Siddalinga Swami of Lingaikya Tonta is the Guru of Bhavaikya
ಇದೊಂದು ದುರಂತದ ಕಾಲಘಟ್ಟ . ಈಗ ಪ್ರತಿಯೊಂದು ಪದಕ್ಕೂ ಸೀಮಿತವಾದ ಅರ್ಥ ಹುಡುಕು ಪ್ರಯತ್ನ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ . ಅದರಂತೆ ಧಾರ್ಮಿಕ ಕ್ಷೇತ್ರವೂ ಅಂತಹದೊಂದು ಘಟನೆಗೆ ಸಾಕ್ಷಿಯಾಯಿತು. ಗದುಗಿನ ತೋಂಟದಾರ್ಯ ಮಠದ ಹಿಂದಿನ ಪೂಜ್ಯರಾದ ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳ ಹುಟ್ಟು ಹಬ್ಬವನ್ನು ಭಾವೈಕ್ಯತೆಯ ದಿನಾಚರಣೆಯೆಂದು ಆಚರಣೆ ಮಾಡುವ ಸಂಧರ್ಭದಲ್ಲಿ , ಭಾವೈಕ್ಯತೆಯ ಎನ್ನುವುದು ಕೇವಲ ನಮ್ಮ ಮಠಕ್ಕೆ ಸೀಮಿತವಾದದ್ದು , ವಿರಕ್ತ ಮಠಗಳು ಭಾವೈಕ್ಯತೆಯ ದಿನಾಚರಣೆ ಮಾಡಿದರೆ ನಾವು ಆ ದಿನವನ್ನು ಕರಾಳ ದಿನಾಚರಣೆ ಮಾಡುವುದಾಗಿ ಹೇಳಿಕೆ ನೀಡಿದ ಇನ್ನೊಬ್ಬ ಸ್ವಾಮಿಗಳು ಹೇಳಿಕೆ ನಿಜಕ್ಕೂ ಸಂಕುಚಿತವಾದದ್ದು ಅನಿಸಿತು. ವಿಶಾಲ ಪ್ರಜ್ಞೆಯನ್ನು ಹೊಂದಿದ ಭಾವೈಕ್ಯತೆ ಎನ್ನುವುದು ಇಂದು ಕೆಲವೊಂದು ಮಠಗಳಿಗೆ , ಕೇಲವೊಂದು ದರ್ಗಾ ಮಸೀದಿಗಳಿಗೆ ಮತ್ತು ಚರ್ಚ್ ಗಳಿಗೆ ಸೀಮಿತ ಮಾಡಿ ನೋಡುವುದು ಎಷ್ಟು ಸರಿ?.
ಕರ್ನಾಟಕದ ಎಲ್ಲಾ ವಿರಕ್ತ ಮಠಗಳು ಭಾವೈಕ್ಯತೆಯನ್ನು ಆಚರಿಸುತ್ತಾ ಬಂದಿವೆ. ಬಸವಣ್ಣನ ಪರಂಪರೆಯ ಮಠಗಳು ಅತ್ಯಂತ ಗಟ್ಟಿಯಾಗಿ ಭಾವೈಕ್ಯತೆಯ ಮನೋಭಾವ ಹೊಂದಿವೆ. ಬಸವಣ್ಣನ ಮೂಲ ಆಸೆಯೇ ಭಾವೈಕ್ಯತೆ.
” ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ
ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯಾ
ಕೂಡಲಸಂಗಮ ದೇವಾ ನಿಮ್ಮ ಮಹಾಮನೆಯ
ಮಗನೆಂದೆನಿಸಯ್ಯಾ “
ಎನ್ನುವ ವಚನವೆ ಇಂದಿನ ಬಸವ ಪರಂಪರೆಯ ಮಠಗಳ ಜೀವಾಳವಾಗಿರುವಾಗ ಭಾವೈಕ್ಯತೆಯ ಎನ್ನುವುದು ಕೇಲವೊಂದು ಮಠಗಳಿಗೆ ಮಾತ್ರ ಹೇಗೆ ಸೀಮಿತವಾಗುತ್ತದೆ ? . ಕೂಡಲ ಸಂಗಮದೇವನ ಮಹಾಮನೆಯ ಮಗನೆಂದು ಎಲ್ಲರೂ ಒಳಗೊಳ್ಳುವ, ಎಲ್ಲರನ್ನೂ ಅಪ್ಪಿಕೊಳ್ಳುವ ಬಸವ ಪರಂಪರೆಯ ಮಠಗಳು ಈ ನೆಲದಲ್ಲಿ ಯಾವಾಗಲೂ ಭಾವೈಕ್ಯತೆಯ ಬೀಜವನ್ನು ಬಿತ್ತುತ್ತಾ ಬಂದಿವೆ.
ಈ ಸಂಧರ್ಭದಲ್ಲಿ ಇಳಕಲ್ಲಿನ ಲಿಂಗೈಕ್ಯ ಮಹಾಂತಪ್ಪಗಳ ಮಾತು ನಿಜಕ್ಕೂ ಪ್ರಸ್ತುತಾ ಎನಿಸುತ್ತದೆ .
” ಲಿಂಗವಿಲ್ಲದವರು ಎಂದು ದೂರಿರುವುದು ನಮ್ಮಿಂದಾಗುವುದಿಲ್ಲ . ಅವರ ಹತ್ತಿರ ಹೋಗಿ , ಲಿಂಗದ ಮಹತಿ ತಿಳಿಸಿ , ಅವರನ್ನು ಲಿಂಗಾಂಗಿಯನ್ನಾಗಿ ಮಾಡುವಲ್ಲಿ ನಮ್ಮ ಕರ್ತವ್ಯ ಪವಿತ್ರಗೊಳ್ಳುತ್ತದೆ ಎಂದು ನಾವು ಸದಾ ಭಾವಿಸುತ್ತೆವೆ.ಹಾಗೆ ಬಯಸುತ್ತೆವೆ,ಹಾಗೂ ಬದುಕುತ್ತೆವೆ.” ಲಿಂಗವಂತ ಧರ್ಮಾನುಯಾಯಿಗಳು ನಮ್ಮ ಮನೆಯವರು ; ಲಿಂಗಾಯತೇತರ ಸರ್ವ ಧರ್ಮದವರು ನಮ್ಮ ಮನದವರು ” ಎನ್ನುವ ಅವರ ಬದುಕು, ನಡೆ ನುಡಿ ಎಲ್ಲವೂ ವಿಶ್ವಮಾನವ ಪ್ರಜ್ಞೆಯ ಅಂತಃಕರಣದ ನುಡಿಗಳು ಭಾವೈಕ್ಯತೆಯಲ್ಲವೇ?. ಅವರು ಈ ಮಾತುಗಳು ನೆಲದ ಭಾವೈಕ್ಯತೆಯ ಎತ್ತಿ ಹಿಡಿದ ಮನುಷ್ಯ ಪ್ರಜ್ಞೆಯ ನುಡಿಗಳು .
” ನಾ ನೀನೆಂಬ ಭಾವವಾರಿಂದಾಯಿತ್ತು ಹೇಳಾ
ನೀನೆಂಬುದು ಅಜ್ಞಾನ ನಾನೆಂಬುದು ಮಾಯಾಧೀನ
ನೀನೆನ್ನದೆ ನಾನೆನ್ನದೆ ಇಪ್ಪಸುಖವ ಭಿನ್ನವಿಲ್ಲದೆ ಅರಿಯಬಲ್ಲಡೆ
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ ” ಎನ್ನುವ ಅಲ್ಲಮರ ವಚನ ನೆನಪಾಗುತ್ತದೆ. ಬಸವಾದಿ ಶರಣರ ಪ್ರತಿಯೊಂದು ವಚನಗಳು ಭಾವೈಕ್ಯತೆಯ ಬೀತ್ತಿ ಮನುಷ್ಯ ಮನುಷ್ಯನ ಮಧ್ಯೆ ಪ್ರೀತಿ ಹುಟ್ಟಿಸುವಂತವು ಅವರ ಆ ಎಲ್ಲಾ ವಚನಗಳು ಭಾವೈಕ್ಯತೆಯ ಅಮೃತವನ್ನು ಸಮಾಜಕ್ಕೆ ಊಣಬಡಿಸಿವೆ.
ಇನ್ನೂ ಗದುಗಿನ ಮಠ ವಿಶಿಷ್ಟವಾದ ಮಠ ಭಾವೈಕ್ಯತೆಯ ಸನಾಜದಲ್ಲಿ ಆಳವಾಗಿ ಬಿತ್ತಿದ ಮಠ. ಇಂದಿಗೂ ವೀರನಾರಾಯಣ , ತ್ರಿಕೊಟೇಶ್ವರ , ಜುಮ್ಮಾ ಮಸೀದಿ ಈ ಮೂರು ಧಾರ್ಮಿಕ ಕೇಂದ್ರಕ್ಕೆ ಒಂದಘ ಟ್ರಸ್ಟ್ ಇದೆ. ಇದರಲ್ಲಿ ಎಲ್ಲಾ ಮತ ಧರ್ಮದವರು ಸದಸ್ಯರಿದ್ದಾರೆ.ಇನ್ನೂ ಗದುಗಿನ ಮಠಕ್ಕೆ ಮುಸ್ಲಿಂ ಭಕ್ತರೂ ಇದ್ದಾರೆ , ಮಠದಲ್ಲಿ ಕ್ರಿಶ್ಚಿಯನ್ , ಮುಸಲ್ಮಾನ್. ಜೈನ,ಬೌದ್ದ ಮೊದಲಾದ ಎಲ್ಲಾ ಧರ್ಮಗಳ ಹಬ್ಬವನ್ನು ಆಚರಿಸುತ್ತಾರೆ.ಒಮ್ಮೆ ಜಾತ್ರಾ ಮಹೋತ್ಸವದ ಅಧ್ಯಕ್ಷರನ್ನಾಗಿ ಮುಸಲ್ಮಾನ್ ಬಂಧುಗಳನ್ನು ಆಯ್ಕೆ ಮಾಡಲಾಗಿತ್ತು. ಇಷ್ಟೆ ಅಲ್ಲದೆ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿಗಳು ನಾಡಿನ ಎಲ್ಲಾ ಸಮುದಾಯದ ಜನಸಾಮಾನ್ಯರೊಂದಿಗೆ ಸಾಮರಸ್ಯ ಸಂಭಂದ ಹೊಂದಿದವರಾಗಿದ್ದರು , ಎಲ್ಲಾ ಸಮುದಾಯಗಳಿಗೆ ನೆಚ್ಚಿನ ಗುರುಗಳು ಆಗಿದ್ದರು.ಹಾಗಾಗಿ ಅವರ ಜನ್ಮದಿನೋತ್ಸವದಂದು ಭಾವೈಕ್ಯತೆ ದಿನಾಚರಣೆಯನ್ನಾಗಿ ಆಚರಿಸಿದರೆ ತಪ್ಪೇನೂ!!?.
ಇಷ್ಟೆ ಅಲ್ಲಾ ಬಸವಣ್ಣನನ್ನು ಅಪ್ಪಿದಂತ ಈ ನೆಲದ ಬಹುತೇಕ ಮಠಗಳು ಯಾವುದೇ ಜಾತಿ ತಾರತಮ್ಯವಿಲ್ಲದೆ ಮಕ್ಕಳಿಗೆ ಶಿಕ್ಷಣ ನೀಡಿವೆ. ಹಸಿದು ಬಂದವರಿಗೆ ದಾಸೋಹ ಮಾಡಿವೆ ಹಾಗಾಗಿ ಬಸವಣ್ಣನ್ನನ್ನು ಒಪ್ಪಿದಂತ ಈ ನೆಲದ ಬಹುತೇಕ ಮಠಗಳು ಭಾವೈಕ್ಯತೆಯ ಮಠಗಳು ಎಂದರೆ ತಪ್ಪೇನು?. ಹಾಗಾಗಿ ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳ ಹುಟ್ಟು ಹಬ್ಬವನ್ನು ಭಾವೈಕ್ಯತೆ ದಿನಾಚರಣೆಯಾಗಿ ಆಚರಿಸಿದರೆ ತಪ್ಪೇನೂ? . ಆದರೆ ನೋಡುವ ನೋಟ ಬದಲಾಗಿ ನೋಡಿದರೆ ಈ ಜಗವೆಲ್ಲಾ ಸುಂದರ.
” ನೋಡುವುದ ನೋಡಲರಿಯದೆ ಕೆಟ್ಟಿತ್ತೀ ಲೋಕವೆಲ್ಲ
ನೋಡೋದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ
ನೋಟದ ಮಾಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ.”
ಡಾ.ರಾಜಶೇಖರ ನಾರನಾಳ
ವೈದ್ಯರು ಗಂಗಾವತಿ.