Competitive Examination Supplement for Higher Education—Saraswati Abbigeri.
ಯಲಬುರ್ಗಾ— ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಉನ್ನತ ವ್ಯಾಸಂಗ ಮಾಡಲು ಸಂಕಲ್ಪ ಮಾಡಬೇಕೆಂದು ತಾಲೂಕಿನ ತರಲಕಟ್ಟಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಸರಸ್ವತಿ ಅಬ್ಬಿಗೇರಿ ವಿದ್ಯಾರ್ಥಿಗಳಿಗೆ ಕರೆನೀಡಿದರು.
ತಾಲೂಕಿನ ತರಲಕಟ್ಟಿ ಸರಕಾರಿಪ್ರೌಢ ಶಾಲೆಯಲ್ಲಿ ಕನಕಗಿರಿ ತಾಲೂಕಿನ ತಿಪ್ಪನಾಳದ ಶ್ರೀಮತಿ ಪಾರ್ವತಮ್ಮಬಸನಗೌಡ ಎಜುಕೇಷನಲ್ ಮತ್ತು ರೂರಲ್ ಡೆವಲಪ್ಮೆಂಟ್ ಟ್ರಸ್ಟ ವತಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಯೋಜಿಸಿದ
ಕೇಂದ್ರ ಸರಕಾರದ ಶಿಷ್ಯ ವೇತನ ಎನ್.ಎಮ್.ಎಸ್. ಪರೀಕ್ಷೆಯ ಪೂರ್ವಭಾವಿ ತರಬೇತಿಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಸಸಿ ಹೆಮ್ಮರವಾಗಿ ಬೆಳೆದು ಎಲ್ಲರಿಗೂ ನೆರಳನ್ನು ಮುಂದೆ ಹೇಗೆ ಕೊಡುವುದೊ ಹಾಗೆ ತಾವು ಒಳ್ಳೆ ವಿಧ್ಯಾಭ್ಯಾಸಮಾಡಿ ತಮ್ಮ ಹೆತ್ತವರಿಗೆ ಆಶ್ರಯಧಾತರಾಗಬೇಕೆಂದು ಕರೆನೀಡಿದ ಅವರು ತಿಪ್ಪನಾಳ ಗ್ರಾಮದ ಪಾರ್ವತಮ್ಮ ಬಸನಗೌಡ ರವರ ಸಂಸ್ಥೆ ಹಲವಾರು ವರುಷಗಳಿಂದ ನಿಸ್ವಾರ್ಥಸೇವೆಯನ್ನು ಮಾಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿ ಅವರ ಬಾಳನ್ನು ರೂಪಿಸಲು ಸಹಕಾರಿ ಆಗಿರುವುದು ಹೆಮ್ಮೆಯ ವಿಷಯವಾಗಿದೆ . ಆ ಟ್ರಸ್ಟ ಮುಂದಿನ ದಿನಮಾನಗಳಲ್ಲಿ ಇನ್ನು ಹಲವಾರು ಯೋಜನೆಗಳನ್ನು ಹಾಕಿಕೊಂಡು ಯಶಸ್ವಿಯಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಹೆಸರು ಮಾಡಲಿ ಎಂದು ಶುಭಹಾರೈಸಿದರು.
ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನಗೌಡ ಪಾಟೀಲ ರವರು ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.
ಶಿಕ್ಷಕರಾದ ಮಹಾಂತೇಶ ಹುನಗುಂದ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ಅನೇಕ ಕಾರ್ಯಗಾರಗಳನ್ನು ರೂಪಿಸುವ ಮೂಲಕ ಹಲವಾರು ವಿದ್ಯಾರ್ಥಿಗಳ ಬಾಳಭವಿಷ್ಯತ್ತನ್ನು ರೂಪಿಸಲು ಸಹಕಾರಿಯಾಗಿದೆ ಎಂದರಲ್ಲದೇ ಸರಕಾರದ ಅನುದಾನವನ್ನು ನಿರೀಕ್ಷಿಸದೆ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಿಲು ಉಚಿತವಾಗಿ ತರಬೇತಿ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿಯಲ್ಲಿ ಭಾಗವಹಿಸಿದ್ದರು.
ಕುಮಾರಿ ಅಂಜನಾದೇವಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಮಹಾಂತೇಶ ಕಿಮ್ಮೂರಿ ನಿರೂಪಿಸಿದರುˌ ಬಸವರಾಜ ಮೇಟಿ ಸ್ವಾಗತಿಸಿದರು. ಶಿಕ್ಷಕ ಸತ್ಯನಾರಯಣ ಮುತ್ತಗಿ ವಂದಿಸಿದರು.