Punyakala and Pralayakala
ಪುಣ್ಯವುಳ್ಳ ಕಾಲಕ್ಕೆ ಹಗೆಗಳು ತನ್ನವರಹರು.
ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಹುದು
ಪುಣ್ಯವುಳ್ಳ ಕಾಲಕ್ಕೆ ಹಾವು ಲೇವಳವಹುದು.
ಪುಣ್ಯವುಳ್ಳ ಕಾಲಕ್ಕೆ ಅನ್ಯರು ತನ್ನವರಹರು
ಇಂತಪ್ಪ ಪುಣ್ಯಗಳೆಲ್ಲವೂ ಭಕ್ತಿಯಿಂದಹುದು;
ಭಕ್ತಿ ಕೆಟ್ಟಡೆ ಪುಣ್ಯವು ಕೆಡುವುದು
ಇಂತಪ್ಪ ಭಕ್ತಿಯೂ ಪುಣ್ಯವು ಚನ್ನಬಸವಣ್ಣನಿಂದುಂಟಾಗಿ
ನಾನು ಬದುಕಿದೆನಯ್ಯಾ, ಲಿಂಗದೇವ
-ಗುರು ಬಸವಣ್ಣನವರು
(ಹಗೆ = ಶತ್ರು; ಲೇವಳ = ಬಂಗಾರದ ಸರ; ಕೂಡಲಸಂಗಮದೇವ = ಲಿಂಗದೇವ)
ಸಜ್ಜನತ್ವದಿಂದ ಮಾಡುವ ಸತ್ಕಾರ್ಯಗಳ ಮೊತ್ತವೇ ಪುಣ್ಯ. ಪುಣ್ಯ ಕಾರ್ಯಗಳನ್ನು ಮಾಡಿದಾಗ ಪುಣ್ಯದ ಮೊತ್ತ ಹೆಚ್ಚಾದಾಗ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಅತ್ಯಂತ ಸರಳವಾಗಿ ಹೇಳಿದ್ದಾರೆ.
- ಪುಣ್ಯಕಾಲ ಕೂಡಿ ಬಂದಾಗ ಶತ್ರುಗಳು ಮಿತ್ರರಾಗುತ್ತಾರೆ. ವೈರಿಗಗಳು ತನ್ನವರಾಗುತ್ತಾರೆ.
- ಪುಣ್ಯ ಸಂಚಯವಾದಾಗ ಮಣ್ಣು ಸಹ ಹೊನ್ನಾಗುತ್ತದೆ. ಮಣ್ಣಿಗೆ ಹೊನ್ನಿನ ಬೆಲೆ ಬರುತ್ತದೆ. ಮಣ್ಣಿನಲ್ಲಿ ಹೊನ್ನಿನಂತಹ ಬೆಳೆ ಬೆಳೆಯುತ್ತದೆ.
- ಪುಣ್ಯ ಕಾರ್ಯಗಳನ್ನು ಮಾಡಿದಾಗ ಹಾವು ಬಂಗಾರದ ಸರ(ಲೇವಳ)ವಾಗುತ್ತದೆ. ಸತ್ಕಾರ್ಯಗಳನ್ನು ಮಾಡುವಾಗ ಕೆಲವರು ಅಪಕೀರ್ತಿಯೆನ್ನುವ ಹಾವನ್ನು ಎಸೆಯುತ್ತಾರೆ. ಅದು ಕೀರ್ತಿಯ ಹೂವಾಗಿ , ಕೀರ್ತಿಯ ಬಂಗಾರದ ಸರವಾಗಿ ಮಾರ್ಪಡುತ್ತದೆ.
- ಪುಣ್ಯಪ್ರಾಪ್ತಿಯಾದಾಗ ಅನ್ಯರು ತನ್ನವರಾಗುತ್ತಾರೆ.
ಇಂತಹ ಪವಾಡಗಳನ್ನು ಮಾಡಬಲ್ಲ ಪುಣ್ಯವು ಭಕ್ತಿಯಿಂದ ಬರುತ್ತದೆ. ವ್ಯಕ್ತಿ ಭಕ್ತಿವಂತನಾಗುತ್ತ ಹೋದಂತೆ ಅವನಲ್ಲಿರುವ ದೇಹಗುಣ, ಮನೋಗುಣಗಳು ಅಳಿದು ದೈವೀಗುಣಗಳು ನೆಲೆಗೊಳ್ಳುತ್ತವೆ. ಇದರಿಂದ ಅವನು ಸತ್ಕಾರ್ಯ ಮಾಡುತ್ತಾನೆ. ಎಲ್ಲೆಲ್ಲಿಯೂ ದೇವರ ಚೈತನ್ಯವನ್ನು ಕಂಡು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಕುಲಜನಾಗಿ ಪುಣ್ಯವಂತನಾಗುತ್ತಾನೆ.
ಭಕ್ತಿ ಕೆಟ್ಟುಹೋದರೆ, ಭಕ್ತಿ ತೋರಿಕೆಯ ಭಕ್ತಿಯಾದರೆ; ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ ಪುಣ್ಯವು ಕೆಟ್ಟುಹೋಗುತ್ತದೆ.
ಗುರುಚೆನ್ನಬಸವಣ್ಣನವರು ಬಾಲ್ಯದಿಂದಲೂ ಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದವರು. ಸತ್ಕಾರ್ಯಗಳನ್ನು ಮಾಡಿ ಪುಣ್ಯವಂತರಾದವರು. ಇದನ್ನು ನೋಡಿ ನನಗೆ ಆನಂದವಾಗಿದೆ ಎಂದು ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಹೇಳಿದ್ದಾರೆ.
ಈ ವಚನವನ್ನು ಅವಧಾನದಿಂದ ಅವಗ್ರಹಿಸಿಕೊಂಡರೆ ಇನ್ನೂ ಕೆಲವು ವಿಚಾರಗಳು ಮುಗಿಲ ಮರೆಯ ಮಿಂಚಿನಂತೆ ಇದರಲ್ಲಡಗಿವೆ.
- ಹಗೆಗಳು ತನ್ನವರಾಗಿ, ತನ್ನವರು ಹಗೆಗಳಾದರೆ; ಶತ್ರುಗಳು ಮಿತ್ರರಾಗಿ, ಮಿತ್ರರು ಶತ್ರುಗಳಾದರೆ ಅದು ಪುಣ್ಯಕಾಲವಲ್ಲ ಅದು ಅಳಿಗಾಲ
- ಅನ್ಯರು ತನ್ನವರಾಗಿ, ತನ್ನವರು ಅನ್ಯರಾದರೆ, ತನ್ನವರನ್ನೇ ಅನ್ಯರೆಂದು ದೂರವಿಟ್ಟರೆ ಅದು ಪುಣ್ಣಕಾಲವಲ್ಲ ವಿನಾಶ ಕಾಲ.
- ಇರುವ ಹೊನ್ನು ಮಣ್ಣಾಗಿ ಹೋಗುತ್ತಿದ್ದರೆ, ಅನ್ಯಾಯವಾಗಿ ಅನ್ಯರ ಪಾಲಾಗುತ್ತಿದ್ದರೆ, ಪಾಪ ಕರ್ಮಗಳಿಗೆ ವ್ಯಯವಾಗಿ ಹೋಗುತ್ತಿದ್ದರೆ ಅದು ಪುಣ್ಯಕಾಲವಲ್ಲ ಪ್ರಳಯಕಾಲ.
- ಪಡೆದುಕೊಂಡ ಕೀರ್ತಿಯೆಂಬ ಹೂವಿನ ಮಾಲೆ ಅಪಕೀರ್ತಿಯ ಹಾವಾಗಿ ಸುತ್ತಿಕೊಂಡು ಬಾಧಿಸುತ್ತಿದ್ದರೆ ಅದು ಅದು ಪುಣ್ಯಕಾಲವಲ್ಲ ಅವನತಿಯ ಕಾಲ. ಹೊನ್ನು, ಮಣ್ಣು, ಕೀರ್ತಿ ಗಳಿಸುವುದು ಎಷ್ಟು ಕಷ್ಟವೋ ಅದನ್ನು ಉಳಿಸಿಕಿಳ್ಳುವುದು ಅಷ್ಟೇ ಕಷ್ಟದ ಕೆಲಸ. ಈ ಉಳಿಸುಕೊಳ್ಳುವಿಕೆಯನ್ನು ವಚನ ಸಾಹಿತ್ಯದಲ್ಲಿ ಅವಧಾನ ಭಕ್ತಿಯೆಂದು ಕರೆದಿದ್ದಾರೆ. ಪುಣ್ಯ ಗಳಿಸಿಕೊಳ್ಳಲಿಕ್ಕೆ ಭಕ್ತಿ ಸಾಕು.
- ಗಳಿಸಿಕೊಂಡ ಪುಣ್ಯ ಉಳಿಸಿಕೊಳ್ಳಲಿಕ್ಕೆ ಅವಧಾನ ಭಕ್ತಿ ಬೇಕು. ಅವಧಾನ ಭಕ್ತಿಯಲ್ಲಿ ಎಡವಿದರಿಂದಲೇ ಇತಿಹಾಸದಲ್ಲಿ ಅನೇಕ ಸಾಮ್ರಾಜ್ಯಗಳು, ಕೋಟೆ ಕೊತ್ತಲಗಳು, ಮತಗಳು, ಮಠ ಪೀಠ ಪ್ರತಿಷ್ಠಾನಗಳು ಅಳಿದುಹೋಗಿವೆ, ವಿನಾಶವಾಗಿವೆ, ಪ್ರಳಯಗೊಂಡಿವೆ, ಅವನತಿ ಹೊಂದಿವೆ. ಆದ್ದರಿಂದ ಸಾಮ್ರಾಜ್ಯವನ್ನು ಆಳುವವರಿಗೆ, ಮಠ ಪೀಠ ಪ್ರತಿಷ್ಠಾನಗಳ ಒಡೆಯರಿಗೆ, ಶರಣ ಮಾರ್ಗದಲ್ಲಿ ನಡೆಯುವವರಿಗೆ ಶರಣ ಮಾರ್ಗವನ್ನು ಬೋಧಿಸುವವರಿಗೆ, ಸಮಾಜಸುಧಾರಕರಿಗೆಅವಧಾನ ಭಕ್ತಿ ಅತ್ಯಂತ ಮುಖ್ಯ.
ಸಚ್ಚಿದಾನಂದ ಪ್ರಭು ಚಟ್ನಳ್ಳಿ