Commemoration of Sharansree Bibbibachaiah Navara..
ಕಾಯಕ : ಪ್ರಸಾದ ಹಂಚುವುದು
ಸ್ಥಳ : ಗೊಬ್ಬೂರು, ದೇವದುರ್ಗ ತಾ, ರಾಯಚೂರು
ಜಯಂತಿ : ಹೋಳಿ ಹುಣ್ಣಿಮೆಯಂದು
ಲಭ್ಯ ವಚನಗಳ ಸಂಖ್ಯೆ : ೧೦೨
ಅಂಕಿತ : ಏಣಾಂಕಧರ ಸೋಮೇಶ್ವರ
ಹಿರಿಯ ಶರಣ ಬಿಬ್ಬಿ ಬಾಚಯ್ಯ ಪ್ರಸಾದಿಯೆನಿಸಿದ್ದರು. ಪ್ರಸಾದಿಸ್ಥಲದಲ್ಲಿ ಅಗ್ರಸ್ಥಾನವುಳ್ಳವನಾಗಿದ್ದನೆಂಬ ಸಂಗತಿ ಚೆನ್ನಬಸವಣ್ಣನವರ “ಗುರುಪ್ರಸಾದಿ ಗುರು ಭಕ್ತಯ್ಯನಾದರೆ, ಲಿಂಗ ಪ್ರಸಾದಿ ಪ್ರಭುದೇವನಾದರೆ, ಜಂಗಮ ಪ್ರಸಾದಿ ಬಸವಣ್ಣನಾದರೆ, ಪ್ರಸಾದ ಪ್ರಸಾದಿ ಬಿಬ್ಬಿ ಬಾಚಯ್ಯ” ನೆಂಬ ವಚನದ ಸಾಲುಗಳ ಮೂಲಕ ವ್ಯಕ್ತವಾಗುತ್ತದೆ. ತೆಲುಗು ಬಸವಪುರಾಣ, ಶಿವತತ್ವ ಚಿಂತಾಮಣಿ, ಭೈರವೇಶ್ವರಕಾವ್ಯ, ಬಸವೇಶ್ವರ ಪುರಾಣದ ಕಥಾಸಾಗರ, ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರರತ್ನಾಕರ ಹಾಗೂ ಪಂಚಯ್ಯನ ಭಕ್ತಿರಸಸೋನೆ ಕೃತಿಗಳಲ್ಲಿ ಇವರ ಉಲ್ಲೇಖ ಮತ್ತು ಕತೆಗಳಿವೆ. ಇವರ ವಚನಗಳಲ್ಲಿ ೨೩ ಬೆಡಗಿನ ವಚನಗಳು ಇವೆ. ಇವರು ಎಲ್ಲಾ ವಚನಗಳನ್ನು ಕ್ರೀಜ್ಞಾನ ಸಮರ್ಪಣ ಸ್ಥಲ, ಐಕ್ಯಾನುಭಾವಲಿಂಗಸ್ಥಲ, ಅಂಗಲಿಂಗಸ್ಥಲ ಸಮರ್ಪಣ, ಸರ್ವಭಾವಸ್ಥಲ ಸಮರ್ಪಣ, ಐಕ್ಯಾನುಭಾವಸ್ಥಲ, ಅಂಗಭಾವಜ್ಞಾನ ಲೇಪಸ್ಥಲ-ಹೀಗೆ ಆರು ಸ್ಥಲಗಳಲ್ಲಿ ಸಮಾವೇಶಗೊಳಿಸಿರುವುದು ಕಂಡುಬರುತ್ತದೆ. ವಚನಗಳು ಗಾತ್ರದಲ್ಲಿ ಚಿಕ್ಕವಾಗಿದ್ದು, ಅಭಿವ್ಯಕ್ತಿಯಲ್ಲಿ ಸರಳತೆ ಹಾಗೂ ಪರಿಣಾಮ ತೀವ್ರತೆಗಳನ್ನು ಪಡೆದಿರುತ್ತವೆ.
ಬಾಚಯ್ಯನವರು ಪ್ರಸಾದಿ ಸ್ಥಲದಲ್ಲಿ ನಿಂತ ಶರಣರು. ಹೀಗಾಗಿ ಅವರು ತಮ್ಮೆಲ್ಲ ವಚನಗಳಲ್ಲಿ ತಾನು ನಿಂತ ಸ್ಥಲದ ವಿಷಯವನ್ನು ವಿಶೇಷವಾಗಿ ಪ್ರತಿಪಾದಿಸಿರುವುದು ಸಹಜವೆನಿಸಿದೆ. ಬೇರೆ ಬೇರೆ ಶೀರ್ಷೆಕೆಯ ಆರು ಸ್ಥಲಗಳ ಅಡಿಯಲ್ಲಿ ವಚನಗಳನ್ನು ವಿಭಜಿಸಲಾಗಿದೆ.
ಬಸವಣ್ಣ , ಚನ್ನಬಸವಣ್ಣ, ಪ್ರಭುದೇವ ಇವರ ಪ್ರಸಾದದ ಫಲವಾಗಿ ಕ್ರಮವಾಗಿ ಭಕ್ತಿ ಜ್ಞಾನ, ವೈರಾಗ್ಯಗಳು ಸಾಧ್ಯವಾಯಿತು ಎಂದಿರುವರು. ಇವರು ತನ್ನದೇ ಆದ ಸ್ಥಲಕಲ್ಪನೆಯಲ್ಲಿ ವಚನಗಳನ್ನು ಬರೆದಿರುವರು.
ಗೊಬ್ಬೂರಿನಲ್ಲಿ ‘ಅರ್ಪಣದ ಕಟ್ಟೆ’ ಎಂಬುದಿದ್ದು, ಇದು ಬಾಚಯ್ಯನವರ ಗದ್ದುಗೆಯಿರಬೇಕೆಂದು ಊಹಿಸಲಾಗಿದೆ.
ಇವರದೊಂದು ವಚನ:
ಬಸವಣ್ಣನ ಪ್ರಸಾದವ ಕೊಂಡ ಕಾರಣ, ಎನಗೆ ಭಕ್ತಿ ಸಾಧ್ಯವಾಯಿತ್ತು..
ಚೆನ್ನಬಸವಣ್ಣನ ಪ್ರಸಾದವ ಕೊಂಡ ಕಾರಣ, ಎನಗೆ ಜ್ಞಾನ ಸಾಧ್ಯವಾಯಿತ್ತು..
ಪ್ರಭುದೇವರ ಪ್ರಸಾದವ ಕೊಂಡ ಕಾರಣ, ಎನಗೆ ವೈರಾಗ್ಯ ಸಾಧ್ಯವಾಯಿತ್ತು..
ಇಂತೀ ಮೂವರು ಒಂದೊಂದು ಕೊಟ್ಟ ಕಾರಣ, ಎನಗೆ ಸರ್ವವೂ ಸಾಧ್ಯವಾಯಿತ್ತು..
ಏಣಾಂಕಧರ ಸೋಮೇಶ್ವರಾ, ನಿಮ್ಮ ಶರಣರೆನ್ನ ಮಾತಾಪಿತರು..