Bhaktanakaya Jangama- One should be a devotee of Jangama's life
–ಸಚ್ಚಿದಾನಂದ ಪ್ರಭು ಚಟ್ನಳ್ಳಿ
ವಚನ:
ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ
ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾ
ಭಕ್ತನಲ್ಲಿಯೂ ಭಕ್ತ ಜಂಗಮವೆರಡೂ ಸನ್ನಿಹಿತ,
ಜಂಗಮದಲ್ಲಿಯೂ ಜಂಗಮ ಭಕ್ತವೆರಡೂ ಸನ್ನಿಹಿತ.
ಜಂಗಮಕ್ಕಾದಡೂ ಭಕ್ತಿಯೇ ಬೇಕು,
ಭಕ್ತಂಗೆ ಭಕ್ತಿಸ್ಥಲವೆ ಬೇಕು
ಭಕ್ತನ ಅರ್ಥಪ್ರಾಣಾಭಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ,
ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು
ತನುಮನಧನಂಗಳೆಲ್ಲವನೊಳಗೊಂಡು
ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ.
ಆ ಜಂಗಮದ ಬರುವಿಂಗೆ
ಮಡಲುವಿನಲ್ಲಿ ಪಟ್ಟವ ಕಟ್ಟಿದಡೆ ಆತ ಭಕ್ತನೆಂಬೆ
ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ?
ಲಿಂಗದೇವನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು
ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
ಭಕ್ತ ಮತ್ತು ಜಂಗಮರು ಲಿಂಗಾಯತ ಧರ್ಮದ ಬಹು ಮುಖ್ಯವಾದ ಎರಡು ಭಾಗಗಳು. ಇವರಿಬ್ಬರ ಸಂಬಂಧವನ್ನು ಗುರು ಬಸವಣ್ಣನವರು ಮೇಲೆನ ವಚನದಲ್ಲಿ ಅತ್ಯಂತ ಕಳಕಳಿಯಿಂದ ತಿಳಿಪಡಿಸಿದ್ದಾರೆ. ಜಂಗಮ ಸೇವೆ ಮಾಡದ ಭಕ್ತ ಆತ್ಮವಿಲ್ಲದ ದೇಹದಂತೆ, ಭಕ್ತರ ಒಲವಿಲ್ಲದ ಜಂಗಮ ದೇಹವಿಲ್ಲದ ಆತ್ಮ (ಅಂತರ್ಪಿಶಾಚಿ/ಅತೃಪ್ತ ಆತ್ಮ) ದಂತೆ.
ಭಕ್ತನ ಕಾಯವನ್ನು ಜಂಗಮ ಧರಿಸಿವುದು ಎಂದರೆ ಭಕ್ತನ ಕಷ್ಟ-ಸುಖಗಳು ಜಂಗಮನಿಗೆ ತಾಗ ಬೇಕು. ಭಕ್ತನಿಗೆ ನೋವಾದರೆ ಅದನ್ನು ಜಂಗಮ ಪರಿಣಾಮಿಸಬೇಕು. ಭಕ್ತನ ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ಅವನಿಗೆ ಸಿರಿ ಬಂದಾಗ ಅವನನ್ನು ಹಾಡಿ ಕೊಂಡಾಡಿ ಅವರಿಂದ ಕಾಣಿಕೆಗಳನ್ನು ಪಡೆದ ಜಂಗಮ ಭಕ್ತನ ಕಷ್ಟಕಾಲದಲ್ಲಿ ಅವನ ನೆರವಿಗೆ ನಿಲ್ಲಬೇಕು.
ಈ ಗುಣ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿಯವರಲ್ಲಿ ಹಾಸುಹೊಕ್ಕಾಗಿತ್ತು.
ಭಕ್ತರ ನೋವನ್ನು ತನ್ನ ನೋವೆಂದು ಜಂಗಮ ಭಾವಿಸಬೇಕು. ಜಂಗಮನ ಕಾರ್ಯಗಳು ತನ್ನ ಕಾರ್ಯಗಳೆಂದು, ಜಂಗಮ ಮಾಡುವ ಕಾರ್ಯಗಳು ತನ್ನ ಪ್ರಾಣವೆಂದು ಭಕ್ತ ಭಾವಿಸಬೇಕು.
ಭಕ್ತನಲ್ಲಿಯೂ ಭಕ್ತ ಜಂಗಮವೆರಡೂ ಸನ್ನಿಹಿತ
ಭಕ್ತನು ಭಕ್ತನಾಗುವುದರ ಜೊತೆಗೆ ಭಕ್ತಿ ಮಾಡುವುದ ಜೊತೆಗೆ ಪ್ರಸಂಗ ಬಂದಾಗಲೆಲ್ಲ ಜಂಗಮನಾಗಬೇಕು. ಅಂದರೆ ತಾನೂ ಧರ್ಮಪ್ರಚಾರಮಾಡಬೇಕು ಸಮಾಜ ಸೇವೆ ಧರ್ಮ ಸೇವೆ ಮಾಡಬೇಕು. ಹೀಗೆ ಭಕ್ತನು ಜಂಗಮನಾದಾಗ ಜಂಗಮ ಭಕ್ತನಿಗೆ ಗೌರವಿಸಬೇಕು.
ಜಂಗಮದಲ್ಲಿಯೂ ಜಂಗಮ ಭಕ್ತವೆರಡೂ ಸನ್ನಿಹಿತ.
ಜಂಗಮನಾದವನು ಕೇವಲ ಪಾದ ಪೂಜೆ ಮಾಡಿಸಿಕೊಂಡು ಭಕ್ತರಿಂದ ಕಾಣಿಕೆ ಪಡೆಯದೇ ತಾನೂ ಭಕ್ತನಾಗಬೇಕು, ಗುರುವಿಗೆ ಭಕ್ತನಾಗಬೇಕು, ಲಿಂಗದೇವನಿಗೆ ಭಕ್ತನಾಗಬೇಕು ಭಕ್ತನಿಗೂ ಭಕ್ತನಾಗಬೇಕು!
ಜಂಗಮಕ್ಕಾದಡೂ ಭಕ್ತಿಯೇ ಬೇಕು,
ಭಕ್ತಂಗೆ ಭಕ್ತಿಸ್ಥಲವೆ ಬೇಕು
ಜಂಗಮ ಮತ್ತು ಭಕ್ತರಿಬ್ಬರೂ ಭಕ್ತ ಭಕ್ತಿವಂತರಾಗಬೇಕು. ಭಕ್ತನು ಕೇವಲ ಭಕ್ತಿ ಮಾಡುವವ ಜಂಗಮ ಭಕ್ತಿ ಮಾಡಿಸುವವನಲ್ಲ ಅಥವಾ ಭಕ್ತನ ಭಕ್ತಿ ಸ್ವೀಕರಿಸುವ ಉತ್ಸವ ಮೂರ್ತಿಯಲ್ಲ. ಜಂಗಮನು ತಾನು ಸ್ವತಃ ಭಕ್ತಿವಂತನಾಗಿ ತನ್ನ ವರ್ತನೋಪದೇಶದ ಮೂಲಕ ಭಕ್ತರಲ್ಲಿ ಭಕ್ತಿಯನ್ನು ಬಿತ್ತಬೇಕು.
ಭಕ್ತನ ಅರ್ಥಪ್ರಾಣಾಭಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ,
ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು
ತನುಮನಧನಂಗಳೆಲ್ಲವನೊಳಗೊಂಡು
ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ.
ಭಕ್ತನ ಅರ್ಥ ಪ್ರಾಣಾಭಿಮಾನಗಳು ತನ್ನವೆಂದು ಭಾವಿಸಿ ಅವನ ಕಷ್ಟ ಸುಖಗಳೂ ತನ್ನವೆಂದು ಭಾವಿಸಿ ಭಕ್ತನಿಗೆ ಪೀಡಿಸದೆ ಅವನು ಸಲ್ಲಿಸಿದ ಸೇವೆಯನ್ನು ಸ್ವೀಕರಿಸಿ, ಆ ಭಕ್ತನನ್ನು ಭಕ್ತಿ ಮಾರ್ಗದಲ್ಲಿ ಧರ್ಮ ಮಾರ್ಗದಲ್ಲಿ ನಡೆಸುವ ಉಪದೇಶ ಮಾಡಬೇಕು. ಇದನ್ನು ಬಿಟ್ಟು ಇವರ ವಿಷಯ ಅವರ ಮನೆಯಲ್ಲಿ ಅವರ ವಿಷಯ ಇವರ ಮನೆಯಲ್ಲಿ ಮಾತನಾಡುತ್ತ ಸಮಯ ವ್ಯರ್ಥ ಮಾಡಿ ಉಂಡು ಹೋಗುವಾತ ಜಂಗಮನಲ್ಲ.
ಆ ಜಂಗಮದ ಬರುವಿಂಗೆ
ಮಡಲುವಿನಲ್ಲಿ ಪಟ್ಟವ ಕಟ್ಟಿದಡೆ ಆತ ಭಕ್ತನೆಂಬೆ
ಆ ಜಂಗಮನ ಬರುವಿಂಗೆ (ಮಡಲು=ತೆಂಗು ಅಡಿಕೆಯ ಗರಿ) ಮನೆಯನ್ನು ತಲಿರು ತೋರಣಗಳಿಂದ ಸಿಂಗರಿಸಿ ಅಂದರೆ ಹಬ್ಬದ ವಾತವರಣದಂತೆ ಸಂಭ್ರಮಿಸುತ್ತ ಜಂಗಮವನ್ನು ಬರಮಾಡಿಕೊಳ್ಳಬೇಕು. ಸಮಾಜಕ್ಕಾಗಿ ದುಡಿಯುವ ತ್ಯಾಗಿ ಜಂಗಮನನ್ನು ಭಕ್ತ ತನ್ನ ಪ್ರಾಣಸ್ವರೂಪವೆಂದು ಭಾವಿಸಿ ಜಂಗಮನಿಗೆ ಗೌರವಿಸಬೇಕು.
ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ?
ಲಿಂಗದೇವನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು
ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
ಗುರು ಬಸವಣ್ಣನವರ ವಿನಯಭಾವ ಇಲ್ಲಿ ಆಕಾಶದಿಂದತ್ತತ್ತ ಪಸರಿಸಿದೆ. ಗುರು ಬಸವಣ್ಣನವರು ಸ್ವತಃ ಮಹಾಮನೆಯನ್ನು ನಿರ್ಮಿಸಿ ಶರಣರಿಗೆ ಧರ್ಮವನ್ನು ಬೋಧಿಸಿ ಅವರನ್ನು ಧರ್ಮ ಮಾರ್ಗದಲ್ಲಿ ನಡೆಸಿ ಅನುಭಾವ ಮಂಟಪವನ್ನು ನಿರ್ಮಿಸಿ ಧರ್ಮವಂತ ಶರಣರನ್ನು ನಿರ್ಮಿಸಿದರೂ ಅವರು ಭಕ್ತರಿಗೆ ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ? ಎಂದು ವಿನಯ ಭಾವವನ್ನು ಮೆರೆದಿದ್ದಾರೆ.
ವಚನದ ಈ ಸಾಲಿನಲ್ಲಿ ಲಿಂಗಾಯತ ಧರ್ಮದ ಆಧಾರ ಸ್ತಂಭದ ಸಿದ್ಧಾಂತವಿದೆ. ಈ ಸಿದ್ಧಾಂತವನ್ನು ಅಂದಿನಿಂದ ಇಂದಿನವರೆಗೆ ಎಲ್ಲಾ ಮಠ ಪೀಠಗಳು ಪಾಲಿಸಿದ್ದರೆ ಇಂದಿನ ಲಿಂಗಾಯತ ಧರ್ಮದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಈಗಿರುವ ಎಲ್ಲಾ ಮಠ ಪೀಠಗಳು ಪ್ರತಿಷ್ಠಾನಗಳು ಈ ಸಿದ್ಧಾಂತವನ್ನು ಅಳವಡಿಸಿಕೊಂಡರೆ ಕೆಲವೇ ವರ್ಷಗಳಲ್ಲಿ ಲಿಂಗಾಯತ ಧರ್ಮದ ಚಿತ್ರಣ ಬದಲಾಗುತ್ತದೆ.
ಯಾವುದು ಆ ಸಿದ್ದಾಂತ?
ಮಠ ಪೀಠ ಪ್ರತಿಷ್ಠಾನಗಳೆಲ್ಲ ಭಕ್ತರ ಮಠಗಳೇ ಹೊರತು ಅಲ್ಲಿರುವ ಜಂಗಮರ ಮನೆ ಆಸ್ತಿಗಳಲ್ಲ. ಭಕ್ತರ ಸೇವೆಗಾಗಿ ಭಕ್ತರ ಒಳಿತಿಗಾಗಿ ಮಠಗಳಿರಬೇಕೆ ಹೊರತು ತನ್ನ ಉಪ ಜೀವನಕ್ಕೆ ತನ್ನ ಬಂಧು ಭಾಂಧವರನ್ನು ರಕ್ತ ಸಂಬಂಧಿಗಳನ್ನು ಸಾಕಲಿಕ್ಕೆ ಮಠಗಳೇಕೆ ಬೇಕು?
ಎಲ್ಲವನ್ನೂ ಮಾಡಿ ನಾನು ಶರಣರ ಮನೆಯ ಬಾಗಿಲುಗಾಹಿ ಎಂದು ಹೇಳುವಲ್ಲಿ , ಮಠ ಪೀಠ ಪ್ರತಿಷ್ಠಾನಧೀಶರು ಮಠ ಪೀಠ ಪ್ರತಿಷ್ಠಾನಗಳ ಬಾಗಿಲುಗಾಹಿಗಳ ಭಾವ ಹೊಂದಿರಬೇಕೆ ಹೊರತು ಭಕ್ತರ ಮೇಲೆ ಅಧಿಕಾರ ನಡೆಸುವ ಅಧಿಕಾರಿಗಳಾಗಬಾರದು. ಮಠಗಳ ಮೂಲಕ ಭಕ್ತರ ಆಸ್ತಿ ಕಬಳಿಸುವ ನುಂಗುಬಾಕರಾಗಬಾರದು ಎನ್ನುವ ಸಂದೇಶವನ್ನು ಗುರು ಬಸವಣ್ಣನವರು ವಚನ ಈ ವಾಕ್ಯದ ಮೂಲಕ ನೀಡಿದ್ದಾರೆ.
ಮೊನ್ನೆ ಹಿರಿಯ ಶರಣೆ ಶಾಂತಮ್ಮ ನನಗೆ ಕರೆ ಮಾಡಿದ್ದರು. ಅವರೀಗೀಗ 80 ವರ್ಷ ವಯಸ್ಸು. ಬಸವ ಮಂಟಪ ಇರುವ ಓಣಿಯಲ್ಲಿ ಚಿಕಿತ್ಸೆಗೆ ಹೋಗಿದ್ದಾರೆ. ಮರುದಿನವೂ ಚಿಕಿತ್ಸೆಗೆ ಹೋಗಬೇಕಾಗಿತ್ತು ಅದಕ್ಕಾಗಿ ಇವತ್ತೊಂದು ದಿನ ಬಸವ ಮಂಟಪದಲ್ಲೇ ಇದ್ದರಾಯಿತು ಎಂದು ಬಸವ ಮಂಟಪಕ್ಕೆ ಹೋಗಿದ್ದಾರೆ. ರಾತ್ರಿ ಅವರಿಗೆ ಅಲ್ಲಿ ಪ್ರಸಾದ ಕೊಟ್ಟಿಲ್ಲ ಹೋಟೆಲಿನಲ್ಲಿ ಪ್ರಸಾದ ಮಾಡಿದ್ದಾರೆ. ಮರುದಿನ ಬೆಳಿಗ್ಗೆ ಹೊರಡುವಾಗ ಬಸವಮಂಟಪದಲ್ಲಿರುವವರೊಬ್ಬರು”ಲಾಡ್ಜನಲ್ಲಿದ್ದರೆ ದುಡ್ಡು ಕೊಡುತ್ತಿದ್ದೀರಲ್ಲಾ ನಿನ್ನೆ ಇಲ್ಲಿ ಉಳಿದಿರುವುದಕ್ಕೆ 300 ರೂಪಾಯಿ ಕೊಡಿ” ಎಂದು ಕೇಳಿದ್ದಾರೆ ಕೊಡುವವರೆಗೂ ಬಿಟ್ಟಿಲ್ಲ. ಶರಣೆ ಶಾಂತಮ್ಮ ತಾವು ಚೆನ್ನಾಗಿದ್ದಾಗ ಸಾಕಷ್ಟು ಬಾರಿ ಕಾಣಿಕೆಗಳನ್ನು ಕೊಟ್ಟಿರುವುದು ಪ್ರಸಾದ ದಾಸೋಹ ಮಾಡಿಸಿರುವುದು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಕಷ್ಟಕಾಲದಲ್ಲಿ ಒಂದು ದಿನ ಆಶ್ರಯ ಕೊಡಲಿಕ್ಕಾಗದ ಬಸವ ಮಂಟಪಗಳು ಬಸವ ಮಂಟಪಗಳೇ..? ಅಂತಹ ಬಸವ ಮಂಟಪಗಳು, ಮಠಗಳು ಮಠಗಳೇ..? ಎನ್ನುವ ಪ್ರಶ್ನೆ ಕಾಡುತ್ತಿದೆ.
ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
ಶರಣರಿಂದಲೇ ನಿರ್ಮಿಸಲ್ಪಟ್ಟ ಮಠಗಳಿಗೆ ಬಸವ ಮಂಟಪಗಳಿಗೆ ಭಕ್ತರು ಬಂದರೆ ಬೇಕು ಬೇಡೆನ್ನೆ ಎನ್ನುವ ಮಾತಿನಲ್ಲಿ ಗುರು ಬಸವಣ್ಣನವರು ಬಹು ಸೂಕ್ಷ್ಮವಾದ ಮನಸ್ಸನ್ನು ಹೊಂದಿದ್ದಾರೆ. ಭಕ್ತರು ಬಂದಾಗ ಅವರಿಗೆ ಸ್ವಾಗತಿಸಿದರೂ ಇದು ನನ್ನ ಮಠ ನಾನು ಸ್ವಾಗತಿಸವವನು ಎಂದಾಗುತ್ತದೆ ಎಂದು ನಾನು ಭಕ್ತರ ಬರುವನ್ನು ಕಂಡು ನಿರ್ಲಿಪ್ತವಾಗಿ ಅವರ ಸೇವೆ ಮಾಡುತ್ತೇನೆಯೇ ಹೊರತು ಬೇಕು ಬೇಡೆನ್ನೆ ಎನ್ನುತ್ತಾರೆ. ಶರಣರು ತಮ್ಮ ಮಠಕ್ಕೆ ತಾವು ಬರುತ್ತಾರೆ. ಅವರ ಸೇವಕ ನಾನು ಎನ್ನುವ ಮನೋಭಾವ ಮಠದಲ್ಲಿರುವವರಿಗೆ ಇರಬೇಕೆ ಹೊರತು ಮಠವೇ ನನ್ನದು ಎನ್ನುವ ಭಾವವಿರಬಾರದು.
ಒಟ್ಟಾರೆಯಾಗಿ ಹೇಳುವುದಾದರೆ ಗುರು ಬಸವಣ್ಣನವರು ಮೇಲಿನ ವಚನದಲ್ಲಿ ಭಕ್ತ ಮತ್ತು ಜಂಗಮದ ನಡುವೆ ಇರಬೇಕಾದ ಅತೀ ಸೂಕ್ಷ್ಮಾತೀ ಸೂಕ್ಷ್ಮ ಸಂಬಂಧವನ್ನು ಹೇಳಿದ್ದಾರೆ. ಇಂಥ ಸಂಬಂಧ ಹೊಂದಿದವರು ಮಾತ್ರ ಭಕ್ತರು ಮತ್ತು ಜಂಗಮರು. ಇಂತಹ ಸಂಬಂಧ ಹೊಂದಿದ ಮಠಗಳು ಮಾತ್ರ ಅವು ಗುರು ಬಸವಣ್ಣನವರ ತತ್ವದ ಮಠಗಳು ಇಲ್ಲದಿದ್ದಲಲ್ಲಿ ಅವುಗಳು ಕೆಮ್ಮನೆ ಮಾತ್ರ!!
–ಸಚ್ಚಿದಾನಂದ ಪ್ರಭು ಚಟ್ನಳ್ಳಿ