Breaking News

ಜನಸಂಪರ್ಕಸಭೆ:ಸಮಸ್ಯೆ ಪಟ್ಟಿ ಮಾಡಿದ ಗ್ರಾಮಸ್ಥರು;ಬೇಡಿಕೆಗಳಿಗೆ ಸ್ಪಂದಿಸುವೆ ಎಂದು ಅಭಯ ಹಸ್ತ ನೀಡಿದ ಸಚಿವರು

The villagers listed the problem; The minister gave his hand that he would respond to the demands

  • ಬಸರಿಹಾಳ, ಗೌರಿಪುರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚಾ
  • ಅಧಿಕಾರಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ

ಕೊಪ್ಪಳ ಡಿಸೆಂಬರ್ 20 (ಕ.ವಾ.): ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಡಿಸೆಂಬರ್ 20ರಂದು ಕನಕಗಿರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಮಹತ್ವದ ಜನ ಸಂಪರ್ಕ ಕಾರ್ಯಕ್ರಮದಡಿ ಬಸರಿಹಾಳ ಹಾಗೂ ಗೌರಿಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಸರಿಹಾಳ, ಬೈಲಕ್ಕುಂಪುರ,
ಚಿಕ್ಕವಡ್ರಕಲ್, ಗೌರಿಪುರ, ದೇವಲಾಪುರ, ಚಿಕ್ಕತಾಂಡಾ, ಹುಲಸನಹಟ್ಟಿ, ಅಡವಿಬಾವಿ, ಸೋಮಸಾಗರ ಗ್ರಾಮಗಳಲ್ಲಿ
ಬಿರುಸಿನ ಸಂಚಾರ ನಡೆಸಿದರು.
ಜಿಲ್ಲಾ ಪಂಚಾಯತ್ ಕೊಪ್ಪಳ, ತಾಲೂಕು ಪಂಚಾಯತ್ ಕೊಪ್ಪಳ ಹಾಗೂ ಬಸರಿಹಾಳ ಹಾಗೂ ಗೌರಿಪುರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಡಿ
ಸಚಿವರು ಆಯಾ ಕಡೆಗೆ ಭೇಟಿ ನೀಡಿದ ಕಡೆಗೆ ಗ್ರಾಮಸ್ಥರು ತಮ್ಮೂರಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಸಚಿವರಿಗೆ ಸಲ್ಲಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬೇರೆ ಬೇರೆ ಗ್ರಾಮಗಳಿಗೆ ಭೇಟಿ ನೀಡಿದ ವೇಳೆಯಲ್ಲಿ ಆಯಾ ಗ್ರಾಮಸ್ಥರ ಬೇಡಿಕೆಗಳನ್ನು ಸಾವಧಾನವಾಗಿ ಆಲಿಸಿದ ಸಚಿವರು, ಶಾಲಾ ಕಟ್ಟಡ ದುರಸ್ತಿ, ನಿರ್ಮಾಣ, ರಸ್ತೆ ಸುಧಾರಣೆ, ಸೇತುವೆ ನಿರ್ಮಾಣ, ಕೆರೆ ತುಂಬಿಸುವುದು ಸೇರಿದಂತೆ ನಾನಾ ಬೇಡಿಕೆಗಳು ಸಾಕಾರವಾಗಲು ಸ್ಪಂದಿಸುವೆ ಎಂದು ಆಯಾ ಗ್ರಾಮಸ್ಥರಿಗೆ ಅಭಯ ಹಸ್ತ ನೀಡಿದರು.
ಕೆಲವು ಗ್ರಾಮಸ್ಥರು ಡೊಳ್ಳು, ಹಲಗೆ ಭಾರಿಸುವ ಮೂಲಕ ಸಚಿವರಿಗೆ ಗೌರವ ಪೂರ್ವಕವಾಗಿ ವೇದಿಕೆಗೆ ಬರ ಮಾಡಿಕೊಂಡರು. ಗ್ರಾಮಸ್ಥರು ಒಗ್ಗೂಡಿ ಹೂಮಾಲೆ ಹಾಕಿ ಸಚಿವರಿಗೆ ಗೌರವಿಸಿದರು.
ಆಯಾ ಗ್ರಾಮಗಳಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡುವ ವೇಳೆ ಸಚಿವರು ಗ್ಯಾರಂಟಿ ಯೋಜನೆಗಳ
ಫಲಾನುಭವಿಗಳ ಅಭಿಪ್ರಾಯ ಆಲಿಸಿದರು. ಶಕ್ತಿ ಯೋಜನೆಯ ಬಸ್ ಗಳಲ್ಲಿ ಸಂಚಾರ ಹಾಗೂ ಗೃಹಲಕ್ಷ್ಮಿ ಯೋಜನೆಯ
2000 ರೂ.ಗಳನ್ನು ಪಡೆದುಕೊಂಡ ಬಗ್ಗೆ ಕೇಳಿ ಗ್ಯಾರಂಟಿ ಯೋಜನೆಗಳ
ಅನುಷ್ಠಾನದ ಬಗ್ಗೆ ಸಚಿವರು ಖಾತ್ರಿಪಡಿಸಿಕೊಂಡರು.
ಕನಕಗಿರಿ ಕ್ಷೇತ್ರದಲ್ಲಿನ ಕೆಲವು ಗ್ರಾಮಗಳ ಕೆರೆಗಳನ್ನು ತುಂಬಿಸಬೇಕು ಎನ್ನುವ ಕಲ್ಪನೆ ನೀಡಿದ್ದೇ ತಾವು ಎಂದು ತಿಳಿಸಿದ ಸಚಿವರು, ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ತುಂಗಭದ್ರಾ ಜಲಾಶಯವು ತುಂಬಿಲ್ಲ. ಇದರಿಂದಾಗಿ ಕೆರೆಗಳಿಗೆ ನೀರು ತುಂಬಿಸಲು ವಿಳಂಬವಾಗುತ್ತಿದೆ. ಈ ಬಗ್ಗೆ ಸರಿಯಾದ ಯೋಜನೆ ರೂಪಿಸಿ ಕೆರೆ ತುಂಬಿಸಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಬಾಕಿ ಕೆಲಸ ಸರಿಪಡಿಸಲು ಗಡುವು: ಕೆಲವರಿಗೆ 2000 ರೂ. ಪಡೆಯಲು ಆಗಿರುವ ತಾಂತ್ರಿಕ ತೊಂದರೆಯನ್ನು ಸರಿಪಡಿಸಲು ಸಿಡಿಪಿಓ ಮತ್ತು ಅಂಗನವಾಡಿ ನೌಕರರಿಗೆ ಸಚಿವರು 15 ದಿನಗಳ ಗಡುವು ವಿದಿಸಿದರು. ಎಲ್ಲ ಗ್ರಾಮಗಳಲ್ಲಿನ ಹಳೆಯ ವಿದ್ಯುತ್ ತಂತಿಯನ್ನು ಬದಲಿಸಲು ಜೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಶಾಲಾ ಶಿಕ್ಷಕರ ಕೊರತೆ: ಬಸರಿಹಾಳ ಶಾಲೆಯಲ್ಲಿ ಕೇವಲ ಒಬ್ಬ ಸರ್ಕಾರಿ ಶಾಲಾ ಶಿಕ್ಷಕರಿದ್ದು, ಉಳಿದ 9 ಜನರು ಅತಿಥಿ ಶಿಕ್ಷಕರಿದ್ದಾರೆಂದು ಅಲ್ಲಿನ ಗ್ರಾಮಸ್ಥರು ಸಚಿವರಿಗೆ ತಿಳಿಸಿದರು. ಗ್ರಾಮ ಸಂಪರ್ಕ ಸಭೆ ನಡೆಸಿದ ಎಲ್ಲ ಕಡೆಗೆ ಶಿಕ್ಷಕರ ಕೊರತೆ ಇದೆ ಎನ್ನುವ ಸಮಸ್ಯೆ ಕೇಳಿ ಬಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,
ರಾಜ್ಯದ ವಿವಿಧೆಡೆ ಇರುವಂತೆ ಶಿಕ್ಷಕರ ಕೊರತೆ ಎಲ್ಲಾ ಕಡೆಗಿದ್ದು, ಶಿಕ್ಷಕರ ನೇಮಕಕ್ಕೆ ತಾವು ಕೂಡ ಒತ್ತಾಯಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಬಸರಿಹಾಳ: ಗ್ರಾಮದಲ್ಲಿನ ಶಾಲೆಯನ್ನು 8 ಹಾಗೂ 9ನೇ ಕ್ಲಾಸಿಗೆ ಮೇಲ್ದರ್ಗೇರಿಸಬೇಕು.
ಎಸ್ಟಿ ಸಮುದಾಯವರು ಹೆಚ್ಚಿದ್ದು ಎಸ್ಟಿ ವಸತಿ ಶಾಲೆ ನಿರ್ಮಾಣ ಮಾಡಬೇಕು. ತುರ್ತಾಗಿ ಬಸರಿಹಾಳ ಕೆರೆಗೆ ನೀರು ತುಂಬಿಸಬೇಕು ಎಂದು ಬಸರಿ ಹಾಳ ಗ್ರಾಮಸ್ಥರು ಬೇಡಿಕೆ ಇಟ್ಟರು. ಆದ್ಯತೆಯ ಮೇರೆಗೆ ಕೆಲಸ ಮಾಡಿಕೊಡುವುದಾಗಿ ಸಚಿವರು ತಿಳಿಸಿದರು.
ಗೌರಿಪುರ: ಗೌರಿಪುರ ಗ್ರಾಮಸ್ಥರ ಮನವಿ ಆಲಿಸಿದ ಸಚಿವರು, ಗೌರಿಪುರ ಗ್ರಾಮದ ಶಾಲಾ ಕೊಠಡಿಗಳ ದುರಸ್ತಿಗೆ ಮತ್ತು ಗಣಕಯಂತ್ರಗಳಿಗೆ ಅನುದಾನ ನೀಡಲಾಗಿದೆ. ಗೌರಿಪುರ-ಕನಕಗಿರಿ ರಸ್ತೆ ದುರಸ್ತಿಗೆ, ಗೌರಿಪುರ-ದೇವಲಾಪುರ ರಸ್ತೆ ಸೇತುವೆಗೆ ಅನುದಾನ ನೀಡಲಾಗುವುದು. 50 ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಗೌರಿಪುರಕ್ಕೆ ಹೆಚ್ಚುವರಿ ಒಂದು ಬಸ್ ಬಿಡಲಾಗುವುದು ಎಂದರು. ಗ್ರಾಮಕ್ಕೆ ವಸತಿ ಶಾಲೆ ಮಂಜೂರಾತಿಯ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ದೇವಲಾಪುರ: ಕರಡಿ ಮತ್ತು ಚಿರತೆ ದಾಳಿ ತಡೆಯುವುದು ಸೇರಿದಂತೆ ನಾನಾ ಬೇಡಿಕೆಗಳ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,
ದೇವಲಾಪುರ ಸಂಪೂರ್ಣ ಸಿಸಿರಸ್ತೆ ಹಾಗೂ ಗಟಾರು ನಿರ್ಮಾಣಕ್ಕೆ, ದೇವಲಾಪುರ ಗ್ರಾಮದ ರಸ್ತೆ ಸೇತುವೆ ಪೂರ್ಣಗೊಳಿಸಿ ಕೊಡುವುದಾಗಿ ಸಚಿವರು ತಿಳಿಸಿದರು‌. ಆಂಜನೇಯ ಗುಡಿ ನಿರ್ಮಾಣ ಮತ್ತು ಅಗಸಿ ದ್ವಾರ ನಿರ್ಮಾಣಕ್ಕೆ ಪ್ರಸ್ತಾವಣೆ ಸಿದ್ದಪಡಿಸಿ ಅನುದಾನ ನೀಡಿ ನಿರ್ಮಿಸಿಕೊಡುವುದಾಗಿ ಸಚಿವರು ತಿಳಿಸಿದರು. ಗ್ರಾಮದ ಶಾಲಾ ಕೊಠಡಿಗಳನ್ನು ಕೂಡಲೇ ದುರಸ್ತಿ ಮಾಡಲು, ಎರಡು ಹೆಚ್ಚುವರಿ ತರಗತಿ ಕೋಣೆ ನಿರ್ಮಾಣಕ್ಕೆ ಪ್ರಸ್ತಾವಣೆ ಸಿದ್ದಪಡಿಸಿ ಸಲ್ಲಿಸಲು ಬಿಇಓ ಅವರಿಗೆ ಸಚಿವರು ಸೂಚಿಸಿದರು.
ಬೈಲಕ್ಕಂಪೂರ: ಗ್ರಾಮದಲ್ಲಿನ
ಹಳೆಯ ವಿದ್ಯುತ್ ಕಂಬಗಳನ್ನು ಮತ್ತು ರಸ್ತೆಗಳನ್ನು ಸರಿಪಡಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಮನವಿಯನ್ನು ಬೈಲಕ್ಕಂಪುರ ಗ್ರಾಮಸ್ಥರು ಸಚಿವರಿಗೆ ಸಲ್ಲಿಸಿದರು.
ಚಿಕ್ಕವಡ್ರಕಲ್: ಗ್ರಾಮದಲ್ಲಿರುವ ಸೋಲಾರ ಲೈಟಗಳನ್ನು ಸರಿಪಡಿಸಬೇಕು.
ಕೆರೆ ರಸ್ತೆ ಸರಿಪಡಿಸಬೇಕು. ದೇವಸ್ಥಾನ ಮೇಲ್ದರ್ಜೇಗೇರಿಸಲು ಅನುದಾನ ನೀಡಬೇಕು ಎಂದು ಚಿಕ್ಕವಡ್ರಕಲ್ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು.
ಇಡೀ ದಿನ ಸಂಚಾರ: ಬೆಳಗ್ಗೆ ಬಸರಿಹಾಳ ಗ್ರಾಮದಿಂದ ಗ್ರಾಮ ಸಂಪರ್ಕ ಸಭೆಗಳನ್ನು ಆರಂಭಿಸಿದ ಸಚಿವರು, ಮಧ್ಯಾಹ್ನವರೆಗೆ ಕೆಲವು ಗ್ರಾಮಗಳಲ್ಲಿ ಊಟದ ನಂತರ
ಚಿಕ್ಕತಾಂಡಾ, ಹುಲಸನಹಟ್ಟಿ, ಅಡವಿಬಾವಿ ಮತ್ತು ಸೋಮಸಾಗರ ಗ್ರಾಮಗಳಲ್ಲಿ ಸಹ ಇಳಿಹೊತ್ತಿನವರೆಗೆ
ಜನಸಂಪರ್ಕ ಸಭೆ ನಡೆಸಿ ಆಯಾ ಗ್ರಾಮಸ್ಥರ
ಅಹವಾಲು ಆಲಿಸಿದರು.
ಸಚಿವರೊಂದಿಗೆ ತಹಸೀಲ್ದಾರರಾದ ವಿಶ್ವನಾಥ ಮುರುಡಿ, ತಾಪಂ ಇಓ ಚಂದ್ರಶೇಖರ ಕಂದಕೂರ, ಕನಕಗಿರಿ ಬಿಇಓ ವೆಂಕಟೇಶ, ಕನಕಗಿರಿ ಸಿಡಿಪಿಓ ವಿರುಪಾಕ್ಷಿ, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ, ಎಡಿಎಲ್‌ಅರ್ ರಾಜಶೇಖರ, ವಾರ್ತಾಧಿಕಾರಿ ಗವಿಸಿದ್ದಪ್ಪ ಸೇರಿದಂತೆ ಇತರರು ಇದ್ದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.