ಬಸವತತ್ವ ಬೆಳವಣಿಗೆ ಸನಾತನಿಗಳಿಗೆ ನಡುಕ ಹುಟ್ಟಿಸಿದೆ

H.Mallikarjun
H.Mallikarjun - Kalyanasiri
5 Min Read
ಜಾಹೀರಾತು

The rise of Basavatvatva has created a stir among Sanatanis.




ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ
The rise of Basavatvatva has created a stir among Sanatanis.




ಬಸವತತ್ವ ಬೆಳವಣಿಗೆ ಸನಾತನಿಗಳಿಗೆ ನಡುಕ ಹುಟ್ಟಿಸಿದೆ

ಜಾಹೀರಾತು

ಬಸವಣ್ಣನವರು ಸನಾತನ ಧರ್ಮದ ವಾರಸುದಾರರು ಎಂದು ಹೇಳುವ ಕನೇರಿ ಸ್ವಾಮಿ ಮತ್ತವರ ಬಾಲಂಗೋಸಿಗಳು ಯಾತಕ್ಕಾಗಿ ಹೀಗೆ ಹೇಳುತ್ತಿರುವರು ಎಂಬುದನ್ನು ಹುಡುಕುತ್ತಾ ಹೋದರೆ ಸ್ಪಷ್ಟವಾಗಿ ತಿಳಿಯುತ್ತದೆ. ಒಂದು ಇತ್ತೀಚೆಗೆ ಜಾಗತಿಕವಾಗಿ ಬೆಳೆಯುತ್ತಿರುವ ಬಸವತತ್ವ ಚಿಂತನೆಗಳು, ಇನ್ನೊಂದು ನೂತನ ಅನುಭವ ಮಂಟಪದ ಸ್ವಾಧೀನಕ್ಕಾಗಿ ಎಂಬುದು ಸ್ಪಷ್ಟ.

ಹನ್ನೆರಡನೇ ಶತಮಾನದಲ್ಲಿ ಸಮತಾವಾದವನ್ನು ಹೇಳಿದ ಬಸವಣ್ಣನವರನ್ನು ಮನೆಯಿಂದ ಹೊರಗಡೆ ಹೊರಗಟ್ಟಿದ್ದು, ಬಸವಕಲ್ಯಾಣ ನೆಲದಲ್ಲಿ ಸಮತಾ ಧ್ವಜ ಎತ್ತಿ ಹಿಡಿದ ಶರಣರನ್ನು ಕಗ್ಗೊಲೆ ಮಾಡಿದ್ದು, ಸಮತಾವಾದದ ತಳಹದಿಯ ಮೇಲೆ ಮದುವೆ ಮಾಡಿಸಿದ್ದಕ್ಕಾಗಿ ಶರಣರನ್ನು ಆನೆ ಕಾಲಿಗೆ ಕಟ್ಟಿ ಎಳೆಸಿದ್ದು, ವಚನ ಸಾಹಿತ್ಯವನ್ನು ಸುಟ್ಟಿದ್ದು ಯಾರು?. ಕ್ರೈಸ್ತರೇ?, ಬೌದ್ಧರೇ, ಜೈನರೇ, ಇಸ್ಲಾಂರೇ, ಯಹೂದಿಗಳೇ, ಪಾರ್ಷಿಗಳೇ ಅಲ್ಲಾ…! ವೈದಿಕ ಮನುವಾದಿಗಳಲ್ಲವೆ?. ಹಾಗಾದರೆ ಅಂದು ಬಸವಣ್ಣನವರ ಬೆನ್ನಿಗೆ ನಿಲ್ಲದವರು ನಿನ್ನೆ ಮೊನ್ನೆಯವರೆಗೆ ಬಸವಣ್ಣನವರ ಭಾವಚಿತ್ರವನ್ನು ಮಠದಲ್ಲಿ ಹಾಕದವರು, ಬಸವಣ್ಣನವರ ಭಾವಚಿತ್ರದ ಕೆಳಗೆ ಹೋಗದವರು, ಬಸವ ಜಯಂತಿ ಆಚರಿಸದವರು, ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳದವರು, ಮಠದಲ್ಲಿ ವಚನ ಪಾಠ ಶಾಲೆ ತೆಗೆಯದವರು ಈಗೇಕೆ ಬಸವಣ್ಣನವರ ಮೇಲೆ ಮೋಹ ಬಂತು?. ಈಗೇಕೆ ವಚನಗಳ ಓದುವ ಹವ್ಯಾಸ ಬೆಳೆಯಿತು?. ಈಗೇಕೆ ಬಸವಕಲ್ಯಾಣದ ಮೇಲೆ ಆಸೆ ಹುಟ್ಟಿತು?. ಈಗೇಕೆ ಬಸವಾದಿ ಶರಣರ ಸಮಾವೇಶಗಳು?. ಇಂಥವರ ನಡೆಯನ್ನು ಕಂಡು ಅಲ್ಲವೆ ಗಾದೆ ಮಾತುಗಳು ಹುಟ್ಟಿದ್ದು 'ಕರಡಿ ಮನೆಯೊಳಗೆ ಹುಲಿ ಹೊಕ್ಕು ನಂದು ಎಂದು ಹೇಳಿತಂತೆ'. ಲಿಂಗಾನಂದ ಶ್ರೀಗಳು ಪ್ರವಚನದಲ್ಲಿ ಹಿಗ್ಗಾಮುಗ್ಗಾ ತೊಳೆಯುವಾಗ, ಇಲಕಲ್ ಶ್ರೀಗಳು ಗಣಪತಿ ಬಗ್ಗೆ ಮಾತಾಡಿದಾಗ, ಮಾತೆ ಮಹಾದೇವಿಯವರು ಹಲವಾರು ಪುಸ್ತಕಗಳು ಬರೆದಾಗ(ಲಿಂಗಾಯತರು ಹಿಂದುಗಳಲ್ಲ, ಲಿಂಗಾಯತರು ವೀರಶೈವರಲ್ಲ), ಮತ್ತು ಲಿಂಗಾಯತ ಚಳುವಳಿ ನಡೆಸಿದಾಗ, ಎಂ ಎಂ ಕಲಬುರಗಿಯವರು ಉಗ್ರವಾಗಿ ಮಾತಾಡಿದಾಗ ಇಲ್ಲದ ರೋಷಾವೇಶ ಇಂದೇಕೆ? ನಿಜಗುಣ ಸ್ವಾಮಿಜಿ, ಭಾಲ್ಕಿ ಶ್ರೀ ಮತ್ತು ಬಸವತತ್ವ ಪ್ರಚಾರ ಮಾಡುವ ನಮ್ಮ ಮೇಲೆ ರೋಷಾವೇಶದ ಮಾತುಗಳು ಕನೇರಿ ಶ್ರೀಗಳು ಆಡುತ್ತಿದ್ದಾರೆ ಎಂದರೆ ವಿಷಯ ಸ್ಪಷ್ಟವಾಗಿದೆ. ಕನೇರಿ ಶ್ರೀಗಳು ಬಸವಣ್ಣನವರ ಮತ್ತು ವಚನಗಳ ಮೇಲಿನ ಪ್ರೀತಿಗೆ ಅಲ್ಲ ಬದಲಿಗೆ ಒಂದು ರಾಜಕೀಯ ಪಕ್ಷದ ಚುಕ್ಕಾಣಿ ಹಿಡಿಯಲು ಅಥವಾ ಆ ಪಕ್ಷದ ಏಳಿಗೆಗೆ ಶ್ರಮಿಸಲು ಮುಂದೆ ಬಂದಿದ್ದಾರೆ. ಕನೇರಿ ಶ್ರೀಗಳ ಹಿಂದೆ ಪಕ್ಕಾ ರಾಜಕೀಯ ಹಿತಾಸಕ್ತಿ ಅಡಗಿದೆ. ದಕ್ಷಿಣ ಭಾರತದಲ್ಲಿ ಬೆಳೆಯದ 'ಕಮಲದ ಹೂ' ಅನ್ನು ಹೇಗಾದರೂ ಮಾಡಿ ಬೆಳೆಸಬೇಕೆಂದು ನಾಗ್ಪೂರದಲ್ಲಿ ಚಿಂತನೆಯಾಗಿದೆ. ಆಗ ಈ ಕಮಲದ ಹೂ ಬೆಳೆಸಲು ಯಾರನ್ನು ಜೀತದಾಳವನ್ನಾಗಿ ನೇಮಿಸಬೇಕು ಎಂದಾಗ ಆಗ ಸಿಕ್ಕಿದ್ದು ಕನೇರಿ ಸ್ವಾಮಿ. ಕರ್ನಾಟಕವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ಮೊದಲು ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಮತ್ತವರ ವಚನಗಳನ್ನು ಸನಾತನಗೊಳಿಸಬೇಕು ಎಂದರಿತ ಸಂಘಿಗಳು ಲಿಂಗಾಯತ ಧರ್ಮದ ಘಟಾಟನುಘಟಿ ಮಠಾಧೀಶರು ಇಲ್ಲದ ಈ ಸಂದರ್ಭಕ್ಕಾಗಿ ಬಹಳ ದಿನದಿಂದ ಕಾಯುತ್ತಿದ್ದರು. ಅಂತಹ ಸಂದರ್ಭ ಈಗ ಕೂಡಿ ಬಂದಿದ್ದರಿಂದ ತಮ್ಮ ದಾರಿಯನ್ನು ಸುಗಮಗೊಳಿಸಲು ನೇಮಕಗೊಂಡ ವ್ಯಕ್ತಿ ಕನೇರಿ ಶ್ರೀ. ತನಗೊಂದು ಸ್ವತಂತ್ರ ವೇದಿಕೆಗಾಗಿ ಬಹುದಿನದಿಂದ ಕಾಯ್ದಿದ್ದ ಮತ್ತು ಸಿದ್ಧೇಶ್ವರ ಸ್ವಾಮಿಗಳ ಹಿಡಿತದಲ್ಲಿದ್ದ ಕನೇರಿ ಸ್ವಾಮಿ ಆಧ್ಯಾತ್ಮಿಕ ಶಾಂತಿಯ ಪ್ರವಾದಿ ಸಿದ್ಧೇಶ್ವರ ಶ್ರೀ ನಿಧನ ನಂತರ ತನ್ನ ಗೋ ಮುಖ ವ್ಯಾಘ್ರತನದ ರೂಪವನ್ನು ಈಗ ತೋರಿಸುತ್ತಿರುವನು. ಕುಂಕುಮವಾಲಾ ಕನೇರಿ ಸ್ವಾಮಿಯನ್ನು ವಿಭೂತಿದಾರಿ ಲಿಂಗಾಯತ ಧರ್ಮಿಯರಿಗೆ ಬೆದರುಗೊಂಬೆಯಾಗಿ ತಂದು ಲಿಂಗಾಯತ ಲಿಂಗಾಯತ ಮಠಾಧೀಶರ ನಡುವೆ ಜಗಳ ಹಚ್ಚಿ, ಲಿಂಗಾಯತ ಧರ್ಮ ಹೋರಾಟದ ದಿಕ್ಕು ತಪ್ಪಿಸಲು ಸನಾತನಿಗಳು ಕೈಕೊಂಡ ಮಾರ್ಗವೇ ಈ *'ಬಸವಾದಿ ಶರಣರ ಹಿಂದೂ ಸಮಾವೇಶ'*. ಈ ಮೂಲಕವಾಗಿ ಸನಾತನಿಗಳ ಕುಂಕುಮ ಮತ್ತು ಲಿಂಗಾಯತರ ವಿಭೂತಿಯ ನೇರಾ ನೇರಾ ಸಾಂಸ್ಕೃತಿಕ ಸಂಘರ್ಷ ಈಗ ಶುರುವಾಗಿದೆ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ ಪಡೆದರೆ, ಲಿಂಗಾಯತರು ಸ್ವಾಭಿಮಾನಿಗಳಾದರೆ ದೇವಸ್ಥಾನಗಳು ಮುಚ್ಚುತ್ತವೆ, ಕಾಣಿಕೆ ಹುಂಡಿಯಿಂದ ಸಿಗುವ ಹಣದಿಂದ ಬದುಕುವ ಸನಾತನಿಗಳಿಗೆ ಕೂಲಿಯೇ ಗತಿಯಾಗುತ್ತದೆ ಎಂಬ ನಡುಕದಿಂದ ಸನಾತನಿಗಳು ಬಸವಣ್ಣನ ಪರವಾಗಿ ನಿಂತುಕೊಳ್ಳುವ ಅಥವಾ ಬಸವಣ್ಣ ನಮ್ಮ ಸನಾತನಿ ಎಂದು ಹೇಳುವ ದ್ವಿ ನೀತಿಯನ್ನು ಅನುಸರಿಸಿದ್ದಾರೆ. ಇದು ಹೊಸತಲ್ಲ ಅಂದು ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರ ಎಂದೂ ಪ್ರಚಾರ ಮಾಡಿದ್ದು ಇತಿಹಾಸ ಹಾಗೆಯೇ ಬಸವಣ್ಣನವರನ್ನು ಆ ಸಾಲಿಗೆ ಸೇರಿಸಲು ಹೊರಟ ಅವರ ಕುತಂತ್ರ ನಡೆ ಈಗ ನಡೆಯದು. ಘಟಾನುಘಟಿ ಮಠಾಧೀಶರು ಈಗ ಇಲ್ಲದಿರಬಹುದು ಅವರ ವಾರಸುದಾರರಾದ ನಾವು 'ಬಿ' ಗುಂಪು ನಿಮ್ಮ ಎಡಮುರಿ ಕಟ್ಟಲು ಸಿದ್ಧರಿದ್ದೇವೆ ಆದರೆ ನಮ್ಮ ಸವಾಲು ಸ್ವೀಕರಿಸಿ ಚರ್ಚೆಗೆ ಬರಲು ವಚನಗಳ ಅರಿವು ಇರಬೇಕಲ್ಲ. ಆ ಕೊರತೆ ಕಾರಣಕ್ಕಾಗಿ ಹೆದರುವ ಕನೇರಿ ಸ್ವಾಮಿ ಹಂದಿ ನಾಯಿಗಳ ಜೊತೆ ಬರುವುದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿರುವನು. ವಚನಗಳ ಹಿಡಿದು ನಾವು ಚರ್ಚಿಸಲು ಈಗಲೂ ಸಿದ್ಧರಿದ್ದೇವೆ.

‘ವೀರಶೈವರ ದ್ವೈಷಿ ಕನೇರಿ ಶ್ರೀ’.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ವೀರಶೈವರು ತಳಬುಡವಿಲ್ಲದ ಸಂಸ್ಕೃತಿಯವರು ಎಂದು ಪಂಚಪೀಠಗಳನ್ನು ಉದ್ಧೇಶಿಸಿ ಟೀಕಿಸುತ್ತಾ, ತಮ್ಮಷ್ಟಕ್ಕೆ ತಾವೇ ಐತಿಹಾಸಿಕವಾಗಿ ಹಾಳಾಗಿ ಹೋಗುತ್ತಾರೆ ಎಂದು ನಾಲಿಗೆ ಹರಿಬಿಟ್ಟ ಕನೇರಿ ಸ್ವಾಮೀಜಿಗಳ ಹಿಂದೆ ಯಾವ ಪುರುಷಾರ್ಥಕ್ಕಾಗಿ ವೀರಶೈವ ಮಠಾಧೀಶರು ಬೆನ್ನು ಹತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆ.
ಮೊನ್ನೆ ಮೊನ್ನೆಯವರೆಗೆ ದಸರಾ ದರ್ಭಾರ ಮಾಡಿದರೂ ಅಡ್ಡಪಲ್ಲಕ್ಕಿ ನಡೆಯದೆ ಬಸವಭಕ್ತರಿಂದ ಸೋತು ಸುಣ್ಣವಾಗಿ ಹೈರಾಣಾದ ತಡೋಳ ಶ್ರೀಗಳು ಕನೇರಿ ಶ್ರೀ ನಮ್ಮ ವಿರುದ್ಧವೆ ಮಾತನಾಡಿದ್ದಾನೆ ಅಂಥವರ ಜೊತೆ ‘ನಾನು ಹಿಂದೂ ಸಮಾವೇಶಕ್ಕೆ ಹೋಗಲಾರೆ ಎಂದು ಹೇಳಿದ್ದನಂತೆ’, ಈಗ ಏಕಾಏಕಿ ಸ್ವಧರ್ಮ ದ್ವೇಷಿ ಕನೇರಿ ಗುಂಪಲ್ಲಿ ಸೇರಿಕೊಂಡಿದ್ದು ಅದ್ಯಾವ ಆಮಿಷದಿಂದಲೋ ಕಾಣೆವು.

ಕನ್ನೇರಿ ಸ್ವಾಮಿ ಸಮಾವೇಶ ಶರಣ ಭೂಮಿಯಲ್ಲಿ ಮಣ್ಣಾಗಲಿ:
ಬಸವಕಲ್ಯಾಣದಲ್ಲಿನ ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿಯನ್ನು ವಿರೋಧಿಸಿ ಬಸವಭಕ್ತರು ಪ್ರತಿಭಟನಾ ಹೇಳಿಕೆಯನ್ನು ನೀಡಿದಾಗ ಪಾರಂಪರಿಕವಾಗಿ ಮಾನವರ ಹೆಗಲಮೇಲೆ ಹೊತ್ತುಕೊಂಡ ತರುತ್ತಿದ್ದ ಜಗದ್ಗುರುಗಳನ್ನು ವಾಹನದ ಮೇಲೆ ತರುವಂತೆ ಮಾಡಿದ ನಮ್ಮ ಮಾನವೀಯ ಹೋರಾಟಕ್ಕೆ ಜಯ ಸಿಕ್ಕಿತು. ನಮ್ಮ ಹೋರಾಟದ ಫಲಶೃತಿಯಿಂದ ಶತಶತಮಾನಗಳ ರೂಢಿಯಿಂದ ಬಂದ ಅಂದಶ್ರದ್ಧೆಯ ಅಡ್ಡಪಲ್ಲಕ್ಕಿ ಮಾನವರ ಹೆಗಲ ಮೇಲೆ ಹೊತ್ತೊಯ್ಯುವ ಪದ್ಧತಿ ಶರಣ ಭೂಮಿಯಲ್ಲಿ ಕೊನೆಗೊಂಡಿತು. ಹಾಗೆಯೇ ನಮ್ಮ ತೀವ್ರ ಹೋರಾಟದ ಪರಿಣಾಮವಾಗಿ ಬಸವಣ್ಣನವರನ್ನು ಮತ್ತು ವಚನಗಳನ್ನು ಸನಾತನಗೊಳಿಸುವ ಹಾಗೂ ಬಸವಣ್ಣನವರನ್ನೇ ತಾಲಿಬಾನಿ ಎಂದ ಕನ್ನೇರಿ ಸ್ವಾಮಿಯು ನಡೆಸುವ ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಕಲಸುಮೇಲೋಗರ ಸಂಸ್ಕೃತಿಯು ಇದೇ ಭೂಮಿಯಲ್ಲಿ ಮಣ್ಣಾಗಲಿ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ

Total Views: 0
Share This Article