Take action for meaningful celebration of Sri Nuli’s Chandaiya Jayanti: Sidrameshwar
ಪೂರ್ವಭಾವಿ ಸಭೆ
ಕೊಪ್ಪಳ, ಆಗಸ್ಟ್ 08 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಆಗಸ್ಟ್ 19ರಂದು ಆಚರಿಸಲಾಗುವ ಶ್ರೀ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸುವ ಮೂಲಕ ಅರ್ಥಪೂರ್ಣ ಆಚರಣೆಗೆ ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಹೇಳಿದರು.
ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 08ರಂದು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ನಿಗದಿಪಡಿಸಿದಂತೆ ಆಗಸ್ಟ್ 19ರಂದು ಜಿಲ್ಲಾ ಕೇಂದ್ರದಲ್ಲಿ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ, ತಾಲ್ಲೂಕಾ ಕಚೇರಿ, ಶಾಲಾ, ಕಾಲೇಜು ವಸತಿ ನಿಲಯಗಳಲ್ಲಿ ಜಯಂತಿ ಆಚರಣೆ ಮಾಡಲಾಗುತ್ತದೆ. ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳ ಸಹಕಾರವೂ ಅಗತ್ಯವಿದ್ದು, ಜಿಲ್ಲಾಡಳಿತದೊಂದಿಗೆ ಸಹಕರಿಸಿ ವ್ಯವಸ್ಥಿತ ಜಯಂತಿ ಆಚರಣೆಗೆ ಎಲ್ಲಾ ಸಮಾಜದವರು ಅನುಕೂಲ ಮಾಡಿಕೊಡಬೇಕು. ಹಾಗೆಯೇ ಜಯಂತಿ ಆಚರಣೆಗೆ ಸಂಬಂಧಿಸಿದ ಇಲಾಖೆಗಳು ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಹೇಳಿದರು.
ಆ.19 ರಂದು ಬೆಳಿಗ್ಗೆ 09 ಗಂಟೆಗೆ ನಗರದ ಗವಿಸಿದ್ದೇಶ್ವರ ಮಠದ ಆವರಣದಿಂದ ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ನುಲಿಯ ಚಂದಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸುತ್ತವೆ. ಬೆಳಿಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮೆರವಣಿಗೆ ಸಾಗುವ ಮಾರ್ಗ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಸಾಹಿತ್ಯ ಭವನದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರಸಭೆ ಕಲ್ಪಿಸಬೇಕು. ವೇದಿಕೆ ಅಲಂಕಾರ, ಗಣ್ಯರಿಗೆ ಪುಸ್ತಕ ವಿತರಣೆ, ಪೂಜೆಗೆ ಹೂವು, ಹಾರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒದಗಿಸಬೇಕು. ಪೊಲೀಸ್ ಇಲಾಖೆಯಿಂದ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಸಾಹಿತ್ಯ ಭವನದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಬೇಕು. ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ, ಗಣ್ಯರ ಆಹ್ವಾನಕ್ಕೆ ತಹಶೀಲ್ದಾರರು ಕ್ರಮ ವಹಿಸಬೇಕು. ಉಳಿದಂತೆ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಜಯಂತಿ ಆಚರಣೆಗೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಹೇಳಿದರು.
ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆಗಾಗಿ ಕಲಾವಿದರು ಹಾಗೂ ಉಪನ್ಯಾಸ ನೀಡಲು ಉಪನ್ಯಾಸಕರನ್ನು ಸಮಾಜದವರ ಸಲಹೆಯಂತೆ ಆಯ್ಕೆ ಮಾಡಿ ಅವರನ್ನು ಆಹ್ವಾನಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರದ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಎ.ಬಸವರಾಜ, ಸಮಾಜದ ರಾಜ್ಯ ಉಪಾಧ್ಯಕ್ಷರಾದ ಕಂಬಣ್ಣ, ಜಿಲ್ಲಾಧ್ಯಕ್ಷರಾದ ಬಸವರಾಜ ಭಜಂತ್ರಿ, ಮುಖಂಡರಾದ ನಾಗಪ್ಪ, ಲಕ್ಷ್ಮಣ, ತಿಪ್ಪಣ್ಣ ಭಜಂತ್ರಿ, ಜಗದೀಶ್ ಕಾರಟಗಿ ಸೇರಿದಂತೆ ಇನ್ನೂ ಪ್ರಮುಖರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.