Chori’ (Theft): BJP and RSS spinning tall tales; Union Ministers acting like ‘Mauni Babas’ (silent sages); PM Modi flees abroad — Dr. Anand Kumar, National Coordinator of the AICC SC Department and Maharashtra In-charge.


ಚೋರಿ: ಚಂದಮಾಮ ಕಥೆ ಹೇಳುತ್ತಿರುವ ಬಿಜೆಪಿ, ಆರ್.ಎಸ್.ಎಸ್
ಮೌನಿ ಬಾಬಾಗಳಾದ ಕೇಂದ್ರ ಸಚಿವರು: ಪ್ರಧಾನಿ ಮೋದಿ ವಿದೇಶಕ್ಕೆ ಪಲಾಯನ – ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್
ಬೆಂಗಳೂರು,ಜು.6: ಅಯೋಧ್ಯೆಯ ರಾಮಮಂದಿರದ ನಂತರ ದೇಶದ ಇತರೆ ದೇವಾಲಯಗಳ ಹುಂಡಿಗಳಲ್ಲೂ ಚಂದಾ ಚೋರಿ ಪ್ರಕರಣಗಳು ವರದಿಯಾಗುತ್ತಿರುವುದು ಆಘಾತಕರ ಬೆಳವಣಿಗೆಯಾಗಿದೆ. ಚಂದಾ ಚೋರಿ ಬಗ್ಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರು ದೇಶದ ಜನರಿಗೆ ಚಂದಮಾಮ ಕಥೆ ಹೇಳುತ್ತಿದ್ದಾರೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ವ್ಯಂಗ್ಯವಾಡಿದ್ದಾರೆ.
ಇದು ಬಿಜೆಪಿಯ ಹುಂಡಿಹಣ ದರೋಡೆ ಮಾಡುವ ಆಧುನಿಕ “ಭಕ್ತಿ ಪಂಥ”ವಾಗಿದೆ. ದೇವರನ್ನೇ ಹಗಲು ದೋರೋಡೆ ಮಾಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ದಾಳಿ ಮಾಡುತ್ತಿರುವಾಗ ಮೋದಿ ಪಲಾಯನವಾದದ ಕುತಂತ್ರ ಅನುಸರಿಸುತ್ತಿದ್ದಾರೆ. ಪ್ರತಿಯೊಂದನ್ನೂ ಟೀಕಿಸುವ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಮೌನಿ ಬಾಬಾಗಳಾಗಿದ್ದು, ಭೋರ್ಗರೆಯುತ್ತಿದ್ದ ಬಿಜೆಪಿ ಸಾಮಾಜಿಕ ಜಾಲತಾಣ ಸ್ಥಬ್ದವಾಗಿದೆ. ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದರೂ ಬಿಜೆಪಿಯಲ್ಲಿ ಪಾಪಪ್ರಜ್ಞೆ ಕಾಡುತ್ತಿಲ್ಲ ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಕ್ತರ ಹಣ ದೇವರ ಸೇವೆಗೆ ಬಳಕೆಯಾಗಬೇಕೆ ಹೊರತು ಭ್ರಷ್ಟರ ಜೇಬು ತುಂಬಿಸಲು ಅಲ್ಲ. ಹುಂಡಿ ದೋಚುವುದು ಕಳ್ಳತನವಷ್ಟೇ ಅಲ್ಲದೇ ಅದು ಕೋಟ್ಯಂತರ ಭಕ್ತರ ನಂಬಿಕೆಯ ಮೇಲಿನ ಧಾರ್ಮಿಕ ದಾಳಿಯಾಗಿದೆ. ದೇವಾಲಯ ನಂಬಿಕೆ, ಭಕ್ತಿ, ಸಂಸ್ಕೃತಿ ಮತ್ತು ಧರ್ಮದ ಸಂಕೇತ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ದೇವಾಲಯಗಳ ಹುಂಡಿಗಳಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಅವ್ಯವಹಾರ ಮತ್ತು ಲೆಕ್ಕಪತ್ರಗಳಲ್ಲಿನ ಅಕ್ರಮಗಳ ಆರೋಪಗಳು ಹೆಚ್ಚುತ್ತಿರುವುದು ಭಕ್ತರನ್ನು ತೀವ್ರವಾಗಿ ಬಾಧಿಸುತ್ತಿದೆ ಎಂದಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ದೇಶದ ಮೂಲೆಮೂಲೆಗಳಿಂದ ಭಕ್ತರು ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡಿದ್ದಾರೆ. ಆ ನಿಧಿಯ ಬಳಕೆಯ ಕುರಿತು ಕೆಲ ಆರೋಪಗಳು ಮತ್ತು ವಿವಾದಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾದ ನಂತರ, ಇತರ ದೇವಾಲಯಗಳಲ್ಲಿಯೂ ಹುಂಡಿ ಹಣದ ನಿರ್ವಹಣೆ ಕುರಿತು ಪ್ರಶ್ನೆಗಳು ಕೇಳಿಬರುತ್ತಿವೆ. ಆರೋಪಗಳ ಸತ್ಯಾಸತ್ಯತೆಯನ್ನು ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಂಗವೇ ನಿರ್ಧರಿಸಬೇಕಾದರೂ, ಇಂತಹ ಆರೋಪಗಳೇ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುವಷ್ಟು ಗಂಭೀರವಾಗಿವೆ ಎಂದು ಡಾ. ಆನಂದ ಕುಮಾರ್ ದೂರಿದ್ದಾರೆ.
ಒಬ್ಬ ರೈತ ತನ್ನ ಬೆಳೆಯ ಲಾಭದಿಂದ, ಒಬ್ಬ ಕಾರ್ಮಿಕ ತನ್ನ ದಿನಗೂಲಿಯಿಂದ, ವೃದ್ಧರು ತನ್ನ ಪಿಂಚಣಿಯಿಂದ, ಮಹಿಳೆ ತನ್ನ ಉಳಿತಾಯದಿಂದ ದೇವರಿಗೆ ಕಾಣಿಕೆ ಸಲ್ಲಿಸುತ್ತಾಳೆ. ಈ ಹಣದಲ್ಲಿ ಕೇವಲ ರೂಪಾಯಿಗಳ ಮೌಲ್ಯವಿರುವುದಿಲ್ಲ; ಅದರ ಹಿಂದೆ ಭಕ್ತಿ, ನಂಬಿಕೆ ಮತ್ತು ಮನಸ್ಸಿನ ಶುದ್ಧತೆ ಇರುತ್ತದೆ. ಅಂತಹ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಕೇವಲ ಆರ್ಥಿಕ ಅಪರಾಧವಲ್ಲ, ಅದು ಅನೈತಿಕ ಮತ್ತು ಸಾಮಾಜ ದ್ರೋಹವೂ ಆಗಿದೆ. ದೇವಾಲಯಗಳ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ಬಿಜೆಪಿಯಲ್ಲಿ ನೈತಿಕ ಮೌಲ್ಯ ಪಾತಳಕ್ಕೆ ಕುಸಿದಿದೆ.
ಭಕ್ತರ ಹಣದ ಕುರಿತು ಪ್ರಶ್ನೆ ಕೇಳುವುದನ್ನು ಧರ್ಮವಿರೋಧ ಎಂದು ಬಿಂಬಿಸಿ ಬಿಜೆಪಿ ನಾಯಕರು ಬ್ಲ್ಯಾಕ್ ಮಾಡುತ್ತಿದ್ದಾರೆ. ದೇವರು ಭಕ್ತರ ಭಾವನೆಗಳಲ್ಲಿ ನೆಲೆಸಿದ್ದು, ಆ ಭಾವನೆಗೆ ಧಕ್ಕೆ ತರುವುದು ಕ್ಷಮಾರ್ಹವಲ್ಲ. ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡಬೇಕಾದರೆ ಹಣದ ನಿರ್ವಹಣೆಯೂ ಪವಿತ್ರವಾಗಿರಬೇಕು. ಯಾವುದೇ ದೇವಾಲಯ, ಟ್ರಸ್ಟ್ ಅಥವಾ ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ. ಧಾರ್ಮಿಕ ಸಂಸ್ಥೆಗಳ ಮೇಲಿನ ವಿಶ್ವಾಸ ಉಳಿಯಬೇಕಾದರೆ, ಆರೋಪಗಳನ್ನು ರಾಜಕೀಯ ಕನ್ನಡಕದಿಂದ ನೋಡುವುದಕ್ಕಿಂತ ವಾಸ್ತವಾಂಶಗಳ ಆಧಾರದ ಮೇಲೆ ಪರಿಶೀಲಿಸಿ, ತಪ್ಪಿತಸ್ಥರು ಯಾರು ಎಂಬುದನ್ನು ಕಾನೂನು ಪ್ರಕಾರ ನಿರ್ಧರಿಸಿ ಕ್ರಮ ಕೈಗೊಳ್ಳಬೇಕು. ಪಾರದರ್ಶಕತೆ ಮತ್ತು ಉತ್ತರದಾಯಿತ್ವವೇ ಭಕ್ತಿಯ ನಿಜವಾದ ರಕ್ಷಕರು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

