The service of civic workers to beautify the town is invaluable President Kavali Shivappa Nayaka
ಕೂಡ್ಲಿಗಿ:ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯವಾಗಿದ್ದು, ಸಾರ್ವಜನಿಕರು ಸಹ ಸಹಕಾರ ಮಾಡಿದಲ್ಲಿ ಸ್ವಚ್ಚ ಹಾಗೂ ಸುಂದರ ಪಟ್ಟಣವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ತಿಳಿಸಿದರು. ಪಟ್ಟಣದ ಪಪಂ ಕಚೇರಿ ಆವರಣದಲ್ಲಿ ಸೋಮವಾರ ಪಪಂ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೌಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದರು. ಪೌರ ಕಾರ್ಮಿಕರ ಖಾಯಂ ಸೇರಿದಂತೆ ಯಾವುದೇ ಬೇಡಿಕೆಗಳು ಇದ್ದರು, ಅದಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.ಅಲ್ಲದೇ ಪಟ್ಟಣದ ಸ್ವಚ್ಚತಗೆ ಇನ್ನೂ ಹೆಚ್ಚಿನ ಪೌರ ಕಾರ್ಮಿಕರ ನೇಮಕ ಮಾಡುವ ಕುರಿತು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅವರೊಂದಿಗೆ ಸರ್ವ ಸದಸ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಅದಕ್ಕೆ ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ ಮಾತನಾಡಿ, ಪೌರ ಕಾರ್ಮಿಕರು ದೇಶದ ಸೈನಿಕರಂತೆ ತಮ್ಮ ಸೇವೆಯನ್ನು ನಿಷ್ಕಾಮದಿಂದ ಸಲ್ಲಿಸುತ್ತಾರೆ. ಅವರಿಲ್ಲದೆ ಇದ್ದರೆ ಸ್ವಚ್ಚ ಹಾಗೂ ಸುಂದರ ಪರಿಸರ ಅಸಾಧ್ಯ, ಕರೋನ ಕಾಲದಲ್ಲೂ ಸಹ ತಮ್ಮ ಜೀವದ ಹಂಗು ತೊರೆದು ಕಾರ್ಯ ಸಲ್ಲಿಸಿದ್ದಾರೆ. ಅವರ ಸೇವೆ ಶ್ಲಾಘನೀಯವಾದದ್ದು, ಆದರೆ ಜನರು ಪೌರ ಕಾರ್ಮಿಕರೆಂದು ಅಸಡ್ಡೆ ತೋರದೆ ಅವರ ಜತೆ ಸಹಕರಿಸಿದಲ್ಲಿ ಸುಂದರ ಪಟ್ಟಣ ನಿರ್ಮಾಣ ಸಾಧ್ಯ ಎಂದರು.
ಇದೇ ಸಂಧರ್ಭದಲ್ಲಿ ಪಟ್ಟಣದ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನ ಮಾಡಲಾಯಿತು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್, ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಓಬಣ್ಣ, ಶಾಖಾ ಅಧ್ಯಕ್ಷ ಸುಂಕಣ್ಣ, ಪಪಂ ಸದಸ್ಯರಾದ ಕೆ.ಈಶಪ್ಪ, ಪೂರ್ಯಾ ನಾಯ್ಕ್, ಬಾಸೂ ನಾಯ್ಕ್, ಪೌರ ನೌಕರರ ಸಂಘದ ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ರಾಘವೇಂದ್ರ ಪ್ರಸಾದ, ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಜ್ಜಣ್ಣ, ಉಪಾಧ್ಯಕ್ಷ ವೆಂಕಟೇಶ್, ರಾಜಭಕ್ಷಿ, ರಮೇಶ್, ಓಬಳೇಶ್, ಶೇಕ್ಷಾವಲಿ, ಗುರು ಬಸವರಾಜ ಸೇರಿದಂತೆ ಅನೇಕರು ಇದ್ದರು.