A Mahatma within a Mahatma
(ಅಕ್ಟೋಬರ್ ೨ ಮಹಾತ್ಮ ಗಾಂಧೀಜಿಯವರ ಜನ್ಮದಿನದ ನಿಮಿತ್ತ ವಿಶೇಷ ಲೇಖನ)
–ಸಚ್ಚಿದಾನಂದ ಚಟ್ನಳ್ಳಿ. ಬಿ.ಇ. ಮೆಕ್ಯಾನಿಕಲ್
ಹಿರಿಯ ಅಭಿಯಂತರರು ನೈಋತ್ಯ ರೈಲ್ವೆ ಬೆಂಗಳೂರು.
1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರು “It has not been possible for me to practice all precepts of Basaveshwara which he taught 800 years ago and which he also practiced. I have adopted few of them. I am yet a seeker in this aspect and not an accomplished one. Eradication of untouchability and dignity of labour were among his core precepts. One does not find even shades of casteism in him. Had he lived during our times, he would have been a saint worthy of worship. If you, his followers, practice his percepts you could up lift not just Bharat but whole world”. “ಗುರುಬಸವಣ್ಣನವರು 800 ವರ್ಷಗಳ ಹಿಂದೆಯೇ ಆಚರಿಸಿ ಬೋಧಿಸಿದ ಎಲ್ಲಾ ತತ್ವಗಳನ್ನು ಅನುಷ್ಠಾನಿಸಲು ನನ್ನಿಂದ ಸಾಧ್ಯವಾಗಿಲ್ಲ. ಅಸ್ಪ್ರಷ್ಯತೆಯ ನಿವಾರಣೆ ಹಾಗು ಕಾರ್ಮಿಕರ ಘನತೆಯನ್ನು ಎತ್ತಿಹಿಡಿಸುವುದು ಅವರ ಪ್ರಮುಖ ಸಿದ್ಧಾಂತಗಳಾಗಿದ್ದವು. ನಾನು ಅವರ ತತ್ವಗಳಲ್ಲಿ ಕೆಲವನ್ನು ಮಾತ್ರ ಆಚರಿಸುತ್ತಿದ್ದೇನೆ. ನಾನು ಸಾಧಕ ಅವರು ಸಿದ್ಧಪುರುಷರಾಗಿದ್ದರು. ಜಾತೀಯತೆಯ ನೆರಳೂ ಕೂಡ ಅವರಲಿಲ್ಲ. ಅವರು ನಮ್ಮ ಕಾಲದಲ್ಲಿ ಇದ್ದಿದ್ದರೆ, ಜಗತ್ತಿಗೇ ಪೂಜ್ಯ ವ್ಯಕ್ತಿಯಾಗಿರುತ್ತಿದ್ದರು. ಅವರ ಅನುಯಾಯಿಗಳಾದ ನೀವು ಅವರ ತತ್ವಗಳನ್ನು ಪಾಲಿಸಿದರೆ ನೀವು ಭಾರತವನ್ನಷ್ಟೇ ಅಲ್ಲ ಇಡೀ ವಿಶ್ವವನ್ನೇ ಉದ್ಧರಿಸಬಲ್ಲಿರಿ” ಎಂದು ಸಂದೇಶ ಕೊಟ್ಟಿದ್ದರು.
ಅವರ ಈ ಸಂದೇಶಕ್ಕೆ ಕಾರಣವೇನೆಂದು ಯೋಚಿಸಿದಾಗ, ಗಾಂದೀಜಿಯವರಿಗೆ ಗುರು ಬಸವಣ್ಣನವರ ಬಗ್ಗೆ ಪರಿಚಯವಾಗುವುದಕ್ಕೂ ಮುನ್ನವೇ ಅವರು ಗುರು ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಂಡಿಸಿಕೊಂಡಿದ್ದರು. 1924 ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹರ್ಡೇಕರ ಮಂಜಪ್ಪನವರ ಮೂಲಕ ಗುರು ಬಸವಣ್ಣನವರ ಬಗ್ಗೆ ತಿಳಿದುಕೊಂಡ ಗಾಂಧೀಜಿಯವರಿಗೆ ಆಶ್ಚರ್ಯ ಮತ್ತು ಆನಂದವುಂಟಾಗುತ್ತದೆ.
1414-1481ರ ಕಾಲದಲ್ಲಿ ಗುಜರಾತಿನಲ್ಲಿ ವಾಸವಾಗಿದ್ದ ವೈಷ್ಣವ ಪರಂಪರೆಯ ಸಂತ ಕವಿ ನರಸಿಂಹ ಮೆಹ್ತಾ ಎನ್ನುವವರು ಬರೆದ ಗುಜರಾತಿ ಭಾಷೆಯಲ್ಲಿರುವ ಒಂದು ಭಜನಾ ಗೀತೆಯ ಸಂದೇಶವನ್ನು ಗಾಂಧೀಜಿಯವರು ತುಂಬಾಮೆಚ್ಚಿಕೊಂಡಿದ್ದರು ಅದನ್ನು ತಮ್ಮ ಜೀವನದಲ್ಲಿ ಆಚರಿಸಿದ್ದರು ಮತ್ತು ತಮ್ಮ ದಿನ ನಿತ್ಯದ ಪ್ರಾರ್ಥನೆಯಲ್ಲಿ ಅಳವಡಿಸಿಕೊಂಡಿದ್ದರು ಆ ಗೀತೆ ಹೀಗಿದೆ:
ವೈಷ್ಣವ ಜನ ತೋ ತೇನೇ ಕಹಿಯೆ ಜೇ
ಪೀಡ್ ಪರಾಯೀ ಜಾಣೆರೇ
ಪರ ದುಃಖೇ ಉಪಕಾರ ಕರೇ ತೊ ಯೇ
ಮನ್ ಅಭಿಮಾನ ನ ಆಣೇ ರೇ||
ಸಕಳ ಲೋಕ್ ಮಾ ಸಹುನೇ ವಂದೇ
ನಿಂದಾ ನ ಕರೆ ಕೇಣೀ ರೇ
ವಾಚ್ ಕಾಚ್ ಮನ್ ನಿಶ್ಚಲ್ ರಾಖೇ
ಧನ ಧನ ಜನನೀ ತೇಣಿ ರೇ
ಸಮದೃಷ್ಣಿನೇ ತೃಷ್ಣಾ ತ್ಯಾಗೀ
ಪರಸ್ತ್ರೀ ಜೇನೆ ಮಾತಾ ರೇ
ಜಿಹ್ವ ಥಕೀ ಅಸತ್ಯ ನ ಬೋಲೇ
ಪರಧನ್ ನವ್ ಝಾಲೇ ಹಾತ್ ರೇ
ಮೋಹ ಮಾಯಾ ವ್ಯಾಪೇ ನಹಿ ಜೇನೇ
ದೃಢ್ ವೈರಾಗ್ಯ ಜೇನಾ ಮನ್ ಮಾ ರೇ
ರಾಮ ನಾಮ ಶೂನ್ ತಾಳಿ ರೇ ಲಾಗಿ
ಸಕಳ ತಿರಥ್ ತೇನಾ ತನ್ ಮಾ ರೇ
ವಣ್ ಲೋಭಿ ನೇ ಕಪಟ್ ರಹಿತ್ ಛೆ
ಕಾಮ ಕ್ರೋಧ್ ನಿವಾರ್ಯಾ ರೇ
ಭನೆ ನರಸಿಯ್ಯೊ ತೇನು ದರ್ಶನ್ ಕರತಾ
ಕುಳ್ ಏಕೋತೇರ್ ತಾರ್ಯ ರೇ
ವೈಷ್ಣವ ಜನ ತೋ ತೇನೇ ಕಹಿಯೆ ಜೇ ಪೀಡ್ ಪರಾಯೀ ಜಾಣೆರೇ, ಪರ ದುಃಖೇ ಉಪಕಾರ ಕರೇ ತೊ ಯೇ, ಮನ್ ಅಭಿಮಾನ ನ ಆಣೇ ರೇ:
ಎಂದರೆ ಬೇರೆಯವರ ಕಷ್ಟಗಳನ್ನು ಅರಿತುಕೊಂಡು ಅವರಿಗೆ ಸಹಾಯ ಹಾಗು ಸಾಂತ್ವನ ಯಾರು ನೀಡುತ್ತಾರೋ ಅವರೇ ನಿಜವಾದ ವೈಷ್ಣವರು ಅಥವಾ ವಿಷ್ಣು ಭಕ್ತರು. ಸಂಕಟ, ನೋವು, ದುಃಖದಲ್ಲಿರುವರಿಗೆ ಸಹಾಯ ಮಾಡಿದಾಗ ಮನಸ್ಸಿನಲ್ಲಿ ಮಾಡಿದೆನೆನ್ನುವ ಅಭಿಮಾನ ಅಂಹಂಕಾರ ಮೂಡಬಾರದು.
ಗುರು ಬಸವಣ್ಣನವರು ಮೇಲಿನ ಭಜನಾ ಗೀತೆಯ ವಿಚಾರಗಳನ್ನು ಹನ್ನೆರಡನೇ ಶತಮಾನದಲ್ಲಿಯೇ ಆಚರಿಸಿ ಬೋಧಿಸಿದ್ದಾರೆ. ಅದಕ್ಕಾಗಿಯೇ ಗುರು ಬಸವಣ್ಣನವರ ಬಗ್ಗೆ ಗಾಂಧೀಜಿಯವರು ಅಷ್ಟೊಂದು ಅಭಿಮಾನದಿಂದ ಹೇಳಿದ್ದಾರೆ. ಗುರು ಬಸವಣ್ಣನವರ ವಚನಗಳಲ್ಲಿ ಮೇಲಿನ ಪದ್ಯದ ಒಂದೊಂದೇ ಚರಣದ ತತ್ವಗಳನ್ನು ಮನನ ಮಾಡಿಕೊಳ್ಳೋಣ.
“ಕಾಗೆ ಒಂದಗುಳ ಕಂಡಡೆ ಕೂಗಿ ಕರೆಯದೇ ತನ್ನ ಬಳಗವನು?, ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೇ ತನ್ನ ಕುಲವನ್ನೆಲ್ಲವ” ಎನ್ನುವ ವಚನದಲ್ಲಿ ಗುರು ಬಸವಣ್ಣನವರು ಹಂಚಿಕೊಂಡು ತಿನ್ನುವ ಸಂದೇಶವನ್ನು ಕೊಟ್ಟಿದ್ದಾರೆ. ಉಳ್ಳವರು ಇಲ್ಲದವರಿಗೆ ಕೊಡುವುದನ್ನು ದಾನ ಎಂದು ಕರೆಯದೇ ಅದನ್ನು ದಾಸೋಹ ಎಂದು ಕರೆದರು. ಹೀಗೆ ದಾಸೋಹ ಮಾಡಿದಾಗ ಮನದಲ್ಲಿ ಮಾಡಿದೆನೆಂಬ ಅಹಂಕಾರ ಬರಬಾರದೆಂದು ಈ ವಚನದಲ್ಲಿ ಹೇಳಿದ್ದಾರೆ.
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ
ಬೇಡಿತ್ತನೀವ ನಮ್ಮ ಕೂಡಲಸಂಗಯ್ಯ
ಸಕಳ ಲೋಕ್ ಮಾ ಸಹುನೇ ವಂದೇ, ನಿಂದಾ ನ ಕರೆ ಕೇಣೀ ರೇ,ವಾಚ್ ಕಾಚ್ ಮನ್ ನಿಶ್ಚಲ್ ರಾಖೇ, ಧನ ಧನ ಜನನೀ ತೇಣಿ ರೇ:
ಎಂದರೆ ಜಗತ್ತಿನ ಎಲ್ಲರನ್ನೂ ಗೌರವಿಸಬೇಕು ಮತ್ತು ಯಾರನ್ನೂ ನಿಂದಿಸಬಾರದು, ಕಾಯ ವಾಚ ಮನಸ್ಸನ್ನು ನಿಶ್ಚಲವಾಗಿಟ್ಟುಕೊಂಡಿರಬೇಕು ಇಂತಹವರ ಮಾತೆ ಧನ್ಯಳು.
ಜಗತ್ತಿನ ಎಲ್ಲರನ್ನೂ ಗೌರವಿಸುವುದರ ಜೊತೆಗೆ ಅವರಲ್ಲಿರುವ ಪರಮಾತ್ಮನ ಚೈತನ್ಯಕ್ಕೆ ಶರಣು ಸಲ್ಲಿಸಬೇಕು ಎಂದು ಗುರುಬಸವಣ್ಣನವರು ಆಚರಿಸಿ ಬೋಧಿಸಿದ್ದಾರೆ.
ಕಂಡ ಭಕ್ತರಿಗೆ ಕೈ ಮುಗಿವಾತನೆ ಭಕ್ತ, ಬಾಗಿದ ತಲೆ ಮುಗಿದ ಕೈಯಾಗಿರಿಸು, ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಲಿಂಗದೇವನ ಶರಣರೇ ಕುಲಜರು, ಇದಿರ ಹಳಿಯಲು ಬೇಡ, ನುಡಿಯೊಳಗಾಗಿ ನಡೆಯದಿದ್ದರೆ ಲಿಂಗದೇವನೆಂತೊಲಿವನಯ್ಯಾ , ಎನ್ನುವ ವಚನ ನುಡಿಗಳಲ್ಲಿ ವ್ಯಕ್ತಿ ಇತರನ್ನು ಯಾವ ರೀತಿ ಗೌರವಿಸಬೇಕು ಎನ್ನುವುದನ್ನು ಹೇಳುತ್ತಿದ್ದಾರೆ.
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ ನಿಮ್ಮ ಧರ್ಮ
ಆನು ಭಕ್ತನೆನ್ನಲ್ಲಿ ಲೇಸುಂಟೆಂದು ಪರಿಣಾಮಿಸಿದಡೆ
ನಿಮಗಾನು ದ್ರೋಹಿಯಯ್ಯಾ ಲಿಂಗದೇವಾ
ನಾನೇ ಬಹುದೊಡ್ಡ ಭಕ್ತೆ ನನ್ನಲ್ಲೇ ಎಲ್ಲಾ ಒಳ್ಳೆಯತನಗಳು ಇವೆ ಎನ್ನುವ ಆತ್ಮಸ್ತುತಿ ಭಾವ ಮನದಲ್ಲಿ ಹುಟ್ಟಿದರೆ ಅದು ಲಿಂಗದೇವನಿಗೆ ಮಾಡುವ ದ್ರೋಹ ಎಂದು ಹೇಳುತಾರೆ.
ಸಮದೃಷ್ಣಿನೇ ತೃಷ್ಣಾ ತ್ಯಾಗೀ, ಪರಸ್ತ್ರೀ ಜೇನೆ ಮಾತಾ ರೇ, ಜಿಹ್ವ ಥಕೀ ಅಸತ್ಯ ನ ಬೋಲೇ, ಪರಧನ್ ನವ್ ಝಾಲೇ ಹಾತ್ ರೇ:
ಎಲ್ಲರನ್ನೂ ಸಮದೃಷ್ಟಿಯಿಂದ ಕಾಣಬೇಕು, ಪರಸ್ತ್ರೀಯರನ್ನು ಮಾತೆಯಂತೆ ಕಾಣಬೇಕು, ಯಾವುದೇ ಸಂದರ್ಭದಲ್ಲೂ ಅಸತ್ಯವನ್ನು ಹೇಳಬಾರದು ಮತ್ತು ಪರಧನವನ್ನು ಮುಟ್ಟಬಾರದು.
ಇವನಾರವ ಇವನಾರವನೆಂದೆನಿಸದಿರಯ್ಯಾ, ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯಾ ಎನ್ನುವ ವಿಶ್ವಭ್ರಾತ್ವದ ವಚನದಲ್ಲಿ ಶರಣನು ವಿಶ್ವಪ್ರಜೆಯಾಗುವ ಸಂದೇಶವನ್ನು ಗುರು ಬಸವಣ್ಣನವರು ಕೊಟ್ಟಿದ್ದಾರೆ.
ಪರವಧುವನು ಮಹಾದೇವಿಯೆಂಬೆ, ಛಲ ಬೇಕು ಶರಣಂಗೆ ಪರಸ್ತ್ರೀಯನ್ನೊಲ್ಲೆನೆಂಬ, ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ ಎನ್ನುವ ಹಲವಾರು ವಚನನುಡಿಗಳಲ್ಲಿ ಪರಸ್ತ್ರೀ ಪರಧನಗಳು ವ್ಯಕ್ತಿಯ ನೈತಿಕ ಅಧಃಪತನಕ್ಕೆ ಕಾರಣವಾಗುವ ಮೊದಲ ಮೆಟ್ಟಿಲುಗಳು ಎಂದು ಬೋಧಿಸಿ, ಹರಿವ ಹಾವಿಗೆ, ಉರಿಯ ನಾಲಗೆಗೆ ಅಂಜುವುದಿಲ್ಲ ಪರಸ್ತ್ರೀ ಪರಧನವೆಂಬ ಜೂಬಿಗಂಜುವೆನಯ್ಯಾ ಎಂದು ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.
ಮೋಹ ಮಾಯಾ ವ್ಯಾಪೇ ನಹಿ ಜೇನೇ, ದೃಢ್ ವೈರಾಗ್ಯ ಜೇನಾ ಮನ್ ಮಾ ರೇ, ರಾಮ ನಾಮ ಶೂನ್ ತಾಳಿ ರೇ ಲಾಗಿ, ಸಕಳ ತಿರಥ್ ತೇನಾ ತನ್ ಮಾ ರೇ:
ಮೋಹ ಮಾಯೆಗಳನ್ನು ವ್ಯಾಪಿಸದಂತೆ, ಮನಸ್ಸಿನಲ್ಲಿ ದೃಢವಾದ ವೈರಾಗ್ಯವನ್ನು ಹೊಂದಿ, ರಾಮನಾಮವನ್ನು ನಿರಂತರವಾಗಿ ಜಪಿಸುವವರ ಮನದಲ್ಲಿ ಸಕಲ ತೀರ್ಥಂಗಳು ಅವರ ತನುವಿಲ್ಲಿ ನೆಲೆಸಿರುತ್ತವೆ.
“ಓಂ (ಲಿಂಗಾಯ)ನಮಃ ಶಿವಾಯೆಂಬ ನಾಮದ ಬೀಜವ ನಾಲಿಗೆ ತುದಿಯಲ್ಲಿ ಬಿತ್ತೀರಯ್ಯಾ” ಎನ್ನುವ ಸ್ವರವಚನದಲ್ಲಿ ಗುರು ಬಸವಣ್ಣನವರು ಮೇಲಿನ ವಿಚಾರವನ್ನು ಸವಿಸ್ತಾರವಾಗಿ ಹೇಳಿ ಲಿಂಗದೇವನ ನೆನೆದರೆ ಹುಟ್ಟು ಸಾವುಗಳಿಲ್ಲವೆಂದುವೆದು ತಿಳಿಸಿದ್ದಾರೆ.
ವಚನ:
ಎಂತು ಶಿವಭಕ್ತಿಯ ನಾನುಪಮಿಸುವೆನಯ್ಯಾ
ಎಂತು ಶಿವಾಚಾರವೆನಗೆ ವೇದ್ಯವಪ್ಪುದೋ ಅಯ್ಯಾ
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಂದ ಕಟ್ಟುವಡೆದೆನು.
ಹಸಿವು ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ.
ಪಂಚೇಂದ್ರಿಯ, ಸಪ್ತಧಾನು ಹರಿಹಂಚು ಮಾಡಿ ಕಾಡಿಹುವಯ್ಯಾ,
ಅಯ್ಯಾ, ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ
ಕೂಡಲ ಸಂಗಮದೇವಾ, ನಾನೇವೆನೇವೆನಯ್ಯಾ.
ಮೇಲಿನ ವಚನದಲ್ಲಿ ಗುರು ಬಸವಣ್ಣನವರು ಲಿಂಗದೇವನ ಭಕ್ತಿಯ ಮಾರ್ಗದಲ್ಲಿ ಅಡ್ಡವಾಗುವ ಎಲ್ಲಾ ಅಂಶಗಳನ್ನು ಗುರುತಿಸಿ ಈ ಕೆಳಗಿನ ವಚನದಲ್ಲಿ ಇದಕ್ಕೆ ಪರಿಹಾರವನ್ನೂ ನೀಡಿದ್ದಾರೆ.
ಹಸಿವು, ತೃಷೆ, ನಿದ್ರೆ, ವಿಷಯಂಗಳ ಮರೆದೆ, ನೀವುಕಾರಣ!
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಮರೆದೆ, ನೀವುಕಾರಣ
ಪಂಚೇಂದ್ರಿಯ, ಸಪ್ತಧಾತು, ಅಷ್ಟಮದಂಗಳ ಮರೆದೆ ನೀವು ಕಾರಣ!
ಲಿಂಗದೇವಯ್ಯ ನಿಮ್ಮ ಶರಣರಿಗೆ ಅಪ್ಯಾಯನವದಡೆ ಎನಗೆ ತೃಪ್ತಿಯಾಯಿತ್ತು.
ಅಷ್ಟಮದಂಗಳನ್ನು ತೊರೆದು ಪಂಚೇಂದ್ರಿಯಗಳನ್ನು ಮರೆತ ಭಕ್ತನ ಅಂಗಳವೇ ವಾರಣಾಸಿ ಅವನ ಕಾಯಕವೇ ಕೈಲಾಸ. ಎಂದು ದೇವನಿರುವ ಸ್ಥಳ ಮತ್ತು ದೇನೊಲುಮೆಯ ಮಾರ್ಗವನ್ನು ಈ ಕೆಳಗಿನ ವಚದಲ್ಲಿ ತೋರಿದ್ದಾರೆ.
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ
ಈ ಲೋಕದೊಳಗೆ ಮತ್ತೆ ಅನಂತ ಲೋಕ
ಶಿವಲೋಕ ಶಿವಾಚಾರವಯ್ಯ.
ಶಿವಭಕ್ತನಿದ್ದಠಾವೆ ದೇವಲೋಕ,
ಭಕ್ತನಂಗಳವೇ ವಾರಣಾಸಿ, ಕಾಯಕವೇ ಕೈಲಾಸ,
ಇದು ಸತ್ಯ ಕೂಡಲಸಂಗಯ್ಯ
ಲೋಭಿ ನೇ ಕಪಟ್ ರಹಿತ್ ಛೆ, ಕಾಮ ಕ್ರೋಧ್ ನಿವಾರ್ಯಾ ರೇ, ಭಲೆ ನರಸಿಯ್ಯೊ ತೇನು ದರ್ಶನ್ ಕರತಾ
ಕುಳ್ ಏಕೋತೇರ್ ತಾರ್ಯ ರೇ: ಲೋಭ, ಕಪಟತನ, ಕಾಮ, ಕ್ರೋಧ ಇವುಗಳನ್ನು ತೊರೆದವರನ್ನು ನಾನು(ನರಸಿಯ್ಯೋ)ದರ್ಶನಮಾಡಲಿಕ್ಕೆ ಬಯಸುತ್ತೇನೆ. ಇಂತಹವರಿಂದ ಅವರ ಇಡೀ ಕುಟುಂಬವೇ ಗೌರಾವಾನ್ವಿತವಾಗುತ್ತದೆ.
ಸದ್ಗುಣಗಳನ್ನಳವಡಿಸಿಕೊಂಡು ಅರಿಷಡ್ವರ್ಗಗಳನ್ನು, ಅಷ್ಟಮದಂಗಳನ್ನು ತೊರೆದ ಭಕ್ತ ಆವನಾದರೇನು ಶ್ರೀಮಹಾದೇವನ ನೆನೆವವನ ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದೆವೆ, ಪಾದರಕ್ಷೆಯ ಕಾಯ್ದು ಬದುಕುವೆ ಲಿಂಗದೇವಾ” ಎನ್ನುವ ವಚನದಲ್ಲಿ ಗುರು ಬಸವಣ್ಣನವರು ಲಿಂಗದೇವನನ್ನು ನೆನೆವ ಸದ್ಭಕ್ತರ ಘನತೆಯನ್ನು ತೋರಿದ್ದಾರೆ. ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರ ಲೇಸಯ ಎಂದು ಲಿಂಗದೇವನ ಭಕ್ತಿಯ ಮತ್ತು ಭಕ್ತರ ಘನತೆಯನ್ನು ಕೊಂಡಾಡಿದ್ದಾರೆ.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಭಾರತದಲ್ಲಿ ಸ್ವಾತಂತ್ರ ಚಳುವಳಿ ಆರಂಭವಾಗಿತ್ತು. ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸುವ ಉದ್ದೇಶದಿಂದ ಭಾರತಕ್ಕೆ ಬರುತ್ತಾರೆ. ಅಂದು ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ ಚಳುವಳಿಗೆ ಸೂಕ್ತ ನಾಯಕತ್ವ ಇರಲಿಲ್ಲ ಇದರಿಂದ ಚಳುವಳಿಗಳ ನಾಯಕತ್ವ ವಹಿಸುವ ಅನಿವಾರ್ಯತೆ ಗಾಂಧೀಜಿಯವರಿಗೆ ಒದಗಿ ಬರುತ್ತದೆ. ಆಗ ಆರಂಭದಲ್ಲಿ ಅವರು ಸೂಟು ಬೂಟು ಧರಿಸಿರುತ್ತಾರೆ. ಜನಸಾಮನ್ಯರಿಗೆ ಈ ವೇಷ ಭೂಷಣದಿಂದ ಹತ್ತಿರವಾಗಲು ಸಾಧ್ಯವಿಲ್ಲವೆಂದರಿತು ಸೂಟು ಬೂಟು ತೊರೆದು ಸಾಧರಣವಾದ ಉಡುಗೆಯನ್ನು ತೊಡುತ್ತಾರೆ.
ಅವರು ಆರ್ಥಿಕ ದೃಷ್ಟಿಯಿಂದ ಬಡವರಿರಲಿಲ್ಲ ಆದರೆ ಬಡವರಿಗೆ ಹತ್ತಿರವಾಗಲು ಬಡವರಂತೆ ಆಗುತ್ತಾರೆ. ಇದರಿಂದ ಸಾಮನ್ಯರಲ್ಲಿ ಸಾಮನ್ಯರಾಗಿ ಸ್ವಾತಂತ್ರ ಚಳುವಳಿಯ ನಾಯಕತ್ವ ವಹಿಸಿಕೊಳ್ಳುತ್ತಾರೆ. ಒಂದು ಕಡೆ ದೇಶದ ಬಹಿರಂಗದ ಶತ್ರುಗಳಾದ ಬ್ರಿಟಿಷರೊಡನೆ ಸತ್ಯಾಗ್ರಹಗಳ ಮೂಲಕ ಹೋರಾಟ ಇನ್ನೊಂದು ಕಡೆ ಈ ದೇಶದ ಅಂತರಂಗದ ಶತ್ರುಗಳಾದ ಅಸ್ಪ್ರಷ್ಯತೆ, ಅಸಮಾನತೆ ಗಳ ವಿರುದ್ದ ದಲಿತರ ಕೇರಿಗಳಿಗೆ ಹೋಗಿ ಕಸಗೂಡಿಸುವಂಥ ಸೇವೆ ಮಾಡುವ ಮೂಲಕ ಮಾಡುತ್ತಾರೆ. ದೀನ ದಲಿತರನ್ನು, ತುಳಿಯಲ್ಪಟ್ಟವರನ್ನು ಕೀಳಾಗಿ ಕಾಣದೆ ಅವರನ್ನು ದೇವರ ಮಕ್ಕಳು(ಹರಿ ಜನ) ಎಂದು ಕರೆದು ಗೌರವಿಸುತ್ತಾರೆ.
ಗುರು ಬಸವಣ್ಣನವರು ಈ ವಿಚಾರದಲ್ಲಿ ಮೇರು ಪರ್ವತದಂತೆ ಕಂಗೊಳಿಸುತ್ತಾರೆ.
ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯ, ದಾಸಯ್ಯ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತಮಹಿಮ ಕೂಡಲ ಸಂಗಯ್ಯ ಶಿವಧೋ ಶಿವಧೋ!
ಕಕ್ಕಯ್ಯ, ದಾಸಯ್ಯ, ಚೆನ್ನಯ್ಯನವರು ನಾನು ಉತ್ತಮ ಕುಲದವನೆಂದರೆ ನನ್ನ ಹತ್ತಿರ ಬರಲು ಹೆದರುತ್ತಾರೆ ಎಂದು ಅವರಿಗೆ ಉತ್ತಮಕುಲವೇ ಕಷ್ಟತನದ ಹೊರೆಯಾಗಿಬಿಡುತ್ತದೆ. ಅದಕ್ಕಾಗಿ ಅವರು
ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯರಿ ಕೂಡಲಸಂಗಯ್ಯ?
ಇನ್ನೊಂದು ವಚನದಲ್ಲಿ “ಗೋತ್ರನಾಮ ಮಾದರ ಚೆನ್ನಯ್ಯ ಡೋಹರ ಕಕ್ಕಯ್ಯನೆಂಬುದೇನು” ಎಂದು ತುಳಿಯಲ್ಪಟ್ಟವರೊಂದಿಗೆ ಭಾವಸಮಾವೇಶಗೊಳಿಸಿ ಅವರನ್ನು ಮೇಲೆತ್ತುತ್ತಾರೆ. ನಾನು ಭಕ್ತಿಯುಳ್ಳವನು ನಾನು ಲಿಂಗದೇವನ ಪರಮ ಭಕ್ತ ನನ್ನಂತೆ ನೀವು ಭಕ್ತಿ ಮಾಡಿ ಉದ್ಧಾರ ಹೊಂದಿರಿ ಎಂದು ಬೋಧಿಸದೆ;
ಭಕ್ತಿಯಿಲ್ಲದ ಬಡವ ನಾನಯ್ಯ;
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿ ಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಯ್ಯ
ಭಕ್ತಿ ಭಂಡಾರಿ ಎಂದು ಗುರು ಬಸವಣ್ಣನವರನ್ನು ಸಕಲರೂ ಕರೆದರೂ ತಾವು ಮಾತ್ರ ನಾನು ಭಕ್ತಿಯಿಲ್ಲದ ಬಡವನೆಂಧು ಕಕ್ಕಯ್ಯ, ಚೆನ್ನಯ್ಯ, ದಾಸಯ್ಯ, (ಶೋಷಿಸಲ್ಪಟ್ಟ ವರ್ಗ)ರೊಂದಿಗೆ ಸಮೀಕರೀಸಿಕೊಳ್ಳುತ್ತಾರೆ. ಇದರಿಂದಲೇ ಅವರಿಂದ ನಾವೆಲ್ಲರೂ ಭಕ್ತಿಯ ಪಾತ್ರೆ ತುಂಬಿಕೊಳ್ಳಲು ಸಾಧ್ಯವಾಗಿದೆ.
ಹೀಗೆ ಮಹಾತ್ಮ ಗಾಂಧೀಜಿಯವರು ಮಹಾತ್ಮ ಗುರು ಬಸವಣ್ಣನವರ ತತ್ವಗಳನ್ನೇ ಮೈಗೂಡಿಸಿಕೊಂಡವರು
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲೂ ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲ ಲಿಂಗದೇವಾ” ಎನ್ವನುವ ಚನವನ್ನು ಅಕ್ಷರಶಃ ಮಹಾತ್ಮ ಗಾಂದೀಜಿಯವರು ಪಾಲಿಸಿದ್ದರು. ಅಹಿಂಸೆ ಮತ್ತು ಶಾಂತಿಯೆಂಬ ಅಸ್ತ್ರಗಳ ಮೂಲಕ ಜಗತ್ತನ್ನೇ ಗೆದ್ದ ಮಹಾತ್ಮ ಗಾಂಧೀಜಿಯವರ ಹೃದಯದಲ್ಲಿ ಮಹಾತ್ಮ ಗುರುಬಸವಣ್ಣನವರು ಇದ್ದುದ್ದರಿಂದಲೇ ಗಾಂಧೀಜಿ ಮಹಾತ್ಮನಾಗಲು ಸಾಧ್ಯವಾಯಿತು.
ಮನುಕುಲದ ಇತಿಹಾಸದಲ್ಲಿ ಸತ್ಯ ಪ್ರತಿಪಾದನೆ ಮಾಡಿದ ಅನೇಕರು ಅಸಹಜ ಸಾವು/ಶಿಕ್ಷೆ ಕಾಣಬೇಕಾಯಿತು. ಗುರು ಬಸವಣ್ಣನವರು ಸತ್ಯ ಪ್ರತಿಪಾದನೆ ಮಾಡಿದುದ್ದಕ್ಕೆ ಗಡಿಪಾರಿನ ಶಿಕ್ಷೆ ಅನುಭವಿಸಬೇಕಾಯಿತು. ಅದೇ ರೀತಿ ತಮ್ಮ ಜೀವನದುದ್ದಕ್ಕೂ ಸತ್ಯವೆಂಬ ಕೂರಲಗು ಹಿಡಿದು ಬದುಕಿದ ಮಹಾತ್ಮ ಗಾಂಧೀಜಿಯವರು ೩೦.೦೧.೧೯೪೮ ರಂದು ಬೆಳಿಗ್ಗೆ ಬಿರ್ಲಾ ಮಂದಿರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಬರುವಾಗ ಹಂತಕನ ಗುಂಡಿಗೆ ಬಲಿಯಾದರು. ಅವರ ಜನ್ಮದಿನದ ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಶ್ರೀಚರಣಕ್ಕೆ ಶರಣೆಂದು ಧನ್ಯರಾಗೋಣ.