Breaking News

ಭ್ರೂಣ ಹತ್ಯೆ ಸಂಬಂಧಿಸಿದಂತೆ 8 ಪ್ರಕರಣ ದಾಖಲು,46 ಜನರ ಬಂಧನ : ಸಚಿವ ದಿನೇಶ್ ಗುಂಡೂರಾವ್


8 cases have been registered and 46 people have been arrested in connection with fetal murder: Minister Dinesh Gundurao

ಜಾಹೀರಾತು

ಬೆಳಗಾವಿ ಸುವರ್ಣಸೌಧ, ಡಿ.16(ಕರ್ನಾಟಕ ವಾರ್ತೆ):
ರಾಜ್ಯದಲ್ಲಿ 2023-24 ರಿಂದ
ಇಲ್ಲಿಯವರೆಗೆ ಭ್ರೂಣಹತ್ಯೆ ಸಂಬಂಧಿಸಿದಂತೆ 8 ಪ್ರಕರಣ ದಾಖಲಿಸಿ 46 ಜನರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಜಗದೇವ ಗುತ್ತೇದಾರ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್ ಮತ್ತು ಆಸ್ಪತ್ರೆಗಳ ಮೇಲೆ ತಪಾಸಣೆಗಳನ್ನು ಜಾಸ್ತಿ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯ ಭ್ರೂಣ ಹತ್ಯೆ ಪ್ರಕರಣಗಳು ಕಂಡುಹಿಡಿಯಲಾಗಿದೆ ಹಾಗೂ ಸರ್ಕಾರಕ್ಕೆ ವರದಿಯಾಗುತ್ತಿದೆ ಎಂದರು.

ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಯಲು ಸರ್ಕಾರವು ಪಿ.ಸಿ&ಪಿ.ಎನ್.ಡಿ.ಟಿ. ಕಾಯ್ದೆಯಡಿ ಬರುವ ಎಲ್ಲಾ ಶಾಸನಬದ್ದ ಸಮಿತಿಗಳನ್ನು ರಾಜ್ಯ ಮತ್ತು ಜಿಲ್ಲೆಗಳಲ್ಲಿ ರಚನೆ ಮಾಡಲಾಗಿದೆ.

2018 ರಿಂದ ರಾಜ್ಯದಲ್ಲಿ ‘ಬಾಲಿಕಾ’ ಆನ್ಲೈನ್ ಸಾಪ್ಟ್ವೇರ್ ಮುಖಾಂತರ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳನ್ನು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ನಡೆಸಲಾಗುತ್ತಿದೆ.

ರಾಜ್ಯ ಮಟ್ಟದಲ್ಲಿ ಶೇ.100 ರಷ್ಟು ಗರ್ಭಿಣಿಯರ ನೊಂದಣಿ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಗ್ರಾಮ ಮಟ್ಟದಲ್ಲಿ ಜನನ ಸಮಯದ ಲಿಂಗಾನುಪಾತದ ದತ್ತಾಂಶಗಳನ್ನು ಮಾಹಿತಿ ತಂತ್ರಜ್ಞಾನದ ಮುಖಾಂತರ ಮೇಲ್ವಿಚಾರಣೆ ಮಾಡಲು ಕಲ್ಪಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಇದುವರೆಗೂ ಪಿ.ಸಿ&ಪಿ.ಎನ್.ಡಿ.ಟಿ. ಕಾಯ್ದೆಯನ್ನು ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್ / ಮಾಲೀಕರು/ ವೈದ್ಯರ ವಿರುದ್ಧ ಒಟ್ಟು 136 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, 74 ಪ್ರಕರಣಗಳು ದಂಡವಿಧಿಸಿ ಖುಲಾಸೆಗೊಂಡಿದ್ದು, 65 ಪ್ರಕರಣಗಳು ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿ ಬಾಕಿಯಿರುತ್ತದೆ ಎಂದು ತಿಳಿಸಿದರು.

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್ / ಆಸ್ಪತ್ರೆ/ ವೈದ್ಯರು / ದಲ್ಲಾಳಿಗಳು / ಗರ್ಭಿಣಿಯರ ಸಂಬಂಧಿಕರ ವಿರುದ್ಧ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಕರಿಸುವ ಮಾಹಿತಿದಾರರಿಗೆ ಕರ್ನಾಟಕ ಸರ್ಕಾರದಿಂದ ನೀಡುತ್ತಿದ್ದ ಬಹುಮಾನವನ್ನು ರೂ.50 ಸಾವಿರದಿಂದ ರೂ.1ಲಕ್ಷದವರೆಗೆ ಹೆಚ್ಚಿಸಲಾಗಿದೆ ಎಂದರು.

ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆಯನ್ನು ರಚಿಸಲಾಗಿದ್ದು, ರಾಜ್ಯ ಮಟ್ಟದಿಂದ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಗುಪ್ತ ಕಾರ್ಯಚರಣೆ ನಡೆಸಲಾಗಿದೆ ಎಂದರು.

ಹೆಣ್ಣು ಭ್ರೂಣ ಹತ್ಯೆ ಮಾಡದಂತೆ ರಾಜ್ಯದಂತ ಜನ ಜಾಗೃತಿ ಹಾಗೂ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯ ಪಠ್ಯಕ್ರಮದ 6 ರಿಂದ 10ನೇ ತರಗತಿಯ ಗಣಿತ, ವಿಜ್ಞಾನ ವಿಷಯದಲ್ಲಿ ಸಿಬಿಎಸ್ ಇ ಪಠ್ಯಕ್ರಮ ಅಳವಡಿಕೆ

ಬೆಳಗಾವಿ ಸುವರ್ಣಸೌಧ ಡಿ.16 ( ಕ.ವಾ.) ಪ್ರಸ್ತುತ ರಾಜ್ಯ ಪಠ್ಯಕ್ರಮದ 6 ರಿಂದ 10ನೇ ತರಗತಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸಿಬಿಎಸ್ ಇ( CBSE ) ಪಠ್ಯಕ್ರಮವನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದರು.
ಪರಿಷತ್ ಸದಸ್ಯರಾದ ಎಂ.ಎಲ್.ಅನಿಲಕುಮಾರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಸೋಮವಾರ ಪರಿಷತನಲ್ಲಿ ಉತ್ತರಿಸಿದರು.

ಆರ್ ಟಿ ಇ ಕಾಯ್ದೆಯ ಅನುಷ್ಠಾನದಿಂದ 1 ರಿಂದ 8ನೇ ತರಗತಿಯವರೆಗೆ ಪ್ರವೇಶ ಶುಲ್ಕವನ್ನು ಸರ್ಕಾರವೇ ನೀಡುತ್ತಿದ್ದು; 8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗೂ ಯೋಜನೆಯನ್ನು ವಿಸ್ತರಿಸುವುದರಿಂದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಬಡ ಮಕ್ಕಳಿಗೆ ಅನುಕೂಲವಾಗಲಿದ್ದು, ಸರ್ಕಾರವು ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತಿಸಿದೆಯೇ; ಇಲ್ಲದಿದ್ದಲ್ಲಿ ಯಾವ ಕಾಲಮಿತಿಯೊಳಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎನ್ನುವ ಅನಿಲ್ ಕುಮಾರ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಈ ಯೋಜನೆಯನ್ನು ವಿಸ್ತರಿಸುವ ಪ್ರಸ್ತಾವನೆಯು ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ ಹುಸೇನ್ ನಿಧನಕ್ಕೆ ಪರಿಷತನಲ್ಲಿ ಸಂತಾಪ

ಬೆಳಗಾವಿ ಸುವರ್ಣಸೌಧ ಡಿ.16 (ಕ.ವಾ.): ವಿಶ್ವವಿಖ್ಯಾತ ತಬಲ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರ ನಿಧನಕ್ಕೆ ವಿಧಾನ ಪರಿಷತ್ತನಲ್ಲಿ ಸೋಮವಾರ ಸಂತಾಪ ಸೂಚಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಅವರು, ಉಸ್ತಾದ್ ಝಾಕೀರ್ ಹುಸೇನ್ ಅವರ ನಿಧನರಾದ ವಿಷಯವನ್ನು ಸದನಕ್ಕೆ ತಿಳಿಸಲು ವಿಷಾಧಿಸುತ್ತೇನೆ ಎಂದು ಹೇಳಿ ಸಂತಾಪ ಸೂಚನೆಯ ನಿರ್ಣಯವನ್ನು ಮಂಡಿಸಿದರು.
ವಿಶ್ವವಿಖ್ಯಾತ ತಬಲ ಮಾಂತ್ರಿಕ ಝಾಕೀರ ಹುಸೇನ್ ಅವರು ಡಿಸೆಂಬರ್ 15 ರಂದು ನಿಧನ ಹೊಂದಿರುತ್ತಾರೆ. 1951ರ ಮಾರ್ಚ್ 9 ರಂದು ಮುಂಬೈನಲ್ಲಿ ಜನಿಸಿದ್ದ ಶ್ರೀಯುತರು ಬಾಲ್ಯದಿಂದಲೇ ತಬಲವಾದಕರಾಗಿ ಪ್ರಖ್ಯಾತಿ ಹೊಂದಿದ್ದರು. ತಮ್ಮ 12ನೆಯ ವಯಸ್ಸಿನಲ್ಲಿಯೇ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾಯಂ ಕಲಾವಿದರಾಗಿದ್ದರು. ತಬಲವಾದಕರಾಗಿ ಅವರ ಗಮನಾರ್ಹ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ಸಂಯೋಜಕ ಮತ್ತು ನಿರ್ಮಾಪಕರಾಗಿ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದ ಶ್ರೀಯುತರು ವಿವಿಧ ಸಂಗೀತ ಶೈಲಿಗಳನ್ನು ಸಂಯೋಜಿಸುವ ಸಾಮರ್ಥ್ಯದಿಂದಾಗಿ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ್ದರು. ಸಂಗೀತದ ಮೂಲಕ ಗಡಿಗಳನ್ನೂ ಮೀರಿ ಜನರ ಹೃದಯಗಳನ್ನು ಬೆಸೆದ ಉಸ್ತಾದ್ ಝಾಕಿರ್ ಹುಸೇನ್ ಅವರು ಭಾರತದ ಶಾಸ್ತ್ರೀಯ ಸಂಗೀತ ಹಾಗೂ ಜಾಗತಿಕ ಕಲೆಗೆ ನೀಡಿದ ಕೊಡುಗೆ ಅಪಾರ. ತಬಲಾ ವಾದನಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದ್ದ ಶ್ರೀಯುತರು ಆರು ದಶಕಗಳ ಕಾಲ ತಬಲಾ ಪ್ರಯಾಣದಲ್ಲಿ ವಿಶ್ವದಾದ್ಯಂತ ಸಾವಿರಾರು ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಶ್ರೀಯುತರು ತಾಜ್ ಮಹಲ್ ಮುಂದೆ ‘ವಾಹ್ ತಾಜ್ ಬೋಲಿಯೇ’ ಎನ್ನುತ್ತ ತಬಲಾ ನುಡಿಸಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.
ಶ್ರೀಯುತರು 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಐದು ಗ್ಯ್ರಾಮಿ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು ಎಂದು ಸಭಾಪತಿ ಅವರು ಸಂತಾಪ ಸೂಚನೆಯ ನಿರ್ಣಯವನ್ನು ಸದನಕ್ಕೆ ತಿಳಿಸಿದರು.
ಸಭಾ ನಾಯಕರು ಮತ್ತು ಸಚಿವರಾದ ಎನ್. ಎಸ್. ಬೋಸರಾಜು ಹಾಗೂ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿ, ಝಾಕೀರ್ ಹುಸೇನ್ ಅವರ ನಿಧನದಿಂದಾಗಿ ರಾಷ್ಟ್ರವು ಜಾಗತಿಕ ಸಂಗೀತ ಸಾಮರಸ್ಯದ ಸರ್ವಕಾಲಿಕ ಶ್ರೇಷ್ಠ ತಬಲವಾದಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದರು.

ಮೃತರ ಗೌರವಾರ್ಥ ಮಾನ್ಯ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸಲ್ಲಿಸಿದರು.

ಮಾಜಿ ಶಾಸಕ ನರಸಿಂಹಸ್ವಾಮಿ.ಜೆ ಹಾಗೂ ತಬಲಾ ವಾದಕ ಜಾಕೀರ್ ಹುಸೇನ್ ನಿಧನಕ್ಕೆ ವಿಧಾನ ಸಭೆಯಲ್ಲಿ ಸಂತಾಪ

ಬೆಳಗಾವಿ ಸುವರ್ಣಸೌಧ ಡಿ.16 (ಕ.ವಾ.):
ಭಾನುವಾರ ನಿಧನರಾದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನರಸಿಂಹಸ್ವಾಮಿ.ಜೆ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರಿಗೆ ಸೋಮವಾರ ವಿಧಾನ ಸಭೆಯ ಕಲಾಪದ ಆರಂಭದಲ್ಲಿ ಸಂತಾಪ ಸೂಚಿಸಲಾಯಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಾಜಿ ಶಾಸಕ ನರಸಿಂಹಸ್ವಾಮಿ.ಜೆ ಹಾಗೂ ತಬಲಾ ವಾದಕ ಜಾಕೀರ್ ಹುಸೇನ್ ನಿಧನದ ವಿಷಯವನ್ನು ಪ್ರಸ್ತಾಪಿಸಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.
ನರಸಿಂಹಸ್ವಾಮಿ.ಜೆ ಅವರು 25-05-1947 ರಂದು ಜನಿಸಿದ್ದರು. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ 2004 ಹಾಗೂ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಬೆಂಗಳೂರು ಜಿಲ್ಲಾ ಪಂಚಾಯತ್ ಸದಸ್ಯ, ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇವರು 15-12-2024 ರಂದು ನಿಧನ ಹೊಂದಿದ್ದಾರೆ.
ಅಂತರರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ 09-03-1951 ರಂದು ಮುಂಬೈನಲ್ಲಿ ಜನಿಸಿದ್ದರು. ಹಿಂದೂಸ್ಥಾನಿ, ಶಾಸ್ತ್ರೀಯ ಸಂಗೀತ ಮತ್ತು ಜಾಯ್ ಫ್ಯೂಷನ್ ಅಭ್ಯಾಸ ಮಾಡಿದ್ದರು. ತಬಲಾ ವಾದನದ ಜೊತೆಗೆ ಸಂಗೀತ ನಿರ್ದೇಶನ, ನಟನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂಗ್ಲೀಷ್ ಗಿಟಾರ್ ವಾದಕ ಜಾನ್ ಮೆಕ್ ಲಾಗ್ಸನ್, ಪಿಟೀಲು ವಾದಕ ಎಲ್.ಶಂಕರ್ ಮತ್ತು ತಾಳವಾದುಗಾರ ಟಿ.ಹೆಚ್.ವಿನಾಯಕರಾಮ್ ಅವರದೊಂದಿಗೆ 1973ರಲ್ಲಿ ನಡೆಸಿಕೊಟ್ಟ ವಿಶಿಷ್ಟ ಯೋಜನೆ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮವೆನಿಸಿತ್ತು. ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 5 ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ್ದರು. ಜಾಕೀರ್ ಹುಸೇನ್ 15-12-2024 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧರಾಗಿದ್ದಾರೆ ಎಂದು ಸದನಕ್ಕೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಿಳಿಸದರು.
ಉಪಮುಖ್ಯಮಂತ್ರಿಗಳು,ಜಲಸಂಪನ್ಮೂಲ ಹಾಗೂ ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಮಾತನಾಡಿ, ಮಾಜಿ ಶಾಸಕ ನರಸಿಂಹಸ್ವಾಮಿ.ಜೆ ಅವರ ತಂದೆ ಜಾಲಪ್ಪನವರು ಸಹ ರಾಜಕಾರಣಿಯಾಗಿದ್ದರು. ಒಮ್ಮೆ ಕಾಂಗ್ರೇಸ್ ಹಾಗೂ ಬಿಜೆಪಿಯಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ವೈಯಕ್ತಿಕವಾಗಿ ಅವರೊಂದಿಗೆ ಒಡನಾಟವಿತ್ತು. ಅವರ ನಿಧನದ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸಾವು ಬೆನ್ನ ಹಿಂದಿನ ನೆರಳಿನಂತೆ, ನಮ್ಮನು ಹಿಂಬಾಲಿಸುತ್ತಾ ಇರುತ್ತದೆ. ವಿಧಿಯ ನಿರ್ಣಯ ಬದಲಿಸಲು ಸಾಧ್ಯವಿಲ್ಲ. ನರಸಿಂಹಸ್ವಾಮಿ.ಜೆ ಬಿಜೆಪಿ ಪಕ್ಷದಿಂದಲೂ ಸ್ಪರ್ಧಿಸಿ ಗೆಲುವು ಕಂಡಿದ್ದರು. ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇನ್ನಷ್ಟೂ ಕಾಲ ಬದುಕಿದ್ದರೆ ಸಂಗೀತಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದರು ಎಂದು ಹೇಳಿದರು.
ಮೃತರ ಗೌರವಾರ್ಥ ವಿಧಾನ ಸಭೆಯಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಲಾಯಿತು.

About Mallikarjun

Check Also

ಪತ್ರಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ಧ ಪತ್ರಕರ್ತರ ಪ್ರತಿಭಟನೆ

Journalists protest against Nelamangala BJP President Jagdish Chaudhary who insulted and threatened journalists. ನೆಲಮಂಗಲ: ಬೆಂಗಳೂರು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.