Breaking News

ಗುರು ಬಸವಣ್ಣನವರ 828ನೇ ಲಿಂಗೈಕ್ಯ ಸಂಸ್ಮರಣೆ – ಬಸವ ಪಂಚಮಿ

828th Lingaikya Commemoration of Guru Basavanna – Basava Panchami

ಜಾಹೀರಾತು

ವಚನ:
ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.
ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.
ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.
ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ಬಸವಣ್ಣ.
ಜಂಗಮಕ್ಕೆ ಮಾಡುವ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲಾ ಬಸವಣ್ಣ
ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ಕಲಿದೇವರ ದೇವಾ.
-ಮಡಿವಾಳ ಮಾಚಿದೇವರು

ಶ್ರಾವಣ ಶುದ್ಧ ಪಂಚಮಿ 30-07-1196 ರಂದು ಗುರುಬಸವಣ್ಣನವರು ಲಿಂಗೈಕ್ಯರಾಗಿದ್ದರು. ನಮಗೆ ಬಸವ ಜಯಂತಿಗಿಂತ ಬಸವ ಪಂಚಮಿ ಅತಿ ಮಹತ್ವದ ದಿನ. ಗುರುಬಸವಣ್ಣನರು 30-04-1134ರಂದು ಜನಿಸಿದರು. ಅವರು ಜನಿಸಿದಾಗ ನಮಗೆ ಯಾವುದೇ ತತ್ವ, ಧರ್ಮವನ್ನು ಕೊಟ್ಟಿರಲಿಲ್ಲ. ಆದರೆ ಅವರು ಲಿಂಗೈಕ್ಯರಾಗುವುದರ ಒಳಗಾಗಿ ಲಿಂಗಾಯತ ಧರ್ಮವೆಂಬ ಹೊಸ ಧರ್ಮವನ್ನು ಕೊಟ್ಟರು. ಅನುಭಾವ ಮಂಟಪವೆಂಬ ಧಾರ್ಮಿಕ ಸಂಸ್ಥೆಯನ್ನು ರಚಿಸಿ, ಆ ಮೂಲಕ ಸಂಸ್ಕಾರ, ಸಂಘಟನೆ ಮತ್ತು ಸಹೋದರತೆಯನ್ನು ಈ ಸಮಾಜದಲ್ಲಿ ತಂದರು.

ಗುರುಬಸವಣ್ಣನವರು ಪ್ರತಿಯೊಂದು ರಂಗದಲ್ಲಿಯೂ ಸುಧಾರಣೆಯನ್ನು ತಂದರು. ಇದರಿಂದಾಗಿ ಮತ್ರ್ಯಲೋಕಕ್ಕೆ ಹೊಸ ಬೆಳಕು ಬಂದಂತಾಯಿತು.

ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ| ನಾಡೊಳಗೆ
ಸೊಲ್ಲೆತ್ತಿ ಜನವು ಹಾಡುವುದು||

ಎಂದು ಜನಪದ ಕವಿಗಳು ಗುರುಬಸವಣ್ಣನವರನ್ನು ಸ್ತುತಿಸಿದ್ದಾರೆ. ಮನುಕುಲವೆಂಬ ಮಹಾ ವೃಕ್ಷ ಸಾವಿರ ಸಾವಿರ ವರ್ಷಕ್ಕೊಮ್ಮೆ ಮೈದಳೆಯುವಂಥ ಪುಷ್ಪ ಗುರುಬಸವಣ್ಣನವರು. ಮತ್ರ್ಯಲೋಕದಲ್ಲಿ ಅವರು ಮಾನವರಾಗಿ ಹುಟ್ಟಿದರೂ, ಇಲ್ಲಿಯ ಸಂಸಾರವನ್ನು ಹೊದ್ದದೇ ಅವರು ಬದುಕುತ್ತಾರೆ.

ವಚನ:
ಮುತ್ತು ನೀರಲ್ಲಾಯಿತ್ತು, ವಾರಿಕಲ್ಲು ನೀರಲ್ಲಾಯಿತ್ತು,
ಉಪ್ಪು ನೀರಲ್ಲಾಯಿತು,
ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು
ಮುತ್ತು ಕರಗಿದುದನಾರೂ ಕಂಡವರಿಲ್ಲ
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ
ಚೆನ್ನಮಲ್ಲಿಕಾರ್ಜುನದೇವರ ದೇವಾ.
-ಜಗನ್ಮಾತೆ ಅಕ್ಕಮಾಹಾದೇವಿಯವರು

ಎಂದು ಅಕ್ಕಮಹಾದೇವಿಯವರು ಒಂದು ವಚನದಲ್ಲಿ ಹೇಳುವಂತೆ, ಲಕ್ಷ ಲಕ್ಷ ಜನರು, ವಾರಿಕಲ್ಲಿನಂತೆ ಈ ಜಗತ್ತಿನಲ್ಲಿ ಹುಟ್ಟಿದರೂ ಅವರು ಕರಗಿ ಹೋಗುತ್ತಾರೆ. ಅರ್ಥಾತ್ ಇಲ್ಲಿ ಉಳಿಯುವುದಿಲ್ಲ. ಉಪ್ಪು ಕರಗಿತ್ತು ಎಂದರೆ ವಾರಿಕಲ್ಲಿಗಿಂತ ಸ್ವಲ್ಪ ತಡವಾಗಿ ಉಪ್ಪು ಕರಗುತ್ತದೆ. ಕೆಲವು ಮತ ಪಂಥದ ಪ್ರವರ್ತಕರು ಉಪ್ಪಿನಂತೆ ಸ್ವಲ್ಪ ದಿನಗಳ ಕಾಲ ಇದ್ದು ಮತ್ತೆ ಒಂದು ದಿನ ಹೇಳ ಹೆಸರಿಲ್ಲದಂತೆ ಈ ಸಮಾಜದಿಂದ ಮರೆಯಾಗಿ ಬಿಡುತ್ತಾರೆ. ಆದರೆ ಗುರುಬಸವಣ್ಣನವರು ನೀರಲ್ಲಾದ ಮುತ್ತಿನಂತೆ, ಮತ್ರ್ಯಲೋಕದಲ್ಲಿ ಮಾನವರಾಗಿ ಹುಟ್ಟಿದರೂ ಅವರು ಶಾಶ್ವತವಾಗಿ ನಮ್ಮೆಲ್ಲರ ಹೃದಯದಲ್ಲಿ ವಾಸವಾಗಿರುತ್ತಾರೆ. ವಾರಿಕಲ್ಲು ಉಪ್ಪಿನಂತೆ ಕರಗದೇ ಮುತ್ತಿನಂತೆ ಶಾಶ್ವತವಾಗಿ, ತಮ್ಮ ವಚನಗಳ ರೂಪದಲ್ಲಿ ಜೀವಿಸಿರುತ್ತಾರೆ.

ಚಿಕ್ಕವನಿರುವಾಗ ನಾನೊಂದು ಕಥೆ ಓದಿದ್ದೆ, ಮಂತ್ರ ತಂತ್ರಗಳನ್ನು ಸಾಧಿಸಿಕೊಂಡಿದ್ದ ಒಬ್ಬ ರಾಜನಿದ್ದ. ಅವನು ತನ್ನ ಪ್ರಾಣವನ್ನು ತನ್ನಲ್ಲಿ ಇಟ್ಟುಕೊಂಡಿರಲಿಲ್ಲ. ಒಂದು ಬಂಗಾರದ ಗಿಳಿಯನ್ನು ಮಾಡಿ ಅದರಲ್ಲಿ ತನ್ನ ಪ್ರಾಣ ತುಂಬಿದ. ಆ ಗಿಳಿಯನ್ನು ವಜ್ರದ ಪಂಜರದಲ್ಲಿಟ್ಟಿದ್ದ. ಆ ಪಂಚರವನ್ನು ಸಮುದ್ರದ ಮಧ್ಯದಲ್ಲಿ ಯಾರೂ ಹೋಗಲಿಕ್ಕೆ ಸಾಧ್ಯವಾಗದೇ ಇರುವಂಥ ದ್ವೀಪದಲ್ಲಿರುವ ಗವಿಯಲ್ಲಿ ಇಟ್ಟಿದ್ದ. ಆ ಗಿಳಿ ನಾಶವಾದರೆ ಮಾತ್ರ ಅವನ ಪ್ರಾಣ ಹೋಗುತ್ತಿತ್ತು. ಈ ರೀತಿಯ ಸಾಧನೆಯನ್ನು ಅವನು ಮಾಡಿದ್ದ. ಇವರಿಂದ ಅವನಿಗೆ ಅಮರತ್ವವು ಪ್ರಾಪ್ತಿಯಾಗಿತ್ತು.

ಅದೇ ರೀತಿ ಗುರುಬಸವಣ್ಣನವರು, ಇಂದೂ ಜೀವಂತವಾಗಿದ್ದಾರೆ! ಅವರು ಅಮರವಾಗಿದ್ದಾರೆ! ಅಂದು ಅವರು ಕಲ್ಯಾಣದ ಅನುಭಾವ ಮಂಟಪದಿಂದ ಕೂಡಲ ಸಂಗಮಕ್ಕೆ ಹೋಗುವಾಗ ಅಲ್ಲಿದ್ದ ಶರಣರಿಗೆ ವಚನ ಸಾಹಿತ್ಯ ಲಿಂಗಾಯತ ಧರ್ಮದ ಜೀವಾಳ, ವಚನ ಸಾಹಿತ್ಯದಲ್ಲಿ ನನ್ನ ಪ್ರಾಣವಿದೆ. ಅದರ ರಕ್ಷಣೆಯೇ ನನ್ನ ಪ್ರಾಣ ರಕ್ಷಣೆ ಎಂದು ತಿಳಿಸಿದರು. ಅದಕ್ಕಾಗಿ ಮಡಿವಾಳ ಮಾಚಿದೇವರು, ಚೆನ್ನಬಸವಣ್ಣನವರು ತಮ್ಮ ಪ್ರಾಣವನ್ನು ಕೊಟ್ಟು ಗುರುಬಸವಣ್ಣನವರ ಪ್ರಾಣವನ್ನು ರಕ್ಷಿಸಿದರು. ವಚನ ಸಾಹಿತ್ಯ ಉಳಿಯಿತು, ಗುರುಬಸವಣ್ಣನವರೂ ಉಳಿದರು. ಅದಕ್ಕಾಗಿಯೇ ಗುರುಬಸವಣ್ಣನವರ ಪ್ರಾಣವಾದ ವಚನಗಳ ಪುಸ್ತಕಗಳನ್ನು ನಾವು ಬಸವ ಜಯಂತಿಯಂದು ತೊಟ್ಟಿಲಲ್ಲಿ ಇಟ್ಟು ತೂಗುತ್ತೇವೆ.

ಗುರುಬಸವಣ್ಣನವರು ಸಾಧಿಸಿದ ಸಾಧನೆ ಮತ್ತು ತಮ್ಮ ಸಮಕಾಲೀನ ಶರಣರಿಗೆ ಬೋಧಿಸಿದ ಬೋಧನೆ, ಎರಡೂ ಹಿಮಾಲಯ ಪರ್ವತದಷ್ಟು ಎತ್ತರದಲ್ಲಿ ನಿಲ್ಲುತ್ತವೆ. ಗುರುಬಸವಣ್ಣನವರು ಹಾಗೂ ಸಮಕಾಲೀನ ಶರಣರು ಸಾಧಿಸಿದ ಮಟ್ಟವನ್ನು ಯಾರಿಂದಲೂ ಸಾಧಿಸಲು ಸಾಧ್ಯವಿಲ್ಲ ಎನಿಸುತ್ತದೆ.

ಗುರುಭಕ್ತಿಯನ್ನು ಮಾಡುವುದರಲ್ಲಿ ಶರಣರು ತಲುಪಿದ ಸ್ಥಾನ ಉನ್ನತವಾದುದು. ಮಹಾಭಾರತದಲ್ಲಿ ಏಕಲವ್ಯನು ಸಾಂಕೇತಿಕವಾಗಿ ದ್ರೋಣಾಚಾರ್ಯರ ಮೂರ್ತಿಯನ್ನು ಮಾಡಿ, ಅದರ ಮುಂದೆ ನಿಂತು ಬಿಲ್ವಿದ್ಯೆಯನ್ನು ಕಲಿತ. ಇದನ್ನರಿತ ದ್ರೋಣಾಚಾರ್ಯರು ಇನ್ನೊಬ್ಬ ಶಿಷ್ಯನ ಒತ್ತಾಸೆಗೆ ಮಣಿದು, ಏಕಲವ್ಯ ತಾನಾಗಿಯೇ ಬಿಲ್ವಿದ್ಯೆ ಕಲಿತಿದ್ದರೂ ಅವನಲ್ಲಿರುವ ಗುರು ಭಕ್ತಿಯನ್ನು ದುರುಪಯೋಗ ಮಾಡಿಕೊಂಡರು. ಅವನ ಬಲಗೈಯ ಹೆಬ್ಬೆರಳನ್ನು ಗುರುಕಾಣಿಕೆಯಾಗಿ ಕೇಳುವುದರ ಮುಖಾಂತರ ಅವನಲ್ಲಿರುವ ಬಿಲ್ವಿದ್ಯೆಯನ್ನು ಕಿತ್ತು ಕೊಂಡರು. ಇದರಿಂದ ಮಹಾಭಾರತವು ಒಬ್ಬ ಅಪ್ರತಿಮ ವೀರನನ್ನು ಕಳೆದು ಕೊಂಡಿತು.

ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಗುರುಬಸವಣ್ಣನವರ ಗುರುತ್ವವನ್ನು ಅಳೆಯುವುದಾದರೆ, ಅದು ಹಿಮಾಲಯ ಪರ್ವತಕ್ಕಿಂತ ಎತ್ತರ ಎತ್ತರ. ಗುರುಬಸವಣ್ಣನವರು ಸ್ವತಃ ಹರಳಯ್ಯನವರ ಮನೆಗೆ ಹೋಗಿ ಅವರಿಗೆ ಧರ್ಮ ಸಂಸ್ಕಾರ ಕೊಟ್ಟು, ಓದಲು ಬರೆಯಲು ಕಲಿಸಿದರು.

ನಂತರ ಒಂದು ದಿನ ಅವರ ಮನೆಯಲ್ಲಿ ಪ್ರಸಾದ ಮಾಡಿ ಹೊರಡುವಾಗ ಶರಣು ಎಂದ ಹರಳಯ್ಯನವರಿಗೆ ಶರಣು ಶರಣಾರ್ಥಿ ಎಂದರು. ಗುರುವು ನನ್ನ ಮೇಲೆ ಒಂದು ಶರಣಿನ ಭಾರವನ್ನು ಹಾಕಿದ್ದಾರೆ, ಎಂದು ತಿಳಿದು ತಮ್ಮ ಮೈ ಚರ್ಮವನ್ನೇ ತೆಗೆದು ಚೆಮ್ಮಾವುಗೆಯನ್ನು ಮಾಡಿ ಗುರುಬಸವಣ್ಣನವರಿಗೆ ಅರ್ಪಿಸ ಹೋದರು.

ಆಗ ಆ ಮಹಾಗುರುವು ಮಾಡಿದ್ದೇನು? ಅಯ್ಯಾ ನಿಮ್ಮ ಶರಣರ ಚೆಮ್ಮಾವುಗೆಗೆ ಪೃಥ್ವಿ ಸಮಬಾರದಯ್ಯ ಎಂದು ತಲೆಯ ಮೇಲೆ ಇಟ್ಟು ಕೊಂಡರು. ಜಗತ್ತಿನ ಇತಿಹಾಸದಲ್ಲಿ ಗುರುಬಸವಣ್ಣನವರಂಥ ಗುರು, ಹರಳಯ್ಯನವರಂಥ ಶಿಷ್ಯ ಮತ್ತೆಲ್ಲಿಯೂ ಸಿಗಲಿಕ್ಕೆ ಸಾಧ್ಯವಿಲ್ಲ.

ಲಿಂಗ ಭಕ್ತಿಯಲ್ಲಿ ಗುರು ಬಸವಣ್ಣನವರು ಶರಣರನ್ನು, ಉನ್ನತ ಸ್ಥಿತಿಗೆ ಕೊಂಡೊಯ್ದರು. ಅಲ್ಲಿಯವರೆಗೆ ಸಮಾಜದಲ್ಲಿ ದೇವರನ್ನು ಬೇಡಿಕೊಳ್ಳುವುದಕ್ಕಾಗಿ ಪೂಜಿಸುವ ಪರಿಪಾಠವಿತ್ತು. ಆದರೆ ಶರಣರು ಭಕ್ತಿ ವ್ಯಾಖ್ಯಾನವನ್ನೇ ಬದಲಾಯಿಸಿದರು.

ವಚನ:
ಅಯ್ಯಾ ನೀ ಕೇಳಿದರೆ ಕೇಳು ಕೇಳದಿರ್ದೊಡೆ ಮಾಣು, ನಾ ನಿಮ್ಮ ಹಾಡಿದಲ್ಲದೆ ಸ್ಮರಿಸಲಾರೆನಯ್ಯಾ. ಅಯ್ಯಾ ನೀ ಮೆಚ್ಚಿದಡೆ ಮೆಚ್ಚು ಮೆಚ್ಚದಿರ್ದಡೆ ಮಾಣು ನಾ ನಿಮ್ಮ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ ಚೆನ್ನಮಲ್ಲಿಕಾರ್ಜುನದೇವರ ದೇವಯ್ಯ ನಾ ನಿಮ್ಮ ಪೂಜಿಸಿ ಹರುಷದಲೋಲಾಡುವೆನಯ್ಯಾ
ಎಂದರು.

ಪೂಜೆಯನ್ನು ಸ್ವಾನಂದಕ್ಕಾಗಿ ಮಾಡುವಂಥದ್ದನ್ನು ಗುರುಬಸವಣ್ಣನವರು ಕಲಿಸಿದರು. ಅದನ್ನು ಶರಣರು ಅಷ್ಟೇ ನಿಷ್ಠೆಯಿಂದ ಅಳವಡಿಸಿಕೊಂಡರು.

ದಾಸೋಹದಲ್ಲಿ ಶರಣರು ಔನತ್ಯಕ್ಕೇರಿದರು. ಗುರುಬಸವಣ್ಣನವರು

ಸೋಹಂ ಎಂದು ಜನ್ಮ ಜನ್ಮಕ್ಕೆ ಹೋಗಲೀಯದೆ ದಾಸೋಹಂ ಎಂದೆನಿಸಯ್ಯಾ” ಎಂದರು.

ನಾನು ಬೇರೆಯವರಿಗೆ ಸಹಾಯ ಉಪಕಾರ ಮಾಡುತ್ತಿದ್ದೇನೆ ಎನ್ನುವುದಕ್ಕಿಂತ ನಾನು ಸಹಾಯ ಮಾಡಲು ಅವಕಾಶ ಮಾಡಿಕೊಟ್ಟಿರುವುದರಿಂದ ಬೇರೆಯವರಿಂದ ಉಪಕೃತನಾಗಿದ್ದೇನೆ. ಎನ್ನುವುದು ನಿಜವಾದ ದಾಸೋಹ ಎಂಬುದನ್ನು ಅರುಹಿದರು.

ಗುರುಬಸವಣ್ಣನವರು ಕಾಯಕ, ದಾಸೋಹ, ಭಕ್ತಿ, ಶಿಕ್ಷಣ, ನೈತಿಕತೆ, ದಾಂಪತ್ಯ ಜೀವನ ಇವೆಲ್ಲವುಗಳಲ್ಲಿ ಔನತ್ಯವನ್ನು ತಲುಪಿರುವುದೇ ಅಲ್ಲದೇ ಇರತ ಶರಣರನ್ನೂ ಆ ಮಟ್ಟಕ್ಕೆ ಏರಿಸದರು.

ಪ್ರಜಾಪ್ರಭುತ್ವದ ಕಾಲವಾದ ಇಂದಿನ ದಿನಗಳಲ್ಲಿಯೂ ಸಮಗಾರ, ಮಡಿವಾಳ, ದನಕಾಯುವರು ಮತ್ತು ಇನ್ನೂ ಅನೇಕ ಜಾತಿ ಪಂಗಡಗಳೆನಿಸಿ ಕೊಂಡವರಿಗೆ ಶಿಕ್ಷಣವಿಲ್ಲ. ಆದರೆ ಗುರುಬಸವಣ್ಣನವರು ಇಂಥ ಕಾಯಕ ಮಾಡುತ್ತಿದ್ದವರೆಲ್ಲರಿಗೂ ಶಿಕ್ಷಣವನ್ನು ಕೊಟ್ಟರು. ಅದು ಕೇವಲ ಉಪಜೀವನದ ಶಿಕ್ಷಣವಾಗಿರಲಿಲ್ಲ ಜೀವನದ ಶಿಕ್ಷಣವೂ ಆಗಿತ್ತು. ವಿವಿಧ ಸಮಾಜದಿಂದ ಬಂದ ಶರಣರಿಂದ ರಚನೆಯಾದ ವಚನ ಸಾಹಿತ್ಯವು ಕಲ್ಯಾಣ ರಾಜ್ಯದ ಅಡಿಪಾಯವಾಯಿತು.

ಗುರುಬಸವಣ್ಣನವರ ಕ್ರಾಂತಿಗೆ ಬೆನ್ನೆಲುಬಾಗಿ ನಿಂತಿದ್ದ ಮಾಧ್ಯಮ ವಚನ ಸಾಹಿತ್ಯ. ಇಂದಿನ ಜ್ಞಾನ ಪೀಠ ನೋಬೆಲ ಪ್ರಶಸ್ತಿ ವಿಜೇತರು ಶರಣರು ಬರೆದಂಥ ವಚನಗಳನ್ನು ಬರೆಯಲು ಸಾಧ್ಯವಿಲ್ಲ. ಶರಣರು ಕವನ, ಕಥೆ, ಕಾದಂಬರಿಗಳನ್ನು ಬರೆಯಲಿಲ್ಲ ವಚನಗಳನ್ನು ಬರೆದರು.

ವಚನಗಳೆಂದರೆ ಆತ್ಮ ಸಾಕ್ಷಿ, ಪರಮಾತ್ಮ ಸಾಕ್ಷಿಯಾಗಿ ಬಂದ ನುಡಿಗಳು. ವಚನ ಸಾಹಿತ್ಯವು ಧರ್ಮಕ್ಕೆ ಚಲನಶೀಲತೆಯನ್ನು ತಂದು ಕೊಟ್ಟಿತು. ಸ್ಥಾವರದ ನಿರಾಕರಣೆ ಜಂಗಮದ ಪ್ರತಿಷ್ಠಾಪನೆ ಗುರುಬಸವಣ್ಣನವರು ಮಾಡಿದ ಭಕ್ತಿ ಕ್ರಾಂತಿಯ ಫಲ.

ಯಾವ ದೇಹವನ್ನು ವೈದಿಕರು ನಶ್ವರ, ಮಾಯೆ ಎಂದು ಕರೆದರೋ, ಆ ದೇಹದಲ್ಲಿ ಗುರುಬಸವಣ್ಣನವರು ಇಷ್ಟಲಿಂಗವನ್ನು ಪ್ರತಿಷ್ಠಾಪನೆ ಮಾಡುವುದರ ಮೂಲಕ ದೇಹವನ್ನು ದೇವಾಲಯವನ್ನಾಗಿ ಮಾಡಿದರು.

ಇಂದಿಗೂ ಭಕ್ತಿಯನ್ನು ಸ್ವತಂತ್ರಗೊಳಿಸಲಿಕ್ಕಾಗಿಕಿಲ್ಲ. ಭಕ್ತಿಯ ಸ್ವಾತಂತ್ರ ಹರಣವಾಗಿದೆ ದೇವಸ್ಥಾನದಲ್ಲಿ ಪೂಜಾರಿ ಇದ್ದಾಗಲೇ ಪೂಜೆ ಮಾಡಿಸಬೇಕು, ಅವನು ಅಲ್ಲಿ ಕುಳಿತುಕೊಳ್ಳಲಿಕ್ಕೆ ಅವಕಾಶ ಕೊಟ್ಟಷ್ಟು ಕಾಲ ಮಾತ್ರ ಕುಳಿತುಕೊಳ್ಳಬೇಕು. ಅವನು ಅವಕಾಶ ಕೊಟ್ಟಷ್ಟೇ ಸಮಯದಲ್ಲಿ ದೇವತೆಗಳ ವಿಗ್ರಹ ನೋಡಬೇಕು. ಇದರಿಂದ ಭಕ್ತನ ಆತ್ಮದ ಹಸಿವು ಹಿಂಗಲಾರದು. ಅದಕ್ಕಾಗಿಯೇ ಗುರುಬಸವಣ್ಣನವರು ಭಕ್ತಿಯನ್ನು ಖಾಸಗಿತನದಿಂದ ಮುಕ್ತಗೊಳಿಸಿ ಪೂಜಾರಿಯ ಮಧ್ಯಸ್ತಿಕೆಯನ್ನು ತಪ್ಪಿಸಿದರು. ಪೂಜಾರಿಯನ್ನು ದೇವಸ್ಥಾನದಿಂದ ತೆಗೆದುಹಾಕುವುದರ ಮುಖಾಂತರವಲ್ಲ! ಎಲ್ಲರನ್ನೂ ಇಷ್ಟಲಿಂಗವನ್ನು ಪೂಜಿಸುವ ಪೂಜಾರಿಗಳನ್ನಾಗಿ ಮಾಡುವುದರ ಮುಖಾಂತರ !!

ವಚನ:
ತನ್ನಾಶ್ರಯದ ರತಿ ಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೋಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರೆಲ್ಲರು
ನಿಮ್ಮನೆತ್ತ ಬಲ್ಲರು ಲಿಂಗದೇವಾ?

ತಮ್ಮ ತಮ್ಮ ಆತ್ಮೋದ್ಧಾರ ತಾವು ತಾವೆ ಮಾಡಿಕೊಳ್ಳಬೇಕೆಂದು ತಿಳಿಸಿ ಕರಸ್ಥಲದಲ್ಲಿ ಇಷ್ಟಲಿಂಗವನ್ನು ಕೊಟ್ಟರು. ಇಷ್ಟಲಿಂಗವು ಕೇವಲ ದೇವರ ಕುರುಹು ಆಗಲಿಲ್ಲ, ಅದು ಸಮಾನತೆಯ ಕುರುಹಾಯಿತು.
ಗುರುಬಸವಣ್ಣನವರ ಸಮಗ್ರ ಕ್ರಾಂತಿಯನ್ನು ನೋಡಿ ಅಲ್ಲಮ ಪ್ರಭುದೇವರಿಗೆ ಪರಮಾಶ್ಚರ್ಯವಾಗುತ್ತದೆ.

ವಚನ:
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ
ಸನ್ನಿಹಿತದಲ್ಲಿ ಪೂರ್ವಾಚಾರಿಯ ಕಂಡೆ
ಗುಹೇಶ್ವರ ಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎಂಬೆ.
-ಅಲ್ಲಮಪ್ರಭುದೇವರು

ಪೂರ್ವಾಚಾರಿ ಎಂದರೆ ಮೊದಲಿಗ (Pioneer) ಎಂದು ಅರ್ಥ. ಗುರುಬಸವಣ್ಣನವರು ಎಲ್ಲಾ ರಂಗಗಳಲ್ಲಿಯೂ ಮೊದಲಿಗರಾಗಿ ಬದಲಾವಣೆಯನ್ನು ತಂದರು. ಅಲ್ಲಮ ಪ್ರಭುದೇವರು ಪರಮ ವಿರಕ್ತರಾಗಿದ್ದರು. ಅವರು ಗೃಹಸ್ಥರಾದ ಗುರುಬಸವಣ್ಣನವರ ಪಾದಕ್ಕೆ ಶರಣಾರ್ಥಿ ಸಲ್ಲಿಸುತ್ತಾರೆ ಎಂದರೆ ಗುರುಬಸವಣ್ಣನವರ ನಿಲುವು ಎಷ್ಟು ಎತ್ತರ ಇದ್ದಿರಬಹುದು! ಇತಿಹಾಸದಲ್ಲಿ ಪರಮ ವಿರಕ್ತರೊಬ್ಬರು ಪರಮ ಗೃಹಸ್ಥರ ಪಾದಗಳಿಗೆ ಶರಣೆಂದಿರುವುದು ಅಲ್ಲಮ ಪ್ರಭು ಹಾಗೂ ಗುರುಬಸವಣ್ಣನವರ ಸನ್ನಿವೇಶ ಬಿಟ್ಟರೊಬ್ಬರ ಜಗತ್ತಿನ ಮತ್ತೊಂದು ಕಡೆ ಸಿಗಲಿಕ್ಕಿಲ್ಲ.

ವಚನ:
ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು.
ಗುರು ತಾನೀತ ಎನ್ನ ಭವರೋಗವ ಛೇದಿಸಲು,
ಭಕ್ತ ತಾನೀತ ಎನಗೆ ವಿಸ್ತಾರವಾಗಿ.
ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನ ಮಹಿಮನಾಗಿ,
ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ.
ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯು ತಾನಾಗಿ,
ಎನಗೆ ಸರ್ವ ಸ್ವಾಯತ ಮಾಡಿದ ಮಹಹಿಮ ತಾನೀತ ಕಾಣಾ
ಕಲಿದೇವರ ದೇವಾ ನಿಮ್ಮ ಬಸವಣ್ಣನು.
-ಮಡಿವಾಳ ಮಾಚಿದೇವರು

10,000 ವರ್ಷಗಳ ಹಿಂದೆ ಯೋಗಿ ರಾಜನಾದ ಶಿವನು ಹೇಗೆ ಭಾರತ ದೇಶದಲ್ಲಿ ಭಕ್ತಿ ಪರಂಪರೆಯನ್ನು ಹರಡಿ ಮರ್ತ್ಯ ಲೋಕವನ್ನು ಪಾವನಗೊಳಿಸಿದ್ದನೋ ಅದೇ ರೀತಿ ಗುರುಬಸವಣ್ಣನವರು ಕೂಡ ಮತ್ತೊಮ್ಮೆ ಇಲ್ಲಿ ಭಕ್ತಿಯ ಬೆಳವಿಗೆಯನ್ನು ದೆಸೆದೆಸೆಗೂ ಪಸರಿಸಿದರು. ಅದಕ್ಕಾಗಿಯೇ ಗುರುಬಸವಣ್ಣನವರನ್ನು ದ್ವಿತೀಯ ಶಂಭು (ಎರಡನೆಯ ಶಿವ) ಎಂದು ಕರೆಯುತ್ತಾರೆ. ಇತಿಹಾಸದ ಪ್ರಕ್ರಿಯೆಯಲ್ಲಿ ಯೋಗಿಯಾದ ಶಿವನನ್ನೇ ದೇವನೆಂದು ಬಿಂಬಿಸುತ್ತ ಬಂದಿರುವುದರಿಂದ ಶಿವನ ಆತ್ಮಕ್ಕೆ ತೃಪ್ತಿ ದೊರೆಯದೆ ಶಾಂತಿ ದೊರೆಯದೇ ಶಿವನು ಗುರು ಬಸವಣ್ಣನವರಾಗಿ ಅವತರಿಸಿ ನಿಜವಾದ ದೇವರು ಲಿಂಗದೇವರು ಎಂದು ಮನದಟ್ಟು ಮಾಡಿಕೊಟ್ಟರು.

ಗುರುವು ಪರಮಾತ್ಮನ ಪ್ರತಿನಿಧಿಯಾಗಿ ಬರುತ್ತಾನೆ. ಹೀಗೆ ಬಂದ ಗುರು ಬಸವಣ್ಣನವರು, ಭಕ್ತನ ಕಷ್ಟ ಸುಖಗಳನ್ನು ವಿಚಾರಿಸಿ, ಅವನ ಕರ್ಮವನ್ನು ಬಿಡಿಸಿ ಭವರೋಗವನ್ನು ಛೇದಿಸಿದರು.

`ಭಕ್ತ ತಾನೀತ ಎನಗೆ ವಿಸ್ತಾರವಾಗಿ’ ಎಂದರೆ ಗುರುಬಸವಣ್ಣನವರು ಪರಮಾತ್ಮನಿಗೆ ಪರಮ ಭಕ್ತರಾಗಿ ಉಳಿದೆಲ್ಲ ಭಕ್ತರಿಗೆ ಮಾದರಿ (Model) ಆದರು. ಜಂಗಮ-ಲಿಂಗದ ಸ್ವರೂಪವೇ ಬಸವಣ್ಣನವರು.

`ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯು ತಾನಾಗಿ’ ಎಂದರೆ, ಗುರುಬಸವಣ್ಣನವರ ಸಾನಿಧ್ಯ ಸಿಗುವುದಕ್ಕಿಂತ ಮುಂಚೆ, ನಾನು ತುಂಬಾ ಅರಸುತ್ತಿದ್ದೆ, ಹುಡುಕಾಟ ನಿಂತಿರಲಿಲ್ಲ. ಗುರುಬಸವಣ್ಣನವರು ಬಂದು ವಿಸ್ತಾರವಾದ ಪರಮಾತ್ಮನ ನೆಲೆಯನ್ನು ತಿಳಿಸಿರುವುದರಿಂದ ನನ್ನ ಅರಸುವಿಕೆಗೆ ನಿಲುಕಡೆಯಾದರು ಎಂದು ಮಡಿವಾಳ ಮಾಚಿದೇವರು ಗುರುಬಸವಣ್ಣನವರ ನಿಲುವನ್ನು ಕೊಂಡಾಡುತ್ತಾರೆ.

ಗುರುಬಸವಣ್ಣನವರು ಮಂತ್ರ ಪುರುಷರು, ದೇವರು ಕಲಿಸಿದೇ ಇರುವ ಅನೇಕ ಗುಣ ನಡತೆಗಳನ್ನು ಗುರುಬಸವಣ್ಣನವರು ನಮಗೆ ಕಲಿಸಿದ್ದಾರೆ ಅದಕ್ಕಾಗಿ ನಾವು ಅವರನ್ನು ಪೂಜಿಸಬೇಕು.

ವಚನ:
ಎನ್ನ ಕಾಯ ಬಸವಣ್ಣನ ಪೂಜಿಸಲಿಕ್ಕಾಯಿತು.
ಎನ್ನ ಜೀವ ಬಸವಣ್ಣನ ನೆನೆಯಲಿಕ್ಕಾಯಿತು.
ಎನ್ನ ಶ್ರೋತೃ ಬಸವಣ್ಣನ ಚಾರಿತ್ರವ ಕೇಳಲಿಕ್ಕಾಯಿತು.
ಎನ್ನ ಪ್ರಾಣ ಬಸವಣ್ಣನ ಸ್ತುತಿಸಲಿಕ್ಕಾಯಿತು.
ಎನ್ನ ನೇತ್ರ ಬಸವಣ್ಣನ ಸರ್ವಾಂಗವ ನೋಡಲಿಕ್ಕಾಯಿತು.
ಇಂತೆನ್ನ ಪಂಚೇಂದ್ರಿಯಂಗಳು ಕಲಿಗಳಾಗಿ
ಬಸವಣ್ಣನ ಹಿಡಿಯಲಿಕ್ಕಾಯಿತು.
ಬಸವಣ್ಣನ ಅರಿವಿನೊಳಗೆ ನಾನಿದ್ದೆನು,
ಬಸವಣ್ಣನ ಮರಹಿನೊಳಗೆ ನಾನಿದ್ದೆನು ಕಾಣಾ ಕಲಿದೇವರದೇವಾ.
-ಮಡಿವಾಳ ಮಾಚಿದೇವರು.

ಗುರುಬಸವಣ್ಣನವರನ್ನು ಪೂಜಿಸಬೇಕೆಂದು ಮಡಿವಾಳ ಮಾಚಿದೇವರು ಅಂದೇ ಹೇಳಿದ್ದಾರೆ. ಗುರುಬಸವಣ್ಣನವರನ್ನು ನೆನೆಯುವದರಿಂದ ಅವರನ್ನು ಸ್ತುತಿಸುವುದರಿಂದ, ಅವರ ಚರಿತ್ರೆ ಕೇಳುವುದರಿಂದ ಭವನಾಶವಾಗುತ್ತದೆ.

ವಚನ:
ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ಧನು ಬಸವಣ್ಣನ| ಪಾದಕ್ಕೆ
ಶರಣೆನ್ನಿರೆಲ್ಲ ಸರ್ವಜ್ಞ||

ವಚನ:
ಬಸವ ಎಂದೊಮ್ಮೆ ಮನವೊಸೆದು ನೆನೆದಡೆ
ಬಸವ ಅಸುವಿಂಗೆ ಅಸುವಾಗಿ ತೋರ್ಪನೈಸೆ
ಬಸವ ನಾಮವ ಬಿಡದೆ ರಸನೆಯೊಳಾವಾಗ
ಬಸವ ಬಸವ ಎಂಬೆ ಯೋಗಿನಾಥ
-ಲಿಂಗಾಂಗಯೋಗಿ ಸಿದ್ಧರಾಮೇಶ್ವರ

ಬಸವ ಎಂದು ಭಕ್ತಿಯಿಂದ ನೆನೆದರೆ, ನಮ್ಮ ಪ್ರಾಣಕ್ಕೆ ಪ್ರಾಣಕೊಟ್ಟು ಗುರುಬಸವಣ್ಣನವರು ನಮ್ಮನ್ನು ರಕ್ಷಿಸುತ್ತಾರೆ ಎಂದು ಸಿದ್ಧರಾಮೇಶ್ವರರು ಹೇಳುತ್ತಾರೆ.
ಗುರುಬಸವಣ್ಣನವರು ಲಿಂಗೈಕ್ಯರಾದ ಪವಿತ್ರ ದಿನವಾದ ಬಸವಪಂಚಮಿಯಂದು ನಾವು ಅವರ ನೆನಹಿನಲ್ಲಿ, ಅವರ ವಚನಗಳನ್ನು ಓದುವುದರಲ್ಲಿ ದಿನ ಕಳೆಯಬೇಕು. ಹುತ್ತಕ್ಕೆ ಹಾಲನ್ನೆರೆಯುವಂಥ ಮೂಢಾಚರಣೆಗಳನ್ನು ಬಿಟ್ಟು ಬಿಡಬೇಕು.

ಎಷ್ಟು ದಿನಾ ಇನ್ನೂ ಹಾಗೇ ಅಜ್ಞಾನದಲ್ಲಿಯೇ ಬದುಕುವುದು. ಹಾವು ಹಾಲು ಕುಡಿಯವುದೇ ಇಲ್ಲ. ಪಿಂಡಜದಿಂದ ಹುಟ್ಟಿದ ಪ್ರಾಣಿಗಳು ಮಾತ್ರ ಹಾಲು ಕುಡಿಯುತ್ತವೆ. ಅಂಡಜದಿಂದ ಹುಟ್ಟಿದ ಪ್ರಾಣಿಗಳು ಹಾಲು ಕುಡಿಯುವುದಿಲ್ಲ. ಅಂದರೆ ತಾಯಿಯ ಗರ್ಭದಿಂದ ಹುಟ್ಟಿದ ಪ್ರಾಣಿಗಳು ಮಾತ್ರ ಹಾಲು ಕುಡಿಯುತ್ತವೆ. ಮೊಟ್ಟೆಯಿಂದ ಹುಟ್ಟಿರುವ ಪ್ರಾಣಿ, ಪಕ್ಷಿಗಳು ಹಾಲು ಕುಡಿಯುವುದಿಲ್ಲ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಬಡಮಕ್ಕಳಿಗೆ ಹಾಲು ಕುಡಿಸಬೇಕು.

ಗುರುಬಸವಣ್ಣನವರು ಲಿಂಗೈಕ್ಯದ ಬಗ್ಗೆ ಕೆಲವರು ವಿಚಿತ್ರವಾಗಿ ಬರೆಯುತ್ತಾರೆ. ಅಂಥವರಿಗೆ ವಚನ ಸಾಹಿತ್ಯದ ಅರಿವು ಇರುವುದಿಲ್ಲ. ಆತ್ಮ ಕಥನದಂತಿರುವ ಗುರುಬಸವಣ್ಣನವರ ವಚನಗಳು ಅವರು ಹೇಗೆ ಲಿಂಗೈಕ್ಯರಾದರು ಎಂಬುವುದನ್ನು ಸ್ಪಷ್ಟಪಡಿಸುತ್ತವೆ. ಗುರುಬಸವಣ್ಣನವರು ಲಿಂಗೈಕ್ಯರಾದ ಸ್ಥಿತಿಯನ್ನು ಮಡಿವಾಳ ಮಾಚಿದೇವರು ಕಣ್ಣಾರೆ ನೋಡಿ ಅನೇಕ ವಚನಗಳನ್ನು ಬರೆದಿದ್ದಾರೆ.

ಗುರುಬಸವಣ್ಣನವರು ಲಿಂಗೈಕ್ಯರಾದಾಗ, ನದಿ ಪ್ರವಾಹ ಹೆಚ್ಚಾಗಿರುವುದರಿಂದ ನೀಲಾಂಬಿಕಾ ತಾಯಿಯವರು ಇನ್ನೊಂದು ದಡದಲ್ಲಿ ತಂಗಿದ್ದರು. ಗುರುಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ಕೇಳಿದಾಗ ಮೊದಲಿಗೆ ಮನಸ್ಸಿಗೆ ಸ್ವಲ್ಪ ಆಘಾತವಾಗಿರಬೇಕು. ಆದರೆ ಜ್ಞಾನಿಗಳು ಆ ರೀತಿ ನೊಂದುಕೊಳ್ಳಬಾರದು ಎಂದು ಅವರು ತಮ್ಮ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುತ್ತಾರೆ ಅಂಥ ಅನೇಕ ವಚನಗಳನ್ನು ಬರೆದಿದ್ದಾರೆ.

ವಚನ:
ನಾನಾರ ಸಾರುವೆನೆಂದು ಚಿಂತಿಸಲೇಕಯ್ಯಾ ಬಸವಾ.
ನಾನಾರ ಹೊಂದುವೆನೆಂದು ಭ್ರಮೆ ಪಡಲೇಕಯ್ಯಾ ಬಸವಾ.
ನಾನಾರ ಇರವನರಿವೆನೆಂದು ಪ್ರಲಾಪಿಸಲೇಕಯ್ಯಾ ಬಸವಾ
ಪರಿಣಾಮ ಮೂರ್ತಿ ಬಸವನ ರೂಪು ಎನ್ನ ಕರಸ್ಥಲದಲ್ಲಿ
ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇಕಯ್ಯಾ ಬಸವಾ
-ಮಹಾ ಶರಣೆ ನೀಲಗಂಗಾಂಬಿಕೆ

“ನಾನೀಗ ಯಾರ ಹತ್ತಿರ ಹೋಗಲಿ? ಯಾರನ್ನು ನನ್ನವರೆನ್ನಲಿ? ಎಂದು ಕಳವಳ ಪಡಬೇಡ, ಗುರುಬಸವಣ್ಣನವರು ನಿನ್ನ ಕರಸ್ಥಲದಲ್ಲಿಯೇ ಇದ್ದಾರೆ”ಎಂದು ತಮ್ಮ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುತ್ತಿದ್ದಾರೆ.

“ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣಾ”

ಆತ್ಮಕ್ಕೆ ಹೊದ್ದಿದ್ದ ದೇಹವೆಂಬ ಸೀರೆಯನ್ನು ಬಿಟ್ಟು ಹೋಗಿದ್ದಾರೆ. “ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣಾ”

ತಮ್ಮ ಮಸ್ತಕದ ಮಹಾಜ್ಞಾನವೆಂಬ ಮುಡಿಯನ್ನು ವಚನಗಳ ರೂಪದಲ್ಲಿ ಕೊಟ್ಟು ಗುರುಬಸವಣ್ಣನವರು ಹೋಗಿದ್ದಾರೆ.

ಈ ವಚನವನ್ನು ಮಡಿವಾಳ ಮಾಚಿದೇವರು ಗುರುಬಸವಣ್ಣನವರು ಲಿಂಗೈಕ್ಯರಾದ ಮೇಲೆ ಬರೆದ ವಚನ.

”ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣಾ” ಎನ್ನುತ್ತಾರೆ.

ಗುರುಬಸವಣ್ಣನವರ ಆತ್ಮಜ್ಯೋತಿಯ ಬೆಳಗು, ಪರಮಾತ್ಮ ಜ್ಯೋತಿಯ ಮಹಾ ಬೆಳಗಿನಲ್ಲಿ ಸಮರಸಗೊಳ್ಳುವ ಕ್ಷಣಗಳನ್ನು ಮಡಿವಾಳ ಮಾಚಿದೇವರು ನೋಡಿದ್ದಾರೆ ಎಂದು ನನಗನಿಸುತ್ತದೆ.

ಮಡಿವಾಳ ಮಾಚಿದೇವರು ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ಬಚ್ಚಿಟ್ಟು ಶರಣರಿಗಾದ ವಿಜಯವನ್ನು ಗುರುಬಸವಣ್ಣನವರಿಗೆ ತಿಳಿಸಲು, ಕೂಡಲ ಸಂಗಮಕ್ಕೆ ಬರುತ್ತಾರೆ. ಅಲ್ಲಿಗಾಗಲೇ ಗುರುಬಸವಣ್ಣನವರು, ದೇಹದಿಂದ ಆತ್ಮವನ್ನು ಭೇದಿಸಲು ಇಷ್ಟಲಿಂಗಯೋಗದಲ್ಲಿ ತಲ್ಲೀನರಾಗಿದ್ದರು. ಅದಕ್ಕಾಗಿ ಮಡಿವಾಳ ಮಾಚಿದೇವರಿಗೆ ಕೊನೆಯ ಕ್ಷಣದಲ್ಲಿ ಗುರುಬಸವಣ್ಣನವರೊಂದಿಗೆ ಮಾತನಾಡಲಿಕ್ಕೆ ಆಗಿಲ್ಲ.

ಅದಕ್ಕೆ ಅವರು ತುಂಬಾ ದುಃಖದಿಂದ ಪ್ರಲಾಪಿಸಿದ್ದಾರೆ ಇಂಥ ಅನೇಕ ವಚನಗಳನ್ನು ಮಡಿವಾಳ ಮಾಚಿದೇವರು ಬರೆದಿದ್ದಾರೆ.
ಎಲ್ಲಕ್ಕೂ ಮಿಗಿಲಾಗಿ ಆತ್ಮ ಕಥನದಂತಿರುವ ಗುರುಬಸವಣ್ಣನವರ ವಚನಗಳು ಅವರು ಹೇಗೆ ಲಿಂಗೈಕ್ಯರಾದರು ಎನ್ನುವುದನ್ನು ತಿಳಿಸಿಕೊಡುತ್ತವೆ.

ಬಸವ ಕಲ್ಯಾಣದಿಂದ ಹೋದ ನಂತರ ಕೂಡಲ ಸಂಗಮದಲ್ಲಿ ಸಂಪೂರ್ಣವಾಗಿ ಅಂತರ್ಮುಖಿಗಳಾಗಿ, ಇಷ್ಟಲಿಂಗ ಯೋಗದಲ್ಲಿ ತಲ್ಲೀನರಾಗುತ್ತಾರೆ. ಭಾವಲಿಂಗೈಕ್ಯ ಸ್ಥಿತಿಯ ಅನೇಕ ವಚನಗಳನ್ನು ಬರೆದಿದ್ದಾರೆ. ಇದಾದ ಮೇಲೆ ಕಾಯಲಿಂಗೈಕ್ಯವಾಗುತ್ತಾರೆ. ಅವರ ಕೊನೆಯ ವಚನವೇನೋ ಎಂಬಂತಿದೆ ಈ ವಚನ.
ವಚನ:
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಯಿತ್ತು.
ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ
ಲಿಂಗದೇವ ತನಗೆ ಬೇಕೆಂದು ಎತ್ತಿಕೊಂಡ

ಪರಮಾತ್ಮನ ಭಕ್ತಿ ಮಾಡುತ್ತಲೇ ಇರುವಾಗ ಗುರುಬಸಣ್ಣನವರಿಗೆ ಪರಮಾತ್ಮನ ಅನುಗ್ರಹವಾಗಿ ಅವರು ಅವನ ಪ್ರತಿನಿಧಿಯಾಗಿ, ಮರ್ತ್ಯ ಲೋಕದ ಉದ್ಧಾರಗೈಯಲು ಗುರುವಾದರು.
(ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿತು.)

ಅವರಲ್ಲಿ ಲಿಂಗವೆಂಬ ಎಲೆ ಚಿಗುರಿತು. ವಿಚಾರ (ವಚನ ಸಾಹಿತ್ಯ)ವೆಂಬ ಹೂವಾಗಿ, ಅದು ಸುತ್ತಲೂ ತನ್ನ ಪರಿಮಳವನ್ನು ನೀಡಿತು.

ನಂತರ ಎಲ್ಲಾ ವಿಚಾರಗಳು ಅಲ್ಲಿ ಆಚರಣೆಗೆ (ಕಾಯಿಯಾದವು) ಬಂದವು.

ಇದಾದ ಮೇಲೆ ಗುರುಬಸವಣ್ಣನವರ ಮನಸ್ಸು ನಿಷ್ಪತ್ತಿಯ ಹಣ್ಣಾಯಿತ್ತು.

ಅವರಿಗೆ ಮತ್ರ್ಯಲೋಕದೊಂದಿಗಿನ ಸಂಬಂಧ ಕಳಚಿಕೊಳ್ಳಬೇಕೆನಿಸಿ ದೇಹದಿಂದ ಆತ್ಮ ಬೇರ್ಪಡಿಸುತ್ತಿರುವಾಗಲೇ ಪರಮಾತ್ಮ ಚೈತನ್ಯ ಬಂದು ಗುರುಬಸವಣ್ಣನವರ ಆತ್ಮಚೈತನ್ಯವನ್ನು ಅಪ್ಪಿಕೊಂಡಿತು.

ಶಾರೀರಿಕವಾಗಿ ಗುರುಬಸವಣ್ಣನವರೂ ಅಗಲಿದ್ದರೂ, ವಚನಗಳ ರೂಪದಲ್ಲಿ ಎಂದೆಂದಿಗೂ ನಮ್ಮ ಜೊತೆಯಲ್ಲಿಯೇ ಇದ್ದಾರೆ. ವಚನಗಳು ಗುರು ಬಸವಣ್ಣನವರ ಅಶರೀರ ವಾಣಿಗಳು. ಅದಕ್ಕಾಗಿ ವಚನ ಸಾಹಿತ್ಯವನ್ನು ಓದುತ್ತ ಇದನ್ನು ಮುಂಬರುವ ನಮ್ಮ ಮಕ್ಕಳಿಗೂ ಬಳುವಳಿಯಾಗಿ ನೀಡುತ್ತ, ಬಸವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ.

ಗುರು ಬಸವಣ್ಣನವರ ಲಿಂಗೈಕ್ಯ ದಿನವಾದ ಈ ಶುಭದಿನದಂದು ಗುರುಬಸವಣ್ಣನವರಿಗೆ ಅನಂತ ಶರಣು ಶರಣಾರ್ಥಿಗಳನ್ನು ಸಲ್ಲಿಸೋಣ.


ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ.
-9886694454

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.