Breaking News

1924 ರ ಕಾಂಗ್ರೆಸ್ ಅಧಿವೇಶನದಶತಮಾನೋತ್ಸವ ಆಚರಣೆ ಅಧಿಕೃತ ನಿರ್ಣಯ ಸಚಿವಎಚ್.ಕೆ.ಪಾಟೀಲ ಮಂಡನೆ

1924 Congress Session Centenary Celebration Official Resolution Presented by Minister HK Patil

ಜಾಹೀರಾತು
ಜಾಹೀರಾತು

ಕರ್ನಾಟಕ ಏಕೀಕರಣ,ಸ್ವರಾಜ್ಯ ಪಕ್ಷ ವಿಲೀನ , ಸೌಹಾರ್ದತೆಯ ಭಾವನೆಗಳನ್ನು ಬಿತ್ತಿದ ನೆಲ ಬೆಳಗಾವಿ

ಬೆಳಗಾವಿ ,ಸುವರ್ಣಸೌಧ (ಕರ್ನಾಟಕ ವಾರ್ತೆ) ಡಿ.19: Lಬೆಳಗಾವಿಯಲ್ಲಿ 1924 ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವು ದೇಶದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಹೊಸಶಕ್ತಿ ನೀಡುವ ವಿಚಾರಗಳು, ಕರ್ನಾಟಕ ಏಕೀಕರಣಕ್ಕೆ ಮುನ್ನುಡಿ , ಸ್ವಾತಂತ್ರ್ಯ ಹೋರಾಟದಿಂದ ಹೊರ ಉಳಿದಿದ್ದವರನ್ನು ಕಾಂಗ್ರೆಸ್ ತೆಕ್ಕೆಗೆ ಸೇರಿಸಿಕೊಂಡು ಹೋರಾಟಕ್ಕೆ ಅಣಿಗೊಳಿಸುವುದು.ಹಿಂದೂ ಮುಸ್ಲಿಂ ಭಾವೈಕ್ಯತೆ ಭಾವನೆಗಳನ್ನು ಗಟಿಗೊಳಿಸುವದು ಸೇರಿದಂತೆ ಮಹತ್ವದ ಚಾರಿತ್ರಿಕ ನಿರ್ಣಯಗಳಿಗೆ ಸಾಕ್ಷಿಯಾಗಿದೆ. ಬರುವ ಡಿಸೆಂಬರ್ 26 ಹಾಗೂ 27 ರಂದು ಬೆಳಗಾವಿಯಲ್ಲಿ ಶತಮಾನೋತ್ಸವ ಆಚರಣೆಗೆ ಚಾಲನೆ ನೀಡಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಹೇಳಿದರು.

ವಿಧಾನಸಭೆಯಲ್ಲಿ ಇಂದು ಈ ಕುರಿತು ಅಧಿಕೃತ ನಿರ್ಣಯ ವಾಚನ ಮಾಡಿದರು.

ಬೆಳಗಾವಿಯಲ್ಲಿ 1924ರಲ್ಲಿ ನಡೆದ 39ನೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಅಂದು ದೇಶದ ಸ್ವಾಂತ್ರತ್ಯಕ್ಕಾಗಿ, ಸ್ವರಾಜ್ಯ ಸ್ಥಾಪನೆಗಾಗಿ, ಸರ್ವ ಜನರ ಸ್ವಾಭಿಮಾನಕ್ಕಾಗಿ ಹೋರಾಡುತ್ತಿದ್ದ ದೇಶದ ಏಕೈಕ ಬೃಹತ್ ಸಂಘಟನೆ ಭಾರತ ರಾಷ್ಟ್ರೀಯ ಕಾಂಗ್ರೆಸ್. ಹೀಗಾಗಿಯೇ ಈ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಬೇರೆ ಬೇರೆ ಕಾರಣಗಳಿಂದ ಕಾಂಗ್ರೆಸ್‌ನಿಂದ ದೂರ ಇದ್ದವರು ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದವರು ಈ ಅಧಿವೇಶನದ ನಂತರ ಮನಃಪರಿವರ್ತನೆಗೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಗೆ ಮರಳಲಾರಂಭಿಸಿದ್ದರು. ಮುನಿಸಿಕೊಂಡಿದ್ದ ಸ್ವರಾಜ್ಯ ಪಕ್ಷದವರನ್ನೂ ಮತ್ತು ಮುಸ್ಲಿಮರನ್ನು ಪುನಃ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಒಂದುಗೂಡಿಸಿದ್ದರಿಂದ ಈ ಅಧಿವೇಶನವು ಐಕ್ಯತಾ ಸಮ್ಮೇಳನ ಎಂದೇ ಹೆಸರು ಪಡೆದಿದೆ ಎಂದರು.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿಯೇ ವಿಶೇಷವಾದ ಅಧಿವೇಶನ ಎಂಬ ಹೆಗ್ಗಳಿಕೆಗೂ ಈ ಬೆಳಗಾವಿ ಅಧಿವೇಶನ ಪಾತ್ರವಾಗಿದೆ. ಇದಕ್ಕೆ ಕಾರಣ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದು. ಅಲ್ಲದೆ ನಮ್ಮ ರಾಜ್ಯದಲ್ಲಿ ನಡೆದ ಏಕೈಕ ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ಅಧಿವೇಶನ ಕೂಡ ಹೌದು. ಹಿಂದೂ-ಮುಸ್ಲಿಂ ಸೌಹಾರ್ದತೆಯನ್ನು ಸಾರಿ, ಏಕತೆಯಿಂದ ಅಖಂಡ ಭಾರತದಾದ್ಯಂತ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೆಚ್ಚಿಸಿದ, ‘ಗಾಂಧಿ’ಎನ್ನುವ ಬಿಂಬ ಸಾವಿರ ಕಣ್ಣುಗಳಲ್ಲಿ ಸಾವಿರ ತೆರನಾಗಿ ರೂಪಗೊಳ್ಳಲು ಕಾರಣವಾದ ವೇದಿಕೆ ಇದಾಗಿತ್ತು ಎಂದು ಹೇಳಿದರು.

1924ರ ವರೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬರಿ ಸ್ವಾತಂತ್ರ್ಯ ಹೋರಾಟಕ್ಕೆ ಮೀಸಲಾಗಿದ್ದ ರಾಜಕೀಯ ಸಂಘಟನೆ. ಆದರೆ ಈ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ್ದ ಮಹಾತ್ಮ ಗಾಂಧೀಜಿಯವರು ಭಾರತದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಾಜ ಸುಧಾರಣೆಗಾಗಿಯೂ ಶ್ರಮಿಸುವ ಅಗತ್ಯವನ್ನು ಒತ್ತಿ ಹೇಳುವುದರ ಮೂಲಕ ಪಕ್ಷವನ್ನು ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೂ ಅಣಿಗೊಳಿಸಿದ್ದರು. ಅಸ್ಪಶ್ಯತೆಯ ಆಳ- ಅಗಲವನ್ನು ಎತ್ತಿ ತೋರಿಸಿ, ಇದರ ನಿವಾರಣೆಗೆ ಇಡೀ ದೇಶ ನಿರ್ಣಯಿಸುವಂತೆ ಮಹಾತ್ಮ ಗಾಂಧೀಜಿ ಈ ವೇದಿಕೆಯ ಮೂಲಕವೇ ಮಾಡಿದ್ದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಹಲವಾರು ಸಂಘಟನೆಗಳನ್ನು ಸ್ಥಾಪಿಸಲಾಯಿತು. ಅಸ್ಪಶ್ಯತೆ ವಿರುದ್ಧದ ಕಾರ್ಯಕ್ರಮಗಳು ಚಳವಳಿಯ ಸ್ವರೂಪ ಪಡೆದುಕೊಂಡಿದ್ದವು. ಈ ಅಧಿವೇಶನದ ಮೂಲಕ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಧೋರಣೆಗಳು ಕೂಡ ಬದಲಾಗಿದ್ದವು.

ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಚರಕದ ಮೂಲಕ ಹೋರಾಟ ಆರಂಭಿಸಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ, ಚರಕದ ಮಹತ್ವವನ್ನು ಮಹಾತ್ಮಗಾಂಧೀಜಿ ಮನಮುಟ್ಟುವಂತೆ ತಿಳಿ ಹೇಳಿದ್ದು ಇದೇ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನದಲ್ಲಿ. ಮುಂದೆ ಖಾದಿ ಪ್ರಚಾರ ಚುರುಕು ಪಡೆದು, ಇಡೀ ದೇಶ ಖಾದಿಮಯವಾಗಿತ್ತು. ವಿದೇಶಿ ವಸ್ತ್ರ ದಹನ ಸಾಮನ್ಯ ಎಂಬಂತಾಗಿತ್ತು. “ಅಖಿಲ ಭಾರತ ಚರಕ ಸಂಘ ಸ್ಥಾಪನೆಗೂ ಕಾರಣವಾಯಿತು. ಚರಕದ ನೂಲು ಬ್ರಿಟೀಷರ ಪಾಲಿಗೆ ಉರುಳಾಗತೊಡಗಿತ್ತು.

1924ರ ಡಿಸೆಂಬರ್ 26 ಮತ್ತು 27 ರಂದು ನಡೆದ ಈ ಅಧಿವೇಶನದಲ್ಲಿ ಅಖಂಡ ಭಾರತದ ಮೂಲೆ ಮೂಲೆಯಿಂದ ಆಗಮಿಸಿದ್ದ 1,844 ಪ್ರತಿನಿಧಿಗಳು ಭಾಗವಹಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುತ್ತಿದ್ದ ಬಹುತೇಕ ಎಲ್ಲ ನಾಯಕರೂ ಈ ಅಧಿವೇಶನದಲ್ಲಿದ್ದರು. ಬಹಳ ಮುಖ್ಯವಾದ ಒಟ್ಟು 16 ನಿರ್ಣಯಗಳು ಅಂಗೀಕರಿಸಲ್ಪಟ್ಟವು. ಅಧಿವೇಶನದ ಜತೆ ಜತೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಮಾನಾಂತ ಸಮ್ಮೇಳನಗಳು ನಡೆದಿದ್ದವು. ಇದರಲ್ಲಿ ಕರ್ನಾಟಕ ಏಕೀಕರಣದ ಸಮ್ಮೇಳನವೂ ಒಂದು. ಈ ಸಮ್ಮೇಳನದ ಮೂಲಕ ನಮ್ಮ ನಾಡಿನ ಏಕೀಕರಣದ ಹೋರಾಟಕ್ಕೆ ಅಧಿಕೃತವಾಗಿ ಚಾಲನೆ, ಪ್ರೇರಣೆ ದೊರೆತಿತ್ತು. ಸ್ವಾತಂತ್ರ್ಯ ಹೋರಾಟದೊಂದಿಗೇ ನಾಡುಕಟ್ಟುವ ಕಾರ್ಯವೂ ಆರಂಭಗೊಂಡಿತ್ತು ಎಂದು ಇತಿಹಾಸ ಸ್ಮರಿಸಿದರು.

ಹಲವಾರು ಕಾರಣಗಳಿಂದಾಗಿ ಮಹತ್ಮಾ ಗಾಂಧೀಜಿಯವರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಅಧಿವೇಶನ ಸಂಘಟನೆ, ಸಮರ್ಥ ಆಯೋಜನೆ, ಶಿಸ್ತುಬದ್ಧ ಕಾರ್ಯಕಲಾಪ, ಪ್ರಜಾತಾಂತ್ರಿಕ ಮೌಲ್ಯಗಳಿಗೆ ಮನ್ನಣೆ ಈ ಎಲ್ಲ ಕಾರಣಗಳಿಂದಾಗಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಇಂಥ ಘಟನೆ, ಅಧಿವೇಶನ ನಡೆದು ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಣೆ ಹೊಸ ಪೀಳಿಗೆಗೆ ಸ್ಪೂರ್ತಿ, ಪ್ರೇರಣೆ ನೀಡಲಿ ಎಂದು ತಮ್ಮ ನಿರ್ಣಯದ ಮೂಲಕ ಆಶಯ ವ್ಯಕ್ತಪಡಿಸಿದರು.

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.