ ಮಾತನಾಡಿ ನಮ್ಮ ಭಾಗದಲ್ಲಿ ಪ್ರಾರಂಭವಾಗಿರುವ ಈ ಕಾನೂನು ವಿದ್ಯಾಲಯ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ. ಯಾಕೆಂದರೆ ನಮ್ಮಲ್ಲಿ ಬಡತನವಿದ್ದರು ಓದುವ ಛಲವಿರುವ ವಿದ್ಯಾರ್ಥಿಗಳು ಇರುವದನ್ನು ಗಮನಿಸಿದ್ದೇವೆ ಅಂತಹವರಿಗೆ ನಿಮ್ಮ ಸಂಸ್ಥೆಯಿಂದ ಶಿಕ್ಷಣ ನೀಡುವ ಕೆಲಸವಾಗಲಿ ಮುಂದಿನ ದಿನಗಳಲ್ಲಿ ಈ ವಿದ್ಯಾಲಯ ದೊಡ್ಡ ಹಂತದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಘವೇಂದ್ರ ಪಾನಗಂಟಿ ವಹಿಸಿದ್ದರು. ಉದ್ಘಾಟನೆಯನ್ನು ಹುಣಸಿಹಾಳನ ಪ.ಪೂ.ಡಾ.ರುದ್ರಯ್ಯ ಹಿರೇಮಠ ನೆರವೇರಿಸಿದರು. ಪ್ರಾಂಶುಪಾಲರಾದ ಡಾ.ಬಸವರಾಜ ಹನಸಿ ಅಧ್ಯಕ್ಷತೆ ವಹಿಸಿದ್ಧರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಎಮ್. ಎ ವಲಿಸಾಬ, ಪೀರಾಹುಸೇನ್, ಎಸ್. ಜಿ ಪಾಟೀಲ. ಅಶ್ವಿನ ಜಂಗದ, ರಜೀಯಾಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.