Big shock for ration cardholders: Ration to be cut if movie tickets are not purchased.

ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ಚಲನಚಿತ್ರದ ಟಿಕೆಟ್ ಖರೀದಿಸದಿದ್ದರೆ ನಿಮ್ಮ ರೇಷನ್ ಕಟ್
ಗಂಗಾವತಿ, ಜು.26:ಕೊಪ್ಪಳ ಜಿಲ್ಲೆಯ ಸರ್ಕಾರಿ ನ್ಯಾಯಬೆಲೆ ಅಂಗಡಿ ವಿತರಕರ ಮೇಲೆ ಚಲನಚಿತ್ರದ ಟಿಕೆಟ್‌ಗಳನ್ನು ಬಲವಂತವಾಗಿ ಖರೀದಿಸುವಂತೆ ಆಹಾರ ಇಲಾಖೆ ಅಧಿಕಾರಿಗಳು ಒತ್ತಡ ಹೇರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ “ಸರ್ಕಾರಿ ನ್ಯಾಯಬೆಲೆ ಅಂಗಡಿ” ಚಲನಚಿತ್ರ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದ್ದು, ಅದರ ಟಿಕೆಟ್ ಮಾರಾಟದ ವಿಚಾರವಾಗಿ ಆಹಾರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕೆಲ ವಿತರಕರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ನಮಗೆ ಆಡಿಯೋ ಸಂಭಾಷಣೆ ಲಭ್ಯವಾಗಿದೆ.
ಲಭ್ಯವಾಗಿರುವ ಆಡಿಯೋ ಸಂಭಾಷಣೆಯ ಪ್ರಕಾರ, ಕೊಪ್ಪಳ ಜಿಲ್ಲೆ ಹಾಗೂ ನಗರದ ಆಹಾರ ಇಲಾಖೆ ಅಧಿಕಾರಿ, ನ್ಯಾಯಬೆಲೆ ಅಂಗಡಿಯವರಿಗೆ ಚಲನಚಿತ್ರದ ಟಿಕೆಟ್‌ಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಸೂಚಿಸಿರುವುದು ಕೇಳಿಬಂದಿದೆ.
ವಿಷಯ ತಿಳಿದ ಪಡಿತರ ವಿತರಕರು ಹಣದ ಸಮಸ್ಯೆ ಇದೆ ಎಂದು ವಿತರಕರು ತಿಳಿಸಿದಾಗ, “ಬಂದು ಟಿಕೆಟ್ ತೆಗೆದುಕೊಂಡು ಹೋಗಿ, ಇಲ್ಲವಾದರೆ ಡಿ.ಡಿ. ಅವರಿಗೆ ತಿಳಿಸಿ ನಿಮ್ಮ ವಿರುದ್ಧ ವರದಿ ಮಾಡುತ್ತೇನೆ” ಎಂದು ಅಧಿಕಾರದ ದರ್ಪದಲ್ಲಿ ಮಾತನಾಡಿರುವ ಆರೋಪವೂ ಕೇಳಿಬಂದಿದೆ.
ನ್ಯಾಯಬೆಲೆ ಅಂಗಡಿಯವರ ಅಳಲು
ವಿತರಕರ ಹೇಳಿಕೆಯಂತೆ, ಪ್ರತಿ ನ್ಯಾಯಬೆಲೆ ಅಂಗಡಿಗೆ 30ರಿಂದ 50 ಟಿಕೆಟ್‌ಗಳನ್ನು ಖರೀದಿಸುವ ಟಾರ್ಗೆಟ್ ನಿಗದಿಪಡಿಸಲಾಗಿದ್ದು, ಸುಮಾರು ₹5,000 ರಿಂದ ₹7,000 ಮೌಲ್ಯದ ಟಿಕೆಟ್‌ಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ.
ಇದಲ್ಲದೆ, ಟಿಕೆಟ್‌ಗಳನ್ನು ಪಡಿತರ ಚೀಟಿದಾರರಿಗೆ ₹150 ದರದಲ್ಲಿ ಮಾರಾಟ ಮಾಡಿ ಹಣ ಸಂಗ್ರಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಪಡಿತರ ವಿತರಕರು ಆರೋಪಿಸಿದ್ದಾರೆ.
ಕೆಲವರು, ಪಡಿತರ ಚೀಟಿದಾರರು ಟಿಕೆಟ್ ಖರೀದಿಸದಿದ್ದರೆ ಅವರಿಗೆ ರೇಷನ್ ವಿತರಣೆಗೆ ಸಂಬಂಧಿಸಿದಂತೆ ಆಹಾರಧಾನ್ಯ ಕಟ್ ಮಾಡಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ ಎಂಬ ಆರೋಪವು ಮಾಡಿದ್ದಾರೆ.
ಆದರೆ ಈ ಆರೋಪಕ್ಕೆ ಇಲಾಖೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.
” ಇದು ಯಾವ ಕಾನೂನು?”
“ಚಲನಚಿತ್ರದ ಟಿಕೆಟ್‌ಗಳನ್ನು ಚಿತ್ರಮಂದಿರದಲ್ಲೇ ಮಾರಾಟ ಮಾಡಬೇಕು. ನ್ಯಾಯಬೆಲೆ ಅಂಗಡಿಯಲ್ಲಿ ಟಿಕೆಟ್ ಮಾರಾಟ ಮಾಡುವಂತೆ ಹೇಳುವುದು ಯಾವ ಕಾನೂನಿನಡಿ ಬರುತ್ತದೆ? ಸರ್ಕಾರದಿಂದ ಇಂತಹ ಆದೇಶ ಇದೆಯೇ?” ಎಂದು ಪಡಿತರ ವಿತರಕರಲ್ಲಿಯೇ ಗುಸು-ಗುಸು ಚರ್ಚೆ ನಡೆಯುತ್ತಿದೆ.
ಕಮಿಷನ್ ಬಾಕಿ, ಟಿಕೆಟ್ ಖರೀದಿಗೆ ಒತ್ತಡ
ನ್ಯಾಯಬೆಲೆ ಅಂಗಡಿಯವರ ಪ್ರಕಾರ, ಕಳೆದ ನಾಲ್ಕು ರಿಂದ ಐದು ತಿಂಗಳಿನಿಂದ ಅವರಿಗೆ ಬರಬೇಕಾದ ಕಮಿಷನ್ ಹಣವೇ ಬಿಡುಗಡೆಯಾಗಿಲ್ಲ. ಜೀವನ ನಡೆಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ಖರೀದಿಸುವಂತೆ ಒತ್ತಡ ಹೇರುವುದು ಇದು ಯಾವ ನ್ಯಾಯ ಎಂದು ಇಲಾಖೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಇಲಾಖೆಯ ಸ್ಪಷ್ಟನೆ ನಿರೀಕ್ಷೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಸಂಭಾಷಣೆಯಲ್ಲಿ ಲಭ್ಯವಾದ ಆರೋಪಗಳ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಮತ್ತು ಪಡಿತರ ವಿತರಕರ ಮೇಲೆ ಒತ್ತಡ ಹೇರುವುದು ನಿಲ್ಲಿಸಬೇಕು ಎಂದು ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯಿಂದ ಮನವಿ ಕೇಳಿ ಬಂದಿದೆ.
ವರದಿ:ಎಂ.ಡಿ.ಗೌಸ್
