ಜಮಖಂಡಿ/ಅಥಣಿ: ಬಿಸಿಲಿನ ತಾಪಕ್ಕೆ ಕೃಷ್ಣಾ ನದಿ ನೀರು ಬತ್ತಿ ಹೋಗಿದ್ದು, ನದಿ ನೀರು ನಂಬಿಕೊಂಡಿರುವ ಗಡಿ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ನದಿ ತೀರದ ಗ್ರಾಮಗಳಲ್ಲಿ ಜಲಕ್ಷಾಮ ಎದುರಾಗಿದೆ. ಹೌದು, ಬೆಳಗಾವಿ – ಬಾಗಲಕೋಟೆ ಜಿಲ್ಲೆಯ ಜಮಖಂಡಿ-ಅಥಣಿ ತಾಲೂಕಿನ ಹಲವು ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಬಿರು ಬೇಸಿಗೆಯಿಂದ ಕೃಷ್ಣಾ ನದಿಯ ಒಡಲು ಬರಿದಾಗಿದೆ. ಇದರಿಂದಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ, ನದಿಯಲ್ಲಿ ನೀರು ಬತ್ತಿದರಿಂದ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದ್ದು, ನದಿ ತೀರದಲ್ಲಿ ದುರ್ವಾಸನೆ ಹರಡುತ್ತಿದೆ.
ರೈತ ಮಹಾದೇವ ಮಡಿವಾಳ ಮಾತನಾಡಿ, “ಕೃಷ್ಣಾ ನದಿ ತೀರದ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಬೆಳೆ ಬೆಳೆದಿದ್ದು, ನೀರಿನ ಅಭಾವ ಸೃಷ್ಟಿಯಾಗಿದೆ. ರಾಜ್ಯಾದ್ಯಂತ ಬರಗಾಲ ತಾಂಡವವಾಡುತ್ತಿದೆ. ಎಷ್ಟೇ ಅಡಿ ಆಳ ಬೋರವೆಲ್ ಕೊರೆಯಿಸಿದರು ನೀರು ಸಿಗದೇ ರೈತರು ಕಂಗಾಲಾಗಿದ್ದಾರೆ. ಆದಷ್ಟು ಬೇಗನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡುಗಡೆ ಮಾಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ರೈತ ಪ್ರಕಾಶ್ ಪೂಜಾರಿ ಮಾತನಾಡಿ, “ನಮ್ಮ ಭಾಗದಲ್ಲಿ ಕೃಷ್ಣಾ ನದಿ ಬತ್ತಿ ಹೋಗಿದೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸಂಸದರು ಚುನಾವಣೆ ಕೆಲಸದಲ್ಲಿ ನಿರತರಾಗಿದ್ದಾರೆಯೇ ಹೊರತು ಕೃಷ್ಣಾ ನದಿ ಒತ್ತಿ ಹೋಗಿದ್ದು, ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ನದಿಗೆ ನೀರು ಬಿಡಿಸುವ ಪ್ರಯತ್ನ ಮಾಡುತ್ತಿಲ್ಲ. ತೀವ್ರ ಬರಗಾಲದಿಂದ ಬೆಳೆ ನಷ್ಟ ಆಗಿದೆ ಮತ್ತೊಂದೆಡೆ, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕುಡಿಯುವ ನೀರಿಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ, ಆದರೆ ಅದಕ್ಕೂ ನೀರಿನ ಅಭಾವ ಇದೆ. ಮುಂದಿನ ಮೂರು ತಿಂಗಳ ಬೇಸಿಗೆಯಲ್ಲಿ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.
ಲೋಕಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ, ಆದರೆ ರೈತರ ಸಂಕಷ್ಟ ನಿವಾರಿಸಲು ರಾಜಕೀಯ ನಾಯಕರು ಮುಂದಾಗಬೇಕು. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿದರೆ ಈ ಭಾಗದಲ್ಲಿ ಕನಿಷ್ಠ ನೀರಿನ ಹಾಹಾಕಾರ ತಪ್ಪುತ್ತದೆ. ಆದಷ್ಟು ಬೇಗ ಈ ಭಾಗದ ಶಾಸಕರು, ಸಚಿವರು ಹಾಗೂ ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.