Book stall opens at Basavandurga village bus stand
ಜ್ಞಾನ ವೃದ್ಧಿಗಾಗಿ ಪುಸ್ತಕ ಗೂಡು ತಾಪಂ ಇಓ ರಾಮರೆಡ್ಡಿ ಪಾಟೀಲ್ ಮಾಹಿತಿ

ಗಂಗಾವತಿ : ಸಾರ್ವಜನಿಕರು ಬಸ್ಸಿಗಾಗಿ ಕಾಯುವ ಸಮಯದಲ್ಲಿ ಸಮಯ ಹಾಳು ಮಾಡದೆ ಪುಸ್ತಕ ಓದಲಿ ಎನ್ನುವ ಯೋಚನೆಯಿಂದ ಗ್ರಾ,ಪಂ. ಅಧ್ಯಕ್ಷರು ಮತ್ತು ಚುನಾಯಿತ ಪ್ರತಿನಿಧಿಗಳು ಪುಸ್ತಕ ಗೂಡು ಪ್ರಾರಂಭಿಸಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮರೆಡ್ಡಿ ಪಾಟೀಲ್ ಹೇಳಿದರು.
ತಾಲೂಕಿನ ಆನೆಗೊಂದಿ ಗ್ರಾ.ಪಂ. ವ್ಯಾಪ್ತಿಯ ಬಸವನದುರ್ಗಾ ಗ್ರಾಮದ ಬಸ್ ನಿಲ್ದಾಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತಿ ಕೊಪ್ಪಳ, ತಾಲೂಕ ಪಂಚಾಯತ್ ಗಂಗಾವತಿ, ರಾಜೀವ್ ಗಾಂಧಿ ಮತ್ತು ಪಂಚಾಯತ್ ರಾಜ್ ಫಿಲೋಶೀಫ್ ಕಾರ್ಯಕ್ರಮ ಇವರ ಸಹಕಾರದೊಂದಿಗೆ ಆರಂಭಿಸಿದ ಪುಸ್ತಕ ಗೂಡು ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಕಥೆ, ಕವನ, ಕಾದಂಬರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಈ ಗೂಡಿನಲ್ಲಿಟ್ಟು ಅಕ್ಷರ ಪ್ರೀತಿಸುವವರಿಗೆ ಜ್ಞಾನದ ಹಸಿವು ನೀಗಿಸಲು, ಜ್ಞಾನರ್ಜನೆಗೆ ಅನುಕೂಲವಾಗುವಂತೆ ಪುಸ್ತಕ ಗೂಡು ಉಪಯೋಗವಾಗಲಿ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ಗೀಳಿಗೆ ಒಳಗಾಗಿದ್ದು, ಮಕ್ಕಳು ಹಾಗೂ ಯುವ ಸಮುದಾಯವನ್ನು ಮೊಬೈಲ್ ಗೀಳಿನಿಂದ ಹೊರತರುವ ಕೆಲಸವಾಗಬೇಕಿದೆ. ಎಲ್ಲರಲ್ಲೂ ಪುಸ್ತಕ ಓದುವ ಅಭಿರುಚಿ ಬೆಳೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹುಲಿಗೆಮ್ಮ ಅವರು ʼಬಸ್ ನಿಲ್ದಾಣ ಕೇವಲ ನಮ್ಮ ದೇಹದ ದಣಿವನ್ನು ನೀಗಿಸದೆ, ನಮ್ಮ ಜ್ಞಾನದ ಹಸಿವನ್ನು ನೀಗಿಸಲು ಎಂಬ ಸದುದ್ದೇಶದಿಂದ ಪುಸ್ತಕ ಗೂಡು ಬಸ್ ನಿಲ್ದಾಣದಲ್ಲಿ ಆರಂಭಿಸಲಾಗಿದೆʼ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ತಾಲೂಕ ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ವೆಂಕಟೇಶ ಬಾಬು ಅವರು ಮಾತನಾಡಿ, ಇಂದಿನ ಯುವ ಪೀಳಿಗೆ ಬೇರೆ ಬೇರೆ ದುಶ್ಚಟಗಳಿಗೆ ಹಾಗೂ ಅತಿಯಾದ ಮೊಬೈಲ್ ಬಳಕೆಗೆ ಬೆಲೆಯಾಗುತ್ತಿದ್ದಾರೆ. ಪುಸ್ತಕ ಗೂಡಿನ ಮೂಲಕ ಅವರ ಹತ್ತಿರದಲ್ಲಿ, ಅವರಿಗೆ ಸರಳವಾಗಿ ಸಿಗುವ ರೀತಿ ಪುಸ್ತಕ ಇರುವುದರಿಂದ ಪುಸ್ತಕಗಳನ್ನು ನೋಡುವುದು ಓದುವ ಹವ್ಯಾಸ ಬೆಳೆಯುತ್ತದೆ. ಪುಸ್ತಕ ಗೂಡಿನ ಸೂಕ್ತ ಬಳಕೆ ಮತ್ತು ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಸುಮಿತ್ರಾ ಅವರು ಮಾತನಾಡಿ, ಗ್ರಾಮೀಣ ಭಾಗದ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಸಮುದಾಯ ಭವನ ಅರಳಿಕಟ್ಟಿ, ದೇವಾಲಯ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಿನಿ ಗ್ರಂಥಾಲಯವನ್ನು ಪುಸ್ತಕ ಗೂಡು ಎಂಬ ಹೆಸರಿನಿಂದ ತೆರೆಯಲಾಗಿದೆ. ಗಂಗಾವತಿ ತಾಲೂಕಿನ ಬಸವನದುರ್ಗದಲ್ಲಿ ಮೊದಲ ಪುಸ್ತಕ ಗೂಡು ತೆರೆದಿದ್ದು, ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಪುಸ್ತಕ ಗೂಡು ತೆರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ವೇಳೆ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ಕುಲ್ಕರ್ಣಿ, ಕಾರ್ಯದರ್ಶಿ ಮನೋರಮಾ, RGPR ಫೆಲೋ ಸುಮಿತ್ರಾ ಹಾಗೂ ಗ್ರಾಪಂ ಸಿಬ್ಬಂದಿಗಳು, ಇತರರು ಇದ್ದರು…