General Assembly of the Municipal Corporation Provide basic amenities to the residents of Raichur: President Narasamma advises
ರಾಯಚೂರು ಜ.08 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರವಾಸಿಗಳ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಒದಗಿಸಬೇಕು. ನಗರದ ಸೌಂದರ್ಯೀಕರಣಕ್ಕೆ ಒತ್ತು ಕೊಡಬೇಕು ಎಂದು ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ರಾಯಚೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಜ.08ರಂದು ಬುಧವಾರ ನಡೆದ ಪಾಲಿಕೆಯ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಎಲ್ಲಾ ಕಡೆಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು. ಗಟಾರುಗಳಲ್ಲಿ ಮತ್ತು ತಗ್ಗು ಗುಂಡಿಗಳಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಕಸವು ಎಲ್ಲೆಂದರಲ್ಲಿ ಹರಡದಂತೆ ವಾಹನಗಳ ಮೂಲಕ ನಿಯಮಿತವಾಗಿ ಸಾಗಣೆ ಮಾಡಬೇಕು. ಎಲ್ಲಾ ವಾರ್ಡ್ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಅತ್ಯುಪಯುಕ್ತವಾದ ಘನ ತ್ಯಾಜ್ಯ ವಿಲೇವಾರಿ ವಾಹನಗಳು ಮತ್ತು ಯಂತ್ರೋಪಕರಣಗಳ ದುರಸ್ತಿ ನಿರ್ವಹಣೆಯು ಅಚ್ಚುಕಟ್ಟಾಗಿ ಆಗಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪರಣೆ ನಿಯಮಿತವಾಗಿ ನಡೆಯಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳ ನಿರ್ವಹಣೆಯು ಅಚ್ಚುಕಟ್ಟಾಗಿ ನಡೆಯಬೇಕು. ಕೆಲವು ಶೌಚಾಲಯಗಳ ಪರಿಶೀಲನೆ ವೇಳೆಯಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆ ಇಲ್ಲದಿರುವುದು ಕಂಡು ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕ್ರಮಬದ್ಧವಾಗಿ ಮರು ಸಾರ್ವಜನಿಕ ಪ್ರಕಟಣೆ ನೀಡಿ, ಸರಿಯಾಗಿ ನಿರ್ವಹಣೆ ಮಾಡುವಂತವರಿಗೆ ಶೌಚಾಲಯಗಳ ನಿರ್ವಹಣೆಯ ಅವಕಾಶ ನೀಡಲು ಕ್ರಮವಹಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಪ್ರತಿ ದಿನ ನಗರದ ಶುಚಿತ್ವ ಕಾಪಾಡುವ ಪೌರಕಾರ್ಮಿಕರೇ ನಮಗೆ ದೇವರು. ಆದ್ದರಿಂದ ಪೌರ ಕಾರ್ಮಿಕರಿಗೆ ಅಚ್ಚುಕಟ್ಟಾಗಿ ಸಮವಸ್ತ್ರ ಹಾಗೂ ಸುರಕ್ಷತಾ ಪರಿಕರಗಳನ್ನು ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು. ಕಾಲಕಾಲಕ್ಕೆ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಬೇಕು. ಪೌರಕಾರ್ಮಿಕರ ನೇಮಕಾತಿ, ಬಡ್ತಿ ಎಲ್ಲವು ಕಾಲಮಿತಿಯೊಳಗೆ ನಡೆಸಲು ಕ್ರಮ ವಹಿಸಬೇಕು ಎಂದು ಅವರು ಪೌರಾಯುಕ್ತರಿಗೆ ಸೂಚನೆ ನೀಡಿದರು.
ರಾಯಚೂರು ಮಹಾನಗರ ಪಾಲಿಕೆಯ ಮೂಲ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲು ಜಿಪಿಎಸ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಸ್ಲಂ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಮತ್ತು ಅವರು ವಾಸಿಸುವ ಪ್ರದೇಶದಲ್ಲಿ ಶುಚಿತ್ವ ಕಾಪಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಮಳಿಗೆಗಳನ್ನು ಪಡೆದವರು ಬೇರೆಯವರಿಗೆ ಬಾಡಿಗೆ ನೀಡಿ ಹಣ ಪಡೆಯುವುದು ಕಂಡು ಬರುತ್ತಿದೆ. ಜೊತೆಗೆ ಮಹಾನಗರ ಪಾಲಿಕೆಗೆ ಸಹ ನಿಯಮಿತವಾಗಿ ಬಾಡಿಗೆ ಹಣ ಕಟ್ಟುತ್ತಿಲ್ಲ ಎಂದು ಕೆಲವು ಸದಸ್ಯರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ಪೌರಾಯುಕ್ತರು, ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ಮಳಿಗೆಗಳ ಟೆಂಡರ್ ಪ್ರಕ್ರಿಯೆ ಕುರಿತು ಹಲವಾರು ವರ್ಷಗಳಿಂದ ಚರ್ಚಿಸುತ್ತಿದ್ದರೂ ಟೆಂಡರ್ ನಡೆಸದೇ ಇರಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ. ಆದಾಯ ಬರುವುದನ್ನು ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಎನ್.ಶ್ರೀನಿವಾಸರೆಡ್ಡಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿ ಅತಿ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸುವುದಾಗಿ ಪೌರಾಯುಕ್ತರು ಸಭೆಗೆ ಮಾಹಿತಿ ನೀಡಿದರು.
ತರಕಾರಿ ಮಾರುಕಟ್ಟೆ ಚರ್ಚೆ: ರೇಡಿಯೋ ಸ್ಟೇಷನ್ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆಯನ್ನು ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸುವ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದೆ. ರಾಯಚೂರು ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಹೀಗಾಗಿ ಎಲ್ಲ ಪ್ರದೇಶದ ಜನರಿಗೂ ಅನುಕೂಲವಾಗುವಂತೆ ನಗರದ ನಾಲ್ಕು ಕಡೆಗಳಲ್ಲಿ ತರಕಾರಿ ಮಾರುಕಟ್ಟೆಗಳನ್ನು ಪ್ರಾರಂಭಿಸಬೇಕು ಎಂದು ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಸಭೆಗೆ ಸಲಹೆ ಮಾಡಿದರು.
ರಾಯಚೂರು ನಗರದ ವಾರ್ಡ್ ನಂ.19ರಲ್ಲಿನ ಶ್ರಿ ಆಂಜನೇಯ ದೇವಸ್ಥಾನದ ಬಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೂಟ್‌ನಿಂದ ಬಾಲಕ ಮೃತಪಟ್ಟಿದ್ದು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಮತ್ತು ಇನ್ನೀತರರು ಸಹ ಅಪಾಯಕ್ಕೆ ಸಿಲುಕದಂತೆ ಈ ಪ್ರದೇಶದಲ್ಲಿ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಹೇಮಲತಾ ಬೂದೆಪ್ಪ ಅವರು ಸಭೆಗೆ ಮನವಿ ಮಾಡಿದರು.
ನಗರದ ವಾರ್ಡ್ ನಂಬರ್ 29ರ ಹೊಸ ಕೋರ್ಟ್ ಬಳಿ ವಾಸಿಸುವ ಜನರಿಗೆ ಉಪ್ಪು ನೀರು ಪೂರೈಕೆಯಾಗುತ್ತಿದ್ದು, ಇದನ್ನು ಬೇಗನೆ ಸರಿಪಡಿಸಬೇಕು ಎಂದು ನಗರಸಭೆ ಸದಸ್ಯ ಜಯಣ್ಣ ಅವರು ಸಭೆಗೆ ತಿಳಿಸಿದರು. ಯರಮರಸ್ ಬಳಿಯಲ್ಲಿನ ಕೆಲವು ಖಾಸಗಿ ಲೇಔಟ್‌ಗಳು ಖಾತಾ ನೊಂದಣಿಯಿಲ್ಲದೇ ಕಾರ್ಯನಿರ್ವಹಿಸುತ್ತಿವೆ ಎಂದು ಸದಸ್ಯ ನರಸರೆಡ್ಡಿ ಅವರು ಸಭೆಗೆ ತಿಳಿಸಿದರು. ಸದಸ್ಯರಾದ ಇ.ಶಶಿರಾಜ, ಎಂ.ಪವನಕುಮಾರ ಹಾಗೂ ಇನ್ನೀತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಜೀದ್ ಸಮೀರ್, ಪಾಲಿಕೆಯ ಉಪ ಪೌರಾಯುಕ್ತರಾದ ಗುರುಸಿದ್ದಯ್ಯಸ್ವಾಮಿ ಹಿರೇಮಠ ಸೇರಿದಂತೆ ಪಾಲಿಕೆಯ ಸದಸ್ಯರು ಇದ್ದರು.