Folk literature is an immense wealth of Kannada language: Dr Manju Ammanpur Abhimat
ಕೊಳ್ಳೇಗಾಲ, ನ.೫:ಜಾನಪದ ಸಾಹಿತ್ಯವು ಕನ್ನಡ ಭಾಷೆಯ ಅಗಾಧ ಸಂಪತ್ತನ್ನು ಪ್ರತಿನಿಧಿಸುತ್ತದೆ : ಡಾ| ಮಂಜು ಅಮ್ಮನಪುರ ಅಭಿಮತತಾಲೂಕಿನ ದೊಡ್ಡಿಂದುವಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಸಮಾರಂಭವನ್ನು ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕನ್ನಡ ಸಾಹಿತ್ಯದ ಪ್ರಾಚೀನ ಹಿನ್ನೆಲೆಯುಳ್ಳ ಕನ್ನಡ ಭಾಷೆಯ ಅಗಾಧ ಸಂಪತ್ತನ್ನು ಪ್ರತಿನಿಧಿಸುತ್ತದೆ. ಜಾನಪದ ಕವನಗಳು ಜನರ ಜೀವನದ ಬದಲಾವಣೆ, ಸಂಕಟ, ಸಮಾಜದ ವಿವಿಧ ಮೌಲ್ಯಗಳು ಮತ್ತು ಜನಪ್ರಿಯ ವಿಷಯಗಳ ಬಗ್ಗೆ, ಚಿತ್ರಣ ಮಾಡುತ್ತವೆ. ಈ ಜಾನಪದ ಸಾಹಿತ್ಯದ ಸಂಕಲನವು ವ್ಯಕ್ತಿಯ ಅನುಭವಗಳ ಬೀಜವನ್ನು ಹೊತ್ತಿದೆ ಮತ್ತು ಸಮಾಜದ ಬೇರೆ ಬೇರೆ ಹಂತಗಳಲ್ಲಿ ಹರಿದುಹೋಗಿದೆ. ಜನಪ್ರಿಯ ವಿಷಯಗಳಲ್ಲಿ ಪ್ರೇಮ, ಹಾಸ್ಯ, ಭಕ್ತಿ, ಧರ್ಮ, ಸಂಕಟಗಳು ಮತ್ತು ಸಮಾಜದ ವಿವಿಧ ವರ್ಗಗಳ ನಡುವೆಯ ಸಂಬಂಧಗಳು ಮುಖ್ಯವಾಗಿವೆ. ಜಾನಪದ ಕವನಗಳು ಸಾಮಾನ ಜನರ ಭಾವನೆಗಳನ್ನು ಹಿಡಿದು ತಮ್ಮ ಭಾಷೆಯ ಮೂಲಕ ಹೊರಸೂಸುತ್ತವೆ. ಅವು ಸಾಮಾನ್ಯ ಜನರ ಬದುಕಿನ ಹಲವಾರು ಹೊಸ ಮುಖಗಳನ್ನು ಬೆಳಕಿಗೆ ತರುತ್ತವೆ ಎಂದು ತಿಳಿಸಿದರು.
ಇಂದಿನ ಮಕ್ಕಳಿಗೆ ಜಾನಪದ ಮಹತ್ವ ತಿಳಿಸುವ ಅಗತ್ಯತೆ ಇದೆ : ಆಧುನಿಕತೆಯ ಅಬ್ಬರದಲ್ಲಿ ಜನಮಾನಸದಿಂದ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಅದರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಜಾನಪದದ ಅಗತ್ಯ ಮತ್ತು ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ಅರಿವಿಲ್ಲ. ಇದರಿಂದ ಅವರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಜಾನಪದದ ಮಹತ್ವವನ್ನು ಅವರಿಗೆ ಮನದಟ್ಟಾಗುವಂತೆ ತಿಳಿಸಿದಲ್ಲಿ ಮತ್ತೆ ದೇಶಿಯ ಸಂಸ್ಕೃತಿಯತ್ತ ಮರಳುತ್ತಾರೆ. ವಿದ್ಯಾರ್ಥಿಗಳು ಜಾನಪದ ಮತ್ತು ಅದರ ಮಹತ್ವ ಅರ್ಥ ಮಾಡಿಕೊಳ್ಳಬೇಕಾದ ತುರ್ತು ಹಿಂದೆಂದಿ ಗಿಂತಲೂ ಈಗ ಅಗತ್ಯವಿದೆ. ಅವರಿಗೆ ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್, ಜನಪದ ಜನರ ಬಾಯಿಂದ ಬಾಯಿಗೆ ಹರಿದು ಬಂದದ್ದು, ಅದರ ನಾಶ ಆಗೋದು ಅಷ್ಟೊಂದು ಸುಲಭವಲ್ಲ. ನಮ್ಮ ಸಮೂಹ ಎಲ್ಲರೂ ಜವಾಬ್ದಾರಿ ವಹಿಸಿ ಜನಪದದ ಉಳಿವಿಗೆ ಶ್ರಮಿಸಬೇಕಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ಜಾನಪದ ಸಾಹಿತ್ಯ ಸಂಸ್ಕೃತಿಯ ಎಲ್ಲ ನೆಲೆಗಳಲ್ಲೂ ವ್ಯಾಪಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಶಾಲೆಯ ಶಿಕ್ಷಕರಾದ ನಟೇಶ, ಜೋಸೆಫ್ ರವಿ, ಚಿಕ್ಕರಾಜು, ವೆಂಕಟೇಶ, ನಾಗಮಣಿ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.