Breaking News

ಕನ್ನಡ ರಾಜ್ಯೋತ್ಸವ ಹಿನ್ನೆಲೆ ….

Background of Kannada Rajyotsava…

ಲೇಖಕರು – ಸಂಗಮೇಶ ಎನ್ ಜವಾದಿ.


ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳು ತವರೂರು, ಪವಿತ್ರ ಕಾವೇರಿ, ತುಂಗಭದ್ರೆ , ಕೃಷ್ಣ – ಭೀಮಾ ನದಿಗಳ ಸಂಗಮ, ಐತಿಹಾಸಿಕ ಬಸವಾದಿ ಶರಣರ ಪುಣ್ಯ ಕ್ಷೇತ್ರಗಳ ಪವಿತ್ರ ಭೂಮಿ, ಸಾಧು-ಸಂತರು, ದಾಸರು ಜನಿಸಿದ ಬೀಡು.
ಸಾಹಿತಿ – ಕವಿಗಳಿಂದ ಕೂಡಿದ ಕರ್ನಾಟಕ ರಾಜ್ಯ ಸೌಹಾರ್ದತೆಯ ನೆಲೆಬೀಡು.
ಕನ್ನಡ ನಾಡು ಶ್ರೀಗಂಧದ ಬೀಡು. ಕರುನಾಡು, ಕಲ್ಯಾಣ ನಾಡು, ಕನ್ನಡಾಂಭೆಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವ ಕರ್ನಾಟಕ ರಾಜ್ಯವು ಸಧ್ಯ ೬೮ ನೇಯ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಕಲ ರೀತಿಯಲ್ಲಿ ಸಿಂಗಾರಗೊಂಡಿದೆ.

ಅಂದಹಾಗೆ ನಾವೆಲ್ಲರೂ ನವೆಂಬರ್‌ ಒಂದರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕಿದ್ದರೆ, ಇದರ ಹಿಂದೆ ಕರ್ನಾಟಕವನ್ನು ಒಂದು ರಾಜ್ಯವಾಗಿ ರೂಪುಗೊಳ್ಳಲು, ನಡೆದ ತ್ಯಾಗ, ಬಲಿದಾನದ ಕುರಿತು ಈ ಸಂದರ್ಭದಲ್ಲಿ ಮೆಲುಕು ಹಾಕುವುದು ಅಗತ್ಯವಿದೆ.

ಕರ್ನಾಟಕ ರಾಜ್ಯವನ್ನು ಒಂದುಗೊಡಿಸಲು
ಹಲವು ಹೋರಾಟಗಳು ನಡೆದಿವೆ. ಈ ಹೋರಾಟಗಳಲ್ಲಿ ಅನೇಕ ಮಹನೀಯರು ಭಾಗವಹಿಸಿ, ಅವರದೇ ಆದ ಸೇವೆ ಸಲ್ಲಿಸಿದ್ದಾರೆ. ಇವರ ತ್ಯಾಗ ಬಲಿದಾನ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಇವರ ಸೇವೆ ಅನನ್ಯ, ಅಜರಾಮರ ಎಂದರು ತಪ್ಪಾಗಲಾರದು. ಇವರಲ್ಲಿ ಹೆಚ್ಚಿನವರು ಸಾಹಿತಿಗಳೂ, ರಾಜಕಾರಣಿಗಳೂ, ಸಮಾಜ ಸುಧಾರಕರೂ ಇದ್ದಾರೆ. ಇವರು ಮಾಡಿದ ಹೋರಾಟದ ಪ್ರತಿಫಲವಾಗಿ ಈ
ರಾಜ್ಯ ರೂಪುಗೊಳ್ಳಲು ಸಾಧ್ಯವಾಗಿದೆ. ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರಲು ನಡೆಸಿದ ಹೋರಾಟವೇ ಕರ್ನಾಟಕ ಏಕೀಕರಣ ಹೋರಾಟ ಅಂದರೆ ಸಹ ತಪ್ಪಾಗಲಿಕ್ಕಿಲ್ಲ.
ಮುಂಬಯಿ, ಹೈದರಾಬಾದ್‌, ಮದ್ರಾಸ್ಗಳಾಗಿ ಹರಿದು ಹಂಚಿಹೋಗಿದ್ದ ಕನ್ನಡ ನೆಲವನ್ನು ಒಂದಾಗಿಸಿದ, ಪರಿಣಾಮವಾಗಿ ೧೯೫೬ರ ನವೆಂಬರ್ ೧ ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ಈ
ಏಕೀಕರಣಕ್ಕಾಗಿ ಹೋರಾಡಿದವರಲ್ಲಿ ಹುಯಿಲಗೋಳ ನಾರಾಯಣರಾವ್, ಆಚಾರ್ಯ ಬಿ.ಎಂ. ಶ್ರೀ ಕಂಠಯ್ಯ, ಕುವೆಂಪು, ಅ.ನ. ಕೃಷ್ಣರಾಯರು, ಆಲೂರು ವೆಂಕಟರಾಯರು, ಡೆಪ್ಯುಟಿ ಚೆನ್ನಬಸಪ್ಪ, ಮಂಗಳವೇಡೆ ಶ್ರೀನಿವಾಸರಾಯರು, ಹುಲ್ಲೂರು ಶ್ರೀನಿವಾಸ ಜೋಯಿಸ, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳ್ ಮಂಜಪ್ಪ, ಪಾಟೀಲ್ ಪುಟ್ಟಪ್ಪ, ಎಚ್.ಎಸ್. ದೊರೆಸ್ವಾಮಿ, ಉತ್ತಂಗಿ ಚೆನ್ನಪ್ಪ, ಕೋ. ಚೆನ್ನಬಸಪ್ಪ ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರ ಮತ್ತು
ಸ್ಮರಣೀಯವಾಗಿದೆ.

ತರುವಾಯ ೧೯೫೬ ರ ನವೆಂಬರ್ ೧ ರಂದು ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ರಾಜ್ಯವನ್ನು ರೂಪಿಸಿ, ವಿಲೀನಗೊಳಿಸಲಾಯಿತು. ಅಂದಿನಿಂದ ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ, ಕನ್ನಡ ದಿನ ಅಥವಾ ಕರ್ನಾಟಕ ರಚನಾ ದಿನವನ್ನಾಗಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ತದನಂತರ ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್‌ ಅರಸು ರವರು ಮೈಸೂರು ರಾಜ್ಯ ಎನ್ನುವುದನ್ನು ಬದಲಾಯಿಸಿ ಕರ್ನಾಟಕ ರಾಜ್ಯ ವೆಂದು ನವೆಂಬರ್ ೧, ೧೯೭೩ ರಂದು ಮರು ನಾಮಕರಣ ಮಾಡಿದರು.ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು.

ರಾಜ್ಯದ ಇತಿಹಾಸ :
ಇನ್ನು ಕರ್ನಾಟಕ ರಾಜ್ಯದ ಇತಿಹಾಸವನ್ನು ಒಮ್ಮೆ ಗಮನಿಸಿದಾಗ
ಕರ್ನಾಟಕ ಪದದ ಮೂಲ ಸಂಸ್ಕೃತ. ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ ಎಂಬ ಭಾವನೆ ಇದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ. ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಇನ್ನೂ ಹಲವು ಅಭಿಪ್ರಾಯಗಳು ಇವೆ. ಕರು + ನಾಡು = ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ. ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸುತ್ತದೆ. ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ ಆರನೇ ಅತಿ ದೊಡ್ಡ ಹಾಗೂ ಜನಸಂಖ್ಯೆ ಆಧಾರದಲ್ಲಿ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ.ಹೀಗೆ ಕರ್ನಾಟಕ ರಾಜ್ಯ ಉದಯವಾಗಿ 68 ವಸಂತ ಪೂರೈಸುತ್ತಿದೆ. ಈ ಹೊತ್ತಿನಲ್ಲಿ ನಾವೆಲ್ಲರೂ ಮತ್ತೆ ರ ರಾಜ್ಯೋತ್ಸವ ಆಚರಣೆಗೆ ನಾವೆಲ್ಲರೂ ಸಿದ್ಧರಾಗಿದ್ದೇವೆ. ಹೀಗಾಗಿ
ನವೆಂಬರ್ ೧ ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಕಲ ರೀತಿಯಲ್ಲಿ ಸಿದ್ದರಾಗಿದ್ದಾರೆ. ಅಂದಹಾಗೆ
ಪ್ರತಿ ಕನ್ನಡಿಗನ, ಕರುನಾಡಿನ ಹೆಮ್ಮೆಯ ದಿನವಿದು, ವಿಶ್ವದಾದ್ಯಂತ ಕನ್ನಡಿಗರು ಇದನ್ನು ಅತ್ಯಂತ ಸಂಭ್ರಮದಿಂದ ಅಷ್ಟೇ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದಾರೆ.

ಕರುನಾಡಿನ ಹಿನ್ನೆಲೆ :
ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು.೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು “ಕರ್ನಾಟಕ” ಎಂದು ಬದಲಾಯಿತು. ಅಂದಿನಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.

ರಾಜ್ಯೋತ್ಸವ ಆಚರಣೆ : ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯಂತ ಅತ್ಯಂತ ಉತ್ಸಾಹದಿಂದ ಮತ್ತು ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ (“ಜಯ ಭಾರತ ಜನನಿಯ ತನುಜಾತೆ”)ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.ಭಾರತ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಸೇರಿದಂತೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ , ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಅತ್ಯಂತ ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸುತ್ತಾರೆ.

ಅಭಿಮಾನದ ಮಾತು – ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಇಡಿ ಕರ್ನಾಟಕದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಕರ್ನಾಟಕದ ಜನತೆಗೆ ಇದು ಒಂದು ಹೆಮ್ಮೆಯ ದಿನವಾಗಿದೆ. ಈ ಬಾರಿ ರಾಜ್ಯ ಸರ್ಕಾರ ಕೋಟಿ ಕಂಠ ಗಾಯನ ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ೬೮ ನೇ ಕನ್ನಡ ರಾಜ್ಯೋತ್ಸವವನ್ನು ಈ ವರ್ಷ ಹೊಸ ಹುರುಪಿನಿಂದ ಆಚರಣೆ ಮಾಡಲಾಗುತ್ತಿದೆ. ಅಂದಹಾಗೆ ನಾವು ಕೇವಲ ನವೆಂಬರ್ ಒಂದರಂದು ಕನ್ನಡಿಗರಾಗದೇ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ , ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂದು ಇದೇ ವೇಳೆ ಪ್ರಮಾಣ ಮಾಡಬೇಕಾಗಿರುವುದು ಅಗತ್ಯ ಇದೆ.


ಸಂಗಮೇಶ ಎನ್ ಜವಾದಿ.
ಬರಹಗಾರರು, ಪರಿಸರ ಸಂರಕ್ಷಕರು.
ಬೀದರ ಜಿಲ್ಲೆ.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.