Breaking News

ಬಾಳೇ ಗೋಳಾದರೂ , ಗೋಳೆ ಬಾಳಾದರೂ ,ಗೋಳಾಡಲಿಲ್ಲದ ಮಂಜಪ್ಪ

Manjappa who did not cry, even if he cried, even if he cried

ಕರ್ನಾಟಕದ ಇತಿಹಾಸದಲ್ಲಿ ಲಿಂಗಾಯತವನ್ನು ಕಟ್ಟಿ ಬೆಳಸುವಲ್ಲಿ ಮಂಜಪ್ಪನವರ ಪಾತ್ರ ದೊಡ್ಡದು. ಮಂಜಪ್ಪನವರ ಬದುಕಿನ ಬವಣೆ ಅತ್ಯಂತ ಕಷ್ಟಕರವಾದದ್ದು , ಬರಿಗೈ ಬಂಟನಿಂದ ಒಂದು ದೊಡ್ಡ ಕೊಡುಗೆ ಲಿಂಗಾಯತಕ್ಕೆ ದೊರಕಿದ್ದು ಅತ್ಯಂತ ರೋಚಕವಾದ ಇತಿಹಾಸ. ಕಡು ಬಡತನದಿಂದ ಬಂದ ಮಂಜಪ್ಪ ಕರ್ನಾಟಕದ ಗಾಂಧಿಯಾಗಿ ಬೆಳೆದಿದ್ದು ಒಂದು ರೋಚಕ ಕಥೆ. ಒಂದೊತ್ತು ಊಟಕ್ಕೂ ಪರದಾಡಿದ ಬಡತನದಲ್ಲಿ ಛಲ ಬಿಡದ ಛಲವಾದಿ , ಭೀಕರ ಬಡತನವನ್ನು ನುಂಗಿ ಹಿಡಿದಿದ್ದ ಕಾರ್ಯ ಬಿಡದ ನಿಜ ಲಿಂಗಾಯತ ಮಂಜಪ್ಪ.

ಮೊದಮೊದಲು ಆರ್ಯ ಸಮಾಜದತ್ತ ಒಲವಿದ್ದ ಮಂಜಪ್ಪ ಬಸವ ಸಮಾಜದತ್ತ ಮುಖ ಮಾಡಿದ ಮಂಜಪ್ಪನ ಕಥೆ ನಿಜಕ್ಕೂ ಅವಿಸ್ಮರಣೀಯ. ಆರ್ಯಸಮಾಜದಿಂದ ಅವರು ಎಷ್ಟು ಪ್ರಭಾವಿತರಾಗಿದ್ದರೆಂದರೆ 1911ರಲ್ಲಿ ಮುಂಬೈಗೆ ಹೋದಾಗ ಅಲ್ಲಿನ ಆರ್ಯಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು , ಅದರಿಂದ ಪ್ರಭಾವಿತರಾಗಿ ಅಂತಹ ಭಜನ ಕಾರ್ಯಕ್ರಮಗಳು ನಮ್ಮ ಮಠಗಳಲ್ಲಿ ಯಾಕೆ ಜರುಗಬಾರದೆಂದು , ಅವರು ದಾವಣಗೇರಿಗೆ ಬಂದು ಅಲ್ಲಿಯ ವಿರಕ್ತ ಮಠದ ಸ್ವಾಮಿಗಳ ಜೊತೆಗೆ ಚರ್ಚೆ ಮಾಡಿದರು. ಅಂದಿನಿಂದ ಮಂಜಪ್ಪನವರ ಬದುಕಿನಲ್ಲಿ ಒಂದು ಹೊಸ ಗಾಳಿಯೇ ಪ್ರಾರಂಭಿಸಿತು , ಆ ಪ್ರಾರಂಭಕ್ಕೆ ಮುಖ್ಯ ಕಾರಣ ಕರ್ತರು ಶ್ರೀ ಮೃತ್ಯುಂಜಯ ಸ್ವಾಮಿಗಳು.

ಮಂಜಪ್ಪನವರ ಪ್ರತಿಯೊಂದು ಆಲೋಚನೆಗಳಿಗೆ , ಕಾರ್ಯರೂಪಗಳಿಗೆ ಸಹಕಾರ ನೀಡಿದವರು ಮೃತ್ಯುಂಜಯ ಅಪ್ಪಗಳು. ಹೀಗೆ ಆರ್ಯ ಸಮಾಜದತ್ತ ವಾಲಿದ ಅವರ ಬದುಕು ಬಸವ ಸಮಾಜದತ್ತ ವಾಲಿತು.
ಬಸವಣ್ಣನವರ ವಚನಗಳನ್ನು ಓದುತ್ತಾ , ಬಸವಣ್ಣನ ವೈಚಾರಿಕ ಚಿಂತನೆಗಳಿಂದ ಪ್ರೇರಿಪಿತರಾದ ಮಂಜಪ್ಪನವರಿಗೆ ಬಸವ ಜಯಂತಿಯನ್ನು ಯಾಕೆ ಆಚರಿಸಬಾರದು ಎಂಬ ಆಲೋಚನೆ ಹೊಳೆಯಿತು. ಆ ಆಲೋಚನೆಗೆ ನೀರುಣಿಸಿ ಬೆಳೆಸಿದವರು ಮೃತ್ಯುಂಜಯ ಅಪ್ಪಗಳು. 1913 ವೈಶಾಖ ಶುದ್ದ4, ರೋಹಿಣಿ ನಕ್ಷತ್ರದಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಒಂದು ಮಹತ್ತರ ಘಟ್ಟ .ಅಂದು ಈ ನಾಡಿನಲ್ಲಿ ಪ್ರಪ್ರಥಮ ಬಸವ ಜಯಂತೋತ್ಸವವನ್ನು ದಾವಣಗೇರಿಯಲ್ಲಿ ಆಚರಿಸಿದ್ದು ಮಂಜಪ್ಪ ಮತ್ತು ಮೃತ್ಯುಂಜಯ ಸ್ವಾಮಿಗಳು. ಇದೊಂದು ಕರ್ನಾಟಕದ ಇತಿಹಾಸದಲ್ಲಿ ಅವಿಸ್ಮರಣೀಯ ದಿನ. ಮುಂದೆ ಮಂಜಪ್ಪ ಮತ್ತು ಮೃತ್ಯುಂಜಯ ಅಪ್ಪಗಳು ಕರ್ನಾಟಕದ ತುಂಬಾ ಸಾವಿರಾರು ಬಸವ ಜಯಂತಿಗಳನ್ನು ಆಚರಿಸಿದರು. ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣಗಳಲ್ಲಿ ಬಸವ ಜಯಂತಿ ಆಚರಿಸಿದರು. ಅಷ್ಟೇ ಅಲ್ಲ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಕ್ಕೆ ‘ ಬಸವೇಶ್ವರ ಸೇವಾದಳ’ ಎಂಬ ಸ್ವಯಂ ಸೇವಕ ಸೇವಾದಳವನ್ನು ಕರೆದೊಯ್ದದರಲ್ಲದೆ ‘ ಸತ್ಯಾಗ್ರಹೀ ಬಸವೇಶ್ವರ ‘ ಎಂಬ ಕೃತಿಯನ್ನು ಬರೆದು ಹಂಚಿದರು ,ಅಷ್ಟೆ ಅಲ್ಲ ಅದನ್ನು ಗಾಂಧಿಯವರಿಗೂ ಮುಟ್ಟಿಸಿ ಅವರಿಂದ ಮೆಚ್ಚುಗೆಯ ಮಾತುಗಳನ್ನು ಸ್ವೀಕರಿಸಿದರು.

ಹೀಗೆ ಆರ್ಯಸಮಾಜದಿಂದ ಬಸವ ಸಮಾಜದ ಕಡೆ ಮಂಜಪ್ಪನವರ ಪಯಣ ಪ್ರಾರಂಭವಾಯಿತು . ಬಸವ ಸಮಾಜದ ಕಡೆ ಅವರು ಮುಖಮಾಡಿದ್ದರೂ, ಅಂತರಂಗದಲ್ಲಿ ಅವರ ಆರ್ಯ ಸಮಾಜದ ಪ್ರೀತಿ ಹಂಗೆ ಇತ್ತು . ಆದರೆ ಒಂದು ಪ್ರಸಂಗದಲ್ಲಿ ಆರ್ಯ ಸಮಾಜದ ಪ್ರಚಾರಕರಲ್ಲೊಬ್ಬರಾಗಿದ್ದ ಬನ್ಸಿಲಾಲ್ ಎಂಬವರು ” ಒಂದು ವರ್ಷದೊಳಗಾಗಿ ಒಂದು ಸಾವಿರ ಲಿಂಗಗಳನ್ನು ಕಳಚಿ ಜನಿವಾರಗಳನ್ನು ಹಾಕಿಸುವೆ “ಎನ್ನುವ ಅವರ ಮಾತು ಮಂಜಪ್ಪನನ್ನು ಕೆರಳಿಸಿತು. ಜಾತಿ ನಿರಾಕಾರಣದ ಸಿದ್ದಾಂತವನ್ನು ಒಪ್ಪಿದ್ದ ಮಂಜಪ್ಪ ಅವರ ಮಾತಿನಿಂದ ಸಿಂಹದಂತೆ ಗರ್ಜಿಸಿದರು . ಲಿಂಗವು ಈ ನೆಲಮೂಲದ ಸಂಸ್ಕೃತಿ ಇದನ್ನು ತೆಗೆದು ಜನಿವಾರ ತೊಡಿಸುವ ಅವರ ಮಾತನ್ನು ಧಿಕ್ಕರಿಸಿ ಪ್ರತಿ ಹಳ್ಳಿ ಪಟ್ಟಣಗಳಲ್ಲಿ ಹೋಗಿ ಅದನ್ನು ಖಂಡಿಸಿದರು. ಮಂಜಪ್ಪನವರ ಗರ್ಜನೆಗೆ ಬನ್ಸಿಲಾಲ್ ಸಾವಿರ ಅಲ್ಲ ಒಂದು ಲಿಂಗವನ್ನು ತೆಗಿಸಿ ,ಒಂದು ಜನಿವಾರ ತೊಡಿಸದಷ್ಟು ಅಸಮರ್ಥರಾದರು.

ಆದರೆ ಮಂಜಪ್ಪನವರಿಗೆ ಒಂದು ಕೊರಗು ಮಾತ್ರ ಇತ್ತು .ಈ ಲಿಂಗಾಯತ ಸಮಾಜದಲ್ಲಿ ಒಳಪಂಗಡಗಳ ನಂಜಿನ ಬಳ್ಳಿಗಳು ಬೆಳದಿದ್ದರ ಬಗ್ಗೆ ತುಂಬಾ ಕೊರಗು ಇತ್ತು. ಎಲ್ಲಾ ಒಳಪಂಗಡಗಳನ್ನು ಕಿತ್ತೊಗೆದು ಬಸವಣ್ಣನಂತೆ ಸರ್ವಾಂಗ ಸುಂದರವಾದ ಸಮಸಮಾಜದ ಕನಸು ಕಟ್ಟಬೇಕೆಂಬ ಆಸೆ ಅವರದಾಗಿತ್ತು. ಹಾಗಾಗಿ ಅವರು ಕರ್ನಾಟಕದ ಏಕೀಕರಣಕ್ಕಾಗಿ ದುಡಿದಷ್ಟೆ , ಲಿಂಗಾಯತದ ಏಕೀಕರಣಕ್ಕಾಗಿ ದುಡಿದರು. ಬಂಥನಾಳದಲ್ಲಿ 1925ರಲ್ಲಿ ಬಸವ ಪ್ರವಚನ ಪ್ರಾರಂಭಿಸಿ ಲಿಂಗಾಯತದಲ್ಲಿ ಒಳಪಂಗಡಗಳು ಅಳಿಯಬೇಕೆಂಬ ಉದ್ದೇಶದಿಂದ 200 ಲಿಂಗಾಯತ ಸ್ತ್ರೀ ಪುರುಷರಿಗೆ ಲಿಂಗದೀಕ್ಷೆ ಮಾಡಿಸಿದರು. ಲಿಂಗವೊಂದೆ ಎಲ್ಲಾ ಒಳಪಂಗಡಗಳನ್ನು ಒಂದು ಮಾಡುವ ದೊಡ್ಡ ಸಾಧನವೆಂದ ಅರಿತ ಅವರು , ಬಂಥನಾಳ ಶಿವಯೋಗಿಗಳ ಜೊತೆಗೂಡಿ ಬಿಜಾಪುರ ಜಿಲ್ಲೆಯ 7 ತಾಲೂಕು 55 ಹಳ್ಳಿಗಳಲ್ಲಿ ಐದು ತಿಂಗಳು ಕಾಲ ಸಂಚಾರ ಮಾಡಿ ಒಳಪಂಗಡಗಳ ಮೀರಿ ಎಲ್ಲಾ ಲಿಂಗಾಯತರು ಇಷ್ಟಲಿಂಗದಡಿಯಲ್ಲಿ ಒಂದೆ ಆಗಬೇಕೆಂಬ ಅವರ ಮಹದಾಸೆಯನ್ನು ಹೊತ್ತು ಕರ್ನಾಟಕದ ತುಂಬೆಲ್ಲಾ ಸಂಚರಿಸಿದರು.

ದುರಂತವೆಂದರೆ ಅವರ ಮಹದಾಸೆ ಇಂದಿಗೂ ಕೈಗೂಡಲಿಲ್ಲ . ಲಿಂಗಾಯತ ಒಳಪಂಗಡದ ಕುತಂತ್ರಕ್ಕೆ ಇನ್ನೊಷ್ಟು ಛಿದ್ರವಾಯಿತು. ಪಟ್ಟಭದ್ರಾಹಿತಾಸಕ್ತಿಗಳು , ಪೌರೋಹಿತ್ಯದ ಮನಸ್ಸುಗಳು ಲಿಂಗಾಯತರನ್ನು ಒಂದಾಗಾದಂತೆ ಮಾಡಿತು. ಪೌರೋಹಿತ್ಯದ ಕುತಂತ್ರದ ಬಿಗಿ ಮುಸ್ಠಿಯಲ್ಲಿ ಲಿಂಗಾಯತರು ತಮ್ಮನ್ನೆ ತಾವು ಮರೆತರು , ತಮ್ಮ ಅಸ್ಮೀತೆಯನ್ನು ಮರೆತು ಇಂದಿಗೂ ಒಳಪಂಗಡದ ಶ್ರೇಷ್ಠತೆಯ ವ್ಯಸನದಿಂದ ಇಂದಿಗೂ ಹೊರಬರದೆ ಕೋಮುವಾದದ ತಕ್ಕೆಯಲ್ಲಿ ಗುಲಾಮರಂತೆ ಬದುಕುವ ಸ್ಥಿತಿಗೆ ಕಾರಣವಾದರು. ಕೋಮುವಾದದ ಜಾತಿವಾದದ ಮನಸ್ಥಿತಿಯಿಂದ ಹೊರಬರದ ಲಿಂಗಾಯತರು ಇಂದಿಗೂ ವೀರಶೈವ ಲಿಂಗಾಯತ ಎಂಬ ಎಡಬಿಡಂಗಿ ಅವಸ್ಥೆಯಲ್ಲಿ ಬದುಕುತ್ತಿರುವುದು ಸೋಜಿಗದ ವಿಷಯ. ಅಂದು ಎಲ್ಲಾ ಲಿಂಗಾಯತರನ್ನು ಒಂದುಗೂಡಿಸುವ ಸಲುವಾಗಿ, ಲಿಂಗಾಯದ ಏಕೀಕರಣದ ಸಲುವಾಗಿ ತನ್ನ ಬದುಕನ್ನೆ ಬಸವಳಿಸಿದ ಜೀವ ಮಂಜಪ್ಪ ಇಂದು ಬದುಕಿದ್ದರೇ!!!!!!????? ಎನ್ನುವ ಪ್ರಶ್ನೆ ನನ್ನ ಕಾಡುತ್ತಲೆ ಇದೆ.

ಡಾ.ರಾಜಶೇಖರ ನಾರನಾಳ
ಗಂಗಾವತಿ

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.