Breaking News

ಪಶ್ಚಿಮ ಮೆಲ್ಬೋರ್ನ್ನಲ್ಲಿ ವಿಂಡ್ಯಮ್ ಕನ್ನಡ ಬಳಗ ಉದ್ಘಾಟನೆ

Inauguration of Wyndham Kannada Balaga in West Melbourne

ವಿದೇಶದಲ್ಲೂ ಕನ್ನಡದ ಕಂಪು ಬೀರುವವರೇ ಕನ್ನಡದ ರಾಯಭಾರಿಗಳು: ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು: ಉದ್ಯೋಗ ಅರಸಿ ದೇಶ ಬಿಟ್ಟು ವಿದೇಶಕ್ಕೆ ಬಂದರೂ ಸ್ವಂತಿಕೆಯನ್ನು ಬಿಡದೇ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ನಿಜವಾದ ಕನ್ನಡಭಾಷೆಯ ರಾಯಭಾರಿಗಳು ಎಂದು ಪಶ್ಚಿಮ ಮೆಲ್ಬೋರ್ನ್ನಲ್ಲಿ ನೆಲೆಸಿರುವ ವಿಂಡ್ಯಮ್ ಕನ್ನಡ ಬಳಗದ ಸದಸ್ಯರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಶ್ಲಾಘಿಸಿದರು.
ಇಂದು ಆಸ್ಟ್ರೇಲಿಯಾ ದೇಶದ ವಿಕ್ಟೋರಿಯಾ ರಾಜ್ಯದ ರಾಜಧಾನಿಯಾದ ಪಶ್ಚಿಮ ಮೆಲ್ಬೋರ್ನ್ನಲ್ಲಿ ವಿಂಡ್ಯಮ್ ಪ್ರದೇಶದ ಕನ್ನಡಿಗರು ಸೇರಿ ಕಟ್ಟಿರುವ ʻವಿಂಡ್ಯಮ್ ಕನ್ನಡ ಬಳಗʼವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು, ವಿಂಡ್ಯಮ್ ಪ್ರದೇಶದಲ್ಲಿ ಹೆಚ್ಚು ಕನ್ನಡಿಗರು ನೆಲೆ ನಿಂತು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕಳೆದ ೧೫ ವರ್ಷಗಳಿಂದ ಇಲ್ಲಿ ನೆಲೆ ನಿಂತಿರುವ ಕನ್ನಡಿಗರು ಪ್ರತೀ ವರ್ಷವೂ ರಾಜ್ಯೋತ್ಸವವನ್ನು ಆಚರಿಸುತ್ತಾ ಕನ್ನಡದ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಮೆಲ್ಬೋರ್ನ್ನಲಿ ೨೦ ಸಾವಿರಕ್ಕೂ ಹೆಚ್ಚು ಕನ್ನಡಿಗ ಕುಟುಂಬಗಳು ವಾಸವಿದ್ದು ಇದು ಆಸ್ಟ್ರೇಲಿಯಾದಲ್ಲಿಯೇ ಅತಿ ಹೆಚ್ಚು ಕನ್ನಡಿಗರು ವಾಸವಾಗಿರುವ ಪ್ರದೇಶವಾಗಿದೆ. ತಮ್ಮ ನಾಡು-ನುಡಿಯ ಮೇಲೆ ಅಪಾರ ಗೌರವವನ್ನು ಇಲ್ಲಿನ ಕನ್ನಡಿಗರು ಉಳಿಸಿಕೊಂಡಿದ್ದಾರೆ. ಅದಕ್ಕೆ ಕಾರಣ, ಇಲ್ಲಿನ ಕನ್ನಡಿಗರಲ್ಲಿ ಕಂಡು ಬರುವ ಕನ್ನಡಾಭಿಮಾನ. ನಾಡು ನುಡಿ, ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಭಾಷೆಯ ಗೌರವವನ್ನು ಕಾಂಗರೂ ನಾಡಿನಲ್ಲಿ ಗಟ್ಟಿಗೊಳಿಸಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.
ಕುವೆಂಪು ಅವರ ನುಡಿ ʻಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯʼ ಎನ್ನುವಂತೆ ಕನ್ನಡದ ಕೆಲಸಗಳಲ್ಲಿ ನಿರಂತರ ತೊಡಗಿರುವ ವಿಂಡ್ಯಮ್ ಕನ್ನಡ ಬಳಗ ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ-ಪರಂಪರೆಯನ್ನು ಮರೆಯಬಾರದು ಎನ್ನುವ ಕಾರಣಕ್ಕೆ ಕಾಲಕಾಲಕ್ಕೆ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಈ ಪ್ರದೇಶದಲ್ಲಿ ಇರುವ ಕನ್ನಡಿಗರ ಮಕ್ಕಳಿಗೆ ಹಾಗೂ ಕನ್ನಡ ಭಾಷಾಭಿಮಾನ ಇರುವ ಇತರರಿಗೂ ಕನ್ನಡ ಕಲಿಸುವ ಕೆಲಸವನ್ನು ವಿಂಡ್ಯಮ್ ಕನ್ನಡ ಬಳಗ ಮಾಡುತ್ತ ಬಂದಿದೆ. ಇಂತಹ ಕನ್ನಡಿಗರ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಯನ್ನು ವ್ಯಕ್ತ ಪಡಿಸುತ್ತದೆ, ಅವರ ಕನ್ನಡದ ಕೈಂಕರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜೊತೆಯಾಗಿರಲಿದೆ ಎಂದರು.
ಈ ಬಾರಿ ಮಂಡ್ಯದಲ್ಲಿ ನಡೆಯಲಿರುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಮೆಲ್ಬೋರ್ನ್ ವೆಸ್ಟ್ನಲ್ಲಿ ನೆಲೆಸಿರುವ ವಿಂಡ್ಯಮ್ ಕನ್ನಡ ಬಳಗದ ಪದಾಧಿಕಾರಿಗಳನ್ನು ಹಾಗೂ ಸದಸ್ಯರುಗಳಿಗೆ ಮತ್ತು ಮೆಲ್ಬೋರ್ನ್ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಗೌರವಪೂರ್ವಕ ಆಹ್ವಾನವನ್ನು ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಹ್ವಾನಕ್ಕೆ ವಿದೇಶಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ.
ವಿಂಡ್ಯಮ್ ಕನ್ನಡ ಬಳಗ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಚೇತನಾ ಪ್ರಭಾಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೆಲ್ಬೋರ್ನ್ನ ವೆಸ್ಟ್ನಲ್ಲಿ ನೆಲೆಸಿರುವ ವಿಂದಮ್ ಕನ್ನಡ ಬಳಗದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ವಿಂದಮ್ ಕನ್ನಡ ಬಳಗವು ತಾವು ನೆಲೆಸಿರುವ ನೆಲದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದಕ್ಕೆ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದು ಕನ್ನಡ ಕಲಿಸುವುದರ ಜೊತೆಗೆ ಕನ್ನಡ ಭಾಷೆಯ ಕುರಿತ ಎಲ್ಲಾ ಆಯಾಮವನ್ನು ಮಕ್ಕಳಲ್ಲಿ ತಿಳಿಸಿ ಹೇಳುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಕಾರ್ಯಕ್ರಮವನ್ನು ನಡೆಸುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ವಿಂಡ್ಯಮ್ ಕನ್ನಡ ಬಳಗ ಕೋಶಾಧ್ಯಕ್ಷ ಶ್ರೀ ಅನಿಲ ಕುಮಾರ ಮಾತನಾಡಿ, ನಮ್ಮ ಬಳಗದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಅಪಾರ ವಿಶ್ವಾಸವನ್ನು ಇರಿಸಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಾವೆಲ್ಲಾ ಸಾಹಿತ್ಯ ಪರಿಷತ್ತಿನ ಜೊತೆ ಕೈಜೋಡಿಸಿ ಕೆಲಸ ಮಾಡಲಿದ್ದೇವೆ. ಭಾಷೆ ಕಟ್ಟಿ ಬೆಳೆಸುವಲ್ಲಿ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ಒಪ್ಪಿಕೊಂಡು ಕಾರ್ಯ ಮಾಡಲಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ನಮಗೆ ಕನ್ನಡದ ಕೆಲಸ ಮಾಡಲು ಪ್ರೋತ್ಸಾಹ ನೀಡುತ್ತಿವೆ. ನಾವೆಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಇರಲು ಇಷ್ಟಪಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೆಲ್ಬೋರ್ನ್ನ ವಿಂಡ್ಯಮ್ ಕನ್ನಡ ಬಳಗದ ಗೌರವ ಕಾರ್ಯದರ್ಶಿಗಳಾದ ವನಿತಾ ಗಣೇಶರಾವ್, ನಿರ್ದೇಶಕರುಗಳಾದ ಶ್ರೀ ಮುಕುಂದ ವೆಂಕಟಾಚಾರ್, ಕೀರ್ತನಾರಾವ್ ಸಿಂದ್ಯಾ, ಸದಸ್ಯರುಗಳಾದ ಪ್ರಭಾಕರ ಯಾದವಾಡ, ಗಣೇಶ ಕೃಷ್ಣಯ್ಯ, ರಮೇಶ ರಾಮಕೃಷ್ಣಯ್ಯ, ಕೃಪಾ ಕೃಷ್ಣಯ್ಯ, ಉಷಾ ಗೌಡ ಇತರರು ಉಪಸ್ಥಿತರಿದ್ದರು.

ಜಾಹೀರಾತು

ಛಾಯಾಚಿತ್ರ: ಆಸ್ಟ್ರೇಲಿಯಾ ಏಶಿಯಾದ ಮೆಲ್ಬೋರ್ನ್ ವೆಸ್ಟ್ನ ವಿಂಡ್ಯಮ್ ಪ್ರದೇಶದ ಕನ್ನಡಿಗರು ಸೇರಿ ಕಟ್ಟಿರುವ ವಿಂಡ್ಯಮ್ ಕನ್ನಡ ಬಳಗವನ್ನು ವಿಲಿಯನ್ಸ್ ಲ್ಯಾಂಡಿಂಗ್ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಉದ್ಘಾಟಿಸಿದರು

About Mallikarjun

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.