ಮಾಸದ ಆನ್‌ಲೈನ್ ವಿಶ್ವಧರ್ಮ ಪ್ರವಚನಕ್ಕೆ ಸೆ.13ರಂದು ತೆರೆ

H.Mallikarjun
H.Mallikarjun - Kalyanasiri
3 Min Read
Online Universal Religion Discourse Series for the Month of Shravana Concludes on September 13
 

ಶ್ರಾವಣ ಮಾಸದ ಆನ್‌ಲೈನ್ ವಿಶ್ವಧರ್ಮ ಪ್ರವಚನಕ್ಕೆ ಸೆ.13ರಂದು ತೆರೆ

ಜಾಹೀರಾತು


ಹುಬ್ಬಳ್ಳಿಯಲ್ಲಿ ಸಮಾರೋಪ ಸಮಾರಂಭ; ಲಿಂಗಾನಂದ ಸ್ವಾಮೀಜಿ 96ನೇ ಜಯಂತಿ, ಸಾಮೂಹಿಕ ಉಚಿತ ಇಷ್ಟಲಿಂಗ ದೀಕ್ಷೆ


ಹುಬ್ಬಳ್ಳಿ: ಶ್ರಾವಣ ಮಾಸದ ಅಂಗವಾಗಿ ಗೃಹಸ್ಥ ಜಂಗಮ ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿಯವರು ನಡೆಸಿಕೊಂಡು ಬರುತ್ತಿರುವ ಆನ್‌ಲೈನ್ ವಿಶ್ವಧರ್ಮ ಪ್ರವಚನ 2.0ರ ಸಮಾರೋಪ ಸಮಾರಂಭವು ಸೆ.13ರಂದು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಅನುಭಾವ ಮಂಟಪದಲ್ಲಿ ನಡೆಯಲಿದೆ.
ವೃತ್ತಿಯಿಂದ ಕೇಂದ್ರ ಸರ್ಕಾರದ ಕಾರ್ಯನಿರ್ವಾಹಕ ಅಭಿಯಂತರರಾಗಿರುವ (Central Government Gazetted Officer) ಸಚ್ಚಿದಾನಂದ ಪ್ರಭು ಚಟ್ನಳ್ಳಿಯವರು ತಮ್ಮ ಕಾಯಕದ ಜತೆಗೆ ಸಾಹಿತ್ಯ ಹಾಗೂ ಪ್ರವಚನ ಕ್ಷೇತ್ರದಲ್ಲಿಯೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಚನ ಸಾಹಿತ್ಯ ಮತ್ತು ಶರಣರ ಕುರಿತು ಇದುವರೆಗೆ 15ಕ್ಕೂ ಅಧಿಕ ಪುಸ್ತಕಗಳನ್ನು ಬರೆದು, ಸಂಪಾದಿಸಿ ಪ್ರಕಟಿಸಿರುವ ಅವರು, ಗುರು ಬಸವಣ್ಣನವರ ತತ್ವ–ಸಿದ್ಧಾಂತಗಳನ್ನು ಮೂಲ ಸ್ವರೂಪದಲ್ಲಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.


ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿಯವರ ವಿಚಾರಧಾರೆ ಮತ್ತು ಪ್ರವಚನ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಆ.17ರಿಂದ ಪ್ರತಿದಿನ ಗೂಗಲ್ ಮೀಟ್ ಮೂಲಕ ವಿಶ್ವಧರ್ಮ ಪ್ರವಚನ 2.0 ನಡೆಸಲಾಗುತ್ತಿದೆ. ಪ್ರವಚನಗಳನ್ನು ಯೂಟ್ಯೂಬ್‌ನ ‘ಅನುಭಾವದಡಿಗೆ’ ಚಾನೆಲ್‌ನಲ್ಲಿಯೂ ಪ್ರಸಾರ ಮಾಡಲಾಗುತ್ತಿದೆ.


ಈ ಪ್ರವಚನದಲ್ಲಿ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿಯವರ ವಿಚಾರಧಾರೆಗಳ ಮುಂದುವರಿದ ಭಾಗವಾಗಿ ಹಲವು ಹೊಸ ವಿಚಾರಗಳು ಮತ್ತು ಸಂಶೋಧನಾ ಅಂಶಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಪ್ರವಚನ ಆಲಿಸಿರುವ ನಿವೃತ್ತ ಕೆ.ಎ.ಎಸ್. ಅಧಿಕಾರಿ ಶರಣ ಜಗನ್ನಾಥಪ್ಪ ಪನಸಾಲೆ ಅವರು ಸಚ್ಚಿದಾನಂದ ಪ್ರಭು ಚಟ್ನಳ್ಳಿಯವರನ್ನು ‘ಎರಡನೇ ಲಿಂಗಾನಂದ ಸ್ವಾಮೀಜಿ’ ಎಂದು ಬಣ್ಣಿಸಿರುವುದು ಗಮನಾರ್ಹವಾಗಿದೆ.
ಕಾಮ ಗೆಲ್ಲುವ ಕುರಿತು ವೈಚಾರಿಕ ಚಿಂತನೆ


ಪ್ರವಚನದಲ್ಲಿ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಅವರ ವಚನಗಳನ್ನು ಉಲ್ಲೇಖಿಸುತ್ತಾ, ಆಧ್ಯಾತ್ಮಿಕ ದೀಕ್ಷೆ ಪಡೆಯುವವರು ಕಾಮ ಸೇರಿದಂತೆ ಆಂತರಿಕ ವಿಕಾರಗಳನ್ನು ಜಯಿಸುವ ಕುರಿತು ಸೂಕ್ತ ತರಬೇತಿ, ಪೂಜೆ, ಧ್ಯಾನ ಮತ್ತು ತಪಸ್ಸಿನ ಮಾರ್ಗದರ್ಶನ ಪಡೆಯಬೇಕೆಂಬ ವಿಚಾರವನ್ನು ಸಚ್ಚಿದಾನಂದ ಪ್ರಭು ಚಟ್ನಳ್ಳಿಯವರು ಪ್ರತಿಪಾದಿಸಿದ್ದಾರೆ. ಮಠಗಳಲ್ಲಿ ನಡೆಯಬಹುದಾದ ಮಹಿಳೆಯರ ಮೇಲಿನ ಅನಾಚಾರಗಳನ್ನು ತಡೆಯಲು ಆಧ್ಯಾತ್ಮಿಕ ಶಿಸ್ತು ಹಾಗೂ ಆತ್ಮಸಂಯಮದ ಶಿಕ್ಷಣ ಅಗತ್ಯವೆಂದು ಅವರು ತಮ್ಮ ವೈಚಾರಿಕ ಪ್ರವಚನಗಳಲ್ಲಿ ಪ್ರತಿಪಾದಿಸುತ್ತಿದ್ದಾರೆ.
ಅನುಭಾವ ಮಂಟಪದಲ್ಲಿ ವಿವಿಧ ಕಾರ್ಯಕ್ರಮ
ಸೆ.13ರಂದು ನಡೆಯುವ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಪ್ರವಚನ ಪಿತಾಮಹ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರ 96ನೇ ಜಯಂತಿಯನ್ನೂ ಆಚರಿಸಲಾಗುವುದು. ಇದರೊಂದಿಗೆ ಸಾಮೂಹಿಕ ಉಚಿತ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಉಳವಿ ಶಿವಪುರದ ಪೂಜ್ಯ ಶ್ರೀ ಚನ್ನಬಸವನಂದ ಸ್ವಾಮೀಜಿ ಹಾಗೂ ಶರಣ ಸಚ್ಚಿದಾನಂದ ಪ್ರಭು ಅವರು ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ದೀಕ್ಷೆ ಪಡೆಯಲು ಇಚ್ಛಿಸುವವರು 9964057145 ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯ ಐ.ಆರ್.ಎಸ್.ಇ. ಉಪಮುಖ್ಯ ಅಭಿಯಂತರರಾದ ಶರಣ ಶಿವಕುಮಾರ ಎಚ್. ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಿವೃತ್ತ ಕೆ.ಎ.ಎಸ್. ಅಧಿಕಾರಿಗಳಾದ ಶರಣ ಮಹಾಂತೇಶ ಗೊಂಗಡಶೆಟ್ಟಿ ಹಾಗೂ ಶರಣ ಜಗನ್ನಾಥಪ್ಪ ಪನಸಾಲೆ ಅವರು ಅನುಭಾವ ನೀಡಲಿದ್ದಾರೆ.
ಶರಣ ಮುರುಗೇಶಪ್ಪ ಮತ್ತು ಪ್ರೇಮಾ ದಂಪತಿಗಳು ಗುರು ಬಸವಜ್ಯೋತಿ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಾಸೋಹ ಸೇವೆ ಸಲ್ಲಿಸಲಿದ್ದಾರೆ.
ಆನ್‌ಲೈನ್‌ನಲ್ಲೂ ಪ್ರವಚನ ವೀಕ್ಷಣೆಗೆ ಅವಕಾಶ
ವಿಶ್ವಧರ್ಮ ಪ್ರವಚನವು ಸೆ.13ರವರೆಗೆ ಮುಂದುವರಿಯಲಿದ್ದು, ಪ್ರತಿ ಸೋಮವಾರ ಗೂಗಲ್ ಮೀಟ್ ಮೂಲಕ ನೇರವಾಗಿ ಭಾಗವಹಿಸಲು ಅವಕಾಶವಿದೆ. ಆಸಕ್ತರು ಕೆಳಗಿನ ಲಿಂಕ್ ಮೂಲಕ ಪ್ರವಚನದಲ್ಲಿ ಭಾಗವಹಿಸಬಹುದು:


Google Meet – ವಿಶ್ವಧರ್ಮ ಪ್ರವಚನ
ಪ್ರವಚನಗಳನ್ನು ‘ಅನುಭಾವದಡಿಗೆ’ ಯೂಟ್ಯೂಬ್ ಚಾನೆಲ್ ಮೂಲಕವೂ ವೀಕ್ಷಿಸಬಹುದಾಗಿದೆ.
ಬೀದರ್, ಬೆಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದಲೂ ಶರಣ–ಶರಣೆಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ವಿಶ್ವಧರ್ಮ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಭಾಗವಹಿಸುವಂತೆ ಹಾಗೂ ಇನ್ನೂ ಇಷ್ಟಲಿಂಗ ದೀಕ್ಷೆ ಪಡೆಯದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Total Views: 0
ಜಾಹೀರಾತು
Share This Article