Karnataka’s unification movement is as exciting and emotional as India’s freedom movement: Nagamallappa M Arakalawadi
ಚಾಮರಾಜನಗರ ತಾಲೂಕಿನ ಅರಕಲವಾಡಿಯ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶತ ಶತಮಾನಗಳ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕನ್ನಡ ನಾಡು-ನುಡಿ, ಇತಿಹಾಸದ ಯಾವ ಕಾಲಘಟ್ಟದಲ್ಲಿಯೂ ಒಂದೇ ಪ್ರಭುತ್ವಕ್ಕೆ ಒಳಪಟ್ಟಿರಲಿಲ್ಲ. ರಾಷ್ಟ್ರಕೂಟರ ನೃಪತುಂಗನ ಕಾಲಕ್ಕೆ ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿತ್ತು ಎಂಬುದಕ್ಕೆ ಆಧಾರಗಳಿವೆ. ನಂತರ ಕನ್ನಡ ನಾಡು 22 ಪ್ರಭುತ್ವಗಳಲ್ಲಿ ಹಂಚಿ ಹೋಗಿತ್ತು. ನಾಡ ಪ್ರೇಮಿಗಳು, ಮಹನೀಯರ, ಕವಿಗಳ, ಸಾಹಿತಿಗಳ ಮತ್ತು ಸಂಘ- ಸಂಸ್ಥೆಗಳ ಹೋರಾಟದ ಪ್ರತಿಫಲವಾಗಿ ಹರಿದು-ಹಂಚಿ ಹೋಗಿದ್ದ ಕನ್ನಡ ನಾಡು ಏಕೀಕರಣ ಸಾಧಿಸಿ, ಭಾಷಾ ಮರು ಪ್ರಾಂತವಾಗಿ 1956 ನವೆಂಬರ 1 ರಂದು ಮೈಸೂರು ರಾಜ್ಯವಾಗಿ ಉದಯವಾಯಿತು. ಆನಂತರ ಕನ್ನಡಿಗರ ಮನದಾಳದ ಅಪೇಕ್ಷೆಯಂತೆ 1973ರ ನವೆಂಬರ್ 1 ರಂದೇ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ರಾಜ್ಯೋತ್ಸವವನ್ನು ನಾಡಿನ ಜನತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಿಗರು ಮತ್ತು ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳನ್ನು ಚಿಂತಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅಂತೆಯೇ ಶಾಲಾ-ಕಾಲೇಜುಗಳಲ್ಲಿ ನಾಳಿನ ನಾಡಿನ ಕಣ್ಮಣಿಗಳಾದ ಯುವ ಜನಾಂಗಕ್ಕೆ ಐತಿಹಾಸಿಕ ಹಿನ್ನೆಲೆಯನ್ನು ತಿಳಿಸುವ, ಅವರಲ್ಲಿ ಮಾತೃಭಾಷೆಯ ಬಗ್ಗೆ ಅಭಿಮಾನ ಮೂಡಿಸಿ, ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿ ಸಂವರ್ಧನೆಗೊಳಿಸುವ ಜವಾಬ್ದಾರಿಯ ಅರಿವನ್ನು ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಮಮತಾ ದೇವಿ ಮಾತನಾಡಿ, ಗ್ರಾಮಗಳಲ್ಲಿ ಇಂಗ್ಲಿಷ್ ಕಾನ್ವೆಂಟ್ ಸಂಸ್ಕೃತಿ, ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿರುವುದು ದುರಂತವೇ ಸರಿ. ಆದ್ದರಿಂದ ಸಾಯುತಿದೆ ನಿಮ್ಮನುಡಿ ಓ ಕನ್ನಡದ ಕಂದರಿರಾ ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ ಎಂದು ಕುವೆಂಪುರವರು ಎಂದೋ ಎಚ್ಚರಿಸಿದ್ದಾರೆ. ಇಂದಿನ ಧಾರಾವಾಹಿಗಳು, ರಿಯಾಲಿಟಿ ಶೋಗಳ ಭರಾಟೆಯು, ಜನರನ್ನು ಆಕರ್ಷಿಸಿ, ಕೇವಲ ವೀಕ್ಷಣೆಗೆ ಮಾತ್ರ ಸೀಮಿತ ಮಾಡುತ್ತಿದೆ. ಇದರಿಂದ ಕನ್ನಡ ನುಡಿಯ ಬಳಕೆ ಕುಗ್ಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರಾದ ಗುರುಸ್ವಾಮಿ, ಬಸವಣ್ಣ, ಪುಷ್ಪ, ಮಂಜುನಾಥ, ಶ್ವೇತ, ಮಹದೇವಪ್ಪ, ಮಲ್ಲಿಕಾರ್ಜುನಸ್ವಾಮಿ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.