Breaking News

ಐತಿಹಾಸಿಕ ಇಟಗಿ ಗ್ರಾಮದಲ್ಲಿ ಗಮನ ಸೆಳೆದ ಸ್ವಚ್ಛತಾ ಅಭಿಯಾನ

Cleanliness campaign in historical Itagi village attracted attention

ಜಾಹೀರಾತು
IMG 20231002 WA0002 300x169

ಕೊಪ್ಪಳ ಅಕ್ಟೋಬರ್ 01 (ಕ.ವಾ.): ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಿಂದ ಕುಕನೂರ ತಾಲೂಕಿನ ಐತಿಹಾಸಿಕ ಗ್ರಾಮ ಇಟಗಿಯಲ್ಲಿ
ಸ್ವಚ್ಛತಾ ಹಿ ಸೇವಾ ಅಭಿಯಾನ ಕಾರ್ಯಕ್ರಮ ಅಕ್ಟೋಬರ್ 1ರಂದು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ
ಇಟಗಿಯ ಐತಿಹಾಸಿಕ ಇಟಗಿ ಮಹಾದೇವ ದೇವಾಲಯದ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿದ್ದರು. ‌ತ್ಯಾಜ್ಯ ಮುಕ್ತ ಭಾರತಕ್ಕಾಗಿ ನಾವು ಶ್ರಮಿಸುತ್ತೇವೆ ಎನ್ನುವ ಪ್ರತಿಜ್ಞೆ ಮಾಡುವ ಮೂಲಕ ಸ್ವಚ್ಛತೆಯೇ ಸೇವೆ ಎನ್ನುವ ಸಂದೇಶ ಮೊಳಗಿಸಿದರು.
ಕಾರ್ಯಕ್ರಮದ ಉದ್ಘಾಟಿಸಿದ
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಸ್ವಚ್ಛತೆಯ ಕೆಲಸವು ದೇವರ ಕೆಲಸವಾಗಿದೆ ಎಂದು ಜನರು ಭಾವಿಸಬೇಕು. ಶುಚಿತ್ವ ಕಾರ್ಯವನ್ನು ಪ್ರತಿ ದಿನ ಮಾಡಬೇಕು. ಊರ ಕೆರೆ, ಭಾವಿ, ಓಣಿ, ಶಾಲೆ, ರಸ್ತೆ ಎಲ್ಲವೂ ಸರಿಯಾಗಿ ಇರುವಂತೆ‌ ನೋಡಿಕೊಳ್ಳಬೇಕು ಎಂದರು.
2014ರಿಂದಲೇ ಸ್ವಚ್ಚ ಭಾರತ್ ಮಿಷನ್ ಜಾರಿಯಿದೆ. ಇದು ಜಾರಿಯಾಗಿ 9 ವರ್ಷ ಗತಿಸಿದೆ. ವೈಯಕ್ತಿಕ ಶೌಚಾಲಯ ಬಳಕೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಶೌಚಾಲಯ ಬಳಕೆಯ ಬಗ್ಗೆ ಶಾಲಾ ಮಕ್ಕಳು ತಮ್ಮ ಪಾಲಕರಿಗೆ ಅರಿವು ಮೂಡಿಸಬೇಕು ಎಂದರು.
ಗ್ರಾಮಗಳಲ್ಲಿನ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕಗಳ ಬಳಕೆ ಮಾಡಬೇಕು. ಸ್ವಚ್ಛತಾ ವಾಹಿನಿ ವಾಹನದಲ್ಲಿಯೇ ಕಸ ಹಾಕಬೇಕು. ಪರಿಸರಕ್ಕೆ ಸಾಕಷ್ಟು ಹಾನಿ ಮಾಡುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ನವೀನಕುಮಾರ ಗುಳಗನ್ನವರ ಮಾತನಾಡಿ, ಮಹತ್ವದ ಈ ಕಾರ್ಯಕ್ರಮಕ್ಕೆ ಇಟಗಿಯನ್ನು ಆಯ್ಕೆ ಮಾಡಿರುವುದು ಅಭಿನಂದನಾರ್ಹ ಸಂಗತಿ ಎಂದರು. ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರ ದೂರದೃಷ್ಠಿಯ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಉತ್ತಮ ಕಾರ್ಯಗಳಾಗಿವೆ. ಕೊಪ್ಪಳ ಜಿಲ್ಲಾ‌ ಪಂಚಾಯತ್ ನಿಂದ ಸ್ವಚ್ಚತಾ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಪ್ರಾಸ್ತಾವಿಕ ಮಾತನಾಡಿ, ಗ್ರಾಮಗಳು ಅಭಿವೃದ್ಧಿ ಆದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಿದೆ. ಒಂದು ಗ್ರಾಮದ ಏಳ್ಗೆಯು ಆ ಗ್ರಾಮದ ಶುಚಿತ್ವದಲ್ಲಿಯೇ ಅಡಗಿದೆ ಎಂದು ಗಾಂಧೀಜಿಯವರು ತಿಳಿಸಿದ್ದರು. ಇದನ್ನು ಗ್ರಾಮಸ್ಥರು ಅರಿಯಬೇಕು. ಸ್ವಚ್ಛತಾ ಹಿ ಸೇವಾ ಅಭಿಯಾನವು ಜಿಲ್ಲೆಯಲ್ಲಿ ಸಹ ನಿರಂತರವಾಗಿ 17 ದಿನಗಳ ಕಾಲ ನಡೆಯುತ್ತ ಬಂದಿದೆ. ಇದು ಜಿಲ್ಲೆಯ ಪ್ರತಿ ಗ್ರಾಮದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು. ಸ್ವಚ್ಚತೆಯು ನಮ್ಮ ಅವಿಭಾಜ್ಯ ಅಂಗವಾಗಬೇಕು ಎಂದರು.
ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ
ಕುಮಾರಿ ಜ್ಯೋತಿ ತೊಂಡಿಹಾಳ ಅವರು ಮಾತನಾಡಿ, ಗ್ರಾಮದ ಶುಚಿತ್ವ ಕಾಪಾಡುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂದರು. ಮತ್ತೊಬ್ಬ ವಿದ್ಯಾರ್ಥಿನಿ ಭಾಗ್ಯಶ್ರೀ ಹಡಪದ ಅವರು ಮಾತನಾಡಿ, ಗಾಂಧೀಜಿಯವರ ಜನ್ಮದಿನದ ನಿಮಿತ್ತ ನಡೆಯುತ್ತಿರುವ ಅಭಿಯಾನ ಪ್ರತಿ ಗ್ರಾಮದಲ್ಲಿ ಪ್ರತಿ ದಿನ ನಡೆಯುವಂತಾಗಬೇಕು. ಅಂದಾಗ ನಮ್ಮ ಸಮಾಜ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸ್ಯಾನಿಟರಿ ಪ್ಯಾಡ್ ಬಳಕೆ ಪ್ರಾತ್ಯಕ್ಷಿಕೆ: ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರು ಪ್ರತಿ ದಿನ ಸ್ಯಾನಿಟರಿ ಪ್ಯಾಡ್ ಬಳಸುವ ರೀತಿಯ ಬಗ್ಗೆ ಸಮುದಾಯ ಆರೋಗ್ಯಾಧಿಕಾರಿ ಲತಾ ಹಾಳಕೇರಿ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಸ್ಯಾನಿಟರಿ ಪ್ಯಾಡಗಳನ್ನು ಎಲ್ಲೆಂದರಲ್ಲಿ ಬೀಸಾಕಬಾರದು ಎಂದು ತಿಳಿಸಿದರು.
ಪ್ರತಿಜ್ಞಾವಿಧಿ ಬೋಧನೆ:
ತಾಪಂ ಸಹಾಯಕ ನಿರ್ದೆಶಕರಾದ ವೆಂಕಟೇಶ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಸಮಾರಂಭದಲ್ಲಿ ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ಪಿ., ತಾಪಂ ಇಓ ಸಂತೋಷ ಬಿರಾದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ತಾಲೂಕು ಆರೋಗ್ಯಾಧಿಕಾರಿ ಡಾ.ರಚನಾ,
ಗ್ರಾಪಂ ಅಧ್ಯಕ್ಷೆ ನಿರ್ಮಲಾ ಮಹೇಶ ಹಿರೇಮನಿ, ಗ್ರಾಪಂ ಉಪಾಧ್ಯಕ್ಷೆ ಸುವರ್ಣ ಹೊನ್ನಪ್ಪ ಕುರಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಇಟಗಿ ಗ್ರಾಪಂ
ಪಿಡಿಓ ಶರಣಪ್ಪ ಕೆಳಗಿನಮನಿ ಅವರು ನಿರೂಪಿಸಿದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.